ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಕಾಲಿಕ ಪುನರ್ವಸತಿಗೆ ₹ 1 ಕೋಟಿ

Last Updated 24 ಡಿಸೆಂಬರ್ 2016, 9:02 IST
ಅಕ್ಷರ ಗಾತ್ರ

ಮಡಿಕೇರಿ: ದಿಡ್ಡಳ್ಳಿಯ ನಿರಾಶ್ರಿತರ ತಾತ್ಕಾಲಿಕ ಪುನರ್ವಸತಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ₨ 1 ಕೋಟಿಯ ಘೋಷಿಸಿ, ಅದರ ಚೆಕ್‌ ಅನ್ನು ಸಚಿವ ಎಚ್.ಆಂಜನೇಯ ಅವರು ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಅವರಿಗೆ ಹಸ್ತಾಂತರಿಸಿದರು.

ತಾತ್ಕಾಲಿಕವಾಗಿ ಒಂದು ತಿಂಗಳವರೆಗೆ ಈಗಿರುವ ಸ್ಥಳದಲ್ಲಿಯೇ ವಾಸಿಸಲು ಅವಕಾಶ ನೀಡುವುದು. ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೆ ಮಾಡಿ 30 ಎಕರೆ ಸರ್ಕಾರಿ ಭೂಮಿಯಲ್ಲಿ ನಿವೇಶನ ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಪ್ರಕಟಿಸಿದ್ದಾರೆ.  

ಗಿರಿಜನರಿಗೆ ಹೊಸ ಬಡಾವಣೆ ನಿರ್ಮಿಸಿ ವಿದ್ಯುತ್, ರಸ್ತೆ ಸಂಪರ್ಕ, ಚರಂಡಿ, ಕುಡಿಯುವ ನೀರು, ಅಂಗನವಾಡಿ, ಶಾಲೆ ಇತರೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅವರ ಉದ್ಯೋಗಕ್ಕೂ ಅನುಕೂಲ ಮಾಡಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು. ಸರ್ಕಾರಿ ಭೂಮಿ ದೊರೆಯದಿದ್ದಲಿ, ಅರಣ್ಯದ ಅಂಚಿನ ಭಾಗದಲ್ಲಿ
ರುವ ಖಾಸಗಿಯವರ ಭೂಮಿಯನ್ನಾದರೂ ಮಾರುಕಟ್ಟೆ ದರದಲ್ಲಿ ಖರೀದಿಸಿ ಗಿರಿಜನರಿಗೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ವಿವರಿಸಿದರು. 

ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿಯನ್ನು ರಚಿಸಿ ಸ್ಥಳೀಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಹೋರಾಟಗಾರರ ಸದಸ್ಯರ ನೇತೃತ್ವದಲ್ಲಿ ಸಭೆ ಮಾಡಿ, ತ್ವರಿತವಾಗಿ ನಿವೇಶನ ಹಾಗೂ ವಸತಿ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವರು ಹೇಳಿದರು. 

ಅಧಿಕಾರಿಗಳು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಮೂಲ ನಿವಾಸಿ ಗಿರಿಜನರಿಗೆ ತ್ವರಿತವಾಗಿ ನಿವೇಶನ ಹಾಗೂ ವಸತಿ ಕಲ್ಪಿಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಸಚಿವರು ತಿಳಿಸಿದರು.   

ಗೌಪ್ಯ ಸಭೆ: ಇದಕ್ಕೂ ಮೊದಲು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ಸಭೆ ಸಮಾಲೋಚನೆ ನಡೆಸಿ ದಿಡ್ಡಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಗಿರಿಜನರಿಗೆ ನಿವೇಶನ ಹಾಗೂ ವಸತಿ ಕಲ್ಪಿಸುವ ಸಂಬಂಧ ಸಚಿವರು ಮಾಹಿತಿ ಪಡೆದರು.   
ತಿತಿಮತಿ ವ್ಯಾಪ್ತಿಯಲ್ಲಿ 56 ಎಕರೆ ಭೂಮಿ ಇದ್ದು, ಇದರಲ್ಲಿ ಸ್ವಲ್ಪವನ್ನಾದರೂ ಬುಡಕಟ್ಟು ಗಿರಿಜನರಿಗೆ ಕಲ್ಪಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ಮಾಡಿದರು. 
 
ಅರಣ್ಯ ಇಲಾಖೆಯ ಕಾರ್ಯದರ್ಶಿ ವಿಜಯಕುಮಾರ್ ಅವರು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ವಾಸಿಸುವ ಗಿರಿಜನರಿಗೆ ಮಾತ್ರ ಪುನರ್ವಸತಿ ಕಲ್ಪಿಸಲು ಅವಕಾಶವಿದೆ’ ಎಂದರು.

ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ ಜಿಲ್ಲೆಯಲ್ಲಿ ಒಟ್ಟು 58,084 ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಇದ್ದು, ಇವರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮನಸ್ಸು ಮಾಡಬೇಕು ಎಂದರು.

ಸಮಿತಿ ಸದಸ್ಯರಾದ ಡಿ.ಎಸ್. ವೀರಯ್ಯ ಅವರು, ಗಿರಿಜನರ ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಸದಸ್ಯ ಬಿ.ಬಿ.ನಿಂಗಯ್ಯ ಅವರು ಮೂಲ ನಿವಾಸಿ ಗಿರಿಜನರಿಗೆ ನ್ಯಾಯಬದ್ಧವಾಗಿ ನಿವೇಶನ ಹಾಗೂ ವಸತಿ ಕಲ್ಪಿಸಬೇಕು  ಎಂದು ಹೇಳಿದರು.  

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲೆಯ ಬಸವನಹಳ್ಳಿಯಲ್ಲಿ 6 ಎಕರೆ, ಹೆಬ್ಬಾಲೆ ಬಳಿ 10 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಅಲ್ಲಿ ನಿವೇಶನ ನೀಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.  
 
ಪ್ರಗತಿಪರರಾದ ಎ.ಕೆ.ಸುಬ್ಬಯ್ಯ, ನಟ ಚೇತನ್, ನಿರ್ವಾಣಪ್ಪ, ಸಿರಿಮನೆ ನಾಗರಾಜು, ಗಿರಿಜನರ ಮುಖಂಡರಾದ ಅಪ್ಪಾಜಿ, ಮುತ್ತಮ್ಮ, ಎಚ್.ಎಂ.ಕಾವೇರಿ ಜತೆಗೆ ಸಮಾಲೋಚನೆ ನಡೆಸಿದರು. 

ಎ.ಕೆ.ಸುಬ್ಬಯ್ಯ ಪ್ರತಿಕ್ರಿಯಿಸಿ, ಗಿರಿಜನರಿಗೆ ಕಾಡಂಚಿನಲ್ಲಿ ನಿವೇಶನ ಒದಗಿಸಬೇಕು. ಅವರ ಉದ್ಯೋಗಕ್ಕೆ ಅನುಕೂಲ ಮಾಡಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್,  ಒತ್ತುವರಿ ಆಗಿರುವ ಭೂಮಿ ಜಂಟಿ ಸರ್ವೆ ಮಾಡಿ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. 

ಸದಸ್ಯರಾದ ಆರ್.ಧರ್ಮಸೇನಾ, ಬಿ.ಬಿ. ನಿಂಗಯ್ಯ, ಎಂ.ಆರ್. ವೆಂಕಟೇಶ್, ಜಿಲ್ಲೆಯ ಶಾಸಕರಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷರಾದ ಬಿ.ಎ. ಹರೀಶ್, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT