ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕೇತಿಕತೆಗೆ ಸಮಾಧಾನ ಬೇಡ ಆತ್ಮವಿಮರ್ಶೆಗೆ ಇದು

Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ಎನ್‌ಇಇಟಿ)  ಬಳಸಬಹುದಾದ ಭಾಷೆಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ.

ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ತಮಿಳು, ತೆಲುಗು, ಮರಾಠಿ, ಬಂಗಾಳಿ, ಅಸ್ಸಾಮಿ ಮತ್ತು ಗುಜರಾತಿ ಭಾಷೆಯಲ್ಲಿಯೂ ಉತ್ತರ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಆದರೆ ಕನ್ನಡವೂ ಸೇರಿದಂತೆ ಸಾಂವಿಧಾನಿಕ ಮಾನ್ಯತೆ ಇರುವ ಅನೇಕ ಭಾಷೆಗಳಿಗೆ ಈ ಅವಕಾಶ ದೊರೆತಿಲ್ಲ. ಕನ್ನಡದಲ್ಲಿ ಎನ್‌ಇಇಟಿ ಬರೆಯುವ ಅವಕಾಶವಿಲ್ಲದೇ ಇರುವುದು ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ.

ಕೇಂದ್ರ ಸರ್ಕಾರ, ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಕನ್ನಡವನ್ನು ಕಡೆಗಣಿಸಿರುವುದು  ಸಮರ್ಥನೀಯವಲ್ಲ. ಒಕ್ಕೂಟ ವ್ಯವಸ್ಥೆಯೊಂದರಲ್ಲಿ ಸಾಂಕೇತಿಕತೆ ಕೂಡಾ ಒಳಗೊಳ್ಳುವಿಕೆಯ ಒಂದು ಮಾರ್ಗ ಎಂಬುದನ್ನು ಕೇಂದ್ರ ಮರೆತಿದೆ. ಈ ವಿಷಯವನ್ನು ಪ್ರಸ್ತಾಪಿಸುವಾಗಲೇ ಮುಖ್ಯವಾಗಬೇಕಾದ ಮತ್ತೊಂದು ಸಂಗತಿ ಇದೆ.

ಎನ್‌ಇಇಟಿ ಬರೆಯಬಹುದಾದ ಭಾಷೆಗಳಲ್ಲಿ ಕನ್ನಡ ಇಲ್ಲದಿರುವುದಕ್ಕೆ ಕಾರಣ ಏನೆಂಬುದು ಗೊತ್ತಾಗಿದೆ.   ರಾಜ್ಯ ಮಟ್ಟದ ಸಿಇಟಿಯಂಥ ಪರೀಕ್ಷೆಗಳಲ್ಲಿ ಸತತ ಮೂರು ವರ್ಷಗಳಿಂದ ಬಳಕೆಯಾಗಿದ್ದ ಪ್ರಾದೇಶಿಕ ಭಾಷೆಗಳಿಗಷ್ಟೇ ಅವಕಾಶ ಒದಗಿಸಬೇಕೆಂಬುದು  ಕೇಂದ್ರದ ನಿಯಮ. ಕನ್ನಡಕ್ಕೆ ಅವಕಾಶ ಒದಗಿಸದೇ ಇರುವುದಕ್ಕೆ ಈ ವಾದವನ್ನು ಸಮರ್ಥನೆಯಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ವಿವಿಧ ಅಖಿಲ ಭಾರತೀಯ ಸೇವೆಗಳು ಮತ್ತು ಕೇಂದ್ರೀಯ ಸೇವೆಗಳಿಗಾಗಿ ನಡೆಸುವ ಪರೀಕ್ಷೆಗಳನ್ನು ತೆಗೆದುಕೊಳ್ಳುವವರು ಯಾವುದೇ ವಿಷಯವನ್ನು ತೆಗೆದುಕೊಂಡು ಕನ್ನಡದಲ್ಲಿ ಉತ್ತರ ಬರೆಯಲು ಅವಕಾಶವಿದೆ. ಎನ್‌ಇಇಟಿಯಲ್ಲಿ  ಅದನ್ನು ನಿರಾಕರಿಸುವುದು ಸಮರ್ಥನೀಯವಲ್ಲ. ಕನ್ನಡ ಅಥವಾ ಸಂವಿಧಾನ ಮಾನ್ಯ ಮಾಡಿರುವ ಯಾವುದೇ ಭಾಷೆಯಲ್ಲಿ ಒಬ್ಬನೇ ಒಬ್ಬ ಉತ್ತರ ಬರೆಯಲು ಮುಂದಾದರೂ ಅವನಿಗೆ ಅವಕಾಶ ಕಲ್ಪಿಸಬೇಕಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ. 

ಹತ್ತನೇ ತರಗತಿಯತನಕ ಕನ್ನಡ ಮಾಧ್ಯಮದಲ್ಲಿಯೇ ಕಲಿಯುವವರ ಸಂಖ್ಯೆ ಬಹಳ ದೊಡ್ಡದೇ ಇದೆ. ಅಂದರೆ ಪದವಿಪೂರ್ವ ಮಟ್ಟದ ತರಗತಿಗಳಿಗೆ ಕನ್ನಡದಲ್ಲಿ ಪಠ್ಯ ರೂಪುಗೊಂಡಿಲ್ಲ ಎಂಬುದು ಕನ್ನಡದಲ್ಲಿ ಉತ್ತರಿಸುವ ಅವಕಾಶವನ್ನು ಕಿತ್ತುಕೊಳ್ಳುವುದಕ್ಕೆ ಕಾರಣವಾಗಬಾರದು. ಕನ್ನಡದ ಸಂದರ್ಭದಲ್ಲಿ ಈ ವಿಚಾರಕ್ಕೆ ಮತ್ತೊಂದು ಆಯಾಮವಿದೆ.

ಬಹುಶಃ ಭಾರತದ ಯಾವುದೇ ಭಾಷೆಯ ಸಂದರ್ಭದಲ್ಲೂ ಇಲ್ಲದೇ ಇರುವಷ್ಟು ದೊಡ್ಡ ಸರ್ಕಾರಿ ವ್ಯವಸ್ಥೆಯೊಂದು ಕನ್ನಡ ಭಾಷೆಯ ಅಭಿವೃದ್ಧಿಗಾಗಿ ರೂಪುಗೊಂಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ವಿಶ್ವವಿದ್ಯಾಲಯ, ಅನುವಾದದಿಂದ ತೊಡಗಿ ವಿಜ್ಞಾನ ಮತ್ತು ತಂತ್ರಜ್ಞಾನದವರೆಗೂ ವಿಸ್ತರಿಸಿಕೊಂಡಿರುವ ಅಕಾಡೆಮಿಗಳೆಲ್ಲವೂ ಇರುವುದು ಕನ್ನಡದ ಅಭಿವೃದ್ಧಿಗಾಗಿ. ಕನ್ನಡವನ್ನು ಜ್ಞಾನದ ಭಾಷೆಯಾಗಿ ಬೆಳೆಸುವುದಕ್ಕಾಗಿ ಇರುವ ಕೆಲಸಗಳನ್ನು ಮಾಡುವುದಕ್ಕಾಗಿ.

ಇಷ್ಟೆಲ್ಲಾ ಇದ್ದೂ ಪದವಿಪೂರ್ವ ಮಟ್ಟದ ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಕಲಿಯುವುದಕ್ಕೆ, ಪರೀಕ್ಷೆಗಳಲ್ಲಿ ಕನ್ನಡದಲ್ಲೇ ಉತ್ತರಿಸುವುದಕ್ಕೆ ಬೇಕಿರುವ ವಾತಾವರಣವೊಂದನ್ನು ರೂಪಿಸುವುದಕ್ಕೆ ಸಾಧ್ಯವಾಗಿಲ್ಲ. ಇದನ್ನು ಕನ್ನಡದ ಅಭಿವೃದ್ಧಿಗಾಗಿಯೇ ಮೀಸಲಾಗಿರುವ ಸರ್ಕಾರಿ ವ್ಯವಸ್ಥೆಯ ಬಹುದೊಡ್ಡ ಸೋಲು ಎಂದಲ್ಲದೆ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ? ಕರ್ನಾಟಕ ಸರ್ಕಾರವೇ ನಡೆಸುವ ಸಿಇಟಿಯೇ ಕನ್ನಡದಲ್ಲಿ ಇಲ್ಲ.

ಒಮ್ಮೆ ನಡೆಸಿದ ಪ್ರಯತ್ನವನ್ನು ಹೊರತುಪಡಿಸಿದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಅದಕ್ಕೂ ಹಿಂದೆ ಇದ್ದ ಸಿಇಟಿ ಘಟಕ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂಬುದು ವಾಸ್ತವ. ಕೇಂದ್ರ ಸರ್ಕಾರ ಕನ್ನಡವನ್ನು ಮರೆತದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಕನ್ನಡ ಸಂಘಟನೆಗಳು, ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಿದ್ದಂತೂ ಇಲ್ಲ.

ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈಗ ಕೇಂದ್ರದ ವಿರುದ್ಧ  ಹರಿಹಾಯುವುದರಲ್ಲಿ ಅರ್ಥವಿಲ್ಲ. ಕನ್ನಡದಲ್ಲಿ ಉತ್ತರ ಬರೆಯಲು ಅವಕಾಶವಿರುವ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಯ ಅನುವಾದ ಹೇಗಿರುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಯ ಅನುವಾದವೇ ಹಾಸ್ಯಾಸ್ಪದವಾಗಿರುತ್ತದೆ. ಎನ್‌ಇಇಟಿ ಪ್ರಶ್ನೆಪತ್ರಿಕೆ ಇದಕ್ಕಿಂತ ಭಿನ್ನವಾಗಿರುವ ಸಾಧ್ಯತೆ ಕಡಿಮೆ.

ಕೇಂದ್ರದ ತಪ್ಪಿನಿಂದ ಈಗ ಉದ್ಭವವಾಗಿರುವ ವಿವಾದವನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಚರ್ಚೆಗಳನ್ನು ಹುಟ್ಟುಹಾಕುವುದಕ್ಕೆ ಬಳಸಿಕೊಳ್ಳಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ಇದು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ದೊರೆತ ಅವಕಾಶ ಎಂದು ಭಾವಿಸಿ ಕನ್ನಡವನ್ನು ಜ್ಞಾನದ ಭಾಷೆಯಾಗಿ ಬೆಳೆಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ರಚನಾತ್ಮಕ ಕ್ರಮಗಳನ್ನು  ಯೋಚಿಸಿ, ಯೋಜಿಸಿ ಅನುಷ್ಠಾನಕ್ಕೆ ತರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT