ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದಿದ ಆರ್ಥಿಕತೆಗೆ ಬೇಕು ವಿತ್ತೀಯ ಬೆಂಬಲ

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

ಪ್ರಸಕ್ತ ಹಣಕಾಸು ವರ್ಷದ (2016–17) ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಹಿಂದಿನ ವರ್ಷಕ್ಕಿಂತ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರದ  ಅಧಿಕೃತ ಅಂಕಿ ಅಂಶಗಳೇ ದೃಢಪಡಿಸಿರುವುದು ನಿರಾಶಾದಾಯಕ ಸಂಗತಿ. ಬಜೆಟ್‌ ಪೂರ್ವಸಿದ್ಧತೆಗೆ ನೆರವಾಗಲು ಒಂದು ತಿಂಗಳು ಮುಂಚಿತವಾಗಿಯೇ ಬಿಡುಗಡೆಯಾಗಿರುವ ಆರ್ಥಿಕ ಬೆಳವಣಿಗೆಯ ಅಂದಾಜು ವರದಿಯು ಕೃಷಿ ಕ್ಷೇತ್ರ ಹೊರತುಪಡಿಸಿ ಒಟ್ಟಾರೆ ಅರ್ಥ ವ್ಯವಸ್ಥೆಯ ಬಗ್ಗೆ ಆಶಾದಾಯಕ ಚಿತ್ರಣವನ್ನೇನೂ ನೀಡಿಲ್ಲ. ಕೇಂದ್ರೀಯ ಸಾಂಖ್ಯಿಕ ಸಂಸ್ಥೆಯ (ಸಿಎಸ್‌ಒ) ಅಂದಾಜಿನ ಪ್ರಕಾರವೇ,  ಜಿಡಿಪಿಯು ಶೇ 7.1ರಷ್ಟು ಆಗಲಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ  7.6ರಷ್ಟಿತ್ತು.  ಈ ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲೂ ವೃದ್ಧಿ ದರವು ಹಿಂದಿನ ವರ್ಷಕ್ಕಿಂತ ಕಡಿಮೆ ಮಟ್ಟದಲ್ಲಿಯೇ ಇದೆ.  ನೋಟು ರದ್ದತಿ ನಿರ್ಧಾರದಿಂದಾಗಿ ಉಂಟಾದ ಕರೆನ್ಸಿ ಕೊರತೆಯು  ಸರಕು ಮತ್ತು ಸೇವೆಗಳ ಬಳಕೆ ಮತ್ತು ಉದ್ಯೋಗ ಅವಕಾಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದರಿಂದ ಸಹಜವಾಗಿಯೇ ಆರ್ಥಿಕ ಬೆಳವಣಿಗೆ ಕುಂಠಿತವಾಗಿರಲಿದೆ. ಜಿಡಿಪಿಯ ವಾರ್ಷಿಕ ಅಂದಾಜು,  ಸಮಗ್ರ ಮಾಹಿತಿಯನ್ನೂ ಆಧರಿಸಿಲ್ಲ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ದತ್ತಾಂಶಗಳನ್ನಷ್ಟೇ ಇದು ಆಧರಿಸಿದ್ದು, ಅಕ್ಟೋಬರ್‌– ಮಾರ್ಚ್‌ ಅವಧಿಯ (ದ್ವಿತೀಯಾರ್ಧದ) ಅಂದಾಜನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ.  ಹೀಗಾಗಿ ಅಂತಿಮವಾಗಿ ವೃದ್ಧಿ ದರ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಮಾರುಕಟ್ಟೆ ಬೆಲೆ ಆಧರಿಸಿ ಹೇಳುವುದಾದರೆ  ಒಟ್ಟು ಆಂತರಿಕ ಉತ್ಪನ್ನದ ಒಟ್ಟಾರೆ ಮೊತ್ತ  ₹ 148 ಲಕ್ಷ ಕೋಟಿಗಳಷ್ಟಾಗಲಿದೆ. ವೃದ್ಧಿ ದರ ಶೇ 1ರಷ್ಟು  ಕಡಿಮೆಯಾದರೂ, ಅದರಿಂದ ₹ 1.50 ಲಕ್ಷ ಕೋಟಿಗಳಷ್ಟು ಕೊರತೆ ಕಂಡುಬರಲಿದೆ.

ವಾಡಿಕೆಯ ಮುಂಗಾರು ಮತ್ತು ಉತ್ತಮ ಬಿತ್ತನೆ ಫಲವಾಗಿ ಮುಂಗಾರು ಬೆಳೆ ಉತ್ಪಾದನೆಯು ಶೇ 8.9ರಷ್ಟು ಹೆಚ್ಚಾಗಿದೆ. ಹೀಗಾಗಿ ಕೃಷಿ ವಲಯದ ಬೆಳವಣಿಗೆ ದರ ಹಿಂದಿನ ವರ್ಷಕ್ಕಿಂತ (ಶೇ 1.2) ಈ ಬಾರಿ ಉತ್ತಮ ಸಾಧನೆ (ಶೇ 4.1) ಪ್ರದರ್ಶಿಸಿರುವುದೊಂದೇ  ತಕ್ಕಮಟ್ಟಿಗೆ ಸಮಾಧಾನಕರ ವಿದ್ಯಮಾನವಾಗಿದೆ. ನಗದು ಕೊರತೆ ಹೊರತಾಗಿಯೂ ಹಿಂಗಾರು ಬಿತ್ತನೆಯೂ ಉತ್ತಮವಾಗಿದೆ ಎಂದೂ ಸರ್ಕಾರ ಪ್ರತಿಪಾದಿಸುತ್ತಿದೆ. ಅದು ನಿಜವೇ ಆಗಿದ್ದರೆ, ಕೃಷಿ ಉತ್ಪಾದನೆ ಹೆಚ್ಚಳಗೊಂಡು  ಗ್ರಾಮೀಣ ಉಪಭೋಗ ಹೆಚ್ಚಿದರೆ, ಕಳೆಗುಂದಿರುವ ಆರ್ಥಿಕತೆಗೆ ತಕ್ಕಮಟ್ಟಿಗೆ ಚೇತರಿಕೆ ದೊರೆಯಬಹುದು ಎಂದು ಆಶಿಸಬಹುದು. ಆದರೆ, ತಯಾರಿಕೆ, ಕಟ್ಟಡ ನಿರ್ಮಾಣ ಮತ್ತು ಗಣಿಗಾರಿಕೆ ವಲಯದಲ್ಲಿನ ಕುಂಠಿತ ಬೆಳವಣಿಗೆಯು ಒಟ್ಟಾರೆ ವೃದ್ಧಿ ದರಕ್ಕೆ ಕಡಿವಾಣ ಹಾಕಲಿದೆ. ಸೇವಾ ವಲಯದಲ್ಲಿ ಪ್ರಮುಖವಾಗಿರುವ ವ್ಯಾಪಾರ, ಹೋಟೆಲ್‌ ಮತ್ತು ಸಾರಿಗೆ ವಲಯಗಳಲ್ಲಿಯೂ ಮಂದಗತಿ ಕಂಡು ಬರಲಿದೆ. ವಿದ್ಯುತ್‌, ನೈಸರ್ಗಿಕ ಅನಿಲ, ನೀರು ಪೂರೈಕೆ ಮತ್ತಿತರ ನಾಗರಿಕ ಸೇವೆಗಳ ವಿಸ್ತರಣೆಯಲ್ಲಿಯೂ ಮಂದಗತಿಯ ಪ್ರಗತಿ ಕಂಡುಬಂದಿರುವುದರಿಂದ ಒಟ್ಟಾರೆ ಆರ್ಥಿಕ ಚಟುವಟಿಕೆಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. ಅರ್ಥ ವ್ಯವಸ್ಥೆಯ ಎರಡು ಪ್ರಮುಖ ಎಂಜಿನ್‌ಗಳಾಗಿರುವ ತಯಾರಿಕೆ ಮತ್ತು ಸೇವಾ ವಲಯಗಳ  ಬೆಳವಣಿಗೆಯೇ ಕುಂಠಿತಗೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ.  ಇದು ಮುಂದಿನ ದಿನಗಳಲ್ಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ನಗದು ವಹಿವಾಟು ಪ್ರಧಾನ ವಲಯಗಳಾದ ಚಿಲ್ಲರೆ ವ್ಯಾಪಾರ, ಹೋಟೆಲ್‌, ಸಾರಿಗೆ ಮತ್ತು  ಇತರ ಅಸಂಘಟಿತ ರಂಗಗಳಲ್ಲಿನ ಚಟುವಟಿಕೆಗಳೂ ಕಳೆಗುಂದಿದ್ದು,  ವೃದ್ಧಿ ದರದ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರಲಿವೆ.

ಆರ್ಥಿಕ ವೃದ್ಧಿ ದರವನ್ನು ಚೇತರಿಕೆ ಹಾದಿಗೆ ತರಲು ಕೇಂದ್ರ ಸರ್ಕಾರವು ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಸವಾಲು ಎದುರಾಗಿದೆ. ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸುಧಾರಿಸಿ, ಚಿಲ್ಲರೆ ವಹಿವಾಟು, ತಯಾರಿಕೆ ವಲಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಹರಿದು ಬರುವಂತೆ ಮಾಡಬೇಕಾಗಿದೆ. ಮೂಲಸೌಕರ್ಯ ವಲಯಗಳಲ್ಲಿ ಸರ್ಕಾರದ ಬಂಡವಾಳ ಹೂಡಿಕೆ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸುವ ಕಾಳಜಿಯನ್ನೂ ತೋರಬೇಕಾಗಿದೆ. 2017–18ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಆರ್ಥಿಕ ಚಟುವಟಿಕೆಗಳಿಗೆ ರಭಸದ ಉತ್ತೇಜನ ನೀಡುವಂತಹ ವಿತ್ತೀಯ ಬೆಂಬಲ ನೀಡಬೇಕಾದ ಅನಿವಾರ್ಯ ಉದ್ಭವಿಸಿದೆ. ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಿಸಿ, ಬೇಡಿಕೆ ಕುಸಿತದ ಸಮಸ್ಯೆಗಳನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡರೆ ಮಾತ್ರ  ಅರ್ಥ ವ್ಯವಸ್ಥೆ ಚೇತರಿಕೆಯ ಹಾದಿಗೆ ಮರಳೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT