ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನಿಗೆ ಸ್ಪಂದಿಸದ ಬರಹ ‘ಬೂಸಾ ಸಾಹಿತ್ಯ’

ಜನನುಡಿ ಉದ್ಘಾಟನೆಯಲ್ಲಿ ಸಾಹಿತಿ ಶರಣಕುಮಾರ್‌ ಲಿಂಬಾಳೆ ಪ್ರತಿಪಾದನೆ
Last Updated 24 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಜನ ಸಾಮಾನ್ಯರ ನೋವು, ನಲಿವುಗಳಿಗೆ ಸ್ಪಂದಿಸದ ಬರಹಗಳೆಲ್ಲವೂ ‘ಬೂಸಾ ಸಾಹಿತ್ಯ’. ಮುಖ್ಯವಾಹಿನಿ ಸಾಹಿತಿಗಳು ಎಂದು ಸ್ವಯಂಘೋಷಣೆ ಮಾಡಿಕೊಂಡವರು ಬರೆದುದ್ದಕ್ಕಿಂತಲೂ ಮನುಷ್ಯ ಕೇಂದ್ರಿತ ಸಾಹಿತ್ಯವೇ ಶ್ರೇಷ್ಠವಾದುದು’ ಎಂದು ಮರಾಠಿ ಭಾಷೆಯ ಖ್ಯಾತ ಸಾಹಿತಿ ಶರಣಕುಮಾರ್‌ ಲಿಂಬಾಳೆ ಪ್ರತಿಪಾದಿಸಿದರು.

ನಗರದ ಶಾಂತಿಕಿರಣದಲ್ಲಿ ಅಭಿಮತ ಮಂಗಳೂರು ವತಿಯಿಂದ ಆಯೋಜಿಸಿರುವ ಎರಡು ದಿನಗಳ ‘ಜನನುಡಿ– 2016’ ಸಾಹಿತ್ಯ, ಸಂಸ್ಕೃತಿ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕೆಲವರು ತಮ್ಮನ್ನು ಮುಖ್ಯವಾಹಿನಿ ಸಾಹಿತಿಗಳು ಎಂದು ಗುರುತಿಸಿಕೊಳ್ಳುತ್ತಾರೆ. ಅವರ ಬರಹಗಳೆಲ್ಲಾ ಮುಖ್ಯವಾಹಿನಿ ಸಾಹಿತ್ಯ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ಸಾಹಿತ್ಯವೆಲ್ಲವೂ ಸದಾಕಾಲವೂ ದೇವರ ಮತ್ತು ಪ್ರಭುತ್ವದ ಸುತ್ತವೇ ಗಿರಕಿ ಹೊಡೆಯುತ್ತದೆ. ಅದು ಬೂಸಾ ಸಾಹಿತ್ಯ. ಅದರಿಂದ ಮನುಷ್ಯಕುಲಕ್ಕೆ ಯಾವ ಒಳಿತೂ ಆಗದು’ ಎಂದರು.

‘ಹಿಂದೆ ಕರ್ನಾಟಕದ ಸಚಿವರೊಬ್ಬರು ಬೂಸಾ ಸಾಹಿತ್ಯದ ಬಗ್ಗೆ ಮಾತನಾಡಿದ್ದರು. ನಾವು ಚಿಕ್ಕಂದಿನಿಂದ ಪಿಎಚ್‌.ಡಿವರೆಗೂ ಅಂತಹ ಬೂಸಾ ಸಾಹಿತ್ಯವನ್ನೇ ಓದಿಕೊಂಡು ಬೆಳದೆವು. ಆ ಸಾಹಿತ್ಯದಲ್ಲಿ  ಮೇಲ್ವರ್ಗದ ಜನರ ರಮ್ಯ ಕಲ್ಪನೆಗಳಿಗೆ ಮಾತ್ರ ಜಾಗವಿತ್ತು. ನಮ್ಮ ನೋವು, ಸಂಕಷ್ಟ, ವೇದನೆಗೆ ಸ್ಥಳಾವಕಾಶ ಇರಲಿಲ್ಲ. ನಮ್ಮ ನಾಯಕರ ಕುರಿತ ಉಲ್ಲೇಖವೇ ಕಾಣುತ್ತಿರಲಿಲ್ಲ. ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರ ಕುರಿತಾದ ವಿಷಯಗಳಿಗೆ ಬೂಸಾ ಸಾಹಿತ್ಯದಲ್ಲಿ ಸ್ಪಂದನೆಯೇ ಇರಲಿಲ್ಲ’ ಎಂದು ಹೇಳಿದರು.

‘ನಮ್ಮ ಜನರ ಬದುಕಿನ ಸುತ್ತ ಬರೆಯಲು ಆರಂಭಿಸಿದಾಗ ದಲಿತ ಸಾಹಿತ್ಯ ಜನ್ಮ ತಳೆಯಿತು. ಈಗ ಬಹುತೇಕ ಎಲ್ಲಾ ಭಾಷೆಗಳಲ್ಲೂ ದಲಿತ ಸಾಹಿತ್ಯ ಸಮೃದ್ಧವಾಗಿ ಬರುತ್ತಿದೆ. ಮೊದಲು ನಮ್ಮ ಬರಹಗಳನ್ನು ಪ್ರಕಟಿಸದೇ ತಿರಸ್ಕರಿಸಲಾಯಿತು. ನಾವಾಗಿಯೇ ಮುದ್ರಣ ಮಾಡಿ ಯಶಸ್ಸು ಕಂಡಬಳಿಕ ಸಾಹಿತ್ಯ ಲೋಕವನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದವರು ನಮ್ಮ ಬಳಿಗೆ ಬಂದರು. ನೀವೇಕೆ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತೀರಿ? ‘ಮುಖ್ಯವಾಹಿನಿ’ ಜೊತೆಯೇ ಬನ್ನಿ ಎಂಬ ಆಹ್ವಾನಗಳು ನಮ್ಮೆದುರು ಬಂದವು’ ಎಂದರು.

‘ಸಾಹಿತ್ಯವೆಂಬುದು ಯಾವಾಗಲೂ ಜನಪರವಾಗಿ ಇರಬೇಕು. ಜನಸಾಮಾನ್ಯರು ದೇವರು ಮತ್ತು ದೊರೆಗಳಿಗಿಂತ ದೊಡ್ಡವರು. ಅವರ ವಿಚಾರಗಳಿಗೆ ಸಾಹಿತ್ಯದಲ್ಲಿ ಆದ್ಯತೆ ಸಿಗಬೇಕು. ಆದ್ದರಿಂದಲೇ ನಾನು ನನ್ನ ಜನಗಳ ಕುರಿತು ಬರೆಯುತ್ತೇನೆ. ಸಾಹಿತ್ಯದಲ್ಲಿ ಮಾನವೀಯ ಸಂಗತಿಗಳನ್ನು ಚರ್ಚಿಸದೆ ಹೋದರೆ, ಜನಸಾಮಾನ್ಯರ ಕುರಿತು ಬರೆಯದಿದ್ದರೆ ಅದು ಮನುಷ್ಯತ್ವಕ್ಕೆ ಎಸಗುವ ಅಪಚಾರವಾಗುತ್ತದೆ. ಘೋರ ಅಪರಾಧ ಕೂಡ ಆಗುತ್ತದೆ’ ಎಂದು ವಿಶ್ಲೇಷಿಸಿದರು.

ಅಂಬೇಡ್ಕರ್‌ ಸಂತಾನ: ‘ನಾನು ಚಿಕ್ಕವನಿದ್ದಾಗ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಇರಿಸಿಕೊಂಡು ಓಡಾಡಲು, ಅವರ ಹೆಸರು ಹೇಳಲು ಮತ್ತು ಜೈ ಭೀಮ್‌ ಘೋಷಣೆ ಕೂಗಲು ಹೆದರಿಕೆ ಆಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಧೈರ್ಯದಿಂದ ಅಂಬೇಡ್ಕರ್‌ ಅವರ ಹೆಸರು ಹೇಳುತ್ತೇವೆ, ಘೋಷಣೆ ಕೂಗುತ್ತೇವೆ. ನೀವು (ದಲಿತರು) ‘ಅಕ್ರಮ ಸಂತಾನ’ವೇ ಎಂದು ಯಾರೋ ನನ್ನನ್ನು ಪ್ರಶ್ನಿಸಿದ್ದರು. ಆಗ ನಾನು ಧೈರ್ಯದಿಂದ ‘ಅಕ್ರಮ ಸಂತಾನ’ವಲ್ಲ ‘ಅಂಬೇಡ್ಕರ್ ಸಂತಾನ’ ಎಂಬುದಾಗಿ ಉತ್ತರಿಸಿದ್ದೆ’ ಎಂದರು.

ಹಿಂದಿನ ಭಾರತೀಯ ಮಾಧ್ಯಮಗಳು ಅಂಬೇಡ್ಕರ್‌ ಅವರಿಗೆ ಅನ್ಯಾಯ ಮಾಡಿವೆ. ಗಾಂಧೀಜಿಯವರೇ ದಲಿತರ ಏಕೈಕ ನಾಯಕ ಎಂದು ಬಿಂಬಿಸಿದ್ದವು. ಗಾಂಧೀಜಿಯವರು ದೇಶವನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿ ಸಿದರು. ಅಂಬೇಡ್ಕರ್‌ ಅವರು ದಲಿತರನ್ನು ಸಾವಿರಾರು ವರ್ಷಗಳ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಅಂಬೇಡ್ಕರ್‌ ಆರಂಭಿಸಿದ ಹೋರಾಟ ಇನ್ನೂ ಜಾರಿಯಲ್ಲಿದೆ ಎಂದು ಹೇಳಿದರು.

ಎಚ್ಚರಿಸುವುದು ಮುಖ್ಯ: ಮಾಜಿ ಸಚಿವ ಬಿ.ಎ. ಮೊಯಿದ್ದೀನ್ ಮಾತನಾಡಿ, ‘ನಮ್ಮ ಸಮಾಜ ದಿನದಿಂದ ದಿನಕ್ಕೆ ಹಿಮ್ಮುಖವಾಗಿ ಸಾಗುತ್ತಿದೆ. ಜನರು ಮೌಢ್ಯಗಳನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಇಂತಹ ಸಮಾಜವನ್ನು ಎಚ್ಚರಿಸಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಕೆಲಸ ಆಗಬೇಕು. ಆತ್ಮವಂಚನೆಯ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿದರೆ ಮಾತ್ರವೇ ಈ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಸಮಾನ ಶಿಕ್ಷಣ ನೀತಿಯ ಅಗತ್ಯವಿದೆ ಎಂದರು. ಲೇಖಕಿ ಡಾ. ವಿಜಯಮ್ಮ  ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಭಿಮತ ಬಳಗದ ಡಾ. ಎಚ್.ಎಸ್‌. ಅನುಪಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಧ್ವನಿಸಿದ ದಿಡ್ಡಳ್ಳಿ
ಕೊಡಗು ಜಿಲ್ಲೆಯ ದಿಡ್ಡಳ್ಳಿಯಲ್ಲಿ ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಿರುವ ವಿಷಯ ಜನನುಡಿ ಉದ್ಘಾಟನಾ ಸಮಾರಂಭದಲ್ಲೂ ಪ್ರತಿಧ್ವನಿಸಿತು.

ವೇದಿಕೆಯಲ್ಲಿದ್ದ ಚಿತ್ರನಟ ಚೇತನ್‌ ಮಾತನಾಡುತ್ತಾ, ‘ಎಸ್ಟೇಟ್‌ ಮಾಫಿಯಾಕ್ಕೆ ಮಣಿದಿರುವ ಸರ್ಕಾರ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದೆ. ಈಗ ಅವರ ಪುನರ್ವಸತಿಯ ಭರವಸೆ ಸಿಕ್ಕಿದೆ. ಅದು ಈಡೇರದಿದ್ದರೆ ತೀವ್ರ ಸ್ವರೂಪದ ಹೋರಾಟ ಕೈಗೆತ್ತಿಕೊಳ್ಳುತ್ತೇವೆ’ ಎಂದು ಹೇಳಿದರು.

ದಿಡ್ಡಳ್ಳಿ ಆದಿವಾಸಿ ಕುಟುಂಬಗಳಿಗೆ ಪೂರ್ಣ ಪ್ರಮಾಣದ ಪುನರ್ವಸತಿ ಕಲ್ಪಿಸಬೇಕು, ರಾಜ್ಯದ ಎಲ್ಲಾ ವಸತಿಹೀನರು ಮತ್ತು ಭೂರಹಿತರಿಗೆ ಜಮೀನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಚೇತನ್ ಅವರು ಮಂಡಿಸಿದರು.

* ರಾಮಾಯಣದಲ್ಲಿ  ಶಂಭೂಕನನ್ನು ಕೊಲ್ಲುವ ಕಥೆ ಇದೆ. ಮಹಾಭಾರತದಲ್ಲಿ  ಏಕಲವ್ಯನ ಹೆಬ್ಬೆರಳು ಕತ್ತರಿಸುವ ಕಥೆ ಇದೆ. ಗೀತೆಯಲ್ಲಿ ಚಾತುರ್ವರ್ಣ ಬೋಧಿಸಲಾಗುತ್ತದೆ. ಇದನ್ನು ನಮ್ಮ ಸಾಹಿತ್ಯ ಎಂದು ಹೇಗೆ ಒಪ್ಪಿಕೊಳ್ಳುವುದು?
-ಶರಣಕುಮಾರ್‌ ಲಿಂಬಾಳೆ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT