ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಜ್ಞಾನದ ಹರವಿಗೆ ಪೂರಕ

ಅಕ್ಷರ ಗಾತ್ರ

ಪರೀಕ್ಷೆ ಸಮೀಪಿಸಿರುವ ಈ ವೇಳೆಯಲ್ಲಿ ಗುಂಪು ಅಧ್ಯಯನ ಅಥವಾ ಚರ್ಚೆಯನ್ನು ಒಂದು ಉತ್ತಮ ಅಭ್ಯಾಸ ಕ್ರಮವೆಂದು ಪರಿಗಣಿಸಲಾಗಿದೆ. ‘ಒಬ್ಬರಿಗಿಂತ ಇಬ್ಬರು ಉತ್ತಮ, ಇಬ್ಬರಿಗಿಂತ ಮೂವರು ಉತ್ತಮ’ ಎಂಬ ತತ್ವದಡಿಯಲ್ಲಿ ಒಬ್ಬರಿಂದ ಬಗೆಹರಿಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಕಠಿಣ ವಿಷಯಗಳನ್ನು ಸುಲಭವಾಗಿ ಅರಿತುಕೊಳ್ಳಲು ಇದು ಸಹಕರಿಸುತ್ತದೆ.

ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ನಿರ್ದಿಷ್ಟ ವಿಷಯ ಹಾಗೂ ಘಟಕಕ್ಕೆ ಸಂಬಂಧಿಸಿ ತಮ್ಮ ವಿಚಾರ, ಸಮಸ್ಯೆಗಳ ಕುರಿತು ಚಿಂತನ–ಮಂಥನ ನಡೆಸುವುದು ‘ಗುಂಪು ಅಧ್ಯಯನ’ ಅಥವಾ ‘ಚರ್ಚೆ’. ಈ ಗುಂಪು 2ರಿಂದ 4 ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದರೆ ಉತ್ತಮ.

ವಿದ್ಯಾರ್ಥಿಗಳು ಗುಂಪು ಅಧ್ಯಯನಕ್ಕೆ ಸಂಬಂಧಿಸಿ ಸಮಾನಮನಸ್ಕರಾಗಿರಬೇಕು. ಯಾವ ವಿಷಯದ ಕುರಿತು, ಯಾವಾಗ, ಎಲ್ಲಿ ಚರ್ಚಿಸಬೇಕು ? ಅದಕ್ಕೆ ಏನೇನು ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ? ಪೂರ್ವಭಾವಿ ಅಧ್ಯಯನ ಹೇಗಿರಬೇಕು ? ಎಂಬುದನ್ನು ಸರಿಯಾಗಿ ಯೋಚಿಸಿ, ಯೋಜಿಸಿಕೊಳ್ಳಬೇಕು.

ಗುಂಪು ಅಧ್ಯಯನದಿಂದ ವೈಯಕ್ತಿಕ ಅಧ್ಯಯನ ಕ್ರಮಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಗುಂಪು ಅಧ್ಯಯನ ಕೈಗೊಳ್ಳಲು ನಿರ್ದಿಷ್ಟ ಸ್ಥಳ ಗುರುತಿಸುವುದು ಮುಖ್ಯ.

ಈ ಸ್ಥಳ ನಿಮ್ಮ ಶಾಲೆ, ಕಾಲೇಜು, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ತರಗತಿ, ನಿಮ್ಮ ಅಥವಾ ಸ್ನೇಹಿತನ ಮನೆ, ದೇಗುಲದ ಆವರಣ, ತೋಟದಲ್ಲಿರುವ ಮರದ ನೆರಳು, ಉದ್ಯಾನ... ಹೀಗೆ ಯಾವುದಾದರೊಂದು ಶಾಂತಿಯುತ, ಗದ್ದಲದಿಂದ ಮುಕ್ತವಾದ ಸ್ಥಳವಾಗಿರಬೇಕು.

ಸಾಮಾನ್ಯವಾಗಿ ಬೆಳಗಿನ 10ರಿಂದ ಮಧ್ಯಾಹ್ನ 1 ಅಥವಾ ಸಂಜೆ 5ರಿಂದ 8ರವರೆಗಿನ ಅವಧಿ ಗುಂಪು ಅಧ್ಯಯನಕ್ಕೆ ಉತ್ತಮವಾದುದು. ವೇಳೆಗೆ ಅನುಗುಣವಾಗಿ ಸರಿ ಹೊಂದುವ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಆ ಸ್ಥಳದಲ್ಲಿ ಗಾಳಿ, ಬೆಳಕು, ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರಿನ ಲಭ್ಯತೆ ಸಮರ್ಪಕವಾಗಿರಬೇಕು. ನೆಲದ ಮೇಲೆ ವೃತ್ತಾಕಾರದಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುವಂತೆ ಸರಿಯಾದ ಭಂಗಿಯಲ್ಲಿ ಕುಳಿತು ಚರ್ಚೆ ನಡೆಸುವುದು ಉತ್ತಮ. ಕೂರಲು ಪೀಠೋಪಕರಣಗಳಿದ್ದರೂ ಆದೀತು.

ಈ ನಿಯಮಗಳನ್ನು ಪಾಲಿಸಿದರೆ ಸೂಕ್ತ
* ಗುಂಪು ಅಧ್ಯಯನದಲ್ಲಿ ತೊಡಗುವ ಮುನ್ನ ನಿರ್ಧರಿತ ವಿಷಯಕ್ಕೆ ಸಂಬಂಧಿಸಿ, ನಿಮ್ಮ ಬಳಿ ಇರುವ ಪಠ್ಯವಸ್ತು, ಅಧ್ಯಯನ ಸಾಮಗ್ರಿಗಳನ್ನು ಮರೆಯದೇ ಕೊಂಡೊಯ್ಯಿರಿ.

* ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ವಿಷಯ ಮಂಡಿಸಿ, ಪ್ರಶ್ನಿಸಿ, ಉತ್ತರಿಸಿ... ಮೌನಿಯಾದರೆ ಗುಂಪು ಅಧ್ಯಯನ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ಗುಂಪಿನಲ್ಲಿ ಗೋವಿಂದ ಅನ್ನದಿರಿ.

* ಚರ್ಚೆಯಲ್ಲಿ ಇತರರಿಗೂ ಪಾಲ್ಗೊಳ್ಳಲು ಅವಕಾಶ ನೀಡಿ. ಸಹಪಾಠಿ, ಸ್ನೇಹಿತರ ಅಭಿಪ್ರಾಯ ಮತ್ತು ಪ್ರಶ್ನೆ–ಉತ್ತರಗಳನ್ನು ಗೌರವಿಸಿ.

* ಆಯಾ ಪರೀಕ್ಷಾ ಕ್ರಮದ ಅಗತ್ಯಕ್ಕೆ ತಕ್ಕಂತೆ ಚರ್ಚೆಯಲ್ಲಿ ವಸ್ತುನಿಷ್ಠ, ಸಂಕ್ಷಿಪ್ತ ಹಾಗೂ ಸವಿವರ ಮಾದರಿಯ ಪ್ರಶ್ನೆಗಳನ್ನು ಕೇಳಿ, ಅವುಗಳಿಗೆ ಉತ್ತರ ಕಂಡುಕೊಳ್ಳಿ. ಉತ್ತರ ಗೊತ್ತಿದ್ದರೆ ನೀವೇ ಹೇಳಿ.

* ಸ್ನೇಹಿತರ ತಪ್ಪುಗಳನ್ನು ಮರೆಯದೇ ಸರಿಪಡಿಸಿ. ಆದರೆ, ಆ ಸರಿಪಡಿಸುವಿಕೆ ಅವರ ಮನಸ್ಸನ್ನು ನೋಯಿಸದಿರಲಿ.

* ಒಂದು ಪ್ರಶ್ನೆ/ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದರೆ ಹೆಚ್ಚಿನ ವಿವರಗಳನ್ನು ಸೇರಿಸಿ. ಉತ್ತರಕ್ಕೆ ಎಲ್ಲರೂ ‘ಓಕೆ’ ಅಂದಾಗ ಮುಂದಿನ ಪ್ರಶ್ನೆ / ವಿಷಯಕ್ಕೆ ಹೋಗಿ.

* ತಕ್ಷಣವೇ ಹೊಳೆದ ವಿಷಯ ಸಂಬಂಧಿತ ‘ವಿಚಾರ ಪ್ರಚೋದಕ’ ಪ್ರಶ್ನೆ ಚರ್ಚೆಯನ್ನು ಆಸಕ್ತಿದಾಯಕವಾಗಿಸುತ್ತದೆ. ಸಂದರ್ಭೋಚಿತ ಸಹಸಂಬಂಧ, ಉದಾಹರಣೆಗಳು ವಿಷಯಧಾರಣೆ, ಸ್ಮರಣೆಯ ಪ್ರಮಾಣವನ್ನು ಹೆಚ್ಚಿಸುತ್ತವೆ.

* ಸರಿ ಉತ್ತರ ಹೇಳಿದೆ ಎಂಬ ‘ಅಹಂಕಾರ’ ತಪ್ಪು ಉತ್ತರ ಹೇಳಿದೆನೆಂಬ ‘ಕೀಳರಿಮೆ’ ಬೇಡ. ನಿಮಗೆ ಕಠಿಣವೆನಿಸಿದ ಸಮಸ್ಯೆಗೆ ನಿಮ್ಮ ಸ್ನೇಹಿತರ ಬಳಿ ಪರಿಹಾರವಿರಬಹುದು.

*ಚರ್ಚೆಯಲ್ಲಿ ತೂರಿಬರುವ ಹೊಸ ವಿಷಯ, ಮುಖ್ಯಾಂಶಗಳನ್ನು ಮರೆಯದೇ ಟಿಪ್ಪಣೆ ಮಾಡಿಕೊಳ್ಳಿ.

* ಚರ್ಚೆಯಲ್ಲಿ ವಾದ–ವಿವಾದ ಬೇಡ. ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕಂಡುಕೊಳ್ಳಿ. ಸಮಸ್ಯೆಯನ್ನು ತಾರ್ಕಿಕವಾಗಿ ಪರಿಹರಿಸಿಕೊಳ್ಳಿ.

* ಚರ್ಚೆಯಲ್ಲಿ  ‘ಪಠ್ಯಕ್ರಮ’ ವ್ಯಾಪ್ತಿ ಮೀರಿದ ಅನಗತ್ಯ ವಿಷಯಗಳ ಕುರಿತು ಪ್ರಸ್ತಾವ ಸಲ್ಲ. ಇದರಿಂದ ಚರ್ಚೆ ‘ಹರಟೆ’ ಆಗುವ ಸಾಧ್ಯತೆ ಇದೆ.

* ಗುಂಪು ಅಧ್ಯಯನ ವೈಯಕ್ತಿಕ ಅಧ್ಯಯನದ ಏಕತಾನತೆ ಹೋಗಲಾಡಿಸಿ, ಆತ್ಮವಿಶ್ವಾಸ, ಅಭಿವ್ಯಕ್ತಿ ಸಾಮರ್ಥ್ಯ ವೃದ್ಧಿಸುತ್ತದೆ. ವಿಷಯ ಪುನರಾವರ್ತನೆಯ ಮೂಲಕ ಅಧ್ಯಯನವನ್ನು ಗಟ್ಟಿಗೊಳಿಸುತ್ತದೆ. ಇದು ‘Study together’ ತತ್ವದಡಿಯಲ್ಲಿ ರೂಪಿತವಾದ ‘Team work’ ಎಂಬುದನ್ನು ಮರೆಯದಿರಿ.

ಎಲ್ಲರಿಗೂ ಉಪಯುಕ್ತ ಚರ್ಚೆ
ಪ್ರೌಢಶಾಲಾ ಹಂತದ ಮಕ್ಕಳಿಗೆ ಪರೀಕ್ಷಾ ದೃಷ್ಟಿಯಿಂದ ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿಷಯಾನುಸಾರ ಆವರ್ತನ (Rotation) ಮಾದರಿಯಲ್ಲಿ ನಡೆಸುವ ಚರ್ಚೆ ಪರಿಣಾಮಕಾರಿಯಾಗಿರುತ್ತದೆ. ಇಲ್ಲಿಯೂ ಸಹ 5ರಿಂದ 6 ವಿದ್ಯಾರ್ಥಿಗಳನ್ನು ಗುಂಪಿನಲ್ಲಿ ವಿಭಜಸಿ, ಚರ್ಚೆಗೆ ಅವಕಾಶ ಕಲ್ಪಿಸಬೇಕು. ಈ ಹಂತದಲ್ಲಿ ಚರ್ಚೆ ಸಾಮಾನ್ಯವಾಗಿ ಪ್ರಶ್ನೋತ್ತರಕ್ಕೆ ಸೀಮಿತವಾಗಿದ್ದು, ಬೋಧನಾ ಉದ್ದೇಶಗಳಲ್ಲಿ ‘ಜ್ಞಾನ’ ವಲಯಕ್ಕೆ ಪೂರಕವಾಗಿರಬೇಕು.

ಕಾಲೇಜು ಹಂತದ ವಿದ್ಯಾರ್ಥಿಗಳು ತಮ್ಮ ತರಗತಿ, ಪಠ್ಯಕ್ರಮಕ್ಕೆ ಸಂಬಂಧಿಸಿದ ಆಧಾರ ಗ್ರಂಥಗಳನ್ನು ಬಳಸಿ, ಸ್ವತಂತ್ರವಾಗಿ ಅಧ್ಯಾಯವಾರು ಚರ್ಚೆಯಲ್ಲಿ ತೊಡಗಬೇಕು.ಇಲ್ಲಿ ಚರ್ಚೆ ಬರಿಯ ಪ್ರಶ್ನೋತ್ತರಕ್ಕೆ ಸೀಮಿತವಾಗಿರದೆ ಉದಾಹರಣೆ, ವಿವರಣೆ ಒಳಗೊಂಡಿರಬೇಕು. ಬೋಧನಾ ಉದ್ದೇಶಗಳಲ್ಲಿ ‘ತಿಳಿವಳಿಕೆ’ ವಲಯಕ್ಕೆ ಪೂರಕವಾಗಿರಬೇಕು.

ವೃತ್ತಿಶಿಕ್ಷಣ ವಿದ್ಯಾರ್ಥಿಗಳು ‘ಅನ್ವಯಿಕ’ ಮಾದರಿಯ ಚರ್ಚೆ ನಡೆಸಬೇಕು. ಇಲ್ಲಿ ಚರ್ಚೆ ಸಹಸಂಬಂಧಗಳಿಂದ ಕೂಡಿದ್ದು, ವಿಶ್ಲೇಷಣೆ, ಸಂಶ್ಲೇಷಣೆಗೆ ಅವಕಾಶವಿರಬೇಕು. ತಾವು ಚರ್ಚಿಸುವ ‘ಸೈದ್ಧಾಂತಿಕ ಪಠ್ಯಕ್ರಮ’ದ ಅನ್ವಯಿಕ ಕ್ರಮಗಳು ಹಾಗೂ ಶೈಕ್ಷಣಿಕ ನಿಹಿತಾರ್ಥಗಳಿಗೆ ಹೆಚ್ಚಿನ ಒತ್ತು ನೀಡಬೇಕು.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳ ಚರ್ಚೆ ‘ಕೌಶಲ’ ಆಧರಿತವಾಗಿರಬೇಕು. ವಸ್ತುನಿಷ್ಠತೆ, ವಿಷಯ ನಿರೂಪಣೆ, ಪಠ್ಯದ ಆಯ್ಕೆ, ಮಾದರಿ ಪ್ರಶ್ನೋತ್ತರ ಆಧರಿಸಿದ ಚರ್ಚೆ ಇದಾಗಿರಬೇಕು. ಇಲ್ಲಿ ವ್ಯಾಕರಣ, ಭಾಷಾಜ್ಞಾನ, ಅಭಿವೃಕ್ತಿ, ಮಾನಸಿಕ ಸಾಮರ್ಥ್ಯ, ಸಾಮಾನ್ಯಜ್ಞಾನ ಹಾಗೂ ಐಚ್ಛಿಕ ವಿಷಯಾಧಾರಿತ ಪ್ರತ್ಯೇಕ ಗುಂಪುಗಳಲ್ಲಿ ಚರ್ಚೆಯನ್ನು ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT