ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರೊಳಗೆ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತ

Last Updated 5 ಜನವರಿ 2017, 10:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಾರ್ಮಿಕರ ಭವಿಷ್ಯ ನಿಧಿ ಪಿಂಚಣಿದಾರರು ಜೀವಂತ ಇರುವುದನ್ನು ದೃಢೀಕರಿಸುವ ಪ್ರಮಾಣಪತ್ರವನ್ನು ಇದೇ 15ರೊಳಗೆ ಸಲ್ಲಿಸದಿದ್ದರೆ ಅವರ ಪಿಂಚಣಿ ಸ್ಥಗಿತಗೊಳ್ಳುತ್ತದೆ’ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಹುಬ್ಬಳ್ಳಿಯ ಉಪ ಪ್ರಾದೇಶಿಕ ಕಚೇರಿ ಆಯುಕ್ತ ಎಚ್‌. ಚಂದ್ರಕಾಂತ ಗಡಿಯಾರ ತಿಳಿಸಿದರು.

‘ಡಿಜಿಟಲ್‌ ಪ್ರಮಾಣ ಪತ್ರ ಸಲ್ಲಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಹುಬ್ಬಳ್ಳಿ ಪ್ರಾದೇಶಿಕ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಗದಗ, ಹಾವೇರಿ ಹಾಗೂ ಕಾರವಾರ ಜಿಲ್ಲೆಯಲ್ಲಿ 67,845 ಪಿಂಚಣಿದಾರರಿದ್ದಾರೆ. ಅವರಲ್ಲಿ 17 ಸಾವಿರ ಪಿಂಚಣಿದಾರರಷ್ಟೇ ಡಿಜಿಟಲ್‌ ಜೀವನ ಪ್ರಮಾಣಪತ್ರ ಸಲ್ಲಿಸಿದ್ದಾರೆ’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಡಿಜಿಟಲ್‌ ಪ್ರಮಾಣಪತ್ರ ಸಲ್ಲಿಸುವುದು ಸುಲಭ. ಇದಕ್ಕಾಗಿ ಪಿಂಚಣಿದಾರರದ್ದು ಅಥವಾ ಸಂಬಂಧಿಕರ ಮೊಬೈಲ್‌ ಫೋನ್‌ ಸಂಖ್ಯೆ ಬೇಕು. ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆಯ ಪಾಸ್‌ಬುಕ್‌ ನಕಲು ಪ್ರತಿ, ಪಿಎಫ್‌ಒ ಸಂಖ್ಯೆಯೊಂದಿಗೆ ಬಂದರೆ ಕೆಲವೇ ನಿಮಿಷಗಳಲ್ಲಿ ಪ್ರಮಾಣಪತ್ರ ಸಲ್ಲಿಸಬಹುದು’ ಎಂದು ಅವರು ಮಾಹಿತಿ ನೀಡಿದರು.

‘ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಎಲ್ಲ ಕಾರ್ಯಾಲಯಗಳಲ್ಲಿ ಪ್ರಮಾಣ ಪತ್ರವನ್ನು ಉಚಿತವಾಗಿ ಸಲ್ಲಿಸಬಹುದು. ಸಂಸ್ಥೆ ಗುರುತಿಸಿದ 83 ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ಈ ಸೇವೆ ಲಭ್ಯವಿದ್ದು ಇದಕ್ಕಾಗಿ ₹ 10 ಪಾವತಿಸಬೇಕು. ಬ್ಯಾಂಕ್‌ ಹಾಗೂ ನವನಗರದಲ್ಲಿರುವ ಇಪಿಎಫ್‌ ಕಾರ್ಯಾಲಯಗಳಲ್ಲಿ  ಸೇವಾಕೇಂದ್ರಗಳ ವಿವರ ಪ್ರಕಟಿಸಲಾಗಿದೆ’ ಎಂದರು.

‘ಕಳೆದ ವರ್ಷ ಪ್ರಮಾಣಪತ್ರ ನೀಡಿದ್ದೇವೆ ಈಗ ನೀಡುವ ಅಗತ್ಯ ಇಲ್ಲ ಎಂಬ ಭಾವನೆ ಕೆಲವು ಪಿಂಚಣಿದಾರರಲ್ಲಿ ಇದೆ. ಅದು ತಪ್ಪು. ಪ್ರತಿ ವರ್ಷವೂ ಪ್ರಮಾಣ ಪತ್ರ ಸಲ್ಲಿಸಬೇಕು. ಹಿಂದಿನ ವರ್ಷ ಡಿಜಿಟಲ್‌ ರೂಪದಲ್ಲಿ ಪ್ರಮಾಣಪತ್ರ ಸಲ್ಲಿಸಿದವರು ಈ ಬಾರಿ ಹೆಬ್ಬೆಟ್ಟು ಗುರುತು ನೀಡಿದರೆ ಸಾಕು. ಹೊಸದಾಗಿ ಡಿಜಿಟಲ್‌ ಜೀವನಪ್ರಮಾಣ ಪತ್ರ ಸಲ್ಲಿಸುವವರು ದಾಖಲೆಗಳನ್ನು ಒದಗಿಸಬೇಕು’ ಎಂದು  ಚಂದ್ರಕಾಂತ ತಿಳಿಸಿದರು.

‘ಉದ್ಯೋಗದಾತರಿಗಾಗಿ ‘ನೋಂದಣಿ ಅಭಿಯಾನ’  ಜವನರಿ 1ರಿಂದ ಆರಂಭವಾಗಿದ್ದು, ಮಾರ್ಚ್‌ 31ರವರೆಗೆ ಇರುತ್ತದೆ.  ಈ ಅವಧಿಯಲ್ಲಿ ಉದ್ಯೋಗದಾತರು ಯಾವುದಾದರೂ ಕಾರಣದಿಂದ ಸದಸ್ಯರನ್ನು ನೋಂದಾಯಿಸದಿದ್ದರೆ ಅದನ್ನು ಈಗ ಮಾಡಿಕೊಳ್ಳಬಹುದು. 2009ರ ಏಪ್ರಿಲ್1ರಿಂದ 2016ರ ಡಿಸೆಂಬರ್‌ 31ರೊಳಗಿನ ನೋಂದಣಿ ಈಗ ಮಾಡಿಕೊಳ್ಳಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT