ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ನೀಡಿದ ‘ಗುಡಿ ಕೈಗಾರಿಕೆ’

ಸ್ತ್ರೀ–ಶಕ್ತಿ ಸಂಘಟನೆಗಳಿಂದ ಉತ್ಪಾದಿತ ವಸ್ತುಗಳ ಮಾರಾಟ, ಪ್ರದರ್ಶನ
Last Updated 10 ಜನವರಿ 2017, 6:05 IST
ಅಕ್ಷರ ಗಾತ್ರ
ಹಾವೇರಿ: ‘ಅಜ್ಜನ ಕಾಲದಿಂದ ಬಂದ ಕುಂಬಾರಿಕೆಯಿಂದ ಒಂದೊತ್ತಿನ ಊಟಕ್ಕೂ ಕಷ್ಟವಾಗುತ್ತಿತ್ತು. ಆದರೆ, ನನಗೆ ಅದೇ ವೃತ್ತಿಯಲ್ಲಿ ಸಾಧಿಸಬೇಕು ಎಂಬ ಛಲ. ಮನೆಯವರ ವಿರೋಧ. ಈ ನಡುವೆಯೂ, ಆಧುನಿಕ ಬೇಡಿಕೆಗೆ ತಕ್ಕಂತೆ ಮಣ್ಣಿನ ವಸ್ತುಗಳನ್ನು ತಯಾರಿಸಿ ಯಶಸ್ಸು ಕಂಡಿದ್ದೇವೆ. ಅಲ್ಲದೇ, ಇನ್ನಷ್ಟು ಜನಕ್ಕೆ ಕೆಲಸ ನೀಡಿದ ತೃಪ್ತಿ ಇದೆ’ 
 
–ಹಾವೇರಿಯ ಹುಕ್ಕೇರಿಮಠದ ಶಿವಲಿಂಗೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ ‘ಸ್ತ್ರೀ–ಶಕ್ತಿ ಸಂಘಟನೆಗಳಿಂದ ಉತ್ಪಾದಿಸಿದ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ’ದಲ್ಲಿ ಮಳಿಗೆ ಹಾಕಿ ವ್ಯಾಪಾರ ಮಾಡುತ್ತಿರುವ ಹಂಸಭಾವಿಯ ಸರ್ವಜ್ಞ ಕುಶಲ ಕೈಗಾರಿಕೆ ಸ್ತ್ರೀ– ಶಕ್ತಿ ಸಂಘದ ಸದಸ್ಯರಾದ ನಾಗರತ್ನಾ  ಮತ್ತು ನಾಗರಾಜ ಚಕ್ರಸಾಲಿ ದಂಪತಿ ಭರವಸೆಯ ನುಡಿಗಳು.  
 
ಈ ದಂಪತಿಯು ಆಧುನಿಕತೆಗೆ ತಕ್ಕಂತೆ ಕುಂಬಾರಿಕೆ ವೃತ್ತಿಯಲ್ಲಿ ಬದಲಾವಣೆ  ಮಾಡಿಕೊಂಡು 60ಕ್ಕೂ ವಿಧದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. 
 
‘ನಾಲ್ಕು ಕೆಲಸಗಾರರ  ಸಹಾಯದಲ್ಲಿ 15 ದಿನದಲ್ಲಿ 275ರಿಂದ 300 ಅಲಂಕಾರಿಕ ವಸ್ತುಗಳನ್ನು ತಯಾರಿಸಿ, ನೆರಳಲ್ಲಿ ಒಣಗಿಸಿ, ಸುಡುತ್ತೆವೆ. ನಂತರ ಅದಕ್ಕೆ ಬಣ್ಣವನ್ನು ಕೊಟ್ಟು ಕರ್ನಾಟಕ ಸೇರಿದಂತೆ ಗೋವಾ,  ಮುಂಬೈಗಳಲ್ಲಿ ಮಾರಟ ಮಾಡುತ್ತೆವೆ’ ಎನ್ನುತ್ತಾರೆ ನಾಗರತ್ನಾ ಚಕ್ರಸಾಲಿ. 
 
ಸ್ಥಳೀಯವಾಗಿ ದೊರಕುವ ಮಣ್ಣಿನಿಂದಲೇ ಅಲಂಕಾರಿಕ ದೀಪ, ಮರದ ಚಟ್ಟಿಗೆ, ಹುಲ್ಲಿನ ಗುಡಿಸಲು, ಮರಳಿನ ಚಟ್ಟಿ, ಮ್ಯಾಜಿಕ್‌ ಲ್ಯಾಂಪ್‌, ಮರದಾಕೃತಿಯ ವಸ್ತು ಹಾಗೂ  ನಂದಿ ಮೂರ್ತಿ, ಬಸವಣ್ಣ ಮೂರ್ತಿ, ಬುದ್ಧನ ಮೂರ್ತಿ ಸೇರಿದಂತೆ 60ಕ್ಕೂ ಹೆಚ್ಚು ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸಿ, ಮಾರಾಟಕ್ಕಿಟ್ಟಿದ್ದಾರೆ.‘ನಮ್ಮ ಗುಡಿ ಕೈಗಾರಿಕೆಗೆ ಸ್ತ್ರಿ–ಶಕ್ತಿ ಸಂಘಟನೆಗಳು ಸಹಾಯ ಮಾಡಿವೆ’ ಎನ್ನುತ್ತಾರೆ ಅವರು. 
 
‘ಪ್ರಜಾವಾಣಿ’ ಜೊತೆ ಮಾತನಾಡಿದ ಧಾರವಾಡದ ಸ್ತ್ರೀ–ಶಕ್ತಿ ಸಂಘಟನೆಯ ಸದಸ್ಯೆ ಲತಾ.ಎಸ್‌.ಕೇರಿಮಠ ‘ನಮ್ಮ ಯಜಮಾನರು ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರ ಸಂಬಳದಿಂದ ಜೀವನ ಸಾಗಿಸುವುದು ಕಷ್ಟಕರವಾಗಿತ್ತು. ಆಗ,  ₹2 ಸಾವಿರ ಬಂಡವಾಳ ಹೂಡಿ ಅಲಂಕಾರಿಕ ವ್ಯಾನಿಟಿ, ಕೈ ಚೀಲಗಳನ್ನು ತಯಾರಿಸುವುದನ್ನು ಪ್ರಾರಂಭಿಸಿದ್ದೇವೆ. ಆದರೆ ಈಗ ನಾವು ₹3.5 ಲಕ್ಷದ ವರೆಗೂ ಬಂಡವಾಳ ಹಾಕಿ ಗುಡಿ ಕೈಗಾರಿಕೆ ಮಾಡುತ್ತಿದ್ದೇವೆ’ ಎಂದು ಬೆಳೆದು ಬಂದ ಹಾದಿಯನ್ನು ತಿಳಿಸಿದರು. 
 
‘ನಾವು ತಯಾರಿಸುವ ಕಾಟನ್‌ ಬ್ಯಾಗ್‌, ವರ್ಕ್ಸ್‌ ಬ್ಯಾಗ್‌, ಏರ್‌ಬ್ಯಾಗ್‌ ಸೇರಿದಂತೆ 180ಕ್ಕೂ ಹೆಚ್ಚು ಮಾದರಿಗಳನ್ನು ₹20ರಿಂದ ₹400ರ ವರೆಗೂ ಮಾರಾಟ ಮಾಡುತ್ತೇವೆ’ ಎಂದರು. ಇದೇ 10 ರ ತನಕ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆ ಮುಂದುವರಿಯಲಿದೆ.  
 
ಉದ್ಘಾಟನೆ: ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ‘ಮಾರಾಟ ಹಾಗೂ ಪ್ರದರ್ಶನ’ವನ್ನು ಉದ್ಘಾಟಿಸಿದರು. 
 
ಬಳಿಕ ಮಾತನಾಡಿದ ಅವರು, ‘ಸಿ.ಎಂ. ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ  ಸಚಿವೆಯಾಗಿದ್ದ ಮೋಟಮ್ಮ ಅವರು,ಸ್ತ್ರಿ–ಶಕ್ತಿ ಸಂಘಗಳ ಸ್ಥಾಪನೆಗೆ ಒತ್ತು ನೀಡಿದ್ದರು. ಅಂದಿನಿಂದ ಬಹುತೇಕ ಮಹಿಳೆಯರು ಸ್ವಾವಲಂಬಿಯಾಗಿ ದುಡಿಮೆ ಮಾಡಿ, ಸಂಸಾರ ನಡೆಸುವಷ್ಟು ಶಕ್ತಿಯುತವಾಗುತ್ತಿದ್ದಾರೆ’ ಎಂದರು.
 
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ಮಹಿಳೆಯರು ಕುಟುಂಬ ನಿರ್ವಹಣೆ ಜೊತೆ, ಗುಡಿ ಕೈಗಾರಿಕೆ ರೂಢಿಸಿಕೊಂಡು ಸ್ವಾವಲಂಬಿಗಳಾಗಬೇಕು’ ಎಂದರು.
 
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ‘ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಶೇ 33ರಷ್ಟು ಮೀಸಲಾತಿಯನ್ನು ಸರ್ಕಾರ ನೀಡಿದೆ. ಪುರಷರಿಗೆ ಸರಿಸಮಾನರಾಗಿ ಮಹಿಳೆಯರು ಸಶಕ್ತರಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.
 
ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಲಲಿತಾ, ಮಲ್ಲಿಕಾರ್ಜುನ ಮಾಳಗೇರ, ಅಂಗವಿಕಲರ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ಮಠದ, ಶಿವಾನಂದ ಐಯನಗೌಡ್ರ ಮತ್ತಿತರರು ಇದ್ದರು.
 
***
ಸ್ತ್ರೀ ಶಕ್ತಿ ಸಂಘದ ಮೂಲಕ ದೊರೆತ ಸಹಾಯಧನದಲ್ಲಿ ಗುಡಿಕೈಗಾರಿಕೆ ಆರಂಭಿಸಿದ್ದೇವೆ. ಯಜಮಾನ್ರೂ (ಪತಿ) ಅತಿಥಿ ಶಿಕ್ಷಕ ವೃತ್ತಿ ತೊರೆದು ಇದನ್ನೇ ಮಾಡುತ್ತಿದ್ದಾರೆ
-ಲತಾ ಶಿವಲಿಂಗಯ್ಯ ಕೇರಿಮಠ,
ಧಾರವಾಡ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT