ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ‘ಟೌನ್‌ಶಿಪ್‌’ ಛಿದ್ರತೆಯ ಸಂಕೇತ

ಕುವೆಂಪು ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿದ ಸಾಹಿತಿ ದೇವನೂರ ಕಳವಳ
Last Updated 29 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕುಪ್ಪಳಿ (ತೀರ್ಥಹಳ್ಳಿ ತಾ): ಒಂದೇ ಜಾತಿಯ ಜನರು ಒಗ್ಗೂಡಿ ನಗರ ಪ್ರದೇಶಗಳ ಸುತ್ತಮುತ್ತ ಜಾತಿ ‘ಟೌನ್‌ಶಿಪ್‌’ ನಿರ್ಮಿಸಿಕೊಳ್ಳುತ್ತಿರುವುದು ದೇಶ ಮತ್ತೆ ಛಿದ್ರತೆಯ ಕಡೆಗೆ ಸಾಗುತ್ತಿರುವುದರ ಸಂಕೇತ ಎಂದು ಸಾಹಿತಿ ದೇವನೂರ ಮಹಾದೇವ ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಗುರುವಾರ ಹಮ್ಮಿಕೊಂಡಿದ್ದ ಕುವೆಂಪು ಅವರ 112ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡಿದರು.

‘ಭಾರತೀಯರು ವಿದ್ಯಾವಂತರಾದರೆ, ಆರ್ಥಿಕವಾಗಿ ಸದೃಢರಾದರೆ ಜಾತಿಯ ಗೂಡುಗಳಿಂದ ಹೊರಬಂದು ಪ್ರತ್ಯೇಕತೆ ಕರಗಬಹುದು ಎಂಬ ಭಾವನೆ ಮೂಡಿತ್ತು. ಆದರೆ, ಜಾತಿ ಟೌನ್‌ಶಿಪ್‌ಗಳ ಮೂಲಕ ಜಾತಿ ಘನೀಕೃತವಾಗುತ್ತಿದೆ. ಇದನ್ನು ಎಲ್ಲರೂ ಸಹಜ ಎಂದುಕೊಂಡಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಇಂದಿನ ಪ್ರಾಥಮಿಕ ಶಿಕ್ಷಣ ಪದ್ಧತಿಯು ಎಳೆಯ ಮಕ್ಕಳಿಗೆ ಪಂಕ್ತಿಭೇದ, ತಾರತಮ್ಯ, ಜಾತಿ, ವರ್ಗ, ಗ್ರಾಮ ಭೇದ ಭಾವದ ಪಂಚವರ್ಣದ ಕುರಿತು ಪಳಗಿಸುತ್ತಿದೆ. ಇಂತಹ ಶಿಕ್ಷಣ ಪಡೆಯುವ ಮಕ್ಕಳು ದೊಡ್ಡವರಾದ ಮೇಲೆ ಜಾತಿ, ವರ್ಗ, ಗ್ರಾಮ ಭೇದಭಾವಗಳಿಗೆ ಹೇಗೆ ಸ್ಪಂದಿಸುತ್ತಾರೆ? ಅವರು ಎಂತಹ ನಾಡು ಕಟ್ಟುತ್ತಾರೆ’ ಎಂದು ಪ್ರಶ್ನಿಸಿದರು.

ನ್ಯಾಯಮೂರ್ತಿಗಳ ಮಾತೃದ್ರೋಹ: ಮಾತೃಭಾಷಾ ಮಾಧ್ಯಮದ ತೀರ್ಪು ನೀಡುವಾಗ ನ್ಯಾಯಮೂರ್ತಿಗಳು ಸಂವಿಧಾನದ ಆಶಯ, ಒಕ್ಕೂಟ ವ್ಯವಸ್ಥೆಯ ತಳಹದಿ ಅರ್ಥಮಾಡಿಕೊಳ್ಳದೇ ಮಾತೃಭಾಷೆಯ ಹೆಸರಲ್ಲೇ ಮಾತೃದ್ರೋಹ ಮಾಡಿದ್ದಾರೆ. ಇನ್ನೂ ದುರಂತ ಎಂದರೆ ಯಾರಿಗೂ ಅವರವರ ಮಾತೃಭಾಷೆಗಳು ಬೇಡವಾಗಿವೆ.

ಇಂತಹ ದುರಂತಗಳೂ ನಮಗೆಲ್ಲ ದುರಂತ ಎಂದು ಅನಿಸದಿರುವುದೇ ನಿಜವಾದ ದುರಂತ ಎಂದು ವಿಷಾದಿಸಿದರು. ಅಸ್ಪೃಶ್ಯರು, ಕಾಡಲ್ಲಿ ವಾಸಿಸುವ ಆದಿವಾಸಿಗಳು, ಅಲೆಮಾರಿಗಳನ್ನು ಒಳಗೊಂಡ ಏಕತೆಯ ಭಾರತ ಕಟ್ಟಲು ಮೀಸಲಾತಿ ವರದಾನವಾಗಿದೆ. ಇಂತಹ ಮೀಸಲಾತಿಗೂ ಅಸಹನೆ ಕುದಿಯುತ್ತಿದೆ. ಭಾರತದ ಜಾತ್ಯಸ್ಥ ಮನಸ್ಸುಗಳು ಎಲ್ಲಿ ಸಹಿಸಿಕೊಳ್ಳಬೇಕೋ ಅಲ್ಲಿ ಸಹಿಸಿಕೊಳ್ಳುತ್ತಿಲ್ಲ. ಎಲ್ಲಿ ಸಹಿಸಿಕೊಳ್ಳಬಾರದೋ ಅಲ್ಲಿ ಸಹಿಸಿಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನದಾಸ್‌, ಕುವೆಂಪು ವಿವಿ ಕುಲಪತಿ ಜೋಗನ್‌ ಶಂಕರ್, ಪ್ರಸಾರ ಭಾರತಿ ಅಧ್ಯಕ್ಷ ಎ.ಸೂರ್ಯಪ್ರಕಾಶ್‌, ಸಾಹಿತಿ ರಾಜೇಂದ್ರ ಚೆನ್ನಿ, ದಾನಿ ಎಂ.ಸಿ.ನರೇಂದ್ರ, ಶಾಸಕ ಕಿಮ್ಮನೆ ರತ್ನಾಕರ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಹಂ.ಪ.ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು.

ಆದಿವಾಸಿಗಳು ಪ್ರಾಣಿ ಪ್ರಬೇಧವೇ?
ಭಾರತದ ಮೂಲ ನಿವಾಸಿಗಳು ಕಾಡಿನಿಂದಲೂ ಹೊರದಬ್ಬಿಸಿಕೊಂಡು ನೆಲೆ ಕಾಣಲು ದಿಡ್ಡಳ್ಳಿ ಬಳಿ ಜೋಪಡಿ ಕಟ್ಟಿಕೊಂಡಿದ್ದಾರೆ. ಅಂಥ ಜೋಪಡಿಗಳನ್ನು  ನೆಲಸಮ ಮಾಡಿ ಬಿದಿಗೆ ಎಸೆಯಲಾಗಿದೆ. ಆದಿವಾಸಿಗಳು ಎಂದರೆ ಪ್ರಭುತ್ವಕ್ಕೆ ಕಾಲ್ಚೆಂಡುಗಳಾಗಿದ್ದಾರೆ.

ಅವರನ್ನು ಯಾವುದೋ ಪ್ರಾಣಿ ಪ್ರಭೇದದಂತೆ ಕಾಣಲಾಗುತ್ತಿದೆ. ಹಾಗೆಯೇ. ಆಶಾ ಕಾರ್ಯಕರ್ತೆಯರು ಈಚೆಗೆ ನಡೆಸಿದ ಪ್ರತಿಭಟನೆಯ ದೃಶ್ಯ, ಬೆಲೆ ಇಲ್ಲದೇ ರೈತರು ಟೊಮೆಟೊ ಬೀದಿಗೆ ಚೆಲ್ಲಿದಂತೆ, ಪ್ರಭುತ್ವವೂ ಬೆಲೆ ಕಳೆದುಕೊಂಡ ಪ್ರಜೆಗಳನ್ನು ಬೀದಿಗೆ ಎಸೆದಂತೆ ಕಾಣುತ್ತಿತ್ತು ಎಂದು ದೇವನೂರ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT