ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ನಾಗರಿಕರು ಮೊದಲು ಇತಿಹಾಸ ಅರಿಯಬೇಕು : ತರೂರ್‌

Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘200 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರು ಜಲಿಯನ್‌ ವಾಲಾ ಬಾಗ್‌ ದುರ್ಘಟನೆಗೆ 100 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಇಂಗ್ಲೆಂಡಿನ ಅರಮನೆ ಅಥವಾ ಪ್ರಧಾನಮಂತ್ರಿಗಳಲ್ಲಿ ಯಾರಾದರೊಬ್ಬರು ಕ್ಷಮೆ ಕೋರುತ್ತಾರೆಯೇ ಎಂಬುದನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್‌ ಹೇಳಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಇನ್‌ಗ್ಲೋರಿಯಸ್‌ ಎಂಪೈರ್‌: ದಿ ರಿಯಾಲಿಟಿ ಆಫ್‌ ದಿ ಬ್ರಿಟಿಷ್‌ ರಾಜ್‌’ ಎಂಬ ವಿಷಯದ ಕುರಿತು ಲೇಖಕ ಸಂಜೀವ ಸನ್ಯಾಲ್‌ ಅವರು ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

‘ಇದಕ್ಕೆ ಸಂಬಂಧಿಸಿದಂತೆ ಹಲವು ಘಟನೆಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. 1970ರಲ್ಲಿ ಪೊಲೆಂಡ್‌ನಲ್ಲಿ ನಡೆದ ಯುದ್ಧಕ್ಕೆ ಜರ್ಮನ್‌ ಚಾನ್ಸಲರ್‌್ ಕ್ಷಮೆ ಕೋರಿದ್ದಾರೆ. ಕೊಮಗ್ಯಾಟಾದ ಮರು ಘಟನೆಗೆ ಸಂಬಂಧಿಸಿದಂತೆ ಕೆನಡಾದ ಮುಖಂಡ ಜಸ್ಟಿನ್‌ ಟ್ರುಡ್ಯೂ ಅವರು ಈ ವರ್ಷ ಅಲ್ಲಿನ ಸಂಸತ್ತಿನಲ್ಲಿ ಭಾರತೀಯರ ಕ್ಷಮೆ ಕೋರಿದ್ದಾರೆ. ಆದರೆ, ಅವೆಲ್ಲಕ್ಕಿಂತಲೂ ಕ್ರೂರವಾದ ಜಲಿಯನ್ ವಾಲಾ ಬಾಗ್‌ ಹತ್ಯಾಕಾಂಡ ವರ್ಣಭೇದ ನೀತಿಯ ಹಾಗೂ ವಸಾಹತುಶಾಹಿ ಧೋರಣೆಯ ಬ್ರಿಟಿಷರು ನಡೆಸಿದ ಅತ್ಯಂತ ಹೇಯ ಕೆಲಸವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.  

‘ದೇಶದ ನಾಗರಿಕರಾಗಿರುವ ಪ್ರತಿಯೊಬ್ಬರೂ ಈ ದೇಶದ ಇತಿಹಾಸವನ್ನು ಮೊದಲು ಅರಿತಿರುವುದು ಒಳಿತು. ಭವಿಷ್ಯವನ್ನು ಅರಿಯುವ ಮೊದಲು ಇತಿಹಾಸದ ಪರಿಚಯವಿರಬೇಕು ಎಂಬ ಕಾರಣಕ್ಕಾಗಿ ‘ಇನ್‌ಗ್ಲೋರಿಯಸ್‌ ಎಂಪೈರ್‌: ವಾಟ್‌ ದಿ ಬ್ರಿಟಿಷ್‌ ಡೈಡ್‌ ಟು ಇಂಡಿಯಾ’ ಪುಸ್ತಕ ಬರೆದಿದ್ದೇನೆ. ಬಹುತೇಕ ಜನರು ಸಮಕಾಲೀನ ಘಟನೆಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಹಾಗೆಯೇ 100 ವರ್ಷಗಳ ಹಿಂದಿನ ಇತಿಹಾಸವನ್ನು ಬಲ್ಲವರ ಸಂಖ್ಯೆ ಅರ್ಧದಷ್ಟಿರಬಹುದು. ಒಂದು ಘಟನೆಯನ್ನು ನಾವು ಅಕ್ಷರ ರೂಪಕ್ಕೆ ಪರಿವರ್ತಿಸುವ ಸಂದರ್ಭದಲ್ಲೇ ನಡೆಯುತ್ತಿರುವ ಇನ್ನೊಂದು ಘಟನೆಯನ್ನು ನಾವು ನಮೂದಿಸದೇ ಇರಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

‘ದೇಶವನ್ನು ಆಳಿದ ಮೊಗಲರು, ಬ್ರಿಟಿಷರು, ಪೋರ್ಚುಗಿಸರು, ಡಚ್ಚರು ಹೀಗೆ ಯಾರೊಬ್ಬರೂ ಕೆಟ್ಟವರೂ ಅಲ್ಲ, ಒಳ್ಳೆಯವರೂ ಅಲ್ಲ. ಅವರಿಗೆ ಅವರದೇ ಆದ ಇತಿಮಿತಿಗಳಿದ್ದವು. ಬಹುಸಂಖ್ಯಾತರಾಗಿದ್ದ ಹಿಂದೂಗಳು ಭಾರತಕ್ಕೆ ಬರುತ್ತಿದ್ದವರೊಂದಿಗೆ ಹಾಗೂ ಅದನ್ನು ಆಳಿದವರೊಂದಿಗೆ ಸುಮಾರು 1,500 ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದರು. ಇಷ್ಟು ದೀರ್ಘಕಾಲ ಒಂದು ಧರ್ಮ ಹೀಗೆ ಉಳಿದುಬಂದಿರುವುದೇ ದೊಡ್ಡ ಸವಾಲು. ಮುಸ್ಲಿಂ, ಕ್ರೈಸ್ತ ಇತ್ಯಾದಿ ಧರ್ಮಗಳು ಈ ದೇಶದ ಮೇಲೆ ಪ್ರಭಾವ ಬೀರಿವೆ’ ಎಂದು ಅಭಿಪ್ರಾಯಪಟ್ಟರು.

‘1,200 ವರ್ಷಗಳ ಕಾಲ ವಿದೇಶೀಯರ ಕೈಯಲ್ಲಿ ಸಿಕ್ಕು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ ಎಂಬ ಭಾವನೆ ಬಲಪಂಥೀಯರಲ್ಲಿದೆ. ಆದರೆ ಭಾರತದಲ್ಲಿ ಆಡಳಿತ ನಡೆಸಿದ ಬಹಳಷ್ಟು ಮುಸ್ಲಿಂ ದೊರೆಗಳು ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆತು ಇಲ್ಲಿಯವರೇ ಆಗಿದ್ದಾರೆ. ಆದರೆ ಇಂತಹ ಹೇಳಿಕೆ ನೀಡುತ್ತಿರುವವರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಒಬ್ಬರಾಗಿದ್ದಾರೆ. ಆ ಹುದ್ದೆಯಲ್ಲಿದ್ದು ಇಂದಿನ ಮುಸ್ಲೀಮರ ಕುರಿತು ಮಾತನಾಡುವುದು ಅವರು ಮಾಡಬಾರದ ಸಂಗತಿಯಾಗಿದೆ’ ಎಂದು ತರೂರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಈ ಮೊದಲು ಜಾತಿ ವ್ಯವಸ್ಥೆ ಹೆಚ್ಚಿತ್ತು. ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಚಾತುವರ್ಣ ವ್ಯವಸ್ಥೆ ಹಾಗೂ ಜಾತಿ ಪದ್ಧತಿಗೆ ಬ್ರಿಟಿಷರು ಒಂದು ವ್ಯವಸ್ಥಿತ ರೂಪ ನೀಡಿದರು. ವಾರನ್ ಹೇಸ್ಟಿಂಗ್‌ ಆಡಳಿತಾವಧಿಯಲ್ಲಿ ಕೋಲ್ಕತ್ತದಲ್ಲಿ ಕೆಲವು ಬ್ರಾಹ್ಮಣರು ಸಭೆ ಸೇರಿಸಿ ಒಂದು ಕಾನೂನು ರಚಿಸಿದರು. ಆ ಮೂಲಕ ಬ್ರಾಹ್ಮಣರು ತಮ್ಮ ಅಗ್ರಪಂಕ್ತಿ ಕಾಪಾಡಿಕೊಂಡರು. ಬ್ರಿಟಿಷರ ಇಂಥ ನಿರ್ಧಾರದಿಂದ ನಮ್ಮನ್ನು ವ್ಯಾಖ್ಯಾನಿಸುವಲ್ಲಿ ಹಾಗೂ ಜಾತಿ ವ್ಯವಸ್ಥೆಯಲ್ಲಿ ನಮ್ಮ ಸ್ಥಾನಮಾನ ಕಂಡುಕೊಳ್ಳಲು ಸಾಧ್ಯವಾಗಿದೆ. ಇಂದಿನ ಜಾತಿ ರಾಜಕಾರಣ ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ಬಳುವಳಿಯಾಗಿದೆ’ ಎಂದು ತಿಳಿಸಿದರು.

ಒಳ್ಳೆಯ ಲಕ್ಷಣ
ಜನರನ್ನು ಭೇಟಿ ಮಾಡಲು, ಪುಸ್ತಕಗಳನ್ನು ಕೊಳ್ಳಲು ಇಂಥ ಉತ್ಸವ ಒಂದು ಕಾರಣ. ಇದು ಗಣ್ಯರಿಗಾಗಿ ಎಂದು ಕೆಲವೊಮ್ಮೆ ಅನ್ನಿಸಬಹುದು. ಆದರೆ, ಹೆಚ್ಚು ಸಂಖ್ಯೆಯಲ್ಲಿ ಯುವಜನರು ಇಲ್ಲಿ ಭಾಗವಹಿಸುತ್ತಿರುವುದು ಒಳ್ಳೆಯ ಲಕ್ಷಣ.
–ಶಶಿ ದೇಶಪಾಂಡೆ, ಲೇಖಕಿ

ಅರಿವಿನ ಉತ್ಸವ
ಮನುಷ್ಯ ಮೌಲ್ಯಗಳನ್ನು ಒಳಗೊಂಡಿರುವ ಇಂಥ ಸಾಹಿತ್ಯ ಉತ್ಸವ ಒಳ್ಳೆಯದು. ಭೌಗೋಳಿಕ ಮಿತಿಗಳನ್ನು ಮೀರಿ ಮಾಡುವ ಚರ್ಚೆಗಳು ಚೆನ್ನಾಗಿವೆ. ಮನುಷ್ಯ ದೇಶ ಮತ್ತು ಕಾಲಾತೀತ. ಅದು ಇಲ್ಲಿ ನಡೆದಿದೆ. ಅರಿವುಂಟು ಮಾಡುವ ಉತ್ಸವವಿದು.
–ಕೆ.ಇ. ರಾಧಾಕೃಷ್ಣ, ಶಿಕ್ಷಣ ತಜ್ಞ

ಇದಕ್ಕೆ ಐಡಿಯಾಲಜಿ ಇಲ್ಲ
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಯಾವುದೇ ಒಂದು ಐಡಿಯಾಲಜಿ ಇಲ್ಲ.  ಇಲ್ಲಿ ಯಾರು ಬೇಕಾದರೂ ಮಾತನಾಡಬಹುದು.

ಇಂಥ ವಾತಾವರಣ ಬೇರೆ ನಗರದಲ್ಲಿ ಇಲ್ಲ. ಕನ್ನಡಿಗರು ಮೃದು ಸ್ವಭಾವದವರು.  ಹೊರಗಿನವರಿಗೆ ಗೌರವ ಕೊಡುತ್ತಾರೆ. ಕನ್ನಡಿಗರ ಮುಕ್ತ ಮನಸಿನಿಂದಾಗಿ ಇಂಥ  ಉತ್ಸವಗಳು ನಡೆಯುತ್ತಿವೆ.
–ಟಿ.ವಿ. ಮೋಹನದಾಸ್ ಪೈ, ಅಧ್ಯಕ್ಷ, ಮಣಿಪಾಲ ಗ್ಲೋಬಲ್‌ ಎಜುಕೇಷನ್‌

ನ್ಯೂನತೆ ಮುಚ್ಚಿಹಾಕಿದೆ
ಈ ಉತ್ಸವದಲ್ಲಿ  ಆಪ್ತತೆ ಇಲ್ಲ. ಕೃತಕತೆ ಇದೆ. ಇಂಗ್ಲಿಷಿನಲ್ಲಿ ಆಟವಾಡುತ್ತಿದ್ದಾರೆ. ಜ್ವಲಂತ ಸಮಸ್ಯೆಗಳು ಮತ್ತು ಮಹತ್ವದ ಚರ್ಚೆಗಳು ಇಲ್ಲಾಗುತ್ತಿಲ್ಲ.

ಸಾಹಿತ್ಯವನ್ನು ಓದುವ ವರ್ಗ ಕಣ್ಮರೆಯಾಗುತ್ತಿದೆ ಎನ್ನುವ  ದಿನಮಾನಗಳಲ್ಲಿ ಇಂಥ ಉತ್ಸವದಲ್ಲಿ ಐಟಿ,ಬಿಟಿ ಸೇರಿದಂತೆ ಇತರ ವರ್ಗದ ಜನರೂ ಭಾಗವಹಿಸುತ್ತಿರುವುದು ಉತ್ಸವದ ನ್ಯೂನತೆಯನ್ನು ಮುಚ್ಚಿಹಾಕಿದೆ.
- ಡಾ.ಸಿದ್ದಗಂಗಯ್ಯ ಹೊಲತಾಳ್‌, ಸಾಹಿತ್ಯಾಸಕ್ತ

ಭಿನ್ನ ಕಾರ್ಯಕ್ರಮ
ಈ ಉತ್ಸವ ಇತರ ಸಾಹಿತ್ಯ ಉತ್ಸವಗಳಿಗಿಂತ ಭಿನ್ನವಾಗಿದೆ. ಹಾಗಂತ, ನಾವು ಇತರರೊಂದಿಗೆ ಸ್ಪರ್ಧೆಯಲ್ಲಿದ್ದೇವೆ ಎಂದಲ್ಲ. ನಮ್ಮ ಹಿಂದಿನ ಉತ್ಸವಗಳಿಗಿಂತ ಭಿನ್ನವಾಗಿರಬೇಕೆಂದು ನಮ್ಮ ಇಂಗಿತ. ಈ ಬಾರಿ ಮೊದಲ ಸಲ ಮಕ್ಕಳಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಉತ್ಸವದ ವಿಶೇಷ.
–ಶೈನಿ ಅಂಟೋನಿ, ಬೆಂಗಳೂರು ಸಾಹಿತ್ಯ ಉತ್ಸವದ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT