ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾದಲ್ಲಿ ಕನ್ನಡದ ಗಂಧ

ನಗರದ ಅತಿಥಿ
Last Updated 30 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ರದೇಶದಲ್ಲಿ ಕನ್ನಡಿಗರು ಸಂಘಟಿತರಾಗಿ ತಮ್ಮ ನೆಲದ ಸೊಗಡನ್ನು ಆ ನಾಡಿನಲ್ಲಿ ಪಸರಿಸುವುದು ಸುಲಭದ ಮಾತಲ್ಲ. ಆದರೆ ಭಾಷೆ ನಮ್ಮೆಲ್ಲರನ್ನೂ ಅಲ್ಲಿ ಒಂದಾಗಿಸುವ ವೇದಿಕೆಯಾಗುತ್ತದೆ.  ದೊಡ್ಡವರು, ಮಕ್ಕಳು ಹೆಮ್ಮೆಯಿಂದ ಕನ್ನಡ ಮಾತನಾಡುತ್ತೇವೆ.
 
ಆಸ್ಟ್ರೇಲಿಯಾದಲ್ಲಿ ಕನ್ನಡ ಶಾಲೆಗಳು ಕಾರ್ಯನಿರತವಾಗಿವೆ ಎಂದರೆ ನಂಬಲು ಕಷ್ಟವಾದೀತು. ಮಕ್ಕಳು ಪ್ರತಿನಿತ್ಯ ಶಾಲೆಗಳಲ್ಲಿ ಪಠ್ಯಕ್ಕನುಗುಣವಾಗಿ ಇತರ ಭಾಷೆಗಳನ್ನು ಮಾತನಾಡುವುದು ಅನಿವಾರ್ಯ. ಆದರೆ ಕನ್ನಡ ಮಾತನಾಡಲು ಅವರಿಗೆ ಅವಕಾಶ ಇರುವುದಿಲ್ಲ. ಕನ್ನಡ ಶಾಲೆಗಳು ಅವರಿಗೆ ಕನ್ನಡದ ವಾತಾವರಣ ನೀಡುತ್ತವೆ.
 
ಸಿಡ್ನಿಯಲ್ಲಿ 2009–10ರಲ್ಲಿ ಮೊದಲ ಶಾಲೆ ಆರಂಭವಾಯಿತು. ಈಗ ಆ ರಾಜ್ಯದಲ್ಲಿ ಮೂರು ಕನ್ನಡ ಶಾಲೆಗಳಿವೆ. ಮೆಲ್ಬರ್ನ್‌, ಅಡಿಲೇಡ್‌, ಬ್ರಿಸ್ಬೇನ್‌ನಲ್ಲಿಯೂ ಕನ್ನಡ ಶಾಲೆಗಳು ನಡೆಯುತ್ತಿವೆ. ಇವೆಲ್ಲವೂ ವಾರಾಂತ್ಯದ ಶಾಲೆಗಳು. ಭಾನುವಾರ ಎರಡು ಗಂಟೆ ಕಾರ್ಯನಿರ್ವಹಿಸುತ್ತವೆ. ಪಾಠ, ಪರೀಕ್ಷೆ ಎಲ್ಲವೂ ಸಿಲೆಬಸ್‌ ಆಧಾರದಲ್ಲಿಯೇ ನಡೆಯುತ್ತವೆ.
 
ಇನ್ನೂ ಒಂದು ಸಂತೋಷದ ಸಂಗತಿಯೆಂದರೆ, ಎಂಟನೇ ತರಗತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯನ್ನು ದ್ವಿತೀಯ ಭಾಷೆಯಾಗಿ ಆರಿಸಿಕೊಳ್ಳಲು ಅವಕಾಶವಿದೆ. ಅವುಗಳಲ್ಲಿ ಕನ್ನಡವೂ ಒಳಗೊಂಡಿದೆ. ಅಲ್ಲದೆ, ಮೆಲ್ಬರ್ನ್ ಸರ್ಕಾರ ಪಿಯುಸಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ನೀಡಿದೆ. ಇದು ಕನ್ನಡಿಗರ ಮಟ್ಟಿಗೆ ದೊಡ್ಡ ಗೆಲುವು.
 
ಸಿಡ್ನಿಯಲ್ಲಿ ಎಂಟು ಮಂದಿ ಸ್ವಯಂಸೇವಾ ನೆಲೆಯಲ್ಲಿ ಪಾಠ ಮಾಡುತ್ತಾರೆ. ಇಲ್ಲಿನ ಮೂರು ಶಾಲೆಗಳಲ್ಲಿ ಒಟ್ಟು 70 ವಿದ್ಯಾರ್ಥಿಗಳು, ಮೆಲ್ಬರ್ನ್‌ನಲ್ಲಿ   20, ಅಡಿಲೇಡ್‌ನಲ್ಲಿ 12, ಬ್ರಿಸ್ಬೇನ್‌ನಲ್ಲಿ 16 ವಿದ್ಯಾರ್ಥಿಗಳಿದ್ದಾರೆ. ವರ್ಷಕ್ಕೊಮ್ಮೆ  ಇಲ್ಲಿನಂತೆ ವಾರ್ಷಿಕೋತ್ಸವಗಳನ್ನು ಮಾಡುತ್ತೇವೆ. ಶಾಲೆಗಳಿಗೆ ಅಧಿಕೃತ ಕಟ್ಟಡಗಳಿಲ್ಲ.  ನಿಗದಿತ ಪ್ರದೇಶಗಳಲ್ಲಿ ಸಭಾಂಗಣಗಳನ್ನು ವಾರಾಂತ್ಯಕ್ಕೆಂದು ಬಾಡಿಗೆಗೆ ಪಡೆದು ಶಾಲೆ ನಡೆಸುತ್ತೇವೆ.
 
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಲ್ಲಿ ಪ್ರಕಟವಾಗುವ ಕನ್ನಡ ಸಿನಿಮಾಗಳ ವಿಮರ್ಶೆ ಓದಿ  ಉತ್ತಮ ಸಿನಿಮಾಗಳನ್ನು ಅಲ್ಲಿನ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆ.   
 
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ರಂಗಿತರಂಗ’, ‘ಯೂ ಟರ್ನ್‌’, ‘ಮುಂಗಾರುಮಳೆ–2’ಗಳ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.
 
ಆಸ್ಟ್ರೇಲಿಯಾದಲ್ಲಿ ಕನ್ನಡಿಗರಿಗೆ ಅಲ್ಲಿನ ಸರ್ಕಾರ ನೀಡಿರುವ ಪ್ರೋತ್ಸಾಹಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರದಿಂದ ಉತ್ತೇಜನ ಸಿಗುತ್ತಿಲ್ಲ. 
 
‘ಮುಖ್ಯಮಂತ್ರಿ’ ಚಂದ್ರು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ  ಉಚಿತವಾಗಿ ಪುಸ್ತಕಗಳನ್ನು ಒದಗಿಸಿದ್ದರು. ಇದು ಮುಂದುವರಿಯಬೇಕು.
ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಪಠ್ಯಕ್ರಮವನ್ನು ಆನ್‌ಲೈನ್‌ ಪೋರ್ಟಲ್‌ ಮೂಲಕ ಒದಗಿಸಿದರೆ ನಮ್ಮ ಶಾಲೆಯ ಮಕ್ಕಳು ಡೌನ್‌ಲೋಡ್‌ ಮಾಡಿಕೊಂಡು  ಬಳಸಲು ಸಾಧ್ಯವಾಗುತ್ತದೆ. 
 
ಈ ಸಂಬಂಧ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ನಮ್ಮ ರಾಜ್ಯ ಸರ್ಕಾರ ಅನುಸಂಧಾನ ನಡೆಸಬೇಕು ಎಂದು ಮನವಿ ಮಾಡಿಕೊಳ್ಳುತ್ತಲೇ ಇದ್ದೇವೆ. ನಾವು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಕೇಳುತ್ತಿಲ್ಲ. ಸರ್ಕಾರವೇ ಮಾಡಬೇಕಿರುವ ಕೆಲಸಗಳನ್ನು ಮಾಡಲಿ ಎಂದು ಕೇಳುತ್ತಿದ್ದೇವೆ. ಮುಖ್ಯಮಂತ್ರಿ ಅವರಾದರೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೇನೋ ನೋಡಬೇಕು. sydneysuresh@gmail.com
 
**
ಕನ್ನಡ ಸಮ್ಮೇಳನ
ಮೆಲ್ಬರ್ನ್‌ನಲ್ಲಿ 2017ರ ಮಾರ್ಚ್‌ 11 ಮತ್ತು 12ರಂದು ವಿಶ್ವ ಕನ್ನಡ ಸಮ್ಮೇಳನವನ್ನು ಯುನೈಟೆಡ್‌ ಕನ್ನಡ ಸಂಘ ಆಯೋಜಿಸಿದೆ. ಗೀತ ರಚನೆಕಾರ ಹಂಸಲೇಖ ಅವರು ಸಮ್ಮೇಳದ ಅಧ್ಯಕ್ಷರು.
 
**
ದೂರದ ದೇಶದಲ್ಲಿ ಕನ್ನಡ ಕಂಪು
ಬೆಂಗಳೂರಿನ ವಿಜಯನಗರ ಮೂಲದ ಸುರೇಶ್‌ಗೌಡ ಅವರು ವೃತ್ತಿ ನಿಮಿತ್ತ 23 ವರ್ಷಗಳ ಹಿಂದೆ  ಆಸ್ಟ್ರೇಲಿಯಾಕ್ಕೆ ಹೋದವರು. ಅಲ್ಲಿನ ಮೆಟ್ರೊ ರೈಲು ನಿಗಮದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಅವರು ಕನ್ನಡ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.
 
‘ಯುನೈಟೆಡ್‌ ಕನ್ನಡ ಸಂಘ’ದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಅವರು ಸಿನಿಮಾ ಹಂಚಿಕೆದಾರರೂ ಹೌದು. ಆಸ್ಟ್ರೇಲಿಯಾದಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳುವುದರ ಹಿಂದೆ ಅವರ ಪರಿಶ್ರಮ ಇದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT