ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಕಾರ ಮರೆಯದಿರೋಣ

Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸಂಸ್ಕೃತ ಸುಭಾಷಿತವೊಂದು ಹೀಗಿದೆ:
ಪ್ರಥಮವಯಸಿ ಪೀತಂ ತೋಯಮಲ್ಪಂ ಸ್ಮರಂತಃ
ಶಿರಸಿ ನಿಹಿತಭಾರಾ ನಾರಿಕೇಲಾ ನರಾಣಾಂ|
ದದತಿ ಜಲಮನಲ್ಪಾಸ್ವಾದಮಾಜೀವಿತಾಂತಂ
ನ ಹಿ ಕೃತಮುಪಕಾರಂ ಸಾಧವೋ ವಿಸ್ಮರಂತಿ||
ಇದರ ತಾತ್ಪರ್ಯ ಹೀಗೆ:

‘ಚಿಕ್ಕ ವಯಸ್ಸಿನಲ್ಲಿ ಕುಡಿದ ಸ್ವಲ್ಪ ನೀರನ್ನು ಕೃತಜ್ಞತೆಯಿಂದ ನೆನೆದು, ತೆಂಗಿನಮರಗಳು ತಲೆಯಲ್ಲಿ ಭಾರವನ್ನು ಹೊತ್ತು ಬದುಕಿರುವವರೆಗೂ ಬಹಳ ರುಚಿಯಾದ ಎಳನೀರನ್ನು ನೀಡುತ್ತವೆ. ಮಾಡಿದ ಉಪಕಾರವನ್ನು ಸಜ್ಜನರು ಎಂದೂ ಮರೆಯುವುದಿಲ್ಲ.’

ಮಹಾಗುಣವೊಂದರ ಬಗ್ಗೆ ಸುಭಾಷಿತ ಇಲ್ಲಿ ಸೊಗಸಾಗಿ ಹೇಳಿದೆ; ನಮ್ಮ ನಿತ್ಯದ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುವಂಥ ಉದಾಹರಣೆಯನ್ನು ಬಳಸಿಕೊಂಡಿರುವುದು ಸ್ವಾರಸ್ಯಕರವಾಗಿದೆ.

ನಮ್ಮ ಜೀವನ ಎಷ್ಟೋ ಜನರ ಸಹಾಯ–ಸಹಕಾರಗಳಿಂದ ನಡೆಯುತ್ತಿರುತ್ತದೆ. ಆದರೆ ನಾವು ಅವನ್ನು ಗಮನಿಸುವುದು ಕಡಿಮೆ. ನಾವು ವಾಸ ಇರುವ ಮನೆ, ತಿನ್ನುವ ಅನ್ನ, ತೊಟ್ಟಿರುವ ಬಟ್ಟೆ, ಓಡಾಡುತ್ತಿರುವ ರಸ್ತೆ, ಓದುತ್ತಿರುವ ಪುಸ್ತಕ, ಬಳಸುತ್ತಿರುವ ವಾಹನ – ಹೀಗೆ ನಮ್ಮ ಜೀವನವಷ್ಟೂ ಬೇರೆಯವರನ್ನು ಆಶ್ರಯಿಸಿಕೊಂಡಿರುತ್ತದೆ. ವಿಶ್ವದ ನಿಯಮವೇ ಹಾಗಿದೆ; ಒಂದು ಇನ್ನೊಂದನ್ನು ಅವಲಂಬಿಸಿರುವುದು ಪ್ರಕೃತಿಯ ನಿಯಮ. ಈ ನಿಯಮವನ್ನು ತಿಳಿದುಕೊಂಡು ಅದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕಾದದ್ದು ನಮ್ಮ ಧರ್ಮವಾಗಬೇಕು. ಹೀಗೆ ನಾವು ಪಡೆದುಕೊಂಡ ಸಹಾಯವನ್ನು ನೆನೆಯುವುದೇ ‘ಕೃತಜ್ಞತೆ’ ಎನಿಸಿಕೊಳ್ಳುತ್ತದೆ.

ನಾವು ಬೇರೊಬ್ಬರಿಂದ ಪಡೆದ ಸಹಾಯಕ್ಕೆ, ವಸ್ತುಗಳಿಗೆ ಬೆಲೆಯನ್ನು ಕೊಟ್ಟಿರುತ್ತೇವಲ್ಲವೆ; ಮತ್ತೆ ಅದನ್ನು ಸ್ಮರಿಸಿ ಕೃತಜ್ಞತರಾಗಿರುವುದು ಆವಶ್ಯಕವೇ  – ಎಂಬ ಯೋಚನೆ ನಮಗೆ ಬರುವುದು ಸಹಜವೇ. ಹೌದು, ನಿಜ; ನಾವು ಪಡೆದ ಸಹಾಯಕ್ಕೆ ಹಣವನ್ನು ಕೊಟ್ಟಿರುತ್ತೇವೆ. ಮನೆಯನ್ನು ಕಟ್ಟಿದವರಿಗೆ ಹಣ ಕೊಟ್ಟಿರುತ್ತೇವೆ; ಅಕ್ಕಿಯನ್ನು ಅಂಗಡಿಯಿಂದ ಕೊಂಡು ತಂದಿರುತ್ತೇವೆ; ಬಟ್ಟೆಯನ್ನೂ ಖರೀದಿಸಿರುತ್ತೇವೆ; ಓಡಾಡುವ ರಸ್ತೆಗೆ ತೆರಿಗೆಯನ್ನು ಸಂದಾಯ ಮಾಡಿರುತ್ತೇವೆ... ಹೀಗೆ ಎಲ್ಲಕ್ಕೂ ‘ಬೆಲೆ’ಯನ್ನು ಕೊಟ್ಟೇ ಪಡೆದಿರುತ್ತೇವೆ. ಆದರೆ ನಾವು ಕೊಟ್ಟಿರುವುದು ಆ ವಸ್ತುಗಳ ಭೌತಿಕ ಸ್ವರೂಪಕ್ಕೋ ಆತಂರಿಕ ಮೌಲ್ಯಕ್ಕೋ ಎಂಬುದನ್ನು ನಾವು ತಾತ್ವಿಕವಾಗಿ ಯೋಚಿಸಬೇಕು.

ಒಂದು ಕೆ. ಜಿ. ಅಕ್ಕಿಗೆ ಇಪ್ಪತ್ತೈದು–ಮೂವತ್ತು ರೂಪಾಯಿಗಳನ್ನು ಕೊಟ್ಟು ತಂದಿರುತ್ತೇವೆ. ಆ ಅಕ್ಕಿಯ ದಿಟವಾದ ಆಂತರಿಕ ಮೌಲ್ಯವನ್ನು ಇಪ್ಪತ್ತೈದು–ಮೂವತ್ತು ರೂಪಾಯಿಗಳಿಗೆ ಸೀಮಿತ ಮಾಡಿ ನೋಡುವುದು ಸಂಸ್ಕೃತಿ ಎನಿಸಿಕೊಳ್ಳುತ್ತದೆಯೆ? ಇದು ನಮಗೆ ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ.

ರೈತನೊಬ್ಬ ಕೃಷಿಯನ್ನು ಅವನ ಕರ್ತವ್ಯವನ್ನಾಗಿ ಸ್ವೀಕರಿಸದೇ ಹೋಗಿದ್ದರೆ ನಮಗೆ ಅಕ್ಕಿ ಸಿಗುತ್ತಿತ್ತೆ? ಅವನು ವ್ಯವಸಾಯ ಮಾಡುವಾಗ ಹರಿಸಿದ ಬೆವರಿಗೂ, ಪಟ್ಟ ಪಾಡುಗಳಿಗೆ ನಾವು ನಿಜವಾದ ಬೆಲೆಯನ್ನು ಕಟ್ಟಲಾಗುತ್ತದೆಯೆ? ಈ ಮಾತು ನಾವಿಂದು ಬಳಸುತ್ತಿರುವ ಎಲ್ಲ ಸಾಧನ–ಸಲಕರಣೆಗಳಿಗೂ ಅನ್ವಯವಾಗುವಂಥದ್ದು.

ಹಾಗಾದರೆ ನಾವು ಆ ‘ಬೆವರಿ’ಗೆ ಹೇಗೆ ಬೆಲೆಯನ್ನು ಕಟ್ಟುವುದು? ನಾವು ಅದಕ್ಕೆ ನೋಟಿನ ರೂಪದ ಭೌತಿಕರೂಪದಲ್ಲಿ ಬೆಲೆಯನ್ನು ಕೊಡಲು ಸಾಧ್ಯವಿಲ್ಲ; ಭಾವರೂಪದಲ್ಲಿ ಮಾತ್ರವೇ ನಾವು ಅದಕ್ಕೆ ಋಣಸಂದಾಯವನ್ನು ಮಾಡಲು ಸಾಧ್ಯ. ಈ ಭಾವಸ್ಪಂದನೆಯೇ ಉಪಕಾರಸ್ಮರಣೆ; ಕೃತಜ್ಞತೆ.

ಕೃತಜ್ಞತೆಯ ಈ ಭಾವ ನಮ್ಮಲ್ಲಿ ಎಚ್ಚರವಾಗಿದ್ದಾಗ ನಮ್ಮ ಜೀವನಕ್ಕೆ ಸೊಗಸೂ ಸಾರ್ಥಕತೆಯೂ ಒದಗುತ್ತದೆ. ನಮ್ಮ ಜೀವನ ಇಷ್ಟು ಸುಲಭವಾಗಿ ನಡೆಯುತ್ತಿರುವುದಕ್ಕೆ ಹಲವರ ಕರ್ತವ್ಯಬುದ್ಧಿ–ಸಹಾಯ–ಸಹಕಾರಗಳೇ ಕಾರಣ ಎಂಬ ವಾಸ್ತವ ಅರಿವಾದಾಗ ನಮ್ಮಲ್ಲೂ ಕರ್ತವ್ಯಪ್ರಜ್ಞೆ ಜಾಗರಿತವಾಗಬಹುದು; ಆಗಬೇಕು ಕೂಡ. ಆಗ ನಮ್ಮ ಜೀವನ ಒಂದೊಂದು ಕ್ಷಣವನ್ನು ನಾವು ಎಚ್ಚರದಿಂದ ವಿನಿಯೋಗಿಸಬೇಕು ಎಂಬ ವಿವೇಕವೂ ನಮ್ಮಲ್ಲಿ ಮೂಡುತ್ತದೆ.

ಮಾತ್ರವಲ್ಲ, ನಾವು ಮಾಡುವ ಕೆಲಸ ಮತ್ತೊಬ್ಬರ ಜೀವನದ ಮೇಲೆ ಪ್ರಭಾವ ಬೀರುತ್ತದೆಯಾದ್ದರಿಂದ ಅದನ್ನು ಚೆನ್ನಾಗಿಯೂ ಅರ್ಥಪೂರ್ಣವಾಗಿಯೂ ಮಾಡಬೇಕೆಂಬ ಅರಿವೂ ಮೂಡುತ್ತದೆ. ನಮ್ಮ ಜೀವನ ಇನ್ನೊಬ್ಬರ ಹೆಗಲನ್ನು ಆಶ್ರಯಿಸಿರುವುದರಿಂದ ನಾನೂ ಕೂಡ ಮತ್ತೊಬ್ಬರ ಬದುಕಿನ ಭಾರವನ್ನು ಹೊರಬೇಕು ಎಂಬ ಸತ್ಯವೂ ಮನವರಿಕೆಯಾಗುತ್ತದೆ.

ನಮ್ಮ ಜೀವನ ಒಂದು ಚಕ್ರದಂತೆ; ಅದರ ಓಟ ನಮ್ಮೆಲ್ಲರ ಕರ್ತವ್ಯದ ಮೇಲೆ ನಿಂತಿದೆ. ಜೀವನಚಕ್ರದ ಅರೆಗಳೇ ನಾವು–ನೀವು. ಪ್ರಕೃತಿನಿಯಮವೇ ಆ ಚಕ್ರದ ಪರಿಧಿ.ಜೀವನದ ಹಿತವಾದ ಪ್ರಯಾಣ ಸಾಧ್ಯವಾಗುವುದು ನಾವೆಲ್ಲರೂ ನಮ್ಮ ಪಾಲಿನ ಕರ್ತವ್ಯದಲ್ಲಿ ತೊಡಗಿದಾಗ ಮಾತ್ರವೇ. ಈ ಸ್ವಧರ್ಮಬುದ್ಧಿ ನಮ್ಮಲ್ಲಿ ಉದ್ದೀಪನಗೊಳ್ಳಲು ಆವಶ್ಯಕವಾದ ಪ್ರಥಮ ಗುಣವೇ ಉಪಕಾರಸ್ಮರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT