ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಜಾರಿಯೇ ಅಸಹಜ

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಎತ್ತಿನಹೊಳೆ ಯೋಜನೆ ಆರಂಭದಿಂದಲೂ ಗೊಂದಲದ ಗೂಡಾಗಿಯೇ ಇದೆ. ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಸಿಗುವ ಸಾಧ್ಯತೆ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಯೋಜನೆ ಅನುಷ್ಠಾನವಾದರೆ ನೇತ್ರಾವತಿ ನದಿ ಮತ್ತು ಪಶ್ಚಿಮಘಟ್ಟಕ್ಕೆ ಆಗುವ ಧಕ್ಕೆ ತಪ್ಪಿದ್ದಲ್ಲ ಎಂಬುದು ಪರಿಸರವಾದಿಗಳ ವಾದ.  ಪರಿಸರಕ್ಕೆ ಮತ್ತು ಕರಾವಳಿ ಜನರಿಗೆ ತೊಂದರೆ ಆಗದಂತೆ ನೀರನ್ನು ಶಾಶ್ವತ ಬರಪೀಡಿತ ಜಿಲ್ಲೆಗಳಿಗೆ ಹರಿಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬದ್ಧ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.

* ಎತ್ತಿನಹೊಳೆ ಯೋಜನೆಗೆ ವಿರೋಧ ಏಕೆ?
ಭಾರತದಲ್ಲಿ ನದಿಗಳು ಹುಟ್ಟುವುದು ಹಿಮಾಲಯದ ಪರ್ವತಗಳು ಮತ್ತು ಪಶ್ಚಿಮಘಟ್ಟದ ಗಿರಿಕಂದರಗಳ  ಮಧ್ಯೆ ಮಾತ್ರ. ಮಳೆ ಮಾರುತಗಳಿಗೆ ಈ ಘಟ್ಟದ ಸಾಲು ತಡೆಗೋಡೆ ಇದ್ದಂತೆ. ಲೆಕ್ಕವಿಲ್ಲದಷ್ಟು ಜೀವರಾಶಿಗಳು, ಜಲಚರಗಳು ಪಶ್ಚಿಮಘಟ್ಟವನ್ನು ನಂಬಿಕೊಂಡಿವೆ. ವನ್ಯಜೀವಿಗಳ ನೆಲೆಯನ್ನು ಈಗಾಗಲೇ ಹತ್ತಾರು ಯೋಜನೆಗಳ ಮೂಲಕ ಹಾಳು ಮಾಡಲಾಗಿದೆ.

ಈಗ ಎತ್ತಿನಹೊಳೆ ಯೋಜನೆ ಮೂಲಕ ಸ್ವಾಭಾವಿಕವಾಗಿ ಪಶ್ಚಿಮಕ್ಕೆ ಹರಿಯುವ ನದಿಯನ್ನು ಅಸ್ವಾಭಾವಿಕವಾಗಿ ಪೂರ್ವಕ್ಕೆ ತಿರುಗಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. ಇದರ ಹೆಸರಿನಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಹಲವು ಗುಡ್ಡಗಳನ್ನು ನೆಲಸಮ ಮಾಡಲಾಗುತ್ತಿದೆ.ಮಳೆ ಕಾಡನ್ನೇ ಕಡಿದರೆ ಜೀವ ವೈವಿಧ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಇಷ್ಟೆಲ್ಲ ಪರಿಸರ ಹಾನಿಯಾದರೂ ಬಯಲು ಸೀಮೆಗೆ 2 ಟಿಎಂಸಿ ಅಡಿಗಿಂತ ಹೆಚ್ಚು ನೀರನ್ನು ಕೊಂಡೊಯ್ಯಲು ಸಾಧ್ಯವಿಲ್ಲ.ಹೀಗಾಗಿ ಈ ಯೋಜನೆಯನ್ನು ವಿರೋಧಿಸಲಾಗುತ್ತಿದೆ.

* ನೇತ್ರಾವತಿ ನದಿಯಲ್ಲಿ ಸರಾಸರಿ ವಾರ್ಷಿಕ 400 ಟಿಎಂಸಿ ಅಡಿ ನೀರು ಹರಿದು ಸಮುದ್ರ ಸೇರುತ್ತದೆ. ಅದರಲ್ಲಿ  24 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗೆ ಬಳಸಿಕೊಂಡರೆ ತೊಂದರೆ ಏನು?
ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಸಿಗುತ್ತದೆ ಎಂಬುದು ಕೇವಲ ಕಲ್ಪನೆ. ಇದಕ್ಕೆ ಯಾವುದೇ ಪ್ರಾಯೋಗಿಕ ಅಧ್ಯಯನ ನಡೆದಿಲ್ಲ. ಗುಂಡ್ಯ ಜಲ ವಿದ್ಯುತ್‌ ಯೋಜನೆಗಾಗಿ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್) ಸಂಗ್ರಹಿಸಿದ್ದ ಮಳೆ  ಪ್ರಮಾಣದ ಅಂಕಿ–ಅಂಶವನ್ನು ಪಡೆದು ಎತ್ತಿನಹೊಳೆ ಯೋಜನೆಗೆ ಸಮಗ್ರ ಯೋಜನಾ ವರದಿ (ಡಿ.ಪಿ.ಆರ್‌) ಸಿದ್ಧಪಡಿಸಲಾಗಿದೆ.

ನೀರು ಸಂಗ್ರಹಿಸುವ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣವನ್ನು ನಿಖರವಾಗಿ ಅಳತೆ ಮಾಡಿಯೇ ಇಲ್ಲ. ಬಂಟ್ವಾಳದ ಮಳೆ ಮಾಪನ ಕೇಂದ್ರದ ಅಂಕಿ–ಅಂಶ ಆಧರಿಸಿ ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಸಿಗುತ್ತದೆ ಎಂದು  ಭಾವಿಸಿ ಯೋಜನೆ ರೂಪಿಸಿದ್ದಾರೆ. ಬಂಟ್ವಾಳದಲ್ಲಿ ವರ್ಷಕ್ಕೆ ಸರಾಸರಿ 6,000 ಮಿಲಿ ಮೀಟರ್‌ ಮಳೆ ಬಿದ್ದರೆ, ಎತ್ತಿನಹೊಳೆ ಭಾಗದಲ್ಲಿ ಸರಾಸರಿ ಗರಿಷ್ಠ 2,500 ಮಿ.ಮೀ ದಾಟುವುದಿಲ್ಲ.

ಮಳೆ ಮಾಪನ ಕೇಂದ್ರಗಳನ್ನು ತೆರೆದು ಮೂರ್ನಾಲ್ಕು ವರ್ಷ ಪ್ರಾಯೋಗಿಕವಾಗಿ ಅಧ್ಯಯನ ನಡೆಸಿದ್ದರೆ ಎಷ್ಟು ನೀರು ಸಿಗುತ್ತದೆ ಎಂಬುದನ್ನು ಅಂದಾಜಿಸಬಹುದಿತ್ತು. ಆದರೆ, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಒದಗಿಸಿದ ಸುಳ್ಳು ಅಂಕಿ ಅಂಶ ಆಧರಿಸಿ ನೀರಾವರಿ ತಜ್ಞ ಪ್ರೊ. ರಾಮಪ್ರಸಾದ್ ಯೋಜನೆ ಸಿದ್ಧಪಡಿಸಿಕೊಟ್ಟಿದ್ದಾರೆ.

ನೇತ್ರಾವತಿ ನದಿ ಮೂಲಕ 400 ಟಿಎಂಸಿ ಅಡಿ ನೀರು ಸಮುದ್ರ ಸೇರುತ್ತಿದ್ದರೆ, ಅದು ಎತ್ತಿನಹೊಳೆಯಿಂದ ಮಾತ್ರ ಅಲ್ಲ. ಅಂತ ಹತ್ತು ಉಪನದಿಗಳು ನೇತ್ರಾವತಿ ಸೇರಿಕೊಳ್ಳುತ್ತವೆ. ಹತ್ತಾರು ಯೋಜನೆಗಳ ಹೆಸರಿನಲ್ಲಿ ಈಗಾಗಲೇ ನದಿ ಮೂಲಕ್ಕೆ ಗಂಡಾಂತರ ಬಂದೊದಗಿದೆ. ಈಗ ನದಿಯನ್ನೂ ಮೂಲದಲ್ಲೆ  ತಿರುಗಿಸಿದರೆ ನೇತ್ರಾವತಿಗೆ ಧಕ್ಕೆ ಆಗುವುದರಲ್ಲಿ ಅನುಮಾನ ಇಲ್ಲ. ಸಮುದ್ರಕ್ಕೆ ಸೇರುವ ನೀರು ತಡೆದರೆ ಮೋಡಗಳೇ ಉತ್ಪತ್ತಿ ಆಗುವುದಿಲ್ಲ.

* ಎತ್ತಿನಹೊಳೆ ವಿರೋಧಿಸುತ್ತಿರುವ ಯಾರೊಬ್ಬರೂ ಜಲ ವಿಜ್ಞಾನಿಗಳಲ್ಲ ಎಂಬ ಆರೋಪವಿದೆ. ನಿಮ್ಮ ಅಭಿಪ್ರಾಯ ಏನು?
ಸಾಮಾನ್ಯ ವಿಷಯ ಅರ್ಥ ಮಾಡಿಕೊಳ್ಳಲು ವಿಜ್ಞಾನಿ ಆಗಬೇಕಿಲ್ಲ. ಪರಿಸರಕ್ಕೆ ಆಗುವ ಹಾನಿ ಬಗ್ಗೆ ಪ್ರಶ್ನಿಸಲು ಎಲ್ಲರಿಗೂ ಹಕ್ಕಿದೆ.  ನಾವು ತಜ್ಞರಲ್ಲ  ನಿಜ. ಆದರೆ, ತಜ್ಞರಿಂದ ವರದಿ ಸಿದ್ಧಪಡಿಸಿದ್ದರೆ ಸಮಂಜಸ ಉತ್ತರ ಕೊಡಲು ಏನು ಕಷ್ಟ? ಯೋಜನೆ ಬಗ್ಗೆ ಇರುವಂತಹ ಅನುಮಾನಗಳನ್ನು ಪರಿಹರಿಸಲು ಏಕೆ ಆಗುತ್ತಿಲ್ಲ?

100ಕ್ಕೂ ಹೆಚ್ಚು ಅಡಿ ಆಳದಿಂದ ಹರಿಯುವ ನೀರನ್ನು ಮೇಲೆತ್ತುವ ಬಗ್ಗೆ ಮೆಕ್ಯಾನಿಕಲ್ ಎಂಜಿನಿಯರ್‌, ಫ್ಲೂಯಿಡ್ (ದ್ರವ) ಎಂಜಿನಿಯರ್‌, ಥರ್ಮೋ ಡೈನಮಿಕ್‌ (ಉಷ್ಣಬಲ) ಮತ್ತು ಹೈಡ್ರಾಲಜಿ (ಜಲಶಾಸ್ತ್ರ) ತಜ್ಞರ ಅಭಿಪ್ರಾಯ ಪಡೆಯದೆ ಮಳೆಯ ಅಂಕಿ ಅಂಶ ಇಟ್ಟುಕೊಂಡು ಕೇವಲ ಗಣಿತದ ಲೆಕ್ಕಾಚಾರದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಯ ವರದಿ ಪ್ರಕಾರ, ಎಲ್ಲಿಯೂ ನೀರು ಸಂಗ್ರಹಿಸುವುದಿಲ್ಲ. ಹರಿಯುವ ಹಳ್ಳಗಳಲ್ಲಿ 8 ಬ್ಯಾರೇಜ್‌ಗಳನ್ನು ನಿರ್ಮಿಸಿ ಅಲ್ಲಿಂದ ಪಂಪ್‌ ಮಾಡಲಾಗುತ್ತದೆ.

ನೀರನ್ನು ಒಂದೆಡೆ ಸಂಗ್ರಹಿಸದೆ ಹರಿಯುವ ನೀರನ್ನು 100 ಅಡಿ ಎತ್ತರಕ್ಕೆ ಪಂಪ್ ಮಾಡುವುದು ವೈಜ್ಞಾನಿಕವಾಗಿ ಸಾಧ್ಯವಿಲ್ಲ. ಯೋಜನಾ ವರದಿಯಲ್ಲಿ  ನೀರು ಪಂಪ್‌ ಮಾಡುವ ಬಗೆ ಮತ್ತು ಅಗತ್ಯ ವಿದ್ಯುತ್ತನ್ನು ಎಲ್ಲಿಂದ  ಪೂರೈಸಲಾಗುತ್ತದೆ ಎಂಬುದರ ಮಾಹಿತಿಯೇ ಇಲ್ಲ. ಈ ಯೋಜನೆ ಕಾರ್ಯ ಸಾಧ್ಯತೆ ಬಗ್ಗೆ ಹಲವು ತಜ್ಞರ ಬಳಿ ಅಭಿಪ್ರಾಯ ಕೇಳಿದ್ದೇವೆ. ರಾಮಪ್ರಸಾದ್ ಒಬ್ಬರನ್ನು ಬಿಟ್ಟು ಉಳಿದವರೆಲ್ಲ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

* ಪರಿಸರವಾದಿಗಳೆಂದರೆ ಬಯಲುಸೀಮೆ ವಿರೋಧಿಗಳೆ?
ಪಶ್ಚಿಮಘಟ್ಟಗಳು ಅಲ್ಲಿನ ಜನರಿಗಿಂತ ಬಯಲುಸೀಮೆ ಜನರಿಗೆ ಹೆಚ್ಚು ಉಪಕಾರ ಮಾಡುತ್ತಿವೆ. ಸರ್ಕಾರ ಸುಳ್ಳು ಹೇಳಿಕೊಂಡು ಬಯಲುಸೀಮೆ ಜನರಿಗೆ ಮೋಸ ಮಾಡುತ್ತಿದೆ ಎಂಬುದಷ್ಟೇ ನಮ್ಮ ಕಾಳಜಿ.

2012ರಲ್ಲಿ 10 ಟಿಎಂಸಿ ಅಡಿ ನೀರು ತರಲು ₹ 4 ಸಾವಿರ ಕೋಟಿ ಮೊತ್ತದಲ್ಲಿ ಯೋಜನೆ ರೂಪಿಸಲಾಗಿತ್ತು. 2013ರಲ್ಲಿ 18 ಟಿಎಂಸಿ ಅಡಿಗೆ ಏರಿಸಿ ವೆಚ್ಚದ ಅಂದಾಜನ್ನು ₹ 8,500 ಕೋಟಿಗೆ ಏರಿಸಲಾಯಿತು. ಕೆಲವೇ ದಿನಗಳಲ್ಲಿ ಅದನ್ನು  ದಿಢೀರ್‌ 24 ಟಿಎಂಸಿ ಅಡಿಗೆ ಹೆಚ್ಚಿಸಿ, ಯೋಜನಾ ವೆಚ್ಚವನ್ನು ₹ 12,900 ಕೋಟಿಗೆ  ಮುಟ್ಟಿಸಲಾಯಿತು.

ಗುತ್ತಿಗೆದಾರರೊಬ್ಬರು ಇಡೀ ನೀರಾವರಿ ನಿಗಮವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಅವರು ಹೇಳಿದಂತೆ ಅಧಿಕಾರಿಗಳು, ಸಚಿವರು ತಾಳ ಹಾಕುತ್ತಿದ್ದಾರೆ. ಯೋಜನಾ ವೆಚ್ಚ ಹೆಚ್ಚಾದಷ್ಟೂ ಅವರಿಗೆ ಅನುಕೂಲ. ಬಯಲುಸೀಮೆಗೆ ನೀರು ಕೊಡುವುದಕ್ಕಿಂತ ಹಣ ಕೊಳ್ಳೆ ಹೊಡೆಯುವ ಸಲುವಾಗಿಯೇ  ರೂಪಿತಗೊಂಡ ಯೋಜನೆ ಇದು.  ಹಾಗಾಗಿ ಯಾವುದೇ ಹಣಕಾಸು ಸಂಸ್ಥೆ ಯೋಜನೆಗೆ ಆರ್ಥಿಕ ನೆರವು ನೀಡುತ್ತಿಲ್ಲ.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ಕಾವೇರಿ, ಶರಾವತಿ ನದಿಯಿಂದ ಸುಲಭವಾಗಿ ನೀರು ಹರಿಸುವ ಸಾಧ್ಯತೆ ಇದೆ. ಯೋಜನಾ ವೆಚ್ಚ ಕಡಿಮೆ ಎಂಬ ಕಾರಣಕ್ಕೆ ಅದ್ಯಾವುದನ್ನೂ ಕೈಗೆತ್ತಿಕೊಳ್ಳದೆ ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ. ಹೀಗಾಗಿ ನಾವು ವಿರೋಧಿಸುತ್ತಿದ್ದೇವೆ. ಅಲ್ಲಿನ ಜನರಿಗೆ ಈ ಅರಿವಿಲ್ಲದೆ ನಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

* ಮುಂದಿನ ಹೋರಾಟ ಏನು?
ರಾಷ್ಟ್ರೀಯ ಹಸಿರು ಪೀಠದ ಮುಂದೆ ಹೋಗಿದ್ದೇವೆ. ಅರ್ಜಿದಾರರ ಸಮ್ಮುಖದಲ್ಲೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪೀಠ ಆದೇಶಿಸಿದೆ. ಹಸಿರು ಪೀಠದಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಿದೆ. ಪೀಠದ ಮೇಲೆ ನಂಬಿಕೆ ಇಟ್ಟು ಹೋರಾಟ ಮುಂದುವರಿಸಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT