ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಸ್ವಾವಲಂಬನೆಗೆ ಸ್ವಸ್ಥ

Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ವಿವಿಧ ರೀತಿಯ ಅಂಗವಿಕಲತೆ ಅನುಭವಿಸುತ್ತಿರುವವರನ್ನು ಇಂದಿಗೂ ಸಮಾಜ ಸಾಮಾನ್ಯ ಜನರಂತೆ ಪರಿಗಣಿಸಿಲ್ಲ. ಪರಿಣಾಮ, ಸಾಕಷ್ಟು ಅಂಗವಿಕಲರು ತಾರತಮ್ಯಕ್ಕೆ ಒಳಗಾಗಿ ಮಾನಸಿಕ ವೇದನೆ ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯನ್ನು ಗಮನಿಸಿರುವ ‘ಸ್ವಸ್ಥ’ ಖಾಸಗಿ ಸಂಸ್ಥೆಯು ಕೊಡಗು ಜಿಲ್ಲೆಯ ಅಂಗವಿಕಲರನ್ನು ಸ್ವಾವಲಂಬಿಗಳನ್ನಾಗಿಸುವ ದೃಷ್ಟಿಯಿಂದ ಹತ್ತು ಹಲವು ಸ್ವ ಉದ್ಯೋಗ ತರಬೇತಿಯನ್ನು ನೀಡುತ್ತಿದೆ. ಆ ಮೂಲಕ  ಅಂಗವಿಕಲರು ಮತ್ತು ಬುದ್ಧಿಮಾಂದ್ಯರಿಗೂ ಸ್ವತಂತ್ರ ಬದುಕು ರೂಢಿಸಿಕೊಳ್ಳುವಂತೆ ಕೊಡಗಿನ ಸುಂಟಿಕೊಪ್ಪದಲ್ಲಿರುವ ಸ್ವಸ್ಥ ಸಂಸ್ಥೆ ಮಾಡುತ್ತಿದೆ.
 
ದೃಷ್ಟಿ ದೋಷದ ಜೊತೆಗೆ ವಿವಿಧ ರೀತಿಯ ಅಂಗವಿಕಲತೆ ಹೊಂದಿರುವವರನ್ನು ಗುರುತಿಸಿ ಅವರಿಗೆ  ಸರಿಹೊಂದುವ ಸ್ವಯಂ ಉದ್ಯೋಗ ತರಬೇತಿ ನೀಡುತ್ತಿರುವುದು ಸ್ವಸ್ಥ ಸಂಸ್ಥೆಯ ವಿಶೇಷ.
 
ಸರಳ ಉತ್ಪನ್ನಗಳ ತಯಾರಿಕೆ ತರಬೇತಿ
ಸ್ವ ಉದ್ಯೋಗ ಕೈಗೊಳ್ಳುವ ಅಂಗವಿಕಲರಿಗೆ ಸಾಮಗ್ರಿಗಳ ಉತ್ಪಾದನೆ ಕಷ್ಟಕರ ಎನಿಸಬಾರದು. ಆದ್ದರಿಂದ ಸುಲಭ ಮತ್ತು ಕಡಿಮೆ ಖರ್ಚಿನಲ್ಲಿ ಉತ್ಪಾದಿಸಿ, ಸುಲಭವಾಗಿ ಮಾರಾಟ ಮಾಡಲು ಸಾಧ್ಯವಿರುವ ವಸ್ತುಗಳ ತಯಾರಿಕೆ ಕುರಿತು ತರಬೇತಿ ನೀಡಲಾಗುತ್ತಿದೆ.
 
ದೈಹಿಕವಾಗಿ ಕಡಿಮೆ ಪ್ರಮಾಣದ ಅಂಗವಿಕಲತೆ ಹೊಂದಿರುವವರಿಗೆ ಟೈಲರಿಂಗ್‌ ತರಬೇತಿ ನೀಡಲಾಗುತ್ತಿದೆ. ತರಬೇತಿ ಬಳಿಕ ಸ್ವಸ್ಥ ಸಂಸ್ಥೆಯ ಸಿಬ್ಬಂದಿಯೇ, ಸಂಬಂಧಿಸಿದ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಹೊಲಿಗೆ ಯಂತ್ರಗಳನ್ನು ಕೊಡಿಸಲು ಶ್ರಮಿಸುತ್ತಾರೆ.
 
‘ನಡೆದಾಡಲು ಸಾಧ್ಯವಾಗದ ಅಥವಾ ಕಷ್ಟದ ಕೆಲಸಗಳನ್ನು ಮಾಡಲಾಗದಂತಹ ಅಂಗವಿಕಲರಿಗೆ ಕುಳಿತಲ್ಲಿಯೇ ತಯಾರಿಸಬಹುದಾದ ಗೃಹೋಪಯೋಗಿ ವಸ್ತುಗಳಾದ ಪೇಪರ್‌ ಬ್ಯಾಗ್‌, ಮೇಣದ ಬತ್ತಿ, ಫಿನಾಯಿಲ್‌ ತಯಾರಿಕೆ ಕುರಿತು ತರಬೇತಿ ನೀಡಲಾಗುತ್ತಿದೆ. ಇದರ ಜತೆಗೆ ಷೋ ಗಿಡಗಳ ನರ್ಸರಿ ಮಾಡುವುದನ್ನು ಹೇಳಿಕೊಡಲಾಗುತ್ತಿದೆ. ಇನ್ನು ತುಸು ಶಿಕ್ಷಣ ಪಡೆದಿರುವವರಿಗೆ ಸ್ಕ್ರೀನ್‌ ಪ್ರಿಂಟಿಂಗ್‌ ಮತ್ತು ಕಂಪ್ಯೂಟರ್‌ ತರಬೇತಿಯನ್ನೂ ನೀಡಲಾಗುತ್ತಿದೆ. ಸಾಂಸ್ಕೃತಿಕ ಕಲೆ, ಕ್ರೀಡಾಸಕ್ತಿ ಇರುವವರನ್ನು ಗುರುತಿಸಿ, ಆಯಾ ಚಟುವಟಿಕೆಗಳ ತರಬೇತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಸಂಸ್ಥೆಯ ಸಿಬಿಆರ್‌ ಕಾರ್ಯಕ್ರಮ ಸಂಯೋಜಕ ಮುರುಗೇಶ್‌.
 
ಹೀಗೆ ವಿವಿಧ ತರಬೇತಿಗಳನ್ನು ಪಡೆದ ಹತ್ತಾರು ಯುವಜನರು ಸ್ವಯಂ ಉದ್ಯೋಗ ಮಾಡುತ್ತಿದ್ದರೆ, ಇನ್ನೂ ಹಲವರು ಇದೇ ತರಬೇತಿಯಿಂದ ಉತ್ತಮ ಕೌಶಲ ರೂಢಿಸಿಕೊಂಡು ವಿವಿಧ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎನ್ನುತ್ತಾರೆ. 
 
ಕ್ರೀಡೆಯಲ್ಲಿ ಸಾಧನೆಗೈದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ದೇಶದ ಪತಾಕೆಯನ್ನು ಹಾರಿಸುವ ಕೆಲಸವನ್ನು ಸ್ವಸ್ಥ ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ್ದಾರೆ. ಅಂತಹ ವಿಶೇಷವಾದ ತರಬೇತಿಯನ್ನು ಸ್ವಸ್ಥ ಸಂಸ್ಥೆ ನೀಡುತ್ತಿದೆ ಎನ್ನುತ್ತಾರೆ ಮುರುಗೇಶ್‌.
 
 ಜಿಲ್ಲೆಯಲ್ಲಿರುವ ಅಂಗವಿಕಲರ ಅಭಿವೃದ್ಧಿಗಾಗಿ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಶಿಕ್ಷಕರು, ಉಪನ್ಯಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಜೊತೆಗೆ ಜನಸಾಮಾನ್ಯರನ್ನೂ ಒಳಗೊಂಡಂತೆ ಬೀದಿ ನಾಟಕ, ಕರಪತ್ರಗಳ ವಿತರಣೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಅವರು. 
 
ಕೊಡಗಿನಲ್ಲೇ ಹೆಚ್ಚು ಅಂಗವಿಕಲರು: ರಾಜ್ಯದ ಜನಸಂಖ್ಯೆ ಮತ್ತು ಭೂಪ್ರದೇಶಕ್ಕೆ ಹೋಲಿಸಿದರೆ ಕೊಡಗು ಅತ್ಯಂತ ಚಿಕ್ಕ ಜಿಲ್ಲೆ. ಇಲ್ಲಿರುವ 6 ರಿಂದ 7 ಲಕ್ಷ ಜನ ಸಂಖ್ಯೆಗೆ ಹೋಲಿಸಿದರೆ ರಾಜ್ಯದಲ್ಲೇ ಕೊಡಗು ಜಿಲ್ಲೆ ಹೆಚ್ಚು ಅಂಗವಿಕಲರನ್ನು ಹೊಂದಿದೆ. ಇಲಾಖೆ ಮಾಹಿತಿ ಪ್ರಕಾರ ಕೊಡಗು ಜಿಲ್ಲೆಯಲ್ಲಿ ವಿವಿಧ ರೀತಿಯ ಎಂಟು ಸಾವಿರ ಅಂಗವಿಕಲರು ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. 
 
ಇಷ್ಟು ದೊಡ್ಡ ಪ್ರಮಾಣದ ಅಂಗವಿಕಲರನ್ನು ಗಮನಿಸಿ ಟಾಟಾ ಕಾಫಿ ಲಿಮಿಟೆಡ್ ಸಂಸ್ಥೆ ಮತ್ತು ದ ಕೂರ್ಗ್ ಫೌಂಡೇಷನ್ ಸಂಸ್ಥೆ ಸಹಯೋಗದಲ್ಲಿ 2003 ರಲ್ಲಿ ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಸ್ವಸ್ಥ ಸಂಸ್ಥೆಯು ಆರಂಭವಾಯಿತು. ಬಳಿಕ 2010ರಲ್ಲಿ ವೃತ್ತಿ ತರಬೇತಿ ನೀಡುವ ಕಾರ್ಯಕ್ಕೆ ಮುಂದಾಯಿತು. ಅದರ ಆಧಾರದಲ್ಲಿ ಇದುವರೆಗೆ ಮೂರು ಸಾವಿರ ಅಂಗವಿಕಲರನ್ನು ಗುರುತಿಸಿ ಅವರ ಪೈಕಿ 1400 ಜನರಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಿದೆ. ಪ್ರಸ್ತುತ ಸಂಸ್ಥೆಯಲ್ಲಿ  ವಿವಿಧ ಮಟ್ಟದ ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳ ಸಂಖ್ಯೆ 120.
 
‘ಸಾಮಾಜಿಕ ಭದ್ರತೆಗಳಾದ ಅಂಗವಿಕಲರ ಗುರುತಿನ ಚೀಟಿ, ಉಚಿತ ಬಸ್‌ಪಾಸ್, ಮಾಸಿಕ ವೇತನ, ಪೆಟ್ಟಿಗೆ ಅಂಗಡಿ (ಆಧಾರ ಯೋಜನೆ), ಶಿಕ್ಷಣ ವೇತನ, ಬಡ ಅಂಗವಿಕಲ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ, ಸಾಧನ ಸಲಕರಣೆಗಳಾದ ಊರುಗೋಲು, ತ್ರಿಚಕ್ರವಾಹನ, ಕ್ಯಾಲಿಪರ್‍ಸ್, ಬಿಳಿಕೋಲು, ಕಿವಿ ಸಾಧನ, ಯಂತ್ರ ಚಾಲಿತ ತ್ರಿಚಕ್ರವಾಹನ, ಇನ್ನು ಹಲವು ಸೌಲಭ್ಯಗಳನ್ನು ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳ ಮೂಲಕ ದೊರಕಿಸಲಾಗಿದೆ. ಅನಾಥರಾದವರಿಗೆ, ನಿರ್ಗತಿಕರಿಗೆ ನಮ್ಮ ಸಿ.ಬಿ.ಆರ್ ಸಿಬ್ಬಂದಿಯನ್ನು ಅವರ ಬಳಿಗೇ ಕಳುಹಿಸಿಕೊಡುತ್ತೇವೆ’ ಎನ್ನುತ್ತಾರೆ ಸಂಸ್ಥೆಯ ಉಪ ನಿರ್ದೇಶಕಿ ಆರತಿ ಸೋಮಯ್ಯ.
 
ಶಿಕ್ಷಣ ವಂಚಿತ ಮಕ್ಕಳಿಗೂ ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಸಲಾಗುತ್ತಿದೆ. ಹೀಗೆ ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪಡೆದು ವಿವಿಧ ಉದ್ಯೋಗಗಳಲ್ಲಿ ಇದ್ದಾರೆ ಎನ್ನುತ್ತಾರೆ ನಿರ್ದೇಶಕಿ ಗಂಗಾ ಚಂಗಪ್ಪ. ಇದಕ್ಕಿಂತಲೂ ಮುಖ್ಯವಾಗಿ ಹತ್ತು ನಿರ್ಗತಿಕ ಮಕ್ಕಳಿಗೆ ವಿವಿಧ ಶಸ್ತ್ರಚಿಕಿತ್ಸೆ ಕೊಡಿಸಿ ಅವರನ್ನು ಸಾಮಾನ್ಯ ಮಕ್ಕಳಂತೆ ಮಾಡಿರುವುದು ಸಂಸ್ಥೆಯ ಹೆಗ್ಗಳಿಕೆ. ಸಂಸ್ಥೆಯು 2014–15ನೇ ಸಾಲಿನ ರಾಜೀವಗಾಂಧಿ ಸೇವಾ ಪ್ರಶಸ್ತಿಗೆ ಭಾಜನವಾಗಿದೆ. 2009ರಲ್ಲಿ ರಾಜ್ಯ ಪ್ರಶಸ್ತಿಯೂ ಲಭಿಸಿದ್ದು, ವಿವಿಧ ಸಂಘ ಸಂಸ್ಥೆಗಳೂ ಗೌರವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT