ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಗೆ ವಾಣಿಜ್ಯ ಮೌಲ್ಯ ಕಂಡುಕೊಳ್ಳಿ

ಸಂಕುಚಿತ ಯೋಚನೆಯಿಂದ ಹೊರಬನ್ನಿ: ಕೇಂದ್ರ ಜವಳಿ ಸಚಿವೆ ಇರಾನಿ ಸಲಹೆ
Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರೇಷ್ಮೆ ಮಹಿಳೆಯರ ಆಯ್ಕೆ ಮಾತ್ರ ಎಂಬ ಸಂಕುಚಿತ ಯೋಚನೆಯಿಂದ  ಅಧಿಕಾರಿಗಳು ಹೊರಬರಬೇಕು. ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಉಪಯೋಗಿಸುವ ರೇಷ್ಮೆ ವಸ್ತ್ರಗಳನ್ನು ಆವಿಷ್ಕರಿಸಬೇಕು’ ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.

ಮಡಿವಾಳದ ರೇಷ್ಮೆ ಮಂಡಳಿ ಆವರಣದಲ್ಲಿ ಮಂಗಳವಾರ ಕೇಂದ್ರ ರೇಷ್ಮೆ ಮಂಡಳಿ ಹಮ್ಮಿಕೊಂಡಿದ್ದ ರೇಷ್ಮೆ ರೀಲಿಂಗ್ ಯಂತ್ರ ಮತ್ತು ತರಬೇತಿ ಉತ್ಕೃಷ್ಟತಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದೇ ಆಲೋಚನೆ ಇಟ್ಟು ಕೊಂಡು ಸೀಮಿತವಾಗಿ ಯೋಚಿಸುವುದನ್ನು ಬಿಟ್ಟು ರೇಷ್ಮೆಯನ್ನು ವಿವಿಧೋದ್ದೇಶ ಉತ್ಪನ್ನವಾಗಿಸಿ, ಮಾರುಕಟ್ಟೆ ವಿಸ್ತರಿಸುವ ಬಗ್ಗೆ ಸಂಶೋಧಕರು, ಮಾರುಕಟ್ಟೆ ಅಧಿಕಾರಿಗಳು ಚಿಂತಿಸಬೇಕು’ ಎಂದರು.

‘ಕ್ಷೇತ್ರಾಧಿಕಾರಿಗಳು ಜವಳಿ ಸಚಿವಾಲಯದ ಅಧಿಕಾರಿಗಳೊಂದಿಗೆ ಕೂತು, ಫಲಾನುಭವಿಗಳ ಪ್ರಮಾಣವನ್ನು ಹೆಚ್ಚಿಸಲು ಯಾವ ರೀತಿಯ ಸೇವೆಗಳನ್ನು ನೀಡಬೇಕು ಎಂಬ ಬಗ್ಗೆ ವಿವರಿಸಬೇಕು.

‘ಬೃಹತ್‌ ಮಾರುಕಟ್ಟೆ ಸಾಮರ್ಥ್ಯವಿರುವ ರೇಷ್ಮೆ ಉದ್ಯಮವನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ರೇಷ್ಮೆ ಉದ್ಯಮಕ್ಕೆ ಹೊಸದಾಗಿ ಕಾಲಿಡುವವರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಆಲೋಚನೆಗಳನ್ನು ಹಂಚಿಕೊಳ್ಳಬೇಕು. ಅದರಿಂದ ಹೊಸ ವರ್ಷಕ್ಕೆ ಹೊಸ ಆರಂಭ, ಹೊಸ ಗುರಿ ಹೊಂದಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.

ಕನ್ನಡದಲ್ಲಿ ಶೀಘ್ರ ಆ್ಯಪ್‌: ‘ಕಚ್ಚಾ ವಸ್ತುಗಳು,  ಸರಬರಾಜು ವಿಳಂಬ, ಉಗ್ರಾಣಗಳಲ್ಲಿನ ಸಂಗ್ರಹ ಹೀಗೆ ನೇಕಾರರಿಗೆ ಮಾಹಿತಿ ನೀಡಲು ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ‘ಇ–ಧಾಗ’ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಿದೆ. ಸದ್ಯ ಹಿಂದಿ, ಇಂಗ್ಲಿಷ್‌, ತೆಲುಗು ಭಾಷೆಯಲ್ಲಿ ಈ ಆ್ಯಪ್‌ ಇದೆ. ಜನವರಿ 15ರಂದು ಕನ್ನಡದಲ್ಲಿ ಈ ಆ್ಯಪ್‌ ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ: ರೇಷ್ಮೆ ಮಂಡಳಿಯ ತಂತ್ರಜ್ಞಾನ ಕ್ಷೇತ್ರದ 10 ಮಂದಿ ವಿಜ್ಞಾನಿಗಳಿಗೆ ಪ್ರಶಸ್ತಿ  ಪ್ರದಾನ ಮಾಡಲಾಯಿತು. ಸಿ–2 ಹೆಸರಿನ ಎರಿ ರೇಷ್ಮೆ ಹುಳು ತಳಿ, ಸುಧಾರಿತ ಹಿಪ್ಪು ನೇರಳೆಯ ತಳಿ, ಚಂದೇರಿ ರೇಷ್ಮೆ ಸೀರೆಗಳ ಬಿಡುಗಡೆ ಮಾಡಲಾಯಿತು. ರೇಷ್ಮೆ ಹುಳುಗಳ ಸಾಕಾಣಿಕೆ, ನೂಲುವ ಯಂತ್ರ, ಸಿದ್ಧ ಉಡುಪುಗಳ ಪ್ರದರ್ಶನ ನಡೆಯುತ್ತಿದೆ.

ಉತ್ಕೃಷ್ಟತಾ ತರಬೇತಿ ಕೇಂದ್ರ
ಉತ್ಕೃಷ್ಟತಾ ತರಬೇತಿ ಕೇಂದ್ರದ ಮೂಲಕ ವೃತ್ತಿನಿರತರು, ವಿಸ್ತರಣೆ ಏಜೆಂಟರು, ತರಬೇತುದಾರರು ಸೇರಿ 15 ಸಾವಿರ ಮಂದಿಗೆ ತರಬೇತಿ ನೀಡುವ ಗುರಿಯನ್ನು  ಕೇಂದ್ರ ರೇಷ್ಮೆ ಮಂಡಳಿ  ಹೊಂದಿದೆ. ಇದಕ್ಕಾಗಿ ಸಮಗ್ರ ರೇಷ್ಮೆ ಅಭಿವೃದ್ಧಿ ಯೋಜನೆ ಅಡಿ ₹3 ಕೋಟಿ ಅನುದಾನವನ್ನೂ  ಪಡೆದಿದೆ.

ರೀಲಿಂಗ್‌ ಯಂತ್ರ ಅಳವಡಿಕೆ ನೆರವು

ರೇಷ್ಮೆ ಗೂಡನ್ನು ನೂಲು ಎಳೆಯನ್ನಾಗಿ ಪರಿವರ್ತಿಸುವ ಕೆಲಸವನ್ನು ರೀಲಿಂಗ್‌ ಯಂತ್ರ ಮಾಡುತ್ತದೆ. ರೇಷ್ಮೆ ರೀಲಿಂಗ್‌ ಕ್ಷೇತ್ರ ಅಸಂಘಟಿತವಾಗಿದ್ದು, ಗುಡಿ ಕೈಗಾರಿಕೆಯಾಗಿಯೇ ಉಳಿದಿದೆ. ‘ಭಾರತದಲ್ಲಿಯೇ ತಯಾರಿಸಿ’ ಯೋಜನೆ ಅಡಿ ಕೇಂದ್ರ ರೇಷ್ಮೆ ಮಂಡಳಿ, ಖಾಸಗಿ ಉದ್ಯಮಿಗಳ ಜತೆಗೂಡಿ ದೇಶಿಯ ಸ್ವಯಂಚಾಲಿತ ರೀಲಿಂಗ್‌ ಯಂತ್ರಗಳ ಅಳವಡಿಕೆಗೆ  ನೆರವು ನೀಡಲಿದೆ. 

ಶ್ರೇಷ್ಠ ದರ್ಜೆಯ ಬೈವೋಲ್ಟೈನ್‌ ರೇಷ್ಮೆ ಉತ್ಪಾದನೆ ಹೆಚ್ಚಳ ಇದರ ಉದ್ದೇಶವಾಗಿದೆ. ಈ ಸ್ವಯಂಚಾಲಿತ ರೇಷ್ಮೆ ರೀಲಿಂಗ್‌ ಯಂತ್ರದಿಂದ 200 ರೈತರು ಬೆಳೆದ ಗೂಡುಗಳನ್ನು ಬಳಸಿಕೊಂಡು ವಾರ್ಷಿಕ ಸುಮಾರು 20 ಟನ್ ರೇಷ್ಮೆ ಉತ್ಪಾದಿಸಬಹುದು. ಈ ರೀಲಿಂಗ್‌ ಯಂತ್ರದ ಬೆಲೆ ₹65 ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT