ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡಮಾರುತದ ಸೃಷ್ಟಿ ಹೇಗೆ?

Last Updated 14 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಇದೇ ತಿಂಗಳ ಮೊದಲೆರಡು ದಿನಗಳಲ್ಲಿ ಸಿಂಗಪುರದ ಈಶಾನ್ಯದಲ್ಲಿ ವಾಯುಭಾರ ಕುಸಿತುಗೊಂಡು ಚಂಡಮಾರುತ ಸಣ್ಣದಾಗಿ ಕಾಣಿಸಿಕೊಂಡಿತು. ‘ವಾರ್ದಾ’ ಹೆಸರು ಪಡೆದುಕೊಂಡ ಚಂಡಮಾರುತ 6ನೇ ದಿನ ಒಂದು ಕಡೆ ಅಂಡಮಾನ್- ನಿಕೋಬಾರ್‌ ದ್ವೀಪಗಳ ಮೇಲೆ ಅಗಾಧ ಮಳೆ ಸುರಿಸಿದರೆ ಇನ್ನೊಂದು ಕಡೆ ಥಾಯ್ಲೆಂಡ್‌ನಲ್ಲಿ ಭೀಕರ ಮಳೆ ಸುರಿಸಿ ನೆರೆ ಸೃಷ್ಟಿ ಮಾಡಿತು.

6ನೇ ತಾರೀಖು ಒಂದೇ ದಿನ ಅಂಡಮಾನ್ ದ್ವೀಪಗಳ ಮೇಲೆ 166 ಮಿ.ಮೀ. ಮಳೆ ಸುರಿದು 1400  ಯಾತ್ರಿಕರು ಹ್ಯಾವ್ಲಾಕ್ ಮತ್ತು ನೀಲಾ ದ್ವೀಪಗಳಲ್ಲಿ ಸಿಕ್ಕಿಕೊಂಡಿದ್ದರು. ಜೊತೆಗೆ ಸಾಗರವು ರುದ್ರವಾಗಿ ನರ್ತಿಸಿತ್ತು.

ಈ ತಿಂಗಳ 12ರಂದು ಚೆನ್ನೈನಿಂದ 180 ಕಿ.ಮೀ. ದೂರ ಪೂರ್ವಕ್ಕೆ ಮತ್ತು ನೆಲ್ಲೂರಿಗೆ 250 ಕಿ.ಮೀ. ದೂರದಲ್ಲಿ ಚಂಡಮಾರುತ ಕಾಣಿಸಿಕೊಂಡಿತು. 11ರಂದು ಮಧ್ಯಾಹ್ನ ಭೀಕರ ಮಳೆ ಗಾಳಿಯೊಂದಿಗೆ ಬಂಗಾಳ ಕೊಲ್ಲಿ ದಾಟಿ ಚೆನ್ನೈ ಮತ್ತು ನೆಲ್ಲೂರು ಪಟ್ಟಣಗಳಿಗೆ ತೀವ್ರವಾಗಿ ಅಪ್ಪಳಿಸಿತು.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳು ಸಾಮಾನ್ಯವಾಗಿ ಮೇ– ನವೆಂಬರ್ ಮಧ್ಯೆ ಕಾಣಿಸಿಕೊಳ್ಳುತ್ತವೆ. ಡಿಸೆಂಬರ್ ತಿಂಗಳು ಬಂದರೆ ಚೆನ್ನೈ ನಗರ ದುಃಸ್ವಪ್ನ ಕಂಡಂತೆ ನರಳಾಡುತ್ತಿರುತ್ತದೆ. 2004ರ ಡಿಸೆಂಬರ್‌ನಲ್ಲಿ ತಮಿಳುನಾಡು ‘ಸೆಂಚುರಿ ಸೈಕ್ಲೋನ್‌’ಗೆ ತುತ್ತಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಕುಂಭದ್ರೋಣ ಮಳೆಯಾಗಿ ಅಣೆಕಟ್ಟುಗಳೆಲ್ಲ ತುಂಬಿ ಹರಿದ ನೀರು ಚೆನ್ನೈಗೆ ನುಗ್ಗಿ ಭೀಕರ ಪರಿಸ್ಥಿತಿ ಉಂಟಾಗಿತ್ತು.

ಇಷ್ಟಕ್ಕೂ ಈ ಚಂಡಮಾರುತಗಳು ಸಮುದ್ರಗಳ ಮೇಲೆ ಹೇಗೆ ಸೃಷ್ಟಿಯಾಗುತ್ತವೆ?  ಇಷ್ಟು ಭೀಕರತೆಯನ್ನು ಹೇಗೆ ಪಡೆದುಕೊಳ್ಳುತ್ತವೆ? ಭೂಮಿ ತನ್ನ ಸುತ್ತಲೂ ತಾನು 24  ಗಂಟೆಗಳಿಗೆ ಒಮ್ಮೆ ಗಿರಕಿ ಹೊಡೆಯುತ್ತಾ, ಒಂದು ಸೆಕೆಂಡಿಗೆ 29.78  ಕಿ.ಮೀ. ವೇಗದಲ್ಲಿ ಸಾಗುತ್ತಿದೆ. ಜೊತೆಗೆ ಭೂಮಿಯ ಮೇಲಿನ ಭೌಗೋಳಿಕ ಸ್ವರೂಪ ಮತ್ತು ಬೀಸುವ ಗಾಳಿ ಎಲ್ಲವೂ ಚಂಡಮಾರುತಗಳಿಗೆ ಕಾರಣವಾಗಿವೆ.

ಭೂಮಿಯ ಸುತ್ತಲೂ ನೂರಾರು ಕಿ.ಮೀ. ವಲಯ ಗಾಳಿಯಿಂದ ಆವರಿಸಿದೆ. ಈ ವಲಯ ಸಸ್ಯ ವಲಯ ಮತ್ತು ಪ್ರಾಣಿ ಸಂಕುಲದ ಅಸ್ತಿತ್ವಕ್ಕೆ ಮೂಲ ಕಾರಣವೂ ಹೌದು. ಭೂಮಿಯ ಮೇಲೆ ಬೀಸುವ ಗಾಳಿ ತನ್ನ ವೇಗವನ್ನು ಹೆಚ್ಚಿಸಿಕೊಂಡು ಗಂಟೆಗೆ 120  ಕಿ.ಮೀ.ಗಳಿಗಿಂತ ವೇಗವಾಗಿ ಬೀಸಿದಾಗ ಚಂಡಮಾರುತ ಎನಿಸಿಕೊಳ್ಳುತ್ತದೆ. ಅದು ಭೀಕರ ಸ್ವರೂಪ ಪಡೆದುಕೊಂಡಾಗ 300 ಕಿ.ಮೀ. ವೇಗದವರೆಗೂ ಬೀಸುತ್ತದೆ. ಉಷ್ಣ ವಲಯ ಪ್ರದೇಶಗಳಾದ ಕೆರಿಬಿಯನ್, ಅಟ್ಲಾಂಟಿಕ್ ಮತ್ತು ಉತ್ತರ ಅಮೆರಿಕದಲ್ಲಿ ಚಂಡಮಾರುತವನ್ನು ‘ಹರಿಕೇನ್’, ಹಿಂದೂ ಮಹಾಸಾಗರದಲ್ಲಿ ‘ಸೈಕ್ಲೋನ್’, ಪೆಸಿಫಿಕ್ ಸಾಗರದಲ್ಲಿ ‘ಟೈಫೂನ್’ ಮತ್ತು ಫಿಲಿಪ್ಪೀನ್ಸ್‌ನಲ್ಲಿ ‘ಬಗುವೋ’ ಎಂದು ಕರೆಯಲಾಗುತ್ತದೆ. ಉಷ್ಣ ವಲಯದ ಸಮುದ್ರಗಳ ಮೇಲೆ ವರ್ಷಕ್ಕೆ ಸರಾಸರಿ 80ರಿಂದ 100 ಚಂಡಮಾರುತಗಳು ಅಕ್ಷಾಂಶ 5 ಮತ್ತು 30 ಡಿಗ್ರಿಗಳ ಮಧ್ಯೆ ಸಮಭಾಜಕ ವೃತ್ತದ ಎರಡೂ ಕಡೆ, ಅದರಲ್ಲೂ ಹೆಚ್ಚಾಗಿ ಉತ್ತರದಲ್ಲಿ ಕಾಣಿಸಿಕೊಳ್ಳುತ್ತವೆ. ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ, ವಿಶೇಷವಾಗಿ ಭೀಕರವಾದ ಚಂಡಮಾರುತಗಳು ಉದ್ಭವಿಸುತ್ತವೆ.

ಸಮುದ್ರ ಮಟ್ಟದಲ್ಲಿ ಉಷ್ಣತೆ 26 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಾದಲ್ಲಿ ವಾಯುಭಾರ ಕುಸಿತಗೊಂಡು ಚಂಡಮಾರುತ ಉದ್ಭವಿಸುತ್ತದೆ. ಉಷ್ಣವಲಯದ ಸಮುದ್ರಗಳ ಮೇಲೆ ಸೂರ್ಯನ ಕಿರಣ ಬಿದ್ದು ನೀರು ಬಿಸಿಯಾದಂತೆ, ತೇವಾಂಶವಿರುವ ಗಾಳಿ ಸಮುದ್ರದ ಮೇಲೆ ಘನೀಕೃತಗೊಳ್ಳುತ್ತದೆ. ಗಾಳಿಯಲ್ಲಿರುವ ಉಷ್ಣಾಂಶ ಬಿಡುಗಡೆಯಾಗಿ ಸುತ್ತಲಿನ ವಾತಾವರಣ ಬಿಸಿಗೊಳ್ಳುತ್ತದೆ. ಆ ಪ್ರದೇಶದಲ್ಲಿ ಸಾಂದ್ರತೆ ಕಡಿಮೆಯಾಗಿ ಗಾಳಿ ಹಗುರವಾಗುತ್ತದೆ. ಪರಿಣಾಮ ಸಮುದ್ರದ ಮೇಲೆ ವಾಯುಭಾರ ಕುಸಿತವಾಗುತ್ತದೆ. ವಾಯುಭಾರ ಕುಸಿತಗೊಂಡ ತಕ್ಷಣವೇ ವಾಯುಭಾರ ಕುಸಿತಗೊಂಡ ಕಡೆ ಗಾಳಿ ವೇಗವಾಗಿ ಧಾವಿಸುತ್ತದೆ.

ಬಿಸಿಯಾದ ಗಾಳಿ ಸಮುದ್ರದ ಮೇಲೆ ವಿಸ್ತಾರವಾಗಿ ಬೀಸುತ್ತಾ ಹೋದಂತೆ ಗಾಳಿ ತಂಪಾಗಿ ಹನಿಗೊಂಡು ಮಳೆ ಸುರಿಯಲು ಪ್ರಾರಂಭವಾಗುತ್ತದೆ. ಅದು ಮತ್ತಷ್ಟು ತೀವ್ರವಾಗಿ ಬೀಸುತ್ತಾ ಹೋದಂತೆ ಮಳೆ ಹನಿಯುತ್ತ ಗಾಳಿಯ ಜೊತೆಗೆ ಸೇರಿಕೊಂಡು ಚಂಡಮಾರುತವಾಗಿ ಮಾರ್ಪಡುತ್ತದೆ. ಗಾಳಿ ಸುರುಳಿಯಾಕಾರದಲ್ಲಿ ಮೇಲಕ್ಕೆ ಏರುತ್ತಾ ಹೋದಂತೆ ತೇವಾಂಶವಿರುವ ಬಿಸಿಗಾಳಿ ಮತ್ತಷ್ಟು ವೇಗವಾಗಿ ಎಲ್ಲಾ ಕಡೆಯಿಂದಲೂ ಬಿರುಗಾಳಿಯ ಕಡೆಗೆ ನುಗ್ಗಿಬರುತ್ತದೆ. ಈಗ ಬಿರುಗಾಳಿಯ ಮಧ್ಯೆ ಒಂದು ನಿಶ್ಚಲ ವಲಯ ಕಾಣಿಸಿಕೊಳ್ಳುತ್ತದೆ. ಈ ನಿಶ್ಚಲ ವಲಯದ ಸುತ್ತಲೂ ಬಿರುಗಾಳಿ ಇನ್ನಷ್ಟು ತೀವ್ರವಾಗಿ ಬೀಸುತ್ತಿರುತ್ತದೆ.

ಬಿರುಗಾಳಿಯ ಜೊತೆಗೆ ಮಳೆಯೂ ಕೂಡಿ ಚಂಡಮಾರುತವಾಗಿ 100ರಿಂದ 200 ಕಿ.ಮೀ.ಗಳ ವ್ಯಾಸ ಹಬ್ಬಿ ಸಮುದ್ರದ ಮೇಲೆ 9ರಿಂದ 11 ಕಿ.ಮೀ.ಗಳ ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಕೆಲವೊಂದು ಸಲ 200- 500 ಕಿ.ಮೀ.ಗಳ ವ್ಯಾಸಗಳು ಹಬ್ಬಿಕೊಳ್ಳುತ್ತವೆ. ದೈತ್ಯ ಅಲೆಗಳು ಸೃಷ್ಟಿಯಾಗಿ ಗಂಟೆಗೆ 16ರಿಂದ 32 ಕಿ.ಮೀ.ಗಳ ವೇಗದಲ್ಲಿ 15 ಅಡಿಗಳ ಎತ್ತರದವರೆಗೂ ಬೀಸಿಬಂದು ಸಮುದ್ರ ತಟಕ್ಕೆ ಅಪ್ಪಳಿಸುತ್ತವೆ. ಅತಿ ವೇಗ ಎಂದರೆ ಅಲೆಗಳು ಗಂಟೆಗೆ 80 ಕಿ.ಮೀ.ಗಳ ವೇಗದಲ್ಲಿ ಸಮುದ್ರ ತಟವನ್ನು ಅಪ್ಪಳಿಸಿದ ಉದಾಹರಣೆಗಳಿವೆ.

ವಾಯುಭಾರ ಕುಸಿತಗೊಂಡ ಸ್ಥಳದಿಂದ ಗಾಳಿ ಬೀಸುತ್ತಾ ಮಳೆ ಸುರಿಯುತ್ತಾ ಹೋಗಿ ತೀವ್ರ ಸ್ವರೂಪದ ಚಂಡಮಾರುತ ಸೃಷ್ಟಿಯಾಗುವುದು ನೂರಾರು ಕಿ.ಮೀ.ಗಳ ದೂರದಲ್ಲಿ. ಚಂಡಮಾರುತ ತೀವ್ರ ಸ್ವರೂಪ ಪಡೆದ ಮೇಲೆ ಅದು ಸಮುದ್ರದ ಮೇಲೆ ಗಂಟೆಗೆ 10ರಿಂದ 50 ಕಿ.ಮೀ.ಗಳ ವೇಗದಲ್ಲಿ ಚಲಿಸುತ್ತಾ ಹೋಗಿ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ. ಮೊದಲಿಗೆ ಪೂರ್ವ ಅಥವಾ ಪಶ್ಚಿಮದ ಕಡೆಗೆ ಚಲಿಸುತ್ತಾ ಹೋಗಿ ಅಂತಿಮವಾಗಿ ಸಾಮಾನ್ಯವಾಗಿ ದಕ್ಷಿಣ ಅಥವಾ ಉತ್ತರ ದಿಕ್ಕಿಗೆ ಚಲಿಸುತ್ತದೆ. ಗಾಳಿಯ ಒತ್ತಡ ಯಾವ ದಿಕ್ಕಿನಲ್ಲಿ ಹೆಚ್ಚು ಇರುತ್ತದೊ ಚಂಡಮಾರುತಕ್ಕೆ ಹೆಚ್ಚು ಶಕ್ತಿ ಆ ದಿಕ್ಕಿನಲ್ಲಿ ದೊರಕುತ್ತದೆ.

ಒಂದು ಪೂರ್ಣ ಪ್ರಮಾಣದ ಚಂಡಮಾರುತ ಸರಾಸರಿ 9 ದಿನಗಳವರೆಗೂ ಸಮುದ್ರದ ಮೇಲೆ ಜೀವಿಸಿ 10 ಸಾವಿರ ಕಿ.ಮೀ.ಗಳವರೆಗೂ ಚಲಿಸುತ್ತದೆ. ಚಂಡಮಾರುತ ಕಡಲು ದಾಟಿ ನೆಲವನ್ನು ತಲುಪುತ್ತಿದ್ದಂತೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಭೂಮಿಯ ಮೇಲೆ ಮಳೆ, ಗಾಳಿಯ ಒತ್ತಡ ಕಡಿಮೆಯಾಗಿ ನಿಶ್ಚಲ ವಲಯದ ಒಳಕ್ಕೆ ಬಿರುಗಾಳಿ ತೂರಿಕೊಂಡು ಚಂಡಮಾರುತ ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಚೆನ್ನೈನಲ್ಲಿ ತೀವ್ರವಾಗಿ ಕಾಣಿಸಿಕೊಂಡ ಚಂಡಮಾರುತ ಬೆಂಗಳೂರಿನವರೆಗೂ ಮೋಡಗಳನ್ನು ಹಾರಿಸಿಕೊಂಡು ಬಂದು ಮಳೆಯನ್ನು ಮಾತ್ರ ಸುರಿಸುತ್ತದೆ.

ಪಶ್ಚಿಮದಿಂದ ಪೂರ್ವಕ್ಕೆ ಉಷ್ಣವಲಯದ ಸಮುದ್ರಗಳ ಮೇಲೆ ಚಂಡಮಾರುತಗಳು ಕಾಣಿಸಿಕೊಳ್ಳುತ್ತವೆ. ಉತ್ತರಾರ್ಧ ಗೋಳದಲ್ಲಿ ಮೇನಿಂದ ನವೆಂಬರ್ ತಿಂಗಳ ಮಧ್ಯೆ ಮತ್ತು ದಕ್ಷಿಣಾರ್ಧ ಗೋಳದಲ್ಲಿ ಡಿಸೆಂಬರ್‌ನಿಂದ ಜೂನ್‌ವರೆಗೆ ಚಂಡಮಾರುತಗಳು ಹೆಚ್ಚಾಗಿ ಸಂಭವಿಸುತ್ತವೆ. ಚಂಡಮಾರುತಗಳ ಪುನರಾವರ್ತನೆಯ ಸಂಖ್ಯೆ ಸಮುದ್ರದಿಂದ ಸಮುದ್ರಕ್ಕೆ ಹೆಚ್ಚುಕಡಿಮೆ ಆಗಿರುತ್ತದೆ.

ಪ್ರಪಂಚದ ಎಲ್ಲಾ ಸಮುದ್ರಗಳನ್ನೂ ಗಣನೆಗೆ ತೆಗೆದುಕೊಂಡಾಗ ವರ್ಷಕ್ಕೆ ಸರಾಸರಿ 80 ಚಂಡಮಾರುತಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ 3ನೇ 2ರಷ್ಟು ಚಂಡಮಾರುತಗಳು ಹಲವು ಕಾರಣಗಳಿಂದ ಪೂರ್ಣವಾಗಿ ಬೆಳೆಯುವ ಮುಂಚೆಯೇ ನಶಿಸಿಹೋಗುತ್ತವೆ. ಭಾರತದ ಸಮುದ್ರಗಳಲ್ಲಿ ವರ್ಷಕ್ಕೆ ಸರಾಸರಿ 6 ಚಂಡಮಾರುತಗಳು ಬೆಳೆದು ನಿಲ್ಲುತ್ತವೆ. ಅವುಗಳಲ್ಲಿ 2 ಅಥವಾ 3 ಚಂಡಮಾರುತಗಳು ಭೀಕರವಾಗಿ ಪರಿಣಮಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT