ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಮಾರಾಟ ಮೇಳಕ್ಕೆ ಬಾರದ ಜನ

ಪ್ರಚಾರ ಮಾಡದ ಬಗ್ಗೆ ಮಳಿಗೆದಾರರ ಅಸಮಾಧಾನ
Last Updated 29 ಡಿಸೆಂಬರ್ 2016, 19:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಡೆದ ‘ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ’ಕ್ಕೆ  ಪ್ರಚಾರದ ಕೊರತೆ, ನೋಟು ರದ್ದತಿ,  ತಿಂಗಳ ಅಂತ್ಯದಲ್ಲಿ ಮೇಳದ ಆಯೋಜನೆ ಕಾರಣಗಳಿಂದ ನಿರೀಕ್ಷಿಸಿದಷ್ಟು ಜನ ಬಂದಿಲ್ಲ. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಗುರುವಾರ ನಡೆದ ಮೇಳದ ಸಮಾರೋಪ ಸಮಾರಂಭದಲ್ಲೂ ಜನರ ಗೈರು ಎದ್ದು ಕಾಣುತ್ತಿತ್ತು.

‘ಪುಸ್ತಕ ಮಾರಾಟ ಆಗದಿರುವುದಕ್ಕೆ ನೋಟು ರದ್ದತಿ ಒಂದು ಕಾರಣ. ಆದರೆ, ಮೇಳದ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲದಿದ್ದರೆ, ಜನರು ಪುಸ್ತಕ ಖರೀದಿಗೆ ಹೇಗೆ ಬರುತ್ತಾರೆ. ಪ್ರಾಧಿಕಾರ ಮೇಳದ ಬಗ್ಗೆ ಸರಿಯಾಗಿ ಪ್ರಚಾರ ಮಾಡದ ಕಾರಣ ಇದು ವಿಫಲವಾಗಿದೆ’ ಎಂದು ಮೇಳದಲ್ಲಿ ಮಳಿಗೆ ಹಾಕಿದ್ದ ಪ್ರಕಾಶಕರೊಬ್ಬರು ದೂರಿದರು.

‘₹70 ಸಾವಿರದಷ್ಟು ಪುಸ್ತಕಗಳು ಮಾರಾಟ ಆಗುವ ನಿರೀಕ್ಷೆ ಇತ್ತು. ಆದರೆ, ಆಗಿದ್ದು ₹25 ಸಾವಿರ ಮಾತ್ರ. ನಗರದ ಹೊರಭಾಗದಲ್ಲೇ ಇದಕ್ಕಿಂತ ಹೆಚ್ಚಿಗೆ ಪುಸ್ತಕಗಳು ಮಾರಾಟವಾಗುತ್ತವೆ. ಕಲಾಕ್ಷೇತ್ರಕ್ಕೆ ಬರುವ ಕೆಲವೇ ಜನರು ಈ ಪುಸ್ತಕ ಮೇಳಕ್ಕೆ ಬಂದಿದ್ದಾರೆ’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ  ಪ್ರಸರಾಂಗ ವಿಭಾಗದ ಹನುಮಂತಪ್ಪ ಘಂಟಿ ಹೇಳಿದರು.

‘6 ದಿನಗಳಿಂದ 1.5 ಲಕ್ಷ ವ್ಯಾಪಾರ ಆಗಿದೆ. ಕಾರ್ಡ್‌ ಮೂಲಕವೇ ಹೆಚ್ಚಿನವರು ಪುಸ್ತಕ ಖರೀದಿ ಮಾಡಿದ್ದಾರೆ. ತಿಂಗಳ ಮೊದಲ ವಾರದಲ್ಲಿ ಈ ಮೇಳ ಇದ್ದಿದ್ದರೆ ಖರೀದಿ ಪ್ರಮಾಣ ಇನ್ನೂ ಹೆಚ್ಚಾಗುತ್ತಿತ್ತು’ ಎಂದು ನವಕರ್ನಾಟಕ ಪುಸ್ತಕ ಪ್ರಕಾಶನ ಮಳಿಗೆಯ ರೇವಣ್ಣ ತಿಳಿಸಿದರು.

‘ಮೇಳದ ಬಗ್ಗೆ ಮಾಹಿತಿ ತಿಳಿಯದೆ ಜನ ಬರಲು ಹೇಗೆ ಸಾಧ್ಯ. ನಾವೇ ಕೂತು, ನಾವೇ ಎದ್ದು ಹೋಗುವ ಹಾಗಿದೆ. ಕಳೆದ ಬಾರಿ ಮೇಳದಲ್ಲಿ ₹2 ಲಕ್ಷದವರೆಗೂ ವ್ಯಾಪಾರ ಆಗಿತ್ತು. ಈ ಬಾರಿ ₹60 ಸಾವಿರ ಮೊತ್ತದ ಪುಸ್ತಕಗಳು ಮಾರಾಟವಾಗಿವೆ. ನಮ್ಮ ಬಳಿ ಪಿಒಎಸ್‌ ಉಪಕರಣ ಇದ್ದರೂ ಜನ ಬಾರದೆ ಯಾವುದೇ ಪ್ರಯೋಜನ ಇಲ್ಲದಂತೆ ಆಗಿದೆ’ ಎಂದು ಸಪ್ನ ಬುಕ್‌ ಹೌಸ್‌ನ ಮಾರಾಟ ಪ್ರತಿನಿಧಿ ಮಹೇಶ್‌ ವಿವರಿಸಿದರು.

‘ನಾನೇ ಲೇಖಕ, ನನ್ನದೇ ಪ್ರಕಾಶನ ಆಗಿರುವುದರಿಂದ ಪುಸ್ತಕಗಳ ಬಗ್ಗೆ ವಿವರಿಸಲು ಸಾಧ್ಯವಾಯಿತು. ಹೀಗಾಗಿ ನನ್ನ ಮಟ್ಟಿಗೆ ವ್ಯಾಪಾರ ಚೆನ್ನಾಗಿಯೇ ಆಗಿದೆ. ಇಲ್ಲಿ ಕೆಲವರಿಗೆ ₹2 ಸಾವಿರ ಮಾತ್ರ ವ್ಯಾಪಾರ ಆಗಿದೆ. ಅದಕ್ಕೆ ಹೋಲಿಸಿದರೆ ನನಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ’ ಎಂದು ಸಕಲೇಶಪುರದ ಲೇಖಕ ಗಿರಿಮನೆ ಶ್ಯಾಮರಾವ್‌ ತಿಳಿಸಿದರು.

ನಿರೀಕ್ಷಿತ ಫಲ ಇಲ್ಲ
‘ನೋಟು ರದ್ದತಿ ಪರಿಣಾಮದಿಂದ ಪುಸ್ತಕ ಮಾರಾಟ ಮೇಳಕ್ಕೆ ನಿರೀಕ್ಷಿಸಿದಷ್ಟು ಜನರೂ ಬಂದಿಲ್ಲ, ಆದಾಯವೂ ಬಂದಿಲ್ಲ. ಬಂದ ಕೆಲವರಿಗೆ ಚಿಲ್ಲರೆ ಸಮಸ್ಯೆಯಿಂದಾಗಿ ಖರೀದಿಸಲು ಸಾಧ್ಯವಾಗಿಲ್ಲ. ಐದು ದಿನಗಳು ಆಯೋಜಿಸಿದ್ದ ಮೇಳವನ್ನು ಮಾರಾಟಗಾರರ ಒತ್ತಾಯದ ಮೇರೆಗೆ ಮತ್ತೆ ಒಂದು ದಿನ ವಿಸ್ತರಿಸಿದೆವು. ಆರು ದಿನಗಳಿಂದ ₹13 ಲಕ್ಷ ಮೊತ್ತದ ಪುಸ್ತಕಗಳು ಮಾರಾಟ ಆಗಿವೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌ ತಿಳಿಸಿದರು.

***
ಪುಸ್ತಕ ಓದುವವರಿಗಿಂತ ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ವರ್ಷಕ್ಕೆ ಸುಮಾರು 6 ಸಾವಿರದಿಂದ 7 ಸಾವಿರ ಪುಸ್ತಕಗಳು ಕನ್ನಡದಲ್ಲಿ ಮುದ್ರಣ ಆಗುತ್ತಿವೆ
-ಚಂದ್ರಶೇಖರ ಪಾಟೀಲ
ಸಾಹಿತಿ

***
ಪುಸ್ತಕಗಳೇ ಬೇಡ ಎನ್ನುವ ಹಂತಕ್ಕೆ ನಾವು ತಲುಪಿದ್ದೇವೆ. ನಗರದಲ್ಲಿ ಕನ್ನಡ ಬಳಕೆಯೇ ಕಡಿಮೆಯಾಗುತ್ತಿದೆ. ಇಂತಹ ಮೇಳಗಳ ಅಗತ್ಯ ಹೆಚ್ಚಿದೆ
-ಮನು ಬಳಿಗಾರ್,
ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT