ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಕಸದ ಮಾಫಿಯಾ ಎದುರು ಮಂಡಿಯೂರಿದ ಸರ್ಕಾರ

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

‘ಅಧಿಕಾರಕ್ಕೆ ಬಂದರೆ, ಆರು ತಿಂಗಳ ಒಳಗಾಗಿ ಬೆಂಗಳೂರಿನ ಕಸದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುತ್ತೇವೆ’. 2013ರ ಚುನಾವಣೆ ವೇಳೆ ತಾನು ನೀಡಿದ್ದ ಈ ವಾಗ್ದಾನ ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮರೆತೇ ಹೋದಂತಿದೆ. ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಕಳೆದರೂ ಈ ಸರ್ಕಾರ ಕಸದ ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನಷ್ಟು ಹದಗೆಡಿಸಿದೆ.

ಇದು ಸಾಲದು ಎಂಬಂತೆ ಈಗ ಬೆಂಗಳೂರಿನ ಬಡಪಾಯಿ ನಾಗರಿಕರ ಮೇಲಿನ ತೆರಿಗೆ ಹೊರೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ. ಕಸದ ಶುಲ್ಕ ಹೆಚ್ಚಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸೂಚಿಸಿದೆ. ಬೆಂಗಳೂರಿನಲ್ಲಂತೂ ಕಸ ಸಾಗಣೆ ಬಹುದೊಡ್ಡ ಮಾಫಿಯಾ. ಅದರಲ್ಲಿ ಯಾರು ಯಾರಿಗೆ ಪಾಲಿದೆ ಎಂಬುದು ಜಗಜ್ಜಾಹೀರು.

ಈಗಾಗಲೇ  ಆಸ್ತಿ ತೆರಿಗೆ ವಸೂಲಿ ಜತೆಗೇ ಕಸ ನಿರ್ವಹಣಾ ವೆಚ್ಚದ ಹೆಸರಿನಲ್ಲಿ ಬಿಬಿಎಂಪಿ ಸಂಗ್ರಹಿಸುತ್ತಿರುವ ಶುಲ್ಕ ಈ ಬಕಾಸುರರ  ಹೊಟ್ಟೆ ತುಂಬಿಸಲು ಸಾಲುತ್ತಿಲ್ಲ. ಅದಕ್ಕಾಗಿಯೇ ಶುಲ್ಕವನ್ನು ಮತ್ತಷ್ಟು ಹೆಚ್ಚಿಸಲು ಪಾಲಿಕೆ ಮತ್ತು ಸರ್ಕಾರ ಎರಡೂ ಅತಿ ಆತುರ ತೋರಿಸುತ್ತಿವೆ. ಈಗ ತಿಂಗಳಿಗೆ ನಿರ್ದಿಷ್ಟ ಮೊತ್ತ ನಿಗದಿ ಮಾಡಿ ಕಸದ ಶುಲ್ಕ ಎಂದು ಆಸ್ತಿ ತೆರಿಗೆ ಜತೆಗೆ ಸಂಗ್ರಹಿಸಲಾಗುತ್ತಿದೆ.

ಇದನ್ನು ಪರಿಷ್ಕರಿಸಿ ಆಸ್ತಿ ತೆರಿಗೆಯ ಶೇ 15ರಷ್ಟನ್ನು ಕಸದ ಸೆಸ್‌ ಎಂದು ವಿಧಿಸಲು ಹೊರಟಿವೆ. ಈ ಮೂಲಕ ವರ್ಷಕ್ಕೆ ₹ 200 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿವೆ. ಈ ಕಸ ಜನರ ಪಾಲಿಗೆ ದುರ್ನಾತ ಬೀರಿದರೆ, ಅನೇಕ ಜನಪ್ರತಿನಿಧಿಗಳು ಮತ್ತು ಬಿಬಿಎಂಪಿಯ ಭ್ರಷ್ಟ ಅಧಿಕಾರಿಗಳ ಪಾಲಿಗೆ ಮಾತ್ರ ಚಿನ್ನದ ಗಣಿ ಇದ್ದಂತೆ.

ಕಸ ಸಾಗಣೆ ಗುತ್ತಿಗೆದಾರರು ಮತ್ತು ಭ್ರಷ್ಟರ ಅಪವಿತ್ರ ಮೈತ್ರಿಗೆ ಇದು ಜೀವಂತ ನಿದರ್ಶನ. ಲೆಕ್ಕ ಇಲ್ಲದೆ ನೂರಾರು ಕೋಟಿ ಲೂಟಿ ಹೊಡೆಯಲು ಇವರಿಗೆಲ್ಲ ಇದಕ್ಕಿಂತ ಹುಲುಸಾದ ಕ್ಷೇತ್ರವೇ ಇಲ್ಲ. ‘ಕಸವನ್ನು ರಸ ಮಾಡುವುದು’ ಎಂದರೆ ಇದೇ ಏನೋ?

ವಾಸ್ತವವಾಗಿ ಬೆಂಗಳೂರಿನಲ್ಲಿ ನಿತ್ಯ ಸೃಷ್ಟಿಯಾಗುವ ಕಸ ಎಷ್ಟು ಎಂಬುದರ ಖಚಿತ ಮತ್ತು ವೈಜ್ಞಾನಿಕ ಲೆಕ್ಕಾಚಾರವೇ ಸರ್ಕಾರದ ಬಳಿಯೂ ಇಲ್ಲ, ಪಾಲಿಕೆ ಬಳಿಯೂ ಇಲ್ಲ. ಎಲ್ಲವೂ ಅಂದಾಜು, ಊಹಾಪೋಹದ ಮೇಲೇ ನಡೆಯುತ್ತಿವೆ. ದಿನವೊಂದಕ್ಕೆ 4 ಸಾವಿರ ಟನ್‌ ಕಸ ಈ ನಗರದಲ್ಲಿ ಸಂಗ್ರಹವಾಗುತ್ತಿದೆ ಎಂದು ಹೇಳಿ, ಅದನ್ನು ನಗರದಿಂದ ಸಾಗಿಸಲು 2015–16ರಲ್ಲಿ ಸರಿಸುಮಾರು ₹572 ಕೋಟಿಗಳನ್ನು ಬಿಬಿಎಂಪಿ ಖರ್ಚು ಮಾಡಿದೆ.

ವಾಸ್ತವವಾಗಿ ಇಷ್ಟು ಖರ್ಚು ಸಮರ್ಥನೀಯವೇ ಎನ್ನುವುದೇ ದೊಡ್ಡ ಪ್ರಶ್ನೆ. ಏಕೆಂದರೆ, ಇಷ್ಟು ಕಸ ಬೀಳುತ್ತಿದೆಯೇ, ಇದನ್ನು ಸಂಗ್ರಹಿಸಲು ಮತ್ತು ಸಾಗಿಸಲು ಎಷ್ಟು ಲಾರಿಗಳನ್ನು ಬಳಸಲಾಯಿತು, ಅವು ದಿನಕ್ಕೆ ನಿಜವಾಗಿಯೂ ಎಷ್ಟು ಟ್ರಿಪ್‌ ಮಾಡಿದವು ಎನ್ನುವುದರ ನಿಖರವಾದ ಲೆಕ್ಕವೇ ಇಲ್ಲ. ಕ

ಸದ ಲಾರಿಗಳಿಗೆ ಕಡ್ಡಾಯವಾಗಿ ಜಿಪಿಎಸ್‌ ಅಳವಡಿಕೆಗೆ ಮತ್ತು ಕಸ ಸಂಗ್ರಹ, ಸಾಗಣೆಗೆ ನಿಯಮಗಳನ್ನು ಸಿದ್ಧಪಡಿಸಿ ಈ ಹಿಂದೆ ಪಾಲಿಕೆಯ ವಿಶೇಷ ಆಯುಕ್ತರಾಗಿದ್ದ ಸುಬೋಧ್‌ ಯಾದವ್‌ ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದರು. ಎಲ್ಲವೂ ಲೆಕ್ಕಕ್ಕೆ ಸಿಕ್ಕಿದರೆ ಇಷ್ಟು ದಿನ ತಿಂದು ತೇಗಿದ್ದರ ಪ್ರಮಾಣ ಬಯಲಾಗುತ್ತದೆ ಎಂಬ ಭಯದಿಂದಲೋ ಏನೋ, ಆ ಅಧಿಕಾರಿಯನ್ನು ಆ ಸ್ಥಾನದಿಂದಲೇ ಎತ್ತಂಗಡಿ ಮಾಡಲಾಯಿತು.

ಈ ಕಸದ ಹಗರಣಕ್ಕೆ ಲೆಕ್ಕವೇ ಇಲ್ಲ. ಕಸ ನಿರ್ವಹಣೆ ಬಗ್ಗೆ ಶಾಸಕರು, ಅಧಿಕಾರಿಗಳು, ಪಾಲಿಕೆ ಸದಸ್ಯರು ವಿವಿಧ ನಗರಗಳಲ್ಲಿ ಪ್ರವಾಸ ಮಾಡಿ ಬಂದಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಸವನ್ನು ಹೇಗೆ ವೈಜ್ಞಾನಿಕವಾಗಿ ನಿಭಾಯಿಸಬಹುದು ಎಂಬ ಬಗ್ಗೆ ಸ್ವೀಡನ್‌ನ ನಿಯೋಗವೊಂದು ಇಲ್ಲಿಗೆ ಬಂದು ಪ್ರಾತ್ಯಕ್ಷಿಕೆ ತೋರಿಸಿ ಹೋಗಿದೆ. ಆದರೆ ಇಲ್ಲಿಯ ಕಸದ ಮಾಫಿಯಾ ಮಾತ್ರ ಎಂಥವರ ಬಾಯಿಯನ್ನೂ ಮುಚ್ಚಿಸುವಷ್ಟು ಬಲಿಷ್ಠವಾಗಿದೆ.

ಹೀಗಾಗಿ ಅದ್ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ನಗರದಲ್ಲಿ ಎಲ್ಲೆಂದರಲ್ಲಿ ಕಸ ಬೀಳುವುದು ನಿಂತಿಲ್ಲ. ಅಷ್ಟೇ ಅಲ್ಲ. ಕಸ ಸಾಗಿಸಲು ವರ್ಷದಿಂದ  ವರ್ಷಕ್ಕೆ ವೆಚ್ಚ ಏರುವುದೂ ನಿಂತಿಲ್ಲ. 2015ರಲ್ಲಿ ಬಿಬಿಎಂಪಿಯ ತಾಂತ್ರಿಕ ತಪಾಸಣಾ ತಂಡ ನೀಡಿದ ವರದಿಯ ಪ್ರಕಾರ, ಅದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ಕಸ ಸಾಗಣೆ ಹೆಸರಿನಲ್ಲಿ ₹ 631 ಕೋಟಿಯ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ.

ಸೆಸ್‌ ಹೆಚ್ಚಿಸುವಂತೆ ಸೂಚಿಸುವ ಸರ್ಕಾರ ಈ ವರದಿಯ ವಿಷಯದಲ್ಲಿ ಮಾತ್ರ ಕ್ರಮ ತೆಗೆದುಕೊಳ್ಳದೇ ತೆಪ್ಪಗಿದೆ.  ಬಿಬಿಎಂಪಿಯ ಅದಕ್ಷತೆ, ಭ್ರಷ್ಟಾಚಾರವನ್ನು ನಿಯಂತ್ರಿಸುವುದನ್ನು ಬಿಟ್ಟು, ಜನರ ಮೇಲೆ ತೆರಿಗೆ ಹೊರೆ ಹೆಚ್ಚಿಸುವುದು ಒಳ್ಳೆಯದಲ್ಲ.

ಈ ಸರ್ಕಾರ ಅಧಿಕಾರದ ಇನ್ನುಳಿದ ದಿನಗಳಲ್ಲಾದರೂ ಕಸ ನಿರ್ವಹಣೆಗೆ ವೈಜ್ಞಾನಿಕ ವಿಧಾನಗಳನ್ನು ಜಾರಿಗೆ ತರಬೇಕು.  ಜನರ ಹಣದ ಹಗಲು ದರೋಡೆಯನ್ನು ತಡೆಯಬೇಕು. ಇದುವರೆಗಿನ ಹಗರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿ, ತನಗಿರುವ ಕಾಳಜಿ ಮತ್ತು ಬದ್ಧತೆ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT