ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳ ರಾಜಕಾರಣ

Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಜನವರಿ 9
ರಾಷ್ಟ್ರಪತಿ ಆಡಳಿತ

ಜಮ್ಮು ಮತ್ತು ಕಾಶ್ಮೀರದ ಪಿಡಿಪಿ– ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ  ಮುಫ್ತಿ ಮಹಮ್ಮದ್‌ ಸಯೀದ್‌ ಅವರು ನಿಧನ ಹೊಂದಿದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು.

ಜನವರಿ 28
ಚಾಂಡಿ ವಿರುದ್ಧ ಎಫ್‌ಐಆರ್‌

ಸೋಲಾರ್‌ ಹಗರಣಕ್ಕೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ವಿರುದ್ಧ ಎಫ್‌ಐಆರ್‌ ದಾಖಲಾಯಿತು. ಇದರಿಂದಾಗಿ ಕಾಂಗ್ರೆಸ್‌ ನೇತೃತ್ವದ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್‌) ತೀವ್ರ ಮುಜುಗರಕ್ಕೆ ಒಳಗಾಯಿತು.

ಮಾರ್ಚ್‌ 14
ಲಂಚದ ದೃಶ್ಯಾವಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನ ಸಂಸದರು, ಸಚಿವರು, ಮತ್ತು ಶಾಸಕರು ಲಂಚ ಪಡೆದ ವಿಚಾರ ಮಾರುವೇಷದ ಕಾರ್ಯಾಚರಣೆಯೊಂದರಲ್ಲಿ ಬಯಲಾಯಿತು. ‘ನಾರದ ನ್ಯೂಸ್‌’ ಎಂಬ ಸುದ್ದಿ ವೆಬ್‌ಸೈಟ್‌, ಲಂಚ ಪಡೆಯುತ್ತಿರುವ ದೃಶ್ಯಾವಳಿ ಬಿಡುಗಡೆ ಮಾಡಿತು. ಸಂಸತ್ತಿನಲ್ಲೂ ಇದು ಭಾರಿ ಗದ್ದಲ ಸೃಷ್ಟಿಸಿತು.

ಏಪ್ರಿಲ್ 4
ಮತ್ತೆ ಪಿಡಿಪಿ–ಬಿಜೆಪಿ ಮೈತ್ರಿ

ನಾಲ್ಕು ತಿಂಗಳ ಅನಿಶ್ಚಿತತೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಮೆಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಏಪ್ರಿಲ್‌ 12
ರೈಲಿನ ಮೂಲಕ ನೀರು

ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದ ಪೂರ್ವ ಮಹಾರಾಷ್ಟ್ರದಲ್ಲಿನ ಮರಾಠಾವಾಡದ ಲಾತೂರ್‌ ಪ್ರದೇಶಕ್ಕೆ ಮೀರಜ್‌ನಿಂದ ರೈಲಿನ ಮೂಲಕ ನೀರು ಪೂರೈಸಲಾಯಿತು

ಜುಲೈ 10
ಐಎಸ್‌ ಸೇರ್ಪಡೆ

ಕೇರಳದ ಕಾಸರಗೋಡು ಮತ್ತು ಪಾಲಕ್ಕಾಡ್‌ ಜಿಲ್ಲೆಗಳಿಂದ ಮಧ್ಯಪ್ರಾಚ್ಯ ದೇಶಗಳಿಗೆ ತೆರಳಿದ್ದ ಕನಿಷ್ಠ 17 ಯುವಕ–ಯುವತಿಯರು ನಾಪತ್ತೆಯಾಗಿದ್ದರು. ಇವರೆಲ್ಲರೂ ಐಎಸ್‌ ಉಗ್ರಗಾಮಿ ಸಂಘಟನೆ ಸೇರಿರುವ ವಿಷಯ ಬಹಿರಂಗವಾಯಿತು.

ಆಗಸ್ಟ್‌ 3
ಮುಖ್ಯಮಂತ್ರಿ ಬದಲು

ಗುಜರಾತ್‌ ಮುಖ್ಯಮಂತ್ರಿ ಹುದ್ದೆಗೆ ಆನಂದಿ ಬೆನ್ ಪಟೇಲ್ ರಾಜೀನಾಮೆ ನೀಡಿದರು. ನಂತರ, ವಿಜಯ್‌ ರೂಪಾಣಿ ಅವರು ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಆಗಸ್ಟ್‌ 7ರಂದು ಪ್ರಮಾಣ ವಚನ ಸ್ವೀಕರಿಸಿದರು.

ಆಗಸ್ಟ್‌ 17
ಹೊಸ ಸರ್ಕಾರ

ಅರುಣಾಚಲ ಪ್ರದೇಶದಲ್ಲಿ ಪೆಮಾ ಖಂಡು ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂತು.

ಸೆಪ್ಟೆಂಬರ್‌ 16
ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌

ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದಲ್ಲಿ ಕಾಂಗ್ರೆಸ್‌ನ 40ಕ್ಕೂ ಹೆಚ್ಚು ಶಾಸಕರು ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ (ಪಿಪಿಎ) ಸೇರಿದರು. ಇದರೊಂದಿಗೆ ಎರಡು ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ ಆದೇಶದ ಮೂಲಕ ಮರಳಿ ಅಧಿಕಾರ ಪಡೆದಿದ್ದ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು.

ಅಕ್ಟೋಬರ್‌ 23
ಯಾದವ ಕುಟುಂಬ ಕಲಹ

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಕುಟುಂಬ ಕಲಹ ತಾರಕಕ್ಕೆ ಏರಿತು. ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್ ಮತ್ತು ಅವರ ಪುತ್ರ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಡುವಣ ಸಂಘರ್ಷ ಉಲ್ಬಣಿಸಿದ್ದರಿಂದ ಪಕ್ಷ ಹೋಳಾಗುವ ಲಕ್ಷಣ ಗೋಚರಿಸಿತು.

ನವೆಂಬರ್‌ 27
ಜೈಲಿನಿಂದ ಪರಾರಿ

ಪೊಲೀಸ್‌ ಸಮವಸ್ತ್ರದಲ್ಲಿದ್ದ ಬಂದೂಕುಧಾರಿ ಯುವಕರ ಗುಂಪೊಂದು ಪಂಜಾಬ್‌ನ ನಾಭಾ ಸೆರೆಮನೆಗೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಉಗ್ರಗಾಮಿ ಸಂಘಟನೆ ಖಲಿಸ್ತಾನ್‌ ಲಿಬರೇಷನ್‌ ಫ್ರಂಟ್‌ನ ಮುಖ್ಯಸ್ಥ ಹರ್ಮಿಂದರ್‌ ಸಿಂಗ್‌ ಮಿಂಟೂ ಮತ್ತು ಇತರ ಐವರು ಜೈಲಿನಿಂದ ಪರಾರಿಯಾದರು. ಮರುದಿನ ಮಿಂಟೂನನ್ನು ಬಂಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT