ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಉತ್ಸವದಲ್ಲಿ ‘ಬರ’ದ ಚರ್ಚೆ

Last Updated 17 ಡಿಸೆಂಬರ್ 2016, 19:17 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ ಡಾ.ಯು.ಆರ್‌. ಅನಂತಮೂರ್ತಿ ಅವರ ಪ್ರಮುಖ ಕತೆಗಳಲ್ಲಿ ಒಂದಾದ ‘ಬರ’ ಕುರಿತ ಸಂವಾದಕ್ಕೆ ‘ಬೆಂಗಳೂರು ಸಾಹಿತ್ಯ ಉತ್ಸವ’ ಶನಿವಾರ ಸಾಕ್ಷಿಯಾಯಿತು.

ಬಡವರ, ಕೆಳವರ್ಗದವರ ಹಾಗೂ ಮಹಿಳೆಯರ ಬಗ್ಗೆ ಮಾತನಾಡುವ ಹಕ್ಕು ಇತರರಿಗೆ, ಅಂದರೆ ಆ ವರ್ಗಗಳಿಗೆ ಸೇರದವರಿಗೆ, ಇರುವುದಿಲ್ಲವೇ ಎಂಬ ನೈತಿಕ ಪ್ರಶ್ನೆಯನ್ನು ಈ ಕತೆ ಮೂಡಿಸುತ್ತದೆ ಎಂದು ವಿಮರ್ಶಕ ಸೈಕತ್ ಮಜುಮ್‌ದಾರ್‌ ಹೇಳಿದರು.

‘ಬರ’ ಕತೆಯು ಭಾರತದಲ್ಲಿ ನೈಜ ಅಭಿವೃದ್ಧಿ ಆಗದಿರುವುದರ ಕುರಿತು ಬರೆದಂತಿದೆ. ಬಡತನದ ನಡುವೆಯೂ ಸೌಂದರ್ಯ ಸೃಷ್ಟಿಯನ್ನು ಈ ಕತೆ ಹೇಳುತ್ತದೆ ಎಂದು ಪ್ರಾಧ್ಯಾಪಕ ಶಂಕರ್ ರಾಮಸ್ವಾಮಿ ಅಭಿಪ್ರಾಯಪಟ್ಟರು.

ಯಾವುದೇ ನಾಯಕನನ್ನು ಆಶ್ರಯಿಸದೆ, ದಾರಿದ್ರ್ಯದ ನಡುವೆಯೂ ರಾಜಕೀಯ ಹಾಗೂ ನೈತಿಕ ನೆಲೆಯಲ್ಲಿ ಪ್ರತಿಭಟನೆ ನಡೆಸುವುದು ಈ ಕತೆಯಲ್ಲಿ ಕಾಣುತ್ತದೆ ಎಂದು ಹೇಳಿದರು.

‘ಬರ’ ಕತೆಯು ವಿವಿಧ ಘಟನಾವಳಿಗಳನ್ನು ಒಟ್ಟಿಗೆ ಕಟ್ಟಿಕೊಡುತ್ತದೆ ಎಂದು ಸಮಾಜ ವಿಜ್ಞಾನಿ ಶಿವ್ ವಿಶ್ವನಾಥನ್ ವಿಶ್ಲೇಷಿಸಿದರು. ಕೃತಿಗಳನ್ನು ನಾವು ತಪ್ಪಾಗಿ ಓದಬೇಕು. ಆಗ, ಅಲ್ಲಿಯವರೆಗೆ ಹೊಳೆಯದಿರದ ಸಂಗತಿಗಳು ಗೊತ್ತಾಗುವ ಸಾಧ್ಯತೆಗಳು ಇರುತ್ತವೆ. ಅನಂತಮೂರ್ತಿ ಅವರ ಕತೆಗೂ ಈ ಮಾತು ಅನ್ವಯಿಸಬಹುದು ಎಂದು ವಿಶ್ವನಾಥನ್ ಚಟಾಕಿ ಹಾರಿಸಿದರು.

ಈ ಕತೆಯಲ್ಲಿ ವಿಭಿನ್ನ ನಿಲುವುಗಳಿರುವ ಪಾತ್ರಗಳು ಬರುತ್ತವೆ. ಆದರೆ ಯಾವ ಪಾತ್ರವೂ ಇನ್ನೊಂದು ಪಾತ್ರದ ಜೊತೆ ಸಂವಾದಿಸದೆ ಇರುವುದಿಲ್ಲ. ತಮ್ಮತನವನ್ನು ಉಳಿಸಿಕೊಂಡೇ, ಇನ್ನೊಂದು ಪಾತ್ರದ ಜೊತೆ ಸಂವಾದಿಸುವುದನ್ನು ‘ಬರ’ದಲ್ಲಿ ಕಾಣಬಹುದು ಎಂದು ಪ್ರಾಧ್ಯಾಪಕ ಪ್ರಶಾಂತ್ ಕೇಶವಮೂರ್ತಿ ಹೇಳಿದರು.

ಅನಂತಮೂರ್ತಿ ಅವರು 70ರ ದಶಕದಲ್ಲಿ ಬರೆದ ಈ ಕತೆ ಸಿನಿಮಾ ಆಗಿದೆ. ಪ್ರಾಧ್ಯಾಪಕ ಚಂದನ್ ಗೌಡ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT