ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದ ಮಾರ್ಗದಲ್ಲಿ ಕಳಚಿಹೋದ ಕೈಮರ

Last Updated 24 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕೆಲವರ ನಡೆಯೇ ಹಾಗೆ. ಅಪ್ಪ–ಅಮ್ಮ ಇಟ್ಟ ಹೆಸರನ್ನು ಮೌನಗೊಳಿಸಿ ಹುಟ್ಟಿದ ಊರಿಗೆ ಮೆಟ್ಟಿಲು ಹಾಕಿ ಮರೆಯಾಗಿಬಿಡುತ್ತಾರೆ; ಮಾಸ್ತಿ ಎಂಬ ಹೆಸರು ಮಾತ್ರದಿಂದಲೇ ಜನ ಥಟ್ಟನೆ ವೆಂಕಟೇಶ ಅಯ್ಯಂಗಾರ್ ಅವರನ್ನು ಸ್ಮರಿಸುವಂತೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಮೇಸ್ಟ್ರು ಅಟೆಂಡೆನ್ಸ್ ಹಾಕುವಾಗ ಕೃಷ್ಣಭಟ್ ಎಂದು ಕರೆದರೆ ‘ಎಸ್ ಸಾರ್’ ಎಂದು ಹೇಳುವ ಹತ್ತಾರು ಮಂದಿ ವಿದ್ಯಾರ್ಥಿಗಳು ಎದ್ದುನಿಂತಾರು. ಆದರೆ ಅಡ್ಯನಡ್ಕ ಕೃಷ್ಣಭಟ್ ಎಂದರೆ ಅವರೊಬ್ಬರೇ.

ವಿಜ್ಞಾನ ಸಾಹಿತ್ಯವಲಯದಲ್ಲಿ ‘ಎ.ಕೆ.ಬಿ.’ ಎಂಬ ಮೂರಕ್ಷರದಿಂದ ಸಂಚಲನ ಉಂಟುಮಾಡಿದವರು. ಒಂದು ಪ್ರಸಂಗವನ್ನು ಇಲ್ಲಿ ಹೇಳಬೇಕಾಗುತ್ತದೆ. ಕುಳಕುಂದ ಶಿವರಾಯ ಎಂದರೆ ಬಹುಮಂದಿ ಅವರು ಯಾರು ಎಂದು ಹುಬ್ಬೇರಿಸಬಹುದು. ಕಾದಂಬರಿಕಾರ ನಿರಂಜನ ಎಂದರೆ ಓದುಗರಿಗೆಲ್ಲ ಅವರ ಸಾಹಿತ್ಯ ಕೊಡುಗೆ ಕಣ್ಣಪರದೆಯ ಮೇಲೆ ಸರಿದುಹೋಗುತ್ತದೆ. ನಿರಂಜನರ ಸಾಹಿತ್ಯ ಬರಹದ ಯಾತ್ರೆಯ ಒಂದು ಹಂತದಲ್ಲಿ ನಮ್ಮ ಅಡ್ಯನಡ್ಕ ಕೃಷ್ಣಭಟ್ ಅವರೂ ಸೇರಿರುವುದರಿಂದ ಇದಕ್ಕೆ ಸಂಬಂಧಿಸಿದ ಒಂದು ಪ್ರಸಂಗ ಇಲ್ಲಿ ಪ್ರಸ್ತುತ.

ಕಳೆದ 60ರ ದಶಕದ ಕೊನೆಯ ಭಾಗದಲ್ಲಿ ‘ಸಹಕಾರಿ ಪ್ರಕಾಶನ’ ಎಂಬ ಖಾಸಗಿ ಸಂಸ್ಥೆ ಕಿರಿಯರನ್ನು ಮನಸ್ಸಿನಲ್ಲಿಟ್ಟುಕೊಂಡು ‘ಜ್ಞಾನಗಂಗೋತ್ರಿ ಕಿರಿಯರ ವಿಶ್ವಕೋಶ’ ತರುವ ಹುಮ್ಮಸ್ಸಿನಲ್ಲಿದ್ದಾಗ ದೇ.ಜ.ಗೌ. ಅದರ ಅಧ್ಯಕರಾಗಿ, ನಿರಂಜನ ಪ್ರಧಾನ ಸಂಪಾದಕರಾಗಿ, ಎಲ್.ಎಸ್. ಶೇಷಗಿರಿರಾವ್ ಸಂಪಾದಕರಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡರು. ಹದಿನೇಳು ಮಂದಿಯ ಸಂಪಾದಕ ಮಂಡಳಿ ಇತ್ತು.

ಉಪಸಂಪಾದಕ ಸಮಿತಿಯಲ್ಲಿ ‘ಪ್ರಜಾವಾಣಿ’ಯ ರಾಜಾ ಶೈಲೇಶಚಂದ್ರ ಗುಪ್ತ ಇದ್ದರು. ಹಣಕಾಸಿನ ಮುಗ್ಗಟ್ಟನ್ನು ಪರಿಹರಿಸಿ ನೇರವಾಗಿ ಆಗಿನ ಮೈಸೂರು ಸರ್ಕಾರವೇ ಆರ್ಥಿಕ ನೆರವನ್ನು ಈ ಯೋಜನೆಗೆ ನೀಡಿತ್ತು. ಅದರ ಫಲವೇ 1970ರಿಂದ 74ರವರೆಗೆ ಪ್ರಕಟವಾದ, ಕನ್ನಡದ ಮನೆಮನಗಳಲ್ಲೂ ಸ್ಥಾನಪಡೆದ ಏಳು ಸಂಪುಟಗಳು – ‘ಮನುಕುಲದ ಕಥೆ’, ‘ಜೀವಜಗತ್ತು’, ‘ಭೌತಜಗತ್ತು’, ‘ಯಂತ್ರಜಗತ್ತು’, ‘ಕಲೆ–ಸಾಹಿತ್ಯ’, ‘ಕ್ರೀಡೆ ಮನೋಲ್ಲಾಸ’ ಹಾಗೂ ‘ಭಾರತದ ಕಥೆ’.

ಕಲೆ, ಸಂಸ್ಕೃತಿ, ಕ್ರೀಡೆಗಳ ಬಗ್ಗೆ ಬರೆಯಲು ಹಲವು ತಜ್ಞರಿದ್ದರು. ಆದರೆ ವಿಜ್ಞಾನಕ್ಕೇ ಮೀಸಲಾಗಿದ್ದ ‘ಜೀವಜಗತ್ತು’, ‘ಭೌತಜಗತ್ತು’ ಮತ್ತು ‘ಯಂತ್ರಜಗತ್ತು’ ಸಂಪುಟಗಳಿಗೆ ವಿಜ್ಞಾನವನ್ನು ಸಮಗ್ರವಾಗಿ ಅರ್ಥೈಸಿಕೊಂಡು, ಪದಸಂಪನ್ನರಾದ, ಬದ್ಧತೆಯಿಂದ ನಿರ್ವಹಿಸಬಲ್ಲ ಚತುರಮತಿ ಬೇಕಾಗಿತ್ತು. ಜಿ.ಟಿ. ನಾರಾಯಣರಾಯರು ಸಂಪಾದಕ ಮಂಡಲಿಯಲ್ಲಿದ್ದರು. ಆಗ ಎಲ್ಲರಿಗೂ ಒಪ್ಪಿತವಾದ ಹೆಸರು ಅಡ್ಯನಡ್ಕ ಕೃಷ್ಣಭಟ್. ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಫಿಸಿಕ್ಸ್ ಅಧ್ಯಾಪಕರು. ಆ ಹೊತ್ತಿಗೆ ಕೃಷ್ಣಭಟ್ ಅವರು ವಿಜ್ಞಾನದ ಬರವಣಿಗೆಯಲ್ಲಿ ಹೆಸರಾಗಿದ್ದರು.

ಸುರತ್ಕಲ್‌ನ (ಶ್ರೀನಿವಾಸನಗರ) ‘ವಿಜ್ಞಾನ ಪ್ರತಿಷ್ಠಾನ’ದಿಂದ ಪ್ರಕಟವಾಗುತ್ತಿದ್ದ ವಿಶಿಷ್ಟ ವಿಜ್ಞಾನ ಮಾಸಿಕ ‘ವಿಜ್ಞಾನ ಲೋಕ’ವನ್ನು ಕೈಹಿಡಿದು ನಡೆಸಿ, ಅದು ನಡು ಎತ್ತಿ ನಿಲ್ಲುವಂತೆ ಮಾಡಿದ್ದರು. ಸಮಕಾಲೀನ ವೈಜ್ಞಾನಿಕ ಜಗತ್ತಿನ ವಿದ್ಯಮಾನಗಳನ್ನು ಪುಟ್ಟ ಪುಟ್ಟ ಶಬ್ದಗಳಲ್ಲಿ ಹಿಡಿದಿಡುವ ಸಂಪಾದಕೀಯ ಬರೆದರು. ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಲೇಖನಗಳನ್ನು ಕೇಳಿ ಬರೆಸಿಕೊಂಡರು. ಸಾಹಿತ್ಯಾಸಕ್ತರ ಗಮನವನ್ನೂ ಈ ಪುಟ್ಟ ಪತ್ರಿಕೆ ಸೆಳೆದಿತ್ತು. ಮೈಸೂರು ರಾಜ್ಯದ ಕಾಲೇಜು ಶಿಕ್ಷಣದ ನಿರ್ದೇಶನಾಲಯ ‘ಜ್ಞಾನಗಂಗೋತ್ರಿ’ಗಾಗಿ ಇವರ ಎರವಲು ಸೇವೆಗೆ ಒಪ್ಪಿಗೆ ನೀಡಿತ್ತು.

‘ಜ್ಞಾನಗಂಗೋತ್ರಿ’ ಕೋಶಕ್ಕೆ ವಿಷಯದ ಖಚಿತತೆಗೆ ಆಹ್ವಾನಿತ ಲೇಖನಗಳನ್ನಷ್ಟೇ ಪ್ರಕಟಣೆಗೆ ತೆಗೆದುಕೊಳ್ಳಬೇಕೆಂದು ಸಂಪಾದಕ ಮಂಡಳಿ ತೀರ್ಮಾನಿಸಿತ್ತು. ಆದರೆ ಅಕ್ಷರ ಸಂಸ್ಕಾರವಾಗಬೇಕಲ್ಲ? ಸಂಪಾದಕರ ನಿಜವಾದ ತಾಕತ್ತು ಇಂಥಲ್ಲಿ ಪದೇಪದೇ ಅಗ್ನಿಪರೀಕ್ಷೆಗೆ ಗುರಿಯಾಗುತ್ತದೆ. ಎಷ್ಟೋವೇಳೆ ಲೇಖನಗಳನ್ನು ತಿದ್ದುವುದಂತಿರಲಿ, ಪುನರ್‌ ರಚಿಸಬೇಕಾದ ಪ್ರಸಂಗವೂ ಬರುತ್ತದೆ. ಲೇಖನಗಳಿಗೆ ಮೊದಲು ಸಂಪುಟ ಸಂಪಾದಕರು ಸಮೀಕ್ಷಾ ಲೇಖನವನ್ನು ಬರೆಯಬೇಕು. ಅದು ಆ ವಿಷಯಕ್ಕೆ ಸಂಬಂಧಿಸಿದಂತೆ ಜಗತ್ತಿನ ಆಗುಹೋಗುಗಳನ್ನು ಸೆರೆಹಿಡಿಯಬೇಕು.

ಕೃಷ್ಣಭಟ್ ಅವರು ತಾವು ನಿರ್ವಹಿಸಿದ ಮೂರು ಸಂಪುಟಗಳಿಗೂ ನೂರು ಪುಟಗಳ ಗಡಿಮುಟ್ಟುವ ಸಮೀಕ್ಷಾ ಲೇಖನವನ್ನು ಬರೆದಿದ್ದಾರೆ. ಇವೇ ವಿಜ್ಞಾನದ ಇತಿಹಾಸದ ಗ್ರಂಥವಾಗಬಹುದು. ‘ಭೌತಜಗತ್ತು’ ಸಂಪುಟವೊಂದರಲ್ಲೇ 2370 ಶಬ್ದ ಮತ್ತು ಸಂವಾದಿ ಪದಗಳ ಪಟ್ಟಿ ಇದೆ. ಈ ಮೂರೂ ಸಂಪುಟಗಳ ಶಬ್ದಭಂಡಾರವನ್ನು ಗಮನಿಸಿದರೆ ಅದೇ ಒಂದು ಸ್ವತಂತ್ರ ನಿಘಂಟಾಗುತ್ತದೆ. ‘ಸರ್, ಈ ಸಂಪುಟಗಳೇಕೆ ಪುನರ್ ಮುದ್ರಣವಾಗಬಾರದು?’ ಎಂದು ಅನೇಕ ಮಂದಿ ಅವರ ‘ದೊಡ್ಡ ಕಿವಿ’ಯಲ್ಲಿ ಉಲಿದದ್ದುಂಟು.

‘ಪ್ರಯತ್ನಿಸಿದರೆ ಹಣವನ್ನು ಹೇಗೋ ಖಾಸಗಿ ಸಂಸ್ಥೆಗಳು ಒದಗಿಸಬಹುದು. ಆದರೆ ಹೊಸ ಮಾಹಿತಿ ಸೇರಿಸಬೇಕಲ್ಲ? ವಿಜ್ಞಾನ ನಿಂತನೀರಲ್ಲ, ಅಂಥ ವಿಜ್ಞಾನ ಬರಹಗಾರರನ್ನು ಈ ಕಾಲಘಟ್ಟದಲ್ಲಿ ಎಲ್ಲಿಂದ ತರಬೇಕು?’ ಎಂದು ಉತ್ತರವಿಲ್ಲದ ಪ್ರಶ್ನೆ ಕೇಳಿದ್ದರು. ಭಟ್ ಅವರು ಕ್ರಮಿಸಿದ ದಾರಿಗೆ ಮೇಲಿನ ಮಾತುಗಳು ತೋರು ಬೆರಳಾಗಬಹುದು.

ಅಡ್ಯನಡ್ಕ ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಾಧಾರಣ ಗ್ರಾಮ. ತಂದೆ ತಿಮ್ಮಣ್ಣ ಭಟ್, ತಾಯಿ ಲಕ್ಷ್ಮೀ. ಭಟ್ ಅವರು ಹುಟ್ಟಿದ್ದು 1938ರ ಮಾರ್ಚ್ 15. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಅವರ ಹುಟ್ಟೂರಿನಲ್ಲೇ. ಪ್ರೌಢಶಿಕ್ಷಣ ವಿಠಲ ಮತ್ತು ಪುತ್ತೂರಿನಲ್ಲಿ.

ಇಂಟರ್ ಮೀಡಿಯೆಟ್ ಓದಿದ್ದು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ. ಅಲ್ಲಿ ಕಾಲೇಜಿಗೆ ಬಂದು ಉಪನ್ಯಾಸ ನೀಡುತ್ತಿದ್ದ ಬೇಂದ್ರೆ, ಅಡಿಗ, ರಾಜರತ್ನಂ, ಕುವೆಂಪು ಮುಂತಾದ ಧೀಮಂತ ಸಾಹಿತಿಗಳ ಭಾಷಣಗಳನ್ನು ಕೇಳಿ ಪ್ರಭಾವಿತರಾಗಿದ್ದರು. ಫಿಸಿಕ್ಸ್‌ನಲ್ಲಿ ಬಿ.ಎಸ್ಸಿ. ಆನರ್ಸ್ ಮತ್ತು ಎಂ.ಎ. ಮಾಡಿದ್ದು ಮದ್ರಾಸಿನ ‘ಮದ್ರಾಸ್ ವಿಶ್ವವಿದ್ಯಾಲಯ’ದಲ್ಲಿ.

ಆಗ ದಕ್ಷಿಣ ಕನ್ನಡ ಜಿಲ್ಲೆ ಆಡಳಿತಾತ್ಮಕವಾಗಿ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿತ್ತು. ಅಲ್ಲಿ ಸರ್. ಸಿ.ವಿ. ರಾಮನ್ ಮತ್ತು ನೀಲ್ಸ್ ಬೋರ್‌ರ ಉಪನ್ಯಾಸ ಕೇಳಿದಾಗ, ಸರಳವಾಗಿ ಅವರು ವಿಜ್ಞಾನದ ಗಡಚುಮುಖ ಕಳಚಿದ ಪರಿ ಇವರಿಗೆ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಜನಪ್ರಿಯತೆಗೊಳಿಸಬೇಕೆಂಬ ಕಕ್ಕುಲತೆ ಹುಟ್ಟಿಸಿತು. ಎಂ.ಎ. ಮುಗಿದೊಡನೆ ಆಗ ನಿರುದ್ಯೋಗದ ಸ್ಥಿತಿಯೇನೂ ಇರಲಿಲ್ಲ.

ಅಲ್ಪಾವಧಿಗೆ, ತಾವೇ ಶಿಕ್ಷಣ ಪಡೆದಿದ್ದ ಎಂ.ಜಿ.ಎಂ. ಕಾಲೇಜು ಸೇರಿದರು. ಅನಂತರ ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ, ಮುಂದೆ ಶಾಶ್ವತವಾಗಿ ನೆಲೆನಿಂತದ್ದು (1963–96) ಮುಲ್ಕಿಯ ವಿಜಯಾ ಕಾಲೇಜಿನಲ್ಲಿ. ಇದು ಅವರ ಕರ್ಮಭೂಮಿಯಾಯಿತು. ಅವರ ಬಹುತೇಕ ವಿಜ್ಞಾನ ಬರಹಗಳು, ಕೃತಿಗಳು ಮೈದಳೆದದ್ದು ಇಲ್ಲಿ.

‘ವಿಚಾರವಾಹಿನಿ’, ‘ಸುಧಾ’, ‘ಪುಸ್ತಕ ಪ್ರಪಂಚ’ಕ್ಕೆ ಸತತವಾಗಿ ವಿಜ್ಞಾನ ಬರೆಯುತ್ತ ಹೋದರು. ಫಿಸಿಕ್ಸ್‌ಗಷ್ಟೇ ಸೀಮಿತಗೊಳಿಸದೆ ವಿಜ್ಞಾನದ ಹಲವು ಶಿಸ್ತುಗಳನ್ನು ಅರಗಿಸಿಕೊಂಡರು, ಸಮರ್ಥವಾಗಿ ಸಂವಹನ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ‘ಕನ್ನಡ ವಿಶ್ವಕೋಶ’ಕ್ಕೆ ‘ಭೌತವಿಜ್ಞಾನ’ ವಿಷಯವನ್ನು ಬರೆದರು. ವಿಜ್ಞಾನ ಸಂಪಾದಕರಾಗಿದ್ದ ಜಿ.ಟಿ.ಎನ್. – ‘ನಿಮ್ಮ ಲೇಖನಗಳು ಸೊಗಸಾಗಿವೆ, ಭೇಷ್ ಭೇಷ್’ ಎನ್ನುತ್ತಿದ್ದರು.

ಕೃಷ್ಣಭಟ್ ಅವರ ಮತ್ತೊಂದು ಮಹತ್ತರ ಕೊಡುಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ‘ಬಾಲವಿಜ್ಞಾನ’ ಮಾಸಪತ್ರಿಕೆಯ ಸಂಪಾದಕರಾಗಿ ಅದನ್ನು ಬೆಳೆಸಿದ್ದು. ಕ.ರಾ.ವಿ.ಪ. ಕಟ್ಟಿಬೆಳೆಸಿದವರಲ್ಲಿ ಒಬ್ಬರಾದ ಜೆ.ಆರ್. ಲಕ್ಷ್ಮಣರಾಯರಿಗೆ ‘ಬಾಲವಿಜ್ಞಾನ’ವನ್ನು ಕೃಷ್ಣಭಟ್ ಅವರ ಕೈಗಿಟ್ಟರೆ ‘ಸೇಫ್’ ಎನ್ನಿಸಿದ್ದರಲ್ಲಿ ವಿಸ್ಮಯಪಡುವುದು ಏನೂ ಇಲ್ಲ. ‘ನವಕರ್ನಾಟಕ’ ಪ್ರಕಾಶನ ಸಂಸ್ಥೆ ಜಿ.ಟಿ. ನಾರಾಯಣರಾವ್ ಅವರ ಸಂಪಾದಕತ್ವದಲ್ಲಿ ‘ವಿಜ್ಞಾನ ಪದ ವಿವರಣ ಕೋಶ’ ಎಂಬ ವಿಶಿಷ್ಟ ಕೋಶವೊಂದನ್ನು ತರುವಾಗ, ಕೃಷ್ಣಭಟ್ ಅವರು ಒಂದುವಾರ ಬೈಠಕ್‌ನಲ್ಲಿ ಇದ್ದರು. ‘ವಿಜ್ಞಾನ ಬರಹಗಾರರು ಇಂಗ್ಲಿಷ್ ನುಡಿಗಳನ್ನು ತೀರ ಮಡಿವಂತಿಕೆಯಿಂದ ನೋಡುವುದು ಬೇಡ.

ಥರ್ಮೋಡೈನಮಿಕ್ಸ್‌ಗೆ ‘ಔಷ್ಣೀಯ ಚಲನವಿಜ್ಞಾನ’ ಎಂದು ಏಕೆ ಹೇಳಬೇಕು? ಔಷ್ಣೀಯ ಎನ್ನುವ ಬದಲು ಉಷ್ಣ ಎಂದರೆ ಸಾಕಲ್ಲ?’ ಎಂಬ ಸರಳ, ಆದರೆ ಅರ್ಥಪೂರ್ಣ ಪದಪ್ರಯೋಗ ಸೂಚಿಸಿದಾಗ ಸಂಪಾದಕ ಮಂಡಳಿಯಲ್ಲಿದ್ದ ನಾವೆಲ್ಲ ‘ಹೌದಲ್ಲ’ ಎಂದಿದ್ದೆವು. ಖಚಿತತೆ, ಅರ್ಥವಂತಿಕೆ, ಸರಳತೆ ಜೊತೆಗೆ ಕನ್ನಡದ ಸೊಗಡನ್ನು ಪಸರಿಸುವ ಪದಗಳ ಬಳಕೆ ಅವರ ಲಾಂಛನ ಎಂದರೆ ಒಪ್ಪೀತು.

‘ಗಗನಯುಗ’ (1964) ಬರೆಯಲು ಯೂರಿ ಗಗಾರಿನ್ನನ ಸಾಧನೆ ಅವರಿಗೆ ಪ್ರೇರಣೆಯಾಯಿತಂತೆ. ‘ಮನುಷ್ಯನ ಕಥೆ’ (1977) ‘ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ’ ಪುಸ್ತಕ ಬಹುಮಾನ ಪಡೆಯಿತು. ‘ಐಸಾಕ್ ನ್ಯೂಟನ್’, ‘ಮನುಷ್ಯ ವಂಶಾವಳಿ’, ‘ಬೆಳ್ಳಿ ಚುಕ್ಕಿ’, ‘ನಮ್ಮ ವಾತಾವರಣ’, ‘ನವವಿಜ್ಞಾನದ ಉದಯ’ – ಇವೇ ಮುಂತಾದ ಕೃತಿಗಳನ್ನೂ, ‘ಗಾಳಿಶಕ್ತಿ’ ಮುಂತಾದ ಆರು ಕೃತಿಗಳ ಅನುವಾದವನ್ನೂ ಮಾಡಿದ್ದಾರೆ.

ಅನುವಾದದಲ್ಲಿ ‘ರಾಮನ್ ಅಂಡ್ ಈಸ್ ವರ್ಕ್’ ಎಂಬ ಕೃತಿಯನ್ನು ಅನುವಾದಿಸುವಾಗ ರಾಮನ್ ಮತ್ತು ಅವರ ಪರಿಣಾಮ ಎಂದು ಅನುವಾದಿಸುವ ಸ್ವಾತಂತ್ರವನ್ನು ತೋರಿದರು. ಏಕೆಂದರೆ ರಾಮನ್ ಪರಿಣಾಮ ಬರಿ ಬೆಳಕು ಕುರಿತಾದುದಲ್ಲ, ಬದಲು ಇಡೀ ಭಾರತದ ವಿವಿಧ ವಿಜ್ಞಾನ–ತಂತ್ರಜ್ಞಾನಗಳ ಮೇಲೆ ಬೀರಿದ ಪ್ರಭಾವವನ್ನೂ ಸೂಚಿಸುತ್ತದೆ. ಅಂತರರಾಷ್ಟ್ರೀಯ ಫಿಸಿಕ್ಸ್ ವರ್ಷ 2005ರಲ್ಲಿ ‘ಫಿಸಿಕ್ಸ್ ಮತ್ತು ಐನ್‌ಸ್ಟೈನ್’ ಕೃತಿ ರಚಿಸಿದರು. ಇದರಲ್ಲಿ ಸಾಮಾನ್ಯರೂ ಓದಿ ಖುಷಿಪಡಬಹುದಾದ ನಿರೂಪಣೆ ಇದೆ. ಗ್ರಹಣ ಕುರಿತು ಬರೆದ ಅವರ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದೆ. ಈ ಸಂದರ್ಭದಲ್ಲಿ ಒಂದು ಪ್ರಸಂಗವನ್ನು ಇಲ್ಲಿ ಉಲ್ಲೇಖಿಸಬಹುದು.

ವಿದ್ಯಾರ್ಥಿಗಳು ಬರಿ ಪುಸ್ತಕಾವಲಂಬಿಗಳಾಗಬಾರದು ಎಂಬುದು ಅವರು ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದ ಕಳಕಳಿ. 1995ರಲ್ಲಿ ಕರ್ನಾಟಕದಿಂದ ಆಯ್ದ ವಿದ್ಯಾರ್ಥಿಗಳನ್ನು ರಾಜಾಸ್ತಾನದ ಆಲ್ವಾರ್‌ಗೂ, 1999ರಲ್ಲಿ ಗುಜರಾತಿನ ಭುಜ್‌ಗೂ ಸಂಪೂರ್ಣ ಸೂರ್ಯಗ್ರಹಣ ವೀಕ್ಷಿಸಲು ಕರೆದುಕೊಂಡು ಹೋಗಿದ್ದರು. ಆ ಅನುಭವ ವಿದ್ಯಾರ್ಥಿಗಳನ್ನು ಪುಲಕಗೊಳಿಸಿತ್ತು.

ಇದಕ್ಕೂ ಮುಂಚೆ 1968ರಲ್ಲಿ ‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು’ ರೂಪಿಸಿದ ಪ್ರತಿಫಲಕ ದೂರದರ್ಶಕ ಬಳಸಿ – ‘ಹ್ಯಾಲಿ ಧೂಮಕೇತು’ವನ್ನು ವಿದ್ಯಾರ್ಥಿಗಳಿಗೆ ದರ್ಶನಮಾಡಿಸಿದ್ದರು. ಆಕಾಶವೀಕ್ಷಣೆ ಅವರಿಗೆ ಪ್ರಿಯವಾದ ಹವ್ಯಾಸವಾಗಿತ್ತು. ವಿಜಯ ಕಾಲೇಜಿನಲ್ಲಿದ್ದಾಗಲೇ ದಕ್ಷಿಣ ಕನ್ನಡ ಜಿಲ್ಲೆ ಕುರಿತು ‘ಸುದರ್ಶನ’ ಎಂಬ ಕೋಶವನ್ನು ಅದೇ ಸಂಸ್ಥೆ ರಚಿಸಲು, ಪ್ರಕಟಿಸಲು ಸಂಪಾದಕತ್ವದ ಹೊಣೆ ಹೊತ್ತರು. 1977ರಲ್ಲಿ ಟಿ.ಎಂ.ಎ. ಪೈ ಅವರಿಗೆ ಸಂಭಾವನ ಗ್ರಂಥವಾಗಿ ಅದನ್ನು ರೂಪಿಸಿದ್ದರು.

ಕಂಪ್ಯೂಟರ್, ಶಕ್ತಿ, ಎಕ್ಸ್–ಕಿರಣಗಳಿಗೆ ನೂರು ವರ್ಷ, ಐನ್‌ಸ್ಟೈನ್ ಕುರಿತು ಆಕಾಶವಾಣಿಗಾಗಿ ಕನ್ನಡ ನಾಟಕಗಳನ್ನು ರಚಿಸಿದ್ದರು. ಕೃಷ್ಣ ಭಟ್ ಅವರ ಜನಪ್ರಿಯ ಸಾಹಿತ್ಯದ ಕೊಡುಗೆಗಾಗಿ 1996ರಲ್ಲಿ ಭಾರತ ಸರ್ಕಾರದ ‘ರಾಷ್ಟ್ರೀಯ ವಿಜ್ಞಾನ ಮತ್ತು ಸಂವಹನ ಮಂಡಲಿ’ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದಾಗ, ಅವರಿಗಿಂತ ಅವರ ಅಭಿಮಾನಿಗಳು ಮತ್ತು ಅವರ ಶಿಷ್ಯರು ಹೆಚ್ಚು ಸಂಭ್ರಮಿಸಿದ್ದರು.

ಜನಪ್ರಿಯ ವಿಜ್ಞಾನವನ್ನು ಕುರಿತು ಅವರಿಗೆ ಖಚಿತ ಅಭಿಪ್ರಾಯವಿತ್ತು. ‘ಸಂಶೋಧಕ ಕೃತಿಗಳಂತೆ ಮತ್ತು ಪಠ್ಯಪುಸ್ತಕಗಳಂತೆ ಜನಪ್ರಿಯ ವಿಜ್ಞಾನ ಸಾಹಿತ್ಯವೂ ಜನತೆಯ ಅವಶ್ಯಕತೆ ಮತ್ತು ಬೇಡಿಕೆಗಳನ್ನು ಅನುಸರಿಸಿ ತಾನೇತಾನಾಗಿ ಬೆಳೆಯುವುದೆಂದು ಹೇಳುವ ಹಾಗಿಲ್ಲ. ಜನರಿಗೆ ಏನು ಬೇಕು ಎಂದು ತಜ್ಞರಲ್ಲಿ ಮೂಡುವ ಪ್ರಜ್ಞೆ, ವಿಜ್ಞಾನದ ಪರಿಭಾಷೆಯನ್ನು ಆದಷ್ಟು ಕಡಿಮೆಮಾಡಿ ಜನಸಾಮಾನ್ಯರ ಭಾಷೆಯಲ್ಲಿ ಅದನ್ನು ಒದಗಿಸಬೇಕೆಂಬ ಪ್ರೇರಣೆ, ಅದಕ್ಕೆ ಬೇಕಾದ ಸಾಮರ್ಥ್ಯ – ಇವು ಬೆಳೆಯುವವರೆಗೂ ಜನಪ್ರಿಯ ವಿಜ್ಞಾನ ಸಾಹಿತ್ಯ ಬೆಳೆಯಲಾರದು’ ಎಂದು ಆಗಾಗ ಹೇಳುತ್ತಿದ್ದರು. ಪತ್ರಿಕೆಗಳಲ್ಲಿ ಬರುವ ವಿಜ್ಞಾನ ಲೇಖನಗಳನ್ನು ಓದಿ ಉತ್ತಮ ಲೇಖನವಾಗಿದ್ದರೆ, ಲೇಖಕರಿಗೆ ಪತ್ರಬರೆದು ಉತ್ತೇಜಿಸುತ್ತಿದ್ದರು.

ಜೆ.ಆರ್. ಲಕ್ಷ್ಮಣರಾಯರ ಜೊತೆ ಇವರು ಹೊರತಂದ ಅತ್ಯಂತ ಅವಶ್ಯಕತೆ ಇದ್ದ ಕೃತಿ ‘ಇಂಗ್ಲಿಷ್–ಕನ್ನಡ ವಿಜ್ಞಾನ ಶಬ್ದಕೋಶ’. ಗ್ರೀಕ್ ಮತ್ತು ಲ್ಯಾಟಿನ್ ಶಬ್ದಕಾಂಡಗಳನ್ನೂ, ಪ್ರತ್ಯಯಗಳನ್ನೂ ಬಳಸಿಕೊಂಡು ಹೇಗೆ ಇಂಗ್ಲಿಷ್ ವಿಜ್ಞಾನ ಸಾಹಿತ್ಯ ಬೆಳೆದಿದೆ ಎಂಬ ಅತಿಮುಖ್ಯ ಸೂಚನೆಯನ್ನು ಇದರಲ್ಲಿ ಕೊಟ್ಟಿದ್ದಾರೆ. ‘ನವಕರ್ನಾಟಕ’ ಸಂಸ್ಥೆಯ ‘ಜ್ಞಾನ–ವಿಜ್ಞಾನ ಮಾಲೆ’ಯಲ್ಲಿ ಕಾಮನಬಿಲ್ಲು ಕುರಿತು ಮಾದರಿ ಕೃತಿ ರಚಿಸಿ, ಆ ಚೌಕಟ್ಟಿನಲ್ಲಿ ಬರೆಯಲು ಸೂಚಿಸಿದಾಗ ಹೊಸತಲೆಮಾರಿನ ವಿಜ್ಞಾನ ಲೇಖಕರು ಅದರಲ್ಲಿ ಆಸಕ್ತಿ ತೋರಿಸಲಿಲ್ಲ ಎಂಬ ವಿಷಾದ ಅವರಲ್ಲಿತ್ತು.

ಮುಲ್ಕಿಯ ವಿಜಯ ಕಾಲೇಜಿನಿಂದ ನಿವೃತ್ತರಾದ ಮೇಲೆ ಮೈಸೂರು ವಿಜಯನಗರ ಬಡಾವಣೆಯಲ್ಲಿ ಸ್ವಂತಮನೆ ಕಟ್ಟಿಕೊಂಡರು. ಬರವಣಿಗೆ ಮುಂದುವರಿಸಿದರು. ‘ನೀವೇಕೆ ಆತ್ಮಚರಿತ್ರೆ ಬರೆಯಬಾರದು?’ ಎಂದು ಕೇಳಿದಾಗ ಬಿಕ್ಕಳಿಕೆಯ ನಡುವೆಯೂ ನಕ್ಕರು. ಅದನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. ಅನೇಕ ಬಾರಿ ಹಾಸಿಗೆ ಹಿಡಿದರೂ ಪೆನ್ನನ್ನೂ ಕೆಳಕ್ಕೆ ಇಟ್ಟವರಲ್ಲ.

ಹಲವು ಬಾಧೆಗಳು ಅವರ ದೇಹವನ್ನು ಕಾಡತೊಡಗಿದಾಗ ಪತ್ನಿ ಸರಸ್ವತಿ ಭಟ್ ಅವರೊಂದಿಗೆ ಗೋಕಾಕ್‌ನಲ್ಲಿರುವ ಮಗಳು ದೀಪ್ತಿ ಬಳಿಗೆ ಹೋದರು. ಆಕೆ ನೇತ್ರ ವೈದ್ಯೆ. ಈ ಹಂತದಲ್ಲಿ ಅಪ್ಪ ಸಮೀಪದಲ್ಲಿ ಇರಬೇಕೆಂಬ ದೂರದೃಷ್ಟಿ ಅವರದು. ಮಗ ತಿರುಮಲೇಶ್ ಭಟ್, ಅಮೆರಿಕದ ಸಿಯಾಟ್ಲ್‌ನಲ್ಲಿ ಸಾಫ್ಟವೇರ್ ಎಂಜಿನಿಯರ್.

ಗೋಕಾಕ್‌ನಲ್ಲಿ ಕಳೆದ ಭಾನುವಾರ (ಡಿ. 18) ಆಸ್ಪತ್ರೆಯಲ್ಲೇ ಉಸಿರಾಟದ ತೊಂದರೆಯಿಂದಾಗಿ ಅಸುನೀಗಿದರು. ನಲವತ್ತು ವರ್ಷಗಳ ಅವರ ಸಾಹಚರ್ಯದಲ್ಲಿ ಅನೇಕ ಕಿವಿಮಾತುಗಳನ್ನು ನನಗೆ ಹೇಳಿದ್ದಾರೆ. ‘ಕನ್ನಡ ಸಾಹಿತ್ಯ ಪರಿಷತ್ತು’ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ‘ವಿಜ್ಞಾನ ತಂತ್ರಜ್ಞಾನ’ ಸಂಪುಟದ ಸಂಪಾದನೆ ಮಾಡುತ್ತಿದ್ದ ನನಗೆ ಗೋಕಾಕ್‌ನಿಂದಲೇ ಫೋನ್ ಮಾಡಿ ಹೇಳಿದ್ದರು.

‘ನೀವು ಶಿವರಾಮ ಕಾರಂತರ ವಿಜ್ಞಾನ ಸಾಹಿತ್ಯ ದಾಖಲಿಸುವಾಗ ಅವರ ಸಹೋದರ ಕೋಟ ಲಕ್ಷ್ಮೀನಾರಾಯಣ ಕಾರಂತರ ‘ವಿಶ್ವವೈಚಿತ್ರ’ ಎಂಬ ಕೃತಿಯನ್ನೂ ಗಮನಿಸಬೇಕು. ಮದರಾಸು ವಿಶ್ವವಿದ್ಯಾಲಯದ ಬಹುಮಾನ ಅದಕ್ಕೆ ಬಂದಿದೆ’. ಮಾರ್ಗದಲ್ಲಿ ಹೋಗುವಾಗ ಕೈಮರ ಬಿದ್ದು ಹೋಗಿದ್ದರೂ ಅಂಡಲೆದು ಗುರಿಮುಟ್ಟಬೇಕಾದ ಅನಿವಾರ್ಯತೆ ನಮ್ಮದು. ಬಿ.ಎಂ.ಶ್ರೀ ಅವರ ಕವನದ ಸಾಲು ‘ಎಲ್ಲೋ ಎಲ್ಲೋ ಮಾಯವಾದವು ಹಳೆಯ ಪಳಕೆಯ ಮುಖಗಳು’ ನೆನಪಾಗುತ್ತಿವೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT