ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ವಿ.ವಿ ಕೆಲಸ ವಿಳಂಬಕ್ಕೆ ಅಧಿಕಾರಶಾಹಿ ಕಾರಣ’

Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

ಹೊಸಪೇಟೆ: ‘ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಅಧಿಕಾರಶಾಹಿಗೆ ತಪ್ಪು ಕಲ್ಪನೆ ಇದೆ. ಕನ್ನಡ ಕಲಿತವರಿಗೆ ಯಾವುದೇ ಭವಿಷ್ಯವಿಲ್ಲ ಎಂಬ ಮನಸ್ಥಿತಿಯನ್ನು ಅಧಿಕಾರಶಾಹಿ ಹೊಂದಿರುವುದರಿಂದ ವಿ.ವಿಯ ಅನೇಕ ಕೆಲಸಗಳು ನನೆಗುದಿಗೆ ಬಿದ್ದಿವೆ’ ಎಂದು ವಿ.ವಿ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಬೇಸರ ವ್ಯಕ್ತಪಡಿಸಿದರು.

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಮೂರನೇ ಹಂತದ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಅವರು ಮಾತನಾಡಿದರು.

‘ವಿಶ್ವವಿದ್ಯಾಲಯವು ಸಂಶೋಧನೆ ಜತೆಗೆ ಭಾಷೆ ಮೂಲಕ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎನ್ನುವುದು ಅಧಿಕಾರಶಾಹಿಗೆ ಗೊತ್ತಿಲ್ಲ. ಅರ್ಥಶಾಸ್ತ್ರ, ನೀರಿನ ನಿರ್ವಹಣೆ, ಬರ ನಿರ್ವಹಣೆ ಕುರಿತೂ ವಿ.ವಿ ಕೆಲಸ ಮಾಡುತ್ತಿದೆ. ಈ ವಿಷಯಗಳ ಬಗ್ಗೆ ಸರ್ಕಾರ ನೆರವು ಕೇಳಿದರೆ ಕೊಡಲು ವಿ.ವಿ ಸಿದ್ಧ ವಿದೆ’ ಎಂದರು.

‘ವಿಶ್ವವಿದ್ಯಾಲಯವನ್ನು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಕಟ್ಟುವ ಮಹತ್ವಾಕಾಂಕ್ಷೆ ಇದೆ. ಆದರೆ ಇದಕ್ಕೆ ಅನುದಾನದ ಕೊರತೆ ಇದೆ. ಸರ್ಕಾರ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದರೂ ಕೆಲಸ ಮಾಡಲು ಅಧಿಕಾರಶಾಹಿ ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು.

‘ವಿ.ವಿ ಒಟ್ಟು 700 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದನ್ನು ರಕ್ಷಿಸುವ ಉದ್ದೇಶದಿಂದ ಇಡೀ ಆವರಣಕ್ಕೆ ಬೇಲಿ ಹಾಕಿಕೊಡಲು ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮನವಿ ಕೊಟ್ಟರೆ ಅಧಿಕಾರಿಗಳು ಸ್ಪಂದಿಸಲಿಲ್ಲ. ಸ್ವತಃ ಮುಖ್ಯಮಂತ್ರಿ ಹೇಳಿದರೂ ಅಧಿಕಾರಿಗಳು ಅಸಡ್ಡೆ ತೋರಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಕಳೆದ 25 ವರ್ಷಗಳಲ್ಲಿ ಸರ್ಕಾರದಿಂದ ಕನ್ನಡ ವಿ.ವಿಗೆ ಕೇವಲ ₹ 58 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದು ಸಣ್ಣ  ಖಾಸಗಿ ಕಾಲೇಜೊಂದರ ಸ್ಥಾಪನೆಗೆ ಸಮನಾದ ಅನುದಾನ. ಆದರೆ, ಇದ್ದುದರಲ್ಲೇ ವಿಶ್ವವಿದ್ಯಾಲಯವು  ಅನೇಕ ಗುರುತರ ಕೆಲಸಗಳನ್ನು ಮಾಡಿದೆ’ ಎಂದು ಕುಲಪತಿ ಹೇಳಿದರು.
‘ವಿ.ವಿಯಲ್ಲಿ ಸಿಬ್ಬಂದಿ ಕೊರತೆ ಇದೆ. ನಾವು ಸಾಗಬೇಕಿರುವ ದಾರಿ ಬಹಳ ದೂರ ಇದೆ. ಆ ದಾರಿಯನ್ನು ಹೇಗೆ ಕ್ರಮಿಸಬೇಕು ಎನ್ನುವುದರ ಕುರಿತು ವಿವಿಧ ವಲಯದ ಜನರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ.  ಇದೇ 5 ಮತ್ತು 6 ರಂದು ರಾಜಕಾರಣಿಗಳನ್ನು ಆಹ್ವಾನಿಸಿ, ಅಭಿಪ್ರಾಯ ಪಡೆಯಲಾಗುವುದು. 88ಕ್ಕೂ ಹೆಚ್ಚು ಶಾಸಕರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ’ ಎಂದರು.

‘ದೇವದುರ್ಗದಲ್ಲಿ ಬೌದ್ಧ ವಿಸ್ತರಣಾ ಕೇಂದ್ರ’

‘ಮುಂದಿನ ಶೈಕ್ಷಣಿಕ ವರ್ಷದಿಂದ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬೌದ್ಧ ವಿಸ್ತರಣಾ ಅಧ್ಯಯನ ಕೇಂದ್ರ ಆರಂಭಿಸುವ ಚಿಂತನೆ ಇದೆ. ಈಗಾಗಲೇ ಐದು ಎಕರೆ ಜಮೀನು ನೀಡಲು ಜಿಲ್ಲಾಡಳಿತ ಮುಂದೆ ಬಂದಿದೆ’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಹೇಳಿದರು.
‘ಬೆಂಗಳೂರಿನಲ್ಲಿ ಡಾ.ರಾಜಕುಮಾರ್‌ ಅಧ್ಯಯನ ಕೇಂದ್ರ ಆರಂಭಿಸಲಾಗುವುದು.
ಸರ್ಕಾರ ಈಗಾಗಲೇ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಅಲ್ಲದೇ, ತಳಸಮುದಾಯಗಳ ಅಧ್ಯಯನ ಕೇಂದ್ರಕ್ಕೆ ಬೆಂಗಳೂರಿ ನಲ್ಲೇ ಐದು ಎಕರೆ ಜಮೀನು ಕಲ್ಪಿಸಿದೆ.
ಈ ಭೌತಿಕ ಸ್ಥಳಗಳನ್ನು ಬೌದ್ಧಿಕವಾಗಿ ಕಟ್ಟುವ ಹೊಣೆಗಾರಿಕೆ ವಿ.ವಿ ಮೇಲಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT