ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಂಪುರಿ: ಚಿತ್ರಪ್ರೀತಿಯ ಒರತೆ

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ
ಗೋವಿಂದ ನಿಹಲಾನಿ ನಿರ್ದೇಶನದ ‘ಅರ್ಧ ಸತ್ಯ’ ಹಿಂದಿ ಚಿತ್ರದಲ್ಲೊಂದು ದೃಶ್ಯವಿದೆ– ಬಸ್‌ನಲ್ಲಿ ಕುಳಿತ ಜ್ಯೋತ್ಸ್ನಾ ಗೋಖಲೆಗೆ ಸಹ ಪ್ರಯಾಣಿಕನೊಬ್ಬ ಇರುಸು ಮುರುಸು ಉಂಟಾಗುವಂತೆ ವರ್ತಿಸುತ್ತಾನೆ. ಅದನ್ನು ಆ ಜನಸಂದಣಿಯ ನಡುವೆಯೇ ಗಮನಿಸುವ ಅನಂತ್ ವೇಲಾಂಕರ್ ಎಂಬಾತ ಸೂಪರ್‌ ಹೀರೊ ತರಹ ವರ್ತಿಸದೆ ತಣ್ಣಗೆ ವಿರೋಧಿಸುತ್ತಾನೆ. ಜ್ಯೋತ್ಸ್ನಾ ಗೋಖಲೆಯಾಗಿ ಸ್ಮಿತಾ ಪಾಟೀಲ್ ನಟಿಸಿದ್ದರೆ, ಅನಂತ್ ಪಾತ್ರಕ್ಕೆ ಓಂಪುರಿ ಜೀವ ತುಂಬಿದ್ದರು.
 
ಏಳು ವರ್ಷಗಳ ಹಿಂದೆ ನಂದಿತಾ ಓಂಪುರಿ ‘ಅನ್‌ಲೈಕ್ಲಿ ಹೀರೊ: ದಿ ಸ್ಟೋರಿ ಆಫ್ ಓಂಪುರಿ’ ಪುಸ್ತಕ ಬರೆದಾಗ ಇದೇ ಓಂಪುರಿ ಕುದ್ದುಹೋಗಿದ್ದರು. ಓಂಪುರಿ ಅವರಿಗೆ ಯಾರ ಯಾರ ಜೊತೆ ಸಂಬಂಧವಿತ್ತು ಎನ್ನುವುದನ್ನು ನಂದಿತಾ ಪುಸ್ತಕದಲ್ಲಿ ಬಣ್ಣಿಸಿದ್ದಕ್ಕೆ ಆ ಕೋಪ. ನಾಲ್ಕು ವರ್ಷಗಳ ನಂತರ ಓಂಪುರಿ, ನಂದಿತಾ ಇಬ್ಬರೂ ವಿವಾಹ ವಿಚ್ಛೇದನದ ನಿರ್ಧಾರಕ್ಕೆ ಬಂದರು. ‘ಅರ್ಧ ಸತ್ಯ’ದ ಯುವಕನಿಗೂ ಈ ಓಂಪುರಿಗೂ ಸಂಬಂಧವಿಲ್ಲ ಎಂದು ಕೆಲವರು ಆಗ ಟೀಕಿಸಿದರು. ಆದರೆ, ಅಭಿನಯದಲ್ಲಿ ಹಾಗೂ ಸಿನಿಮಾ ಪ್ರೀತಿಯ ವಿಷಯದಲ್ಲಿ ಓಂಪುರಿ ಅವರನ್ನು ಯಾರೂ ಟೀಕಿಸಲು ಸಾಧ್ಯವಿಲ್ಲ.
 
‘ಬೇರೆಯವರ ಖಾಸಗಿ ಬದುಕಿನ ಕಹಿಸತ್ಯಗಳು ಅನೇಕರಿಗೆ ದಕ್ಕುವುದು ಅರ್ಧ ಸತ್ಯಗಳಾಗಿಯೇ’ ಎಂದು ಒಂದು ಕಡೆ ಓಂಪುರಿ ಹೇಳಿದ್ದಿದೆ.
 
ಓಂಪುರಿ ಹುಟ್ಟಿದ್ದು ಹರಿಯಾಣದ ಅಂಬಾಲದಲ್ಲಿ. ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕಿದ್ದ ಅಪ್ಪನಿಗೆ ವರ್ಗಾವಣೆ ಆಗುತ್ತಿದ್ದುದರಿಂದ ಬೆಳೆದದ್ದು ಪಂಜಾಬ್‌ನಲ್ಲಿ. ಜನನ ಪ್ರಮಾಣ ಪತ್ರ ಇಲ್ಲದ ಮಕ್ಕಳಲ್ಲಿ ಓಂಪುರಿ ಕೂಡ ಒಬ್ಬರಾಗಿದ್ದರು. ದಸರಾ ಮುಗಿದ ಎರಡು ದಿನಗಳಾದ ಮೇಲೆ ಹುಟ್ಟಿದ ಮಗು ಎಂದು ಅವರ ಅಮ್ಮ ಹೇಳಿದ್ದರು. ಚಿಕ್ಕಪ್ಪ ಶಾಲೆಗೆ ಸೇರಿಸುವಾಗ ‘ಜನನ: 1950 ಮಾರ್ಚ್‌ 30’ ಎಂದು ಬರೆಸಿದ್ದರು. ಅಮ್ಮನ ಮಾತನ್ನು ನಂಬಿ ಓಂಪುರಿ ಆಮೇಲೆ ತಮ್ಮ ಜನ್ಮದಿನ 1950ರ ಅಕ್ಟೋಬರ್ 18 ಎಂದು ಬದಲಿಸಿಕೊಂಡರು.
 
ರಂಗಭೂಮಿಯ ನಂಟು ಬೆಳೆಸಿಕೊಂಡ ಓಂಪುರಿ, ಅದನ್ನು ಚಳವಳಿ ಎಂದೇ ನಂಬಿದ್ದ ದೊಡ್ಡ ಸಮುದಾಯದವರಲ್ಲಿ ಒಬ್ಬರಾಗಿದ್ದರು. 1970ರ ದಶಕದ ನಡುಘಟ್ಟದಲ್ಲಿ ರಂಗಭೂಮಿಯ ವಿಸ್ತೃತ ರೂಪವಾಗಿ ಸಿನಿಮಾ ಒದಗಿಬಂದೀತೆಂದು ಕೆಲವು ಉತ್ಸಾಹಿ ಯುವಕ–ಯುವತಿಯರು ಭಾವಿಸಿದ್ದರು. ಅವರಲ್ಲಿ ಓಂಪುರಿ ಕೂಡ ಒಬ್ಬರು. ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್‌ಎಸ್‌ಡಿ) ಸಹಪಾಠಿಯಾಗಿದ್ದ ನಾಸಿರುದ್ದೀನ್ ಶಾ ಪುಸಲಾಯಿಸಿದ್ದರಿಂದ ಪುಣೆಯ ‘ಫಿಲ್ಮ್‌ ಅಂಡ್‌ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ’ಗೆ (ಎಫ್‌ಟಿಐಐ) ಓಂಪುರಿ ಸೇರಿದ್ದು. ಆಗ ಗಿರೀಶ ಕಾರ್ನಾಡರು ಎಫ್‌ಟಿಐಐ ನಿರ್ದೇಶಕರಾಗಿದ್ದರು. ಅವರೇ ಈ ರಂಗಪ್ರತಿಭೆಯನ್ನು ಆಯ್ಕೆ ಮಾಡಿದ್ದು.
 
ಎಫ್‌ಟಿಐಐನಿಂದ ಹೊರಬಂದ ನಂತರ ಎದುರಾದದ್ದು ಸವಾಲುಗಳು. ಚಿತ್ರಗಳಲ್ಲಿ ಅವಕಾಶ ಸಿಗುವುದು ಕಷ್ಟ ಎಂದು ಬೇಗ ತಿಳಿಯಿತು. ಅಮರೀಶ್‌ಪುರಿ, ಸ್ಮಿತಾ ಪಾಟೀಲ್, ಪಂಕಜ್ ಕಪೂರ್, ಶಬಾನಾ ಆಜ್ಮಿ– ಇಂಥ ಎಫ್‌ಟಿಐಐನ 16 ಪದವೀಧರರು ಪರ್ಯಾಯ ಚಿತ್ರಗಳ ಅಲೆ ಎಬ್ಬಿಸುವ ಉತ್ಸಾಹದಲ್ಲಿದ್ದರು. ಇವರನ್ನೆಲ್ಲ ‘ಟೂಲ್‌’ಗಳು ಎಂದು ಪರಿಗಣಿಸಿದ ನಿರ್ದೇಶಕರಲ್ಲಿ ಶಾಮ್ ಬೆನಗಲ್, ಮಣಿ ಕೌಲ್, ಕುಮಾರ್ ಸಾಹ್ನಿ ಮುಖ್ಯರಾದವರು.
 
1976ರಲ್ಲಿ ‘ಘಾಶಿರಾಮ್ ಕೊತ್ವಾಲ್’ ಮರಾಠಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಪರ್ಯಾಯ ಅಲೆ ಎಬ್ಬಿಸುವ ಉಮೇದಿಗೆ ‘ಓಂಪುರಿ’ ಮುನ್ನುಡಿ ಬರೆದದ್ದು. 1977ರಿಂದ 1983ರ ಅವಧಿಯಲ್ಲಿ ‘ಭೂಮಿಕಾ’, ‘ಆಕ್ರೋಶ್’, ‘ಭಾವ್ನಿ ಭವಾಯ್’ (ಗುಜರಾತಿ ಚಿತ್ರ), ‘ಸದ್ಗತಿ’ (ಸತ್ಯಜಿತ್ ರೇ ನಿರ್ದೇಶಿಸಿದ್ದು), ‘ಆರೋಹಣ್’, ‘ಅರ್ಧ ಸತ್ಯ’ ತೆರೆಕಂಡವು. ಅವಕಾಶ ಹಾಗೂ ಚಳವಳಿಯ ಭಾಗವಾಗಿ ಈ ಸಿನಿಮಾಗಳು ಓಂಪುರಿ ಅವರಿಗೆ ಮುಖ್ಯವಾದವೇ ವಿನಾ ಆರ್ಥಿಕವಾಗಿ ಏನೂ ಗಿಟ್ಟಲಿಲ್ಲ. ರಿಚರ್ಡ್ ಅಟೆನ್‌ಬರೊ ನಿರ್ದೇಶಿಸುತ್ತಿದ್ದ ‘ಗಾಂಧಿ’ (1982) ಚಿತ್ರದ ಸಣ್ಣ ಪಾತ್ರ ಓಂಪುರಿ ಅವರ ಕಿಸೆಗೆ ಒಂದಿಷ್ಟು ಹಣ ಕೊಟ್ಟಿತೆನ್ನಬೇಕು.
 
ಪರ್ಯಾಯ ಅಲೆಗಳನ್ನು ಎಬ್ಬಿಸಿದ ಮೇಲೆ ಜನಪ್ರಿಯ ಚಿತ್ರಗಳ ಕಡೆಗೂ ಹೊರಳಿಕೊಂಡವರಲ್ಲಿ ನಾಸಿರುದ್ದೀನ್ ಶಾ ಹಾಗೂ ಓಂಪುರಿ ಮುಖ್ಯರಾದವರು. ನಾಸಿರುದ್ದೀನ್ ಅವರಿಗೆ ಬಾಲಿವುಡ್ ಸಿನಿಮಾ ಭಾಗವಾಗುವ ಚಹರೆ ಇತ್ತು. ಆದರೆ, ಓಂಪುರಿ ಹಾಗೂ ಸದಾಶಿವ್ ಅಮ್ರಾಪುರ್‌ಕರ್ ತರಹದವರಿಗೆ ಅಂಥ ಮುಖ ಇರಲಿಲ್ಲ. ಈ ಇಬ್ಬರೂ ತಮ್ಮೊಳಗಿನ ಪ್ರತಿಭೆಯನ್ನೇ ನೆಚ್ಚಿಕೊಂಡು ಜನಪ್ರಿಯ ಚಿತ್ರಗಳ ಭಾಗವಾದರು ಹಾಗೂ ಗೆದ್ದರು.
 
‘ಅರ್ಧ ಸತ್ಯ’ ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತಾದರೂ ಒಂದೇ ಧಾಟಿಯ ಸಿನಿಮಾಗಳಲ್ಲಿ ಉಳಿಯಲು ಓಂಪುರಿ ತಯಾರಿರಲಿಲ್ಲ. ‘ಹಣಕ್ಕಾಗಿ ನಾನು ಜನಪ್ರಿಯ ಚಿತ್ರಗಳಲ್ಲಿ ನಟಿಸಲು ನಿರ್ಧರಿಸಿದ್ದು. ಆದರೆ, ನಾನು ನಂಬಿದ ಅಭಿನಯದ ಮೂಲತತ್ತ್ವವನ್ನು ಎಂದೂ ಮೀರಲಿಲ್ಲ. ಅಷ್ಟು ಎಚ್ಚರಿಕೆಯನ್ನು ಮೈಗೂಡಿಸಿಕೊಂಡಿದ್ದೆ’ ಎಂದು ಒಮ್ಮೆ ಅವರು ಹೇಳಿದ್ದರು.
 
‘ಮಾಚಿಸ್’, ‘ಗುಪ್ತ್’, ‘ಚಾಚಿ 420’, ‘ಧೂಪ್’, ‘ಸಿಂಗ್ ಈಸ್ ಕಿಂಗ್’, ‘ಡರ್ಟಿ ಪಾಲಿಟಿಕ್ಸ್‌’ ತರಹದ ಜನಪ್ರಿಯ ಹಿಂದಿ ಚಿತ್ರಗಳಲ್ಲಿ ಓಂಪುರಿ ನಟಿಸಿದರು. ಕನ್ನಡದಲ್ಲಿ ಓಂಪ್ರಕಾಶ್ ರಾವ್ ನಿರ್ದೇಶನದ ‘ಎ.ಕೆ.47’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇ ಅಲ್ಲದೆ ಅವರೇ ಡಬ್ ಕೂಡ ಮಾಡಿದ್ದರು. ‘ಧ್ರುವ’ ಅವರ ಅಭಿನಯದ ಕನ್ನಡದ ಇನ್ನೊಂದು ಜನಪ್ರಿಯ ಚಿತ್ರ. ಇದೇ ವರ್ಷ ತೆರೆಕಂಡ ‘ಸಂತೆಯಲ್ಲಿ ನಿಂತ ಕಬೀರ’ದಲ್ಲಿಯೂ ನಟಿಸಿದ್ದರು. ಬಿಡುಗಡೆಗೆ ಸಿದ್ಧವಾಗಿರುವ ‘ಟೈಗರ್’ ಎಂಬ ಕನ್ನಡ ಚಿತ್ರದಲ್ಲೂ ಅವರದ್ದೊಂದು ಪಾತ್ರವಿದೆ. ‘ತಬ್ಬಲಿಯು ನೀನಾದೆ ಮಗನೆ’ ಪರ್ಯಾಯ ಅಲೆಯ ಭಾಗವಾಗಿದ್ದ ಅವರ ನಟನೆಯ ಇನ್ನೊಂದು ಚಿತ್ರ.
 
‘ಸಿಟಿ ಆಫ್ ಜಾಯ್’, ‘ವುಲ್ಫ್’, ‘ಘೋಸ್ಟ್‌ ದಿ ಅಂಡ್‌ ದಿ ಡಾರ್ಕ್‌ನೆಸ್’, ‘ವಾರ್’ ಓಂಪುರಿ ಅಭಿನಯಿಸಿದ ಹಾಲಿವುಡ್ ಚಿತ್ರಗಳು. ಅಮೆರಿಕ ಹಾಗೂ ಬ್ರಿಟಿಷ್ ನಿರ್ಮಾಣದ ಚಿತ್ರಗಳಷ್ಟೇ ಅಲ್ಲದೆ ಪಾಕಿಸ್ತಾನಿ ಚಿತ್ರವೊಂದರಲ್ಲಿಯೂ ಅವರು ನಟಿಸಿದರು.
 
ಎಫ್‌ಟಿಐಐನಲ್ಲಿ ಅವರ ಅನುಭವ ಪಾಠ ಕೇಳಿದ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದೆ. ಮೈಸೂರಿನ ವಿಕಾಸ್ ಕೂಡ ಮೂರು ಸಲ ಓಂಪುರಿ ಅವರನ್ನು ಹತ್ತಿರದಿಂದ ಕಂಡವರು. ಹೊಸ ಮಾಧ್ಯಮವಾಗಿ ಸಿನಿಮಾ ತಮಗೆ ಒದಗಿಬಂದದ್ದು ಹಾಗೂ ಹಟಕ್ಕೆ ಬಿದ್ದಂತೆ ಅದರ ಭಾಗವಾಗಿ ರಂಗಕರ್ಮಿಗಳು ಪಡಿಪಾಟಲು ಪಟ್ಟಿದ್ದನ್ನು ಓಂಪುರಿ ಭಾವುಕರಾಗಿ ಹಂಚಿಕೊಂಡಿದ್ದನ್ನು ವಿಕಾಸ್ ಸ್ಮರಿಸುತ್ತಾರೆ.
 
ಎಫ್‌ಟಿಐಐನಲ್ಲೇ ಕಲಿತ ಸಿನಿಮಾಟೊಗ್ರಫರ್ ಜಿ.ಎಸ್. ಭಾಸ್ಕರ್, ‘ಗಾಂಧಿ’ ಚಿತ್ರಕ್ಕೂ ಕೆಲಸ ಮಾಡಿದವರು. ಅವರು ಇತ್ತೀಚೆಗೆ ತಾವು ಕೇಳಿದ ಈ ಘಟನೆಯನ್ನು ನೆನಪಿಸಿದರು: ಎಫ್‌ಟಿಐಐ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಚಿತ್ರೀಕರಣಕ್ಕೆಂದು ಪುಣೆಯಲ್ಲಿದ್ದ ಓಂಪುರಿ ಕಿವಿಗೆ ಈ ಸುದ್ದಿ ಮುಟ್ಟಿತು. ಸಂಜೆ ಚಿತ್ರೀಕರಣ ಮುಗಿದ ಮೇಲೆ ಪ್ರತಿಭಟನೆ ನಡೆಯುತ್ತಿದ್ದ ಜಾಗಕ್ಕೆ ಬಂದರು. ‘ಹಸಿದುಕೊಂಡಿರಬೇಡಿ’ ಎಂದು ಅಲ್ಲಿದ್ದವರ ಕೈಗೆ ಒಂದಿಷ್ಟು ಹಣ ಕೊಟ್ಟು, ‘ಒಳ್ಳೆಯದಾಗಲಿ’ ಎನ್ನುತ್ತಾ ನಡೆದುಹೋದರು.
 
ಅವರ ಇಂಥ ಪಿತೃವಾತ್ಸಲ್ಯ ಕಂಡ ರಂಗಕರ್ಮಿಗಳು, ಸಿನಿಮಾ ವಿದ್ಯಾರ್ಥಿಗಳು ಕೆಲವರಿದ್ದಾರೆ. ಆದರೆ, ಓಂಪುರಿ ವೈಯಕ್ತಿಕ ಬದುಕು ಮಾತ್ರ ಸುಖಮಯವಾಗಿರಲಿಲ್ಲ. ಅನ್ನು ಕಪೂರ್ ಸಹೋದರಿ ಸೀಮಾ ಕಪೂರ್ ಅವರನ್ನು 1991ರಲ್ಲಿ ವಿವಾಹವಾದರು. ಎಂಟು ತಿಂಗಳಿಗೇ ಆ ಸಂಬಂಧ ಕಡಿದುಹೋಯಿತು. ಎರಡು ವರ್ಷಗಳ ನಂತರ ಪತ್ರಕರ್ತೆ ನಂದಿತಾ ಅವರನ್ನು ಮದುವೆಯಾದರು. ಮಗ ಇಶಾನ್ ಅಪ್ಪ–ಅಮ್ಮನ ಎಷ್ಟೋ ಪ್ರೀತಿ ಹಾಗೂ ಜಗಳಗಳಿಗೆ ಸಾಕ್ಷಿಯಾಗಿದ್ದಾರೆ.
 
ಒರಟು ಮುಖವಿಟ್ಟುಕೊಂಡೂ ಅಭಿನಯ ಪ್ರತಿಭೆ ಹಾಗೂ ತಮ್ಮದೇ ಅಪರೂಪದ ಶಾರೀರದ ಮೂಲಕ ನಾಲ್ಕು ದಶಕ ಚಿತ್ರರಂಗದಲ್ಲಿ ಹಲವು ನೆನಪುಗಳನ್ನು ಉಳಿಸಿದ ಓಂಪುರಿ ಅವರನ್ನು ಯಾರಿಗೂ ಹೋಲಿಸಲಂತೂ ಆಗದು.  
 
**
ವೈವಿಧ್ಯಕ್ಕೆ ತೆರೆದ ಮನ
ಸದಾ ವೈವಿಧ್ಯಕ್ಕೆ ತೆರೆದುಕೊಂಡವರು. ‘ವಾರ್’ ಹಾಲಿವುಡ್ ಸಿನಿಮಾದಲ್ಲಿ ಪಾಕಿಸ್ತಾನದ ಜನರಲ್ ಜಿಯಾ ಉಲ್ ಹಕ್ ಪಾತ್ರಕ್ಕೆ ಜೀವತುಂಬಲು ಹಿಂದೇಟು ಹಾಕಿರಲಿಲ್ಲ. ‘ಮೈ ಸನ್ ಫನಟಿಕ್’, ‘ಈಸ್ಟ್ ಈಸ್ ಈಸ್ಟ್’, ‘ಪೆರೋಲ್ ಆಫೀಸರ್’ ಅವರು ನಟಿಸಿದ ಬ್ರಿಟಿಷ್ ನಿರ್ಮಾಣದ ಚಿತ್ರಗಳು. 1980ರ ದಶಕದ ಕೊನೆಯಲ್ಲಿ ಧಾರಾವಾಹಿಗಳಲ್ಲೂ ಛಾಪು ಮೂಡಿಸಿದರು. ‘ಕಕ್ಕಾಜಿ ಕಹೇಂ’ ಧಾರಾವಾಹಿಯಲ್ಲಿ ಪಾನ್ ಜಗಿಯುತ್ತಾ ಮಾತನಾಡುವ ಕಕ್ಕಾಜಿ ಪಾತ್ರವನ್ನು ಆ ಕಾಲದ ಟಿ.ವಿ. ಧಾರಾವಾಹಿ ಅಭಿಮಾನಿಗಳು ಮರೆಯಲಾರರು. ‘ಮಿಸ್ಟರ್ ಯೋಗಿ’ ಧಾರಾವಾಹಿಯಲ್ಲಿ ಸೂತ್ರಧಾರನಾಗಿ ಅವರು ಕಾಲೆಳೆದ ಪ್ರಸಂಗಗಳನ್ನು ನೆನಪಿಟ್ಟುಕೊಂಡವರೂ ಇದ್ದಾರೆ. ಗೋವಿಂದ್ ನಿಹಲಾನಿ ಟಿ.ವಿಗೆಂದೇ ಸಿದ್ಧಪಡಿಸಿದ ‘ತಮಸ್’ನಲ್ಲಿ ಕೂಡ ಓಂಪುರಿ ನಟಿಸಿದರು. 
 
ಧಾರಾವಾಹಿ ಮೂಲಕ ಹಾಸ್ಯ ರಸವನ್ನೂ ಉಕ್ಕಿಸಬಲ್ಲ ನಟ ತಾನೆಂದು ಸಾಬೀತುಪಡಿಸಿದ ಅವರು, ‘ಜಾನೆ ಭಿ ದೊ ಯಾರೋಂ’, ‘ಚಾಚಿ 420’, ‘ಹೇರಾ ಫೇರಿ’, ‘ಚೋರ್ ಮಚಾಯ್ ಶೋರ್’, ‘ಮಾಲಾಮಾಲ್ ವೀಕ್ಲಿ’ ಚಿತ್ರಗಳಲ್ಲಿಯೂ ಹಾಸ್ಯಪಾತ್ರಕ್ಕೂ ತಾವು ಸೈ ಎನ್ನುವುದನ್ನು ಸಾಬೀತು ಮಾಡಿದರು.
 
***
ಓಂಪುರಿ ಇನ್ನಿಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ.  ಈಚೆಗೆ ಅವರು ನನ್ನನ್ನು ಭೇಟಿ ಮಾಡಿದ್ದರು. ಅಷ್ಟೊಂದು ಖುಷಿಯಿಂದ ಇರುತ್ತಿದ್ದ ಅವರು ದೂರ ಹೋಗಲು ಹೇಗೆ ಸಾಧ್ಯ?
-ಅಮಿತಾಭ್ ಬಚ್ಚನ್, ಹಿರಿಯ ನಟ
 
***
ಓಂಪುರಿ, ನೀವು ನಮ್ಮನ್ನು ಬಹುಬೇಗ ತೊರೆದು ಹೋಗಿದ್ದೀರಿ. ನಿಮ್ಮ ಜೊತೆಗಿನ ಖುಷಿ, ತಮಾಷೆ, ಚರ್ಚೆಯ ಕ್ಷಣಗಳು ನನ್ನ ಮನಸ್ಸಿನಲ್ಲಿ ಸ್ಫುಟವಾಗಿವೆ.
-ಶಬಾನಾ ಆಜ್ಮಿ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT