ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್ ಹರಿಸಿ 12 ಜನರ ಹತ್ಯೆ

ಬರ್ಲಿನ್‌ನ ಕ್ರಿಸ್‌ಮಸ್‌ ಮಾರುಕಟ್ಟೆಯಲ್ಲಿ ಘಟನೆ, 48 ಜನರಿಗೆ ಗಾಯ
Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬರ್ಲಿನ್ : ಇಲ್ಲಿನ ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಯೊಂದರಲ್ಲಿ ಶಂಕಿತ ಪಾಕಿಸ್ತಾನಿ ಯುವಕನೊಬ್ಬ ಯದ್ವಾತದ್ವಾ ಟ್ರಕ್ ಚಲಾಯಿಸಿದ ಪರಿಣಾಮ 12 ಜನ ಮೃತಪಟ್ಟು, 48 ಮಂದಿ ಗಾಯಗೊಂಡಿದ್ದಾರೆ.

ದಾಳಿಕೋರ, ಜರ್ಮನಿಯ ಆಶ್ರಯ ಅರಸಿ ಬಂದಿರುವ ವ್ಯಕ್ತಿ ಎಂದು ಶಂಕಿಸಲಾಗಿದೆ.

ನಡೆದಿದ್ದೇನು?: ಪೋಲೆಂಡ್‌ನ ನೋಂದಣಿ ಸಂಖ್ಯೆ ಹೊಂದಿರುವ ಟ್ರಕ್ ಇಲ್ಲಿನ ಕೈಸರ್ ವಿಲ್ಹೆಲ್ಮ್ ಸ್ಮಾರಕ್ ಸರ್ಚ್ ಎದುರು ಇರುವ ಸಾಂಪ್ರದಾಯಿಕ ಕ್ರಿಸ್‌ಮಸ್ ಮಾರುಕಟ್ಟೆಗೆ ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆ ವೇಳೆಗೆ ನುಗ್ಗಿದೆ. ಈ ಸಂದರ್ಭ ಅಲ್ಲಿ ನೂರಾರು ಜನ ಸೇರಿದ್ದರು. ಮಾರುಕಟ್ಟೆಯೊಳಕ್ಕೆ ಸುಮಾರು 50ರಿಂದ 80 ಮೀಟರ್ ದೂರದವರೆಗೆ ಟ್ರಕ್ ನುಗ್ಗಿದ್ದರಿಂದ ಅನೇಕ ಅಂಗಡಿಗಳಿಗೂ ಹಾನಿಯಾಗಿದೆ.

ಘಟನೆ ವೇಳೆ ಟ್ರಕ್‌ನ ಚಾಲಕನ ಕ್ಯಾಬಿನ್‌ನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಈ ಪೈಕಿ ಒಬ್ಬ ಪರಾರಿಯಾಗಿದ್ದಾನೆ. ಒಬ್ಬ ಪೋಲೆಂಡ್ ಪ್ರಜೆಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗಿರುವ ಶಂಕಿತನನ್ನು ಘಟನೆ ನಡೆದ ಸ್ಥಳದಿಂದ 2 ಕಿ.ಮೀ. ದೂರದಲ್ಲಿ ಬಂಧಿಸಲಾಗಿದೆ. ಆತನನ್ನು ಪಾಕಿಸ್ತಾನದ ನವೇದ್ ಬಿ. ಎಂದು ಗುರುತಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆತ ಜರ್ಮನಿಯ ಆಶ್ರಯ ಕೋರಿ 2015ರ ಡಿಸೆಂಬರ್ 31ರಂದು ಅಲ್ಲಿಗೆ ಬಂದಿದ್ದ ಎನ್ನಲಾಗಿದೆ. ಆದರೆ ಈತನೇ ವಾಹನದ ಚಾಲಕನಾಗಿದ್ದನೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಬರ್ಲಿನ್‌ ಪೊಲೀಸ್‌ ಮುಖ್ಯಸ್ಥರು ಹೇಳಿದ್ದಾರೆ.

ಕೃತ್ಯದ ಹಿಂದೆ ಆತನ ಕೈವಾಡ ಇರಬಹುದು ಎಂದು ಈ ಮೊದಲು ಶಂಕಿಸಿದ್ದ ಅಧಿಕಾರಿಗಳು ನಂತರದಲ್ಲಿ ಆತನ ಪಾತ್ರ ಇಲ್ಲದೆಯೂ ಇರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮಾರುಕಟ್ಟೆ ಬಂದ್ ಇಲ್ಲ:  ದಾಳಿ ನಡೆದಿದ್ದರಿಂದ ದೇಶದ ಪ್ರಸಿದ್ಧ ಕ್ರಿಸ್‌ಮಸ್ ಮಾರುಕಟ್ಟೆಯನ್ನು ಸ್ಥಗಿತಗೊಳಿಸುವುದಿಲ್ಲ. ಕ್ರಿಸ್‌ಮಸ್ ಮಾರುಕಟ್ಟೆ ಮತ್ತು ಪ್ರಮುಖ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದು ಜರ್ಮನಿಯ ಆಂತರಿಕ ಸಚಿವಾಲಯ ತಿಳಿಸಿದೆ.

ಟ್ರಕ್‌ ಅಪಹರಿಸಿ ದಾಳಿ: ದಾಳಿಗೆ ಬಳಸಿದ ಟ್ರಕ್ ಪೋಲೆಂಡ್‌ನ ಸಾರಿಗೆ ಕಂಪೆನಿಯೊಂದಕ್ಕೆ ಸೇರಿದ್ದಾಗಿದೆ. ಅದನ್ನು ಅಪಹರಿಸಿ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

* ಇದೊಂದು ಭಯೋತ್ಪಾದಕ ದಾಳಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುತ್ತೇವೆ.
–ಏಂಜೆಲಾ ಮರ್ಕೆಲ್, ಚಾನ್ಸಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT