ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಲಿಲ್ಲ ಬ್ಯಾಂಕ್‌ ಮುಂದೆ ನಿಲ್ಲುವ ಕರ್ಮ

Last Updated 31 ಡಿಸೆಂಬರ್ 2016, 5:05 IST
ಅಕ್ಷರ ಗಾತ್ರ

ಬಳ್ಳಾರಿ: ದೇಶದಲ್ಲಿ 1 ಸಾವಿರ ಮತ್ತು 500 ರೂಪಾಯಿ ಮುಖ ಬೆಲೆಯ ನೋಟುಗಳ ರದ್ದತಿಯಾಗಿ 50 ದಿನವಾಗಿದೆ. ಇನ್ನೂ ಗ್ರಾಹಕರ ಕಷ್ಟ ತೀರಿಲ್ಲ. ಎಟಿಎಂಗಳಲ್ಲಿ 2 ಸಾವಿರ ಮುಖ ಬೆಲೆಯ ನೋಟುಗಳೇ ದೊರಕುತ್ತಿವೆ. ಎಲ್ಲಿ ಹೋದರೂ ಚಿಲ್ಲರೆ ಪಡೆಯಲು ಪರದಾಡಬೇಕಾಗಿದೆ. ಬ್ಯಾಂಕ್‌­ಗಳಲ್ಲಿ ಸಾಲ ಪಡೆಯುವುದೂ ಕಷ್ಟಕರವಾಗಿದೆ...

–ತಮ್ಮ ಹಣ ಪಡೆಯಲೆಂದು ನಗರದ ವಿವಿಧ ಬ್ಯಾಂಕ್‌ ಮತ್ತು ಎಟಿಎಂಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಹಲವು ಗ್ರಾಹಕರ ಅಭಿಪ್ರಾಯಗಳಿವು.
ನಗರದ ಎಸ್‌ಬಿಐ, ಎಸ್‌ಬಿಎಂ, ಕೆನರಾ, ಸುಕೋ ಬ್ಯಾಂಕ್‌ಗೆ ‘ಪ್ರಜಾವಾಣಿ’ ಭೇಟಿ ನೀಡಿದ ಸಂದರ್ಭದಲ್ಲಿ, ‘ಅಲ್ಲಿನ ಅಧಿಕಾರಿ­ಗಳು ಸನ್ನಿವೇಶ ಸುಧಾರಿಸಿದೆ’ ಎಂದು ಹೇಳಿದರು. ಹಣಕ್ಕಾಗಿ ಬಂದಿದ್ದ ಗ್ರಾಹಕರು ಇದಕ್ಕೆ ಪೂರಕವಾದ ಮತ್ತು ವ್ಯತಿರಿಕ್ತವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

‘ಸಂಬಳದಾರರಿಗೆ ಈ ಬದಲಾ­ವಣೆಯಿಂದ ಯಾವ ತೊಂದರೆಯೂ ಆಗಿಲ್ಲ. ನಮ್ಮ ಬಳಿ ಚೆಕ್‌ಪುಸ್ತಕ ಇರುವುದರಿಂದ ವಾರಕ್ಕೆ ₹ 24 ಸಾವಿರ ಪಡೆದು ಬಳಸ­ಬಹುದು. ಎಟಿಎಂಗಳನ್ನೇ ನೆಚ್ಚಿಕೊಂಡವ­ರಿಗೆ ತೊಂದರೆ ಆಗಿದೆ ಅಷ್ಟೇ’ ಎಂದು ರೇಡಿಯೋ ಪಾರ್ಕ್‌ ಪ್ರದೇಶದ ನಿವಾಸಿ ಮೀನಪ್ಪ ಅಭಿಪ್ರಾಯಪಟ್ಟರು.

ಚಿಲ್ಲರೆ ಸಮಸ್ಯೆ: ‘ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿದ್ದ ವೇಳೆ ಎಟಿಎಂನಿಂದ 2 ಸಾವಿರ ರೂಪಾಯಿ ಹಣ­ವನ್ನು ಪರದಾಡಬೇಕಾಯಿತು. ಆದರೆ ಚಿಲ್ಲರೆ ದೊರಕಲಿಲ್ಲ. ಬ್ಯಾಂಕೊಂದಕ್ಕೆ ಹೋಗಿ ಚಿಲ್ಲರೆ ಕೇಳಿದಾಗ, ಸವಕಲಾದ, ತಿರಸ್ಕರಿಸಲ್ಪಟ್ಟ ನೂರು ರೂಪಾಯಿ ನೋಟುಗಳನ್ನು ಕೊಡು­ವುದಾಗಿ ಹೇಳಿದರು. ಸತತ ಮನವಿ ಬಳಿಕ, ನಂತರ ₹ 50 ರೂಪಾಯಿ ನೋಟುಗಳನ್ನು ಕೊಟ್ಟರು’ ಎಂದು ಗಾಂಧಿನಗರದ ನಿವಾಸಿ ಕದಂಬ ಹೇಳುತ್ತಾರೆ.

ಬ್ಯಾಂಕುಗಳಲ್ಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. 2 ಸಾವಿರ ರೂಪಾಯಿ ನೋಟುಗಳನ್ನು ಅಲಂಕಾರಕ್ಕಾಗಿ ಇಟ್ಟು­ಕೊಳ್ಳ­ಬೇಕಾಗಿದೆ. ಸಣ್ಣ ಮಟ್ಟದ ವ್ಯವಹಾರ ಮಾಡುವ ಸಂದರ್ಭಗಳಲ್ಲಿ ಚಿಲ್ಲರೆ ಸಮಸ್ಯೆ­ಯಿಂದ ಅವಮಾನ ಅನುಭವಿಸುವಂತಾಗಿದೆ ಎಂದು ಅವರು ವಿಷಾದಿಸುತ್ತಾರೆ.

ಸಮಸ್ಯೆ ಇಲ್ಲ: ನೋಟು ರದ್ದತಿಯ ಆರಂಭದ ದಿನಗಳಲ್ಲಿ ಜನರಲ್ಲಿ ಏರ್ಪಟ್ಟ ಉದ್ವೇಗ ಈಗ ಕಡಿಮೆಯಾಗಿದೆ. ಜನರ ಸಾಲು ಕೂಡ ಕಡಿಮೆಯಾಗಿದೆ. ತಿಂಗಳ ಕೊನೆಯಾಗಿರುವುದರಿಂದ ಪಿಂಚಣಿ ಪಡೆಯಲು ನಿವೃತ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ಬ್ಯಾಂಕ್‌ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಸಾಲಕ್ಕೆ ಪರದಾಟ
‘ವೈಯಕ್ತಿಕ ಸಾಲವನ್ನು ಪಡೆಯಲು ಎಸ್‌ಬಿಐನ ಕಂಟೋನ್‌ಮೆಂಟ್‌ ಶಾಖೆಗೆ ಹೋದರೆ, ಸಾಲ ನೀಡುವ ಸಿಬ್ಬಂದಿ ಲಭ್ಯವಿಲ್ಲ. ಕೆಲವು ದಿನ ಬಿಟ್ಟು ಬನ್ನಿ ಎಂದರು. ಸಾಲ ತುರ್ತಾಗಿ ಬೇಕಾಗಿದೆ. ಆದರೆ ಕೊಡೋರೇ ಇಲ್ಲ’ ಎಂದು ಯುವಕ ಶ್ರಾವಣಕುಮಾರ ಅಲವತ್ತುಕೊಳ್ಳುತ್ತಾರೆ.

ಕೆಲವು ವಾಹನಗಳನ್ನು ಹೊಂದಿರುವ ಅವರಿಗೆ ಡೀಸೆಲ್‌ಗೆ ಸಾವಿರಾರು ರೂಪಾಯಿ ಬೇಕಾಗುತ್ತದೆ. ಆದರೆ ಇಂದು ಎಟಿಎಂಗೆ ಭೇಟಿ ನೀಡಿದ ವೇಳೆ, ವಾರದ ಮೊತ್ತ ₹ 24 ಸಾವಿರ ನೀಡಿರುವುದರಿಂದ, ಹೆಚ್ಚು ನೀಡಲಾಗುವುದಿಲ್ಲ ಎಂಬ ಸಂದೇಶ ಮಾತ್ರ ದೊರೆತಿದೆ. ಸಾಮಾನ್ಯ ಜನರಿಗೆ ಸರ್ಕಾರ ಇಷ್ಟು ಕಷ್ಟ ಏಕೆ ಕೊಟ್ಟಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT