ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಬಿಎಲ್‌ ಬ್ಯಾಡ್ಮಿಂಟನ್‌ಗೆ ಹೊಸ ಹೊಳಪು...

Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಭಾರತದ ಬ್ಯಾಡ್ಮಿಂಟನ್‌ ಲೋಕದಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಿದೆ.  ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ  (ಐಪಿಎಲ್‌) ಪ್ರೇರಣೆ ಪಡೆದು 2013ರಲ್ಲಿ ಆರಂಭವಾದ ಲೀಗ್‌ ಎರಡೇ ಆವೃತ್ತಿ ಯಲ್ಲಿ ಸಾಕಷ್ಟು ಜನಮನ್ನಣೆ ಪಡೆದಿದೆ.

ಯುವ ಪ್ರತಿಭೆಗಳನ್ನು ಪ್ರವರ್ಧಮಾನಕ್ಕೆ ತರುವ ಹಾಗೂ ದೇಶದಲ್ಲಿ  ಈ ಕ್ರೀಡೆಯ ಬೇರುಗಳನ್ನು ಇನ್ನೂ ಆಳಕ್ಕಿಳಿಸುವ ಸದುದ್ದೇಶದಿಂದ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ಶುರು ಮಾಡಿದ ಈ ಲೀಗ್‌ ಬ್ಯಾಡ್ಮಿಂಟನ್‌ ರಂಗದಲ್ಲಿ ಬದಲಾವಣೆಯ ಹೊಸ ಗಾಳಿ ಬೀಸುವಂತೆ ಮಾಡಿದೆ.

ಈ ಲೀಗ್‌ನಲ್ಲಿ ಆಡಿ ಗಮನ ಸೆಳೆದಿರುವ ಸಿರಿಲ್‌ ವರ್ಮಾ, ವೃಷಾಲಿ ಗುಮ್ಮಾಡಿ, ಮನು ಅತ್ರಿ, ಎನ್‌. ಸಿಕ್ಕಿ  ರೆಡ್ಡಿ  ಅವರಂತಹ ಪ್ರತಿಭೆಗಳು ದೇಶಿ ಹಾಗೂ ಅಂತರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಹೊಳೆಯುತ್ತಿದ್ದಾರೆ. 

ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌, ಅಜಯ್‌ ಜಯರಾಮ್‌, ಎಚ್‌.ಎಸ್‌. ಪ್ರಣಯ್‌, ಅಶ್ವಿನಿ ಪೊನ್ನಪ್ಪ, ಪರುಪಳ್ಳಿ ಕಶ್ಯಪ್‌ ಸೇರಿದಂತೆ  ಅನೇಕರು ಎತ್ತರದ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ದೇಶದ ಕೀರ್ತಿ ಬೆಳಗುತ್ತಿರುವುದು ಲೀಗ್‌ನ ಪ್ರಾಮುಖ್ಯತೆಗೆ ಹಿಡಿದ ಕೈಗನ್ನಡಿಯಂತಿದೆ.

ಪಿಬಿಎಲ್‌ ಶುರುವಾದ ಬಳಿಕ ಆಟಗಾರರು ಆರ್ಥಿಕವಾಗಿಯೂ  ಸಬಲರಾಗಿದ್ದು, ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂಬುದು ಕೂಡ ಗಮನಾರ್ಹ.

ಲೀಗ್‌ನಲ್ಲಿ ಭಾರತದ ಕ್ರೀಡಾಪಟುಗಳು ಮಾತ್ರವಲ್ಲದೆ ವಿಶ್ವದ ಹಲವು ದೇಶಗಳ ಘಟಾನುಘಟಿ ಆಟಗಾರರು ಭಾಗವಹಿಸುತ್ತಾರೆ. ಇದರಿಂದ ಯುವ ಆಟಗಾರರು ಅವರ ಆಟದ ಶೈಲಿ, ಅಭ್ಯಾಸ ಕ್ರಮ, ಎದುರಾಳಿಗಳನ್ನು ಹಣಿಯಲು ಅವರು ಹೆಣೆಯುವ ತಂತ್ರಗಾರಿಕೆ ಹೀಗೆ ಅನೇಕ ಮಹತ್ವದ ವಿಷಯಗಳನ್ನು ಕಲಿಯಲು ಲೀಗ್‌ ಪ್ರಯೋಜನಕಾರಿ.

ತಾರಾ ಮೆರಗು..
2016ರಲ್ಲಿ ಬಿಎಐ, ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ ಅನ್ನು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಎಂದು ಮರು ನಾಮಕರಣ ಮಾಡಿತ್ತು. ವಿನೂತನ ಸ್ವರೂಪದೊಂದಿಗೆ ಶುರುವಾದ ಲೀಗ್‌ನಲ್ಲಿ ಲೀ ಚೊಂಗ್‌ ವೀ, ಕಾರ್ಸ್ಟನ್‌ ಮೊಗೆನ್‌ಸನ್‌, ತನೊಂಗ್‌ಸಾಕ್‌ ಸಾಯೆನ್ಸೊಮ್‌
ಬೂನ್‌ಸುಕ್‌, ಸವೊ ಡಿ, ಹಾನ್‌ ಲಿ ಹೀಗೆ ಅನೇಕರು ಆಡಿದ್ದರು. ಇದರಿಂದ ಲೀಗ್‌ಗೆ ಅಪಾರ ಯಶಸ್ಸುದಕ್ಕಿತ್ತು. 

ಈ ಬಾರಿ ಲೀಗ್‌ಗೆ ಇನ್ನಷ್ಟು ತಾರಾ ಮೆರಗು ಬಂದಿದೆ. ಡೆನ್ಮಾರ್ಕ್‌ನ ಜಾನ್‌ ಒ ಜಾರ್ಗೆನ್‌ಸನ್‌, ವಿಕ್ಟರ್‌ ಆ್ಯಕ್ಸೆಲ್‌ಸನ್‌, ವಿನ್ಸೆಂಟ್‌ ವಾಂಗ್‌ ವಿಂಗ್‌ ಕಿ, ನಡಿಯೆಜ್ದಾ ಜಿಯೆಬಾ ಮತ್ತು ಮ್ಯಾಡ್ಸ್‌ ಪಿಯೆಲರ್‌ ಅವರು ಕಣಕ್ಕಿಳಿಯುತ್ತಿದ್ದು ಇವರ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ರಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ  ಕ್ಯಾರೊಲಿನ್‌ ಮರಿನ್‌, ಟಾಮಿ ಸುಗಿಯಾರ್ಟೊ, ಸುಂಗ್‌ ಜಿ ಹ್ಯೂನ್‌, ವಾನ್‌ ಹೊ ಸನ್‌, ಯೊ ಯೆಯೊನ್‌ ಸೆಯೊಂಗ್‌, ವೀ ಕಿಯಾಂಗ್‌ ತಾನ್‌, ಲೀ ಯಂಗ್‌ ಡೇ, ವಿ.ಶೆಮ್‌ ಗೊಹ್‌, ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌, ಬೊಡಿನ್‌ ಇಸಾರ, ಮಾರ್ಕಿಸ್‌ ಕಿಡೊ, ನಿಚಾವೊನ್‌ ಜಿಂದಾಪೊಲ್‌, ರಾಜೀವ್‌ ಔಸೆಫ್‌ ಅವರು ಮತ್ತೊಮ್ಮೆ ಭಾರತದ ನೆಲದಲ್ಲಿ ಮಿಂಚು ಹರಿಸಲು ಉತ್ಸುಕರಾಗಿದ್ದಾರೆ.

ಹೊಸಬರಿಗೆ ಸಕಾಲ
ಭಾರತದ ಯುವ ಕ್ರೀಡಾಪಟುಗಳಿಗೆ ಆಟದ ಗುಣ ಮಟ್ಟ ಹೆಚ್ಚಿಸಿಕೊಳ್ಳಲು ಲೀಗ್‌ ವೇದಿಕೆಯಾಗಿದೆ. ಮಧ್ಯಪ್ರದೇಶದ 22 ವರ್ಷದ ಆಟಗಾರ ಸಮೀರ್‌ ವರ್ಮಾ, ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಆಡುವ ಎನ್‌. ಸಿಕ್ಕಿ ರೆಡ್ಡಿ ಮತ್ತು ಪ್ರಣವ್‌ ಜೆರ್ರಿ ಚೋಪ್ರಾ, 2016ರಲ್ಲಿ ಜೂನಿಯರ್‌ ವಿಶ್ವ  ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದ 17 ವರ್ಷದ ಸಿರಿಲ್‌ ವರ್ಮಾ, 16 ವರ್ಷದ ಸಾತ್ವಿಕ್‌ ಸಾಯಿ ರಾಜ್‌, 19 ವರ್ಷದ ಋತ್ವಿಕಾ ಶಿವಾನಿ ಅವರು ಈ ಬಾರಿಯೂ ವಿವಿಧ ತಂಡಗಳಲ್ಲಿ ಸ್ಥಾನ ಗಳಿಸಿದ್ದು ಆಟದಲ್ಲಿ ಇನ್ನಷ್ಟು ನೈಪುಣ್ಯ ಸಾಧಿಸುವ ಗುರಿ ಹೊಂದಿದ್ದಾರೆ.

11 ಪಾಯಿಂಟ್ಸ್‌ನ ಮೋಡಿ: ಆಟದ ರೋಚಕತೆ ಹೆಚ್ಚಿಸಿ ಲೀಗ್‌ನ ಜನಪ್ರಿಯತೆಯನ್ನು  ಹೆಚ್ಚಿಸುವ ಉದ್ದೇಶದಿಂದ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ  ಈ ಬಾರಿ 11 ಪಾಯಿಂಟ್ಸ್‌ಗಳ ಮಾದರಿಯನ್ನು ಜಾರಿಗೆ ತಂದಿದೆ. ಈ ನಿಯಮಕ್ಕೆ ಮಾಜಿ ಹಾಗೂ ಹಾಲಿ ಆಟಗಾರರಿಂದ ವ್ಯಾಪಕ ಬೆಂಬಲವೂ ವ್ಯಕ್ತವಾಗಿದೆ.

ನೂತನ ನಿಯಮದ ಅನುಸಾರ ಪ್ರತಿ ಗೇಮ್‌ 11 ಪಾಯಿಂಟ್ಸ್‌ಗೆ ಸೀಮಿತವಾಗಿರಲಿದೆ.  ಪಂದ್ಯ ಬೇಗನೆ ಕೊನೆಗೊಳ್ಳುವಂತೆ ಮಾಡುವುದು ಮತ್ತು ಏಕಪಕ್ಷೀಯ  ಫಲಿತಾಂಶ ಹೊರ ಹೊಮ್ಮುವುದನ್ನು  ತಪ್ಪಿಸುವುದು ಇದರ ಹಿಂದಿನ ಆಲೋಚನೆಯಾಗಿದೆ. ವೀಕ್ಷಕರನ್ನು ಸೆಳೆಯುವ ತಂತ್ರವೂ ಇದರ ಹಿಂದೆ ಅಡಕವಾಗಿದೆ. 

₹ 6 ಕೋಟಿ ಬಹುಮಾನ
ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ ಎರಡನೇ ಆವೃತ್ತಿ ಒಟ್ಟು ₹ 6ಕೋಟಿ ಬಹುಮಾನ ಮೊತ್ತ ಒಳಗೊಂಡಿದೆ. ವಿಜೇತ ತಂಡ ₹ 3 ಕೋಟಿ ಹಾಗೂ ರನ್ನರ್ಸ್‌ ಅಪ್‌ ತಂಡಕ್ಕೆ ₹ 1.5 ಕೋಟಿ ಬಹುಮಾನ ಸಿಗಲಿದೆ. ಸೆಮಿಫೈನಲ್‌ನಲ್ಲಿ ಪರಾಭವಗೊಳ್ಳುವ ಎರಡೂ ತಂಡಗಳು ತಲಾ ₹ 75 ಲಕ್ಷ ಮೊತ್ತ ತಮ್ಮದಾಗಿಸಿಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT