ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಪಾಠದ ತಂತ್ರಾಂಶ ಇ–ಟೆಸ್ಟ್‌ ಝೋನ್

Last Updated 10 ಜನವರಿ 2017, 19:30 IST
ಅಕ್ಷರ ಗಾತ್ರ

ವಿಜ್ಞಾನ ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ಭವಿಷ್ಯ ರೂಪಿಸುವ ಮಹತ್ವದ  ಕಾಲಘಟ್ಟ. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್‌ ಮಾಡಬೇಕು ಎಂಬ ಕನಸು ಕಟ್ಟಿಕೊಂಡ ಪೋಷಕರು  ಉತ್ತಮ ಕಾಲೇಜು, ಕೋಚಿಂಗ್‌, ಟ್ಯೂಷನ್‌ ಎಂದು ಲಕ್ಷಾಂತರ ರೂಪಾಯಿ ಸುರಿಯಲು ಯೋಚಿಸುವುದಿಲ್ಲ. ಆದರೆ, ಬಡವರು ಮತ್ತು ಗ್ರಾಮೀಣ ಮಕ್ಕಳ ಪಾಡೇನು?

ಇಂಥದೊಂದು ಪ್ರಶ್ನೆಯೇ ‘ಇ ಟೆಸ್ಟ್ ಝೋನ್’ ಎಂಬ ಶಿಕ್ಷಣ ಸಾಫ್ಟ್​ವೇರ್ ಹುಟ್ಟಿಗೆ ಕಾರಣವಾಯಿತು.  ಮನೆಪಾಠ, ದುಬಾರಿ ಕೋಚಿಂಗ್‌ಗೆ ಹೊಂದಿಸಲು ಹಣವಿಲ್ಲದೆ ಪರದಾಡುವ ಸಾವಿರಾರು ಬಡ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಇ ಟೆಸ್ಟ್ ಝೋನ್‌ಡಾಟ್‌ಕಾಮ್‌’ ರೂಪಿಸಲಾಗಿದೆ. 

ಸರ್ವರಿಗೂ ಸಮಾನ ಶಿಕ್ಷಣ ಮತ್ತು ಅವಕಾಶ ದೊರೆಯಬೇಕು ಎಂಬ ಉದಾತ್ತ ಉದ್ದೇಶದಿಂದಲೇ ಎಂಜಿನಿಯರ್‌ ಶೇಖರ್‌ ರೌತ್‌ 2011ರಲ್ಲಿ ‘ಇಟೆಸ್ಟ್ ಝೋನ್‌ಡಾಟ್‌ಕಾಮ್‌’  (etestzone.com) ಹುಟ್ಟು ಹಾಕಿದರು. ರೌತ್‌ ಅವರ ಶೈಕ್ಷಣಿಕ ತಂತ್ರಜ್ಞಾನ ಸೇವೆ ಒದಗಿಸುತ್ತಿರುವ ಬೈಟ್‌ಲಾಜಿಕ್ ಕಮ್ಯೂನಿಕೇಷನ್ ಸಂಸ್ಥೆ ಈ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ. 

ಏನಿದು ಇ–ಟೆಸ್ಟ್‌ ಝೋನ್?
‘ಇ–ಟೆಸ್ಟ್‌ ಝೋನ್‌’  ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿಜ್ಞಾನ ವಿದ್ಯಾರ್ಥಿಗಳ  ಮನೆಪಾಠಕ್ಕಾಗಿ ರೂಪಿಸಿದ ಸಾಫ್ಟವೇರ್‌. ಆದರೆ, ವಿದ್ಯಾರ್ಥಿಗಳ ಬಳಿ ಇಂಟರ್‌ನೆಟ್‌ ಸಂಪರ್ಕ ಇರುವ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಟ್ಯಾಬ್ ಇಲ್ಲವೇ ಮೊಬೈಲ್‌ ಕಡ್ಡಾಯವಾಗಿ ಇರಬೇಕು. ವಾರ್ಷಿಕ ಕೇವಲ ₹ 1,000 ದಿಂದ ₹3,000ರ ಕೈಗೆಟುಕುವ ದರದಲ್ಲಿ  ಈ ಸೇವೆ ಒದಗಿಸುತ್ತಿದೆ.  ವಿದ್ಯಾರ್ಥಿಗಳಿಗೆ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ.

ವೆಬ್‌ಸೈಟ್‌ಗೆ ಲಾಗಿನ್‌ ಆದರೆ ಇ–ಟೆಸ್ಟ್‌ ಝೋನ್‌ ‘ಹೋಮ್‌ ಪೇಜ್‌’ ಪರದೆಯ ಮೇಲೆ ತರಗತಿ, ವಿಷಯ, ಪಾಠದ ಹೆಸರು ಇತ್ಯಾದಿ ಪ್ರತ್ಯೇಕ ವಿಭಾಗಗಳು ತೆರೆದುಕೊಳ್ಳುತ್ತವೆ. 

ವಿಷಯ, ಪಾಠದ ಹೆಸರು, ಪ್ರಶ್ನೆ ಪತ್ರಿಕೆ ಮತ್ತು  ಉತ್ತರ ನೀಡಲಾಗಿದೆ. ಸದ್ಯ ಒಟ್ಟು 11 ವಿಜ್ಞಾನ ವಿಷಯಗಳು ಲಭ್ಯ ಇವೆ.  ಪ್ರಶ್ನೆ ಭಂಡಾರದಲ್ಲಿ (ಎಂಸಿಕ್ಯೂ/ಎ) 50 ಸಾವಿರರದಷ್ಟು ಪ್ರಶ್ನೋತ್ತರಗಳಿವೆ. ಪ್ರತಿ ವರ್ಷ ಪ್ರಶ್ನೋತ್ತರಗಳ ಸಂಖ್ಯೆ ಏರುತ್ತಲೇ ಹೋಗುತ್ತದೆ.ಒಬ್ಬ ವಿದ್ಯಾರ್ಥಿ ಹೆಚ್ಚೆಂದರೆ ವರ್ಷಕ್ಕೆ  15 ರಿಂದ 20 ಸಾವಿರ ಪ್ರಶ್ನೋತ್ತರ ಬಿಡಿಸಬಹುದು.

ದಿನದ 24 ಗಂಟೆಯೂ ಸೇವೆ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ತಮಗೆ ಅಗತ್ಯ ಬಿದ್ದಾಗ ಬಳಸಬಹುದು. ಸಮಯದ  ನಿರ್ಬಂಧವಿಲ್ಲ. ಪ್ರತಿ ಪಾಠದ ನಂತರ ಕಿರು ಪರೀಕ್ಷೆ,  ಮೌಲ್ಯಮಾಪನವಿರುತ್ತದೆ. ವಿದ್ಯಾರ್ಥಿಗಳ ಸ್ವಪರೀಕ್ಷೆಗೂ ಅವಕಾಶವಿದೆ. 

ಹಾಗಾದರೆ ಇದು ತುಂಬಾ ದುಬಾರಿಯೇ?
ಪ್ರತಿ ದಿನ ಒಂದು ಕಪ್‌ ಚಹಾಕ್ಕೆ ಮಾಡುವ  ಖರ್ಚಿಗಿಂತ ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ  ಕೈತುಂಬಾ ಅಂಕ ಗಳಿಸುವ ಮಾರ್ಗವನ್ನು ಈ ವೇದಿಕೆ ತೋರಿಸುತ್ತದೆ. ಸಿಇಟಿ, ಎನ್‌ಇಇಟಿ, ಐಐಟಿ ಜೆಇಇ, ಕಾಮೆಡ್‌–ಕೆ ಪ್ರವೇಶ ಪರೀಕ್ಷೆಗಳ 50 ಸಾವಿರ ಪ್ರಶ್ನೋತ್ತರ ಬೆರಳ ತುದಿಯಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತವೆ.

ಉಪನ್ಯಾಸಕರೂ ಕೂಡ ಇದರ ಲಾಭ ಪಡೆಯಬಹುದು. ಈ  ವೇದಿಕೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮುಕ್ತವಾಗಿ ಚರ್ಚಿಸಿ ತಮ್ಮ ಗೊಂದಲ ನಿವಾರಿಸಿಕೊಳ್ಳಲು  ‘ವಿಚಾರ ವಿನಿಮಯ ವೇದಿಕೆ’ ಕಲ್ಪಿಸಲಾಗಿದೆ.

ಬೀದರಿನ ಹಳ್ಳಿಯೊಂದರ ವಿದ್ಯಾರ್ಥಿಯ ಸಮಸ್ಯೆಗೆ  ಬೆಂಗಳೂರು ಅಥವಾ ದೆಹಲಿಯಲ್ಲಿರುವ ಪ್ರತಿಷ್ಠಿತ ಕಾಲೇಜಿನ ವಿಷಯ ತಜ್ಞರು ಈ ವೇದಿಕೆ ಮೂಲಕ ಉತ್ತರ ನೀಡಬಹುದು.

ವಿಷಯ ತಜ್ಞರೊಂದಿಗೆ ಚರ್ಚೆ
ಈ ಸಾಫ್ಟವೇರ್‌ ಅಭಿವೃದ್ಧಿಪಡಿಸುವ ಮುನ್ನ ನೂರಾರು ವಿದ್ಯಾರ್ಥಿಗಳು, ಪೋಷಕರು, ಅನುಭವಿ ಪ್ರಾಧ್ಯಾಪಕರೊಂದಿಗೆ  ಚರ್ಚಿಸಿ ಸಲಹೆ, ಸೂಚನೆ ಪಡೆಯಲಾಗಿದೆ. ಜೈನ್‌ ಕಾಲೇಜಿನ ಗಣಿತ ಪ್ರಾಧ್ಯಾಪಕ ಬಿ.ಕೆ. ರಮೇಶ್‌, ಭೌತಶಾಸ್ತ್ರ ಪ್ರಾಧ್ಯಾಪಕ ಸಂಜಯ್‌ ರೌತ್‌  ಇ–ಟೆಸ್ಟ್‌ಝೋನ್‌ಡಾಟ್‌ಕಾಮ್ ಸಂಸ್ಥೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಅನೇಕ ಉಪನ್ಯಾಸಕರು ಮತ್ತು ವಿಷಯ ತಜ್ಞರು ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಲು ಮುಂದೆ ಬಂದಿದ್ದಾರೆ. ವಿದ್ಯಾರ್ಥಿಗಳು  ಅನುಭವಿಸುತ್ತಿರುವ ಕಷ್ಟ, ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.  ಸಮಯವನ್ನು ಹೇಗೆ ನಿರ್ವಹಿಸಬೇಕು ಎನ್ನುವ ಜೊತೆಗೆ ವಿದ್ಯಾರ್ಥಿಗಳ ಪರೀಕ್ಷೆಯ ಒತ್ತಡ ಮತ್ತು ಭಯವನ್ನು ಈ ವೇದಿಕೆ ನಿವಾರಿಸುತ್ತದೆ.  

‘ವ್ಯಾಪಾರದ ದೃಷ್ಟಿಯಿಂದ ನೋಡಿದರೆ ಪ್ರತಿ ವಿದ್ಯಾರ್ಥಿಗೆ ಕನಿಷ್ಠ ₹25 ಸಾವಿರ ಶುಲ್ಕ ವಿಧಿಸಬೇಕು. ಆದರೆ, ಲಾಭ ಗಳಿಸುವ ಉದ್ದೇಶ ನಮಗಿಲ್ಲ. ನಮ್ಮದು ಸಾಮಾಜಿಕ ಕಳಕಳಿಯ ಸಂಸ್ಥೆ. ಹೀಗಾಗಿ ಉದ್ದೇಶ ಪೂರ್ವಕವಾಗಿ ಕಡಿಮೆ ಶುಲ್ಕ ನಿಗದಿ ಮಾಡಿದ್ದೇವೆ’ ಎನ್ನುತ್ತಾರೆ  ಇ–ಟೆಸ್ಟ್‌ ಝೋನ್‌. ಕಾಮ್‌ ಸಂಸ್ಥೆಯ ಮಾರ್ಕೆಟಿಂಗ್‌, ಮಾರಾಟ ಮತ್ತು ಪ್ರಚಾರ ಮುಖ್ಯಸ್ಥ ಗುರುರಾಜ್‌.

ಬಡವರಿಗೆ ಉಚಿತ
ಈ ತಂತ್ರಾಂಶವನ್ನು ಗ್ರಾಮೀಣ ಪ್ರದೇಶದ ಸರ್ಕಾರಿ ಕಾಲೇಜುಗಳ  ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಉಚಿತವಾಗಿ ನೀಡುತ್ತಿದೆ. ರಾಜ್ಯದ ಎಲ್ಲ ಕಾಲೇಜುಗಳಿಗೆ ತೆರಳಿ ಇ–ಟೆಸ್ಟ್‌ ಝೋನ್‌ ಬಳಸುವ  ಪ್ರಾತ್ಯಕ್ಷಿಕೆ (ಡೆಮೊ ಕ್ಲಾಸ್‌) ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಹತ್ತು ನಿಮಿಷಗಳಲ್ಲಿ   ಬಳಕೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಅಷ್ಟು  ಸರಳವಾಗಿ ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

ಸದ್ಯ 10ಕ್ಕೂ ಹೆಚ್ಚು ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 100ಕ್ಕೂ ಹೆಚ್ಚು ಶಿಕ್ಷಕರು ಇ–ಟೆಸ್ಟ್‌ ಝೋನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನೆರೆಯ ನಾಲ್ಕೈದು ರಾಜ್ಯಗಳಿಗೂ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಿದೆ. ಈ ವರ್ಷಾಂತ್ಯದ ವೇಳೆಗೆ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾವಿರಕ್ಕೂ ಹೆಚ್ಚು ಅಧ್ಯಾಪಕರಿಗೆ ಈ ಸೇವೆ ತಲುಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

2015–16ರಲ್ಲಿ ಗ್ರಾಮೀಣ ಪ್ರದೇಶಗಳ 4 ಸಾವಿರ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸೇವೆ ನೀಡಲಾಗಿದೆ.  ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿ ಶಾಲೆಯ ಹತ್ತು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಇ–ಟೆಸ್ಟ್‌ ಝೋನ್‌ ಎರಡು ವರ್ಷಗಳ ಲೈಸನ್ಸ್‌ ಅನ್ನು ವಿದ್ಯಾರ್ಥಿ ವೇತನ ರೂಪದಲ್ಲಿ ನೀಡುತ್ತಿದೆ.  

ಸ್ವಯಂ ಉದ್ಯೋಗ ಸೃಷ್ಟಿ
ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಪ್ರತಿ ಜಿಲ್ಲೆಗೆ ಒಬ್ಬರಂತೆ ಸಂಸ್ಥೆ  ಮಾರಾಟ ಪ್ರತಿನಿಧಿಗಳನ್ನು ನೇಮಕ ಮಾಡಿದೆ. ಆ ಮೂಲಕ 300ಕ್ಕೂ ಉದ್ಯೋಗಗಳನ್ನು ಸೃಷ್ಟಿಸಿದೆ. 

ಮುಂದಿನ ಗುರಿ
‘ಇ–ಟೆಸ್ಟ್‌ ಝೋನ್‌ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಮೊದಲ ಆಯ್ಕೆಯ ಅಂತರ್ಜಾಲ ತಾಣವಾಗಿ ರೂಪುಗೊಳ್ಳಬೇಕು ಎಂಬುವುದು ನಮ್ಮ ಮುಂದಿನ ಗುರಿ’ ಎನ್ನುತ್ತಾರೆ ಶೇಖರ್‌ ರೌತ್‌. ₹25 ಲಕ್ಷ ಆರಂಭಿಕ ಬಂಡವಾಳದೊಂದಿಗೆ ಆರಂಭವಾಗಿರುವ  ಸಂಸ್ಥೆಗೆ ಹೂಡಿಕೆದಾರರು ಮತ್ತು ದೇಣಿಗೆದಾರರ ಅಗತ್ಯವಿದೆ.

ರೂವಾರಿಗಳು
ಶೇಖರ್‌ ರೌತ್‌:
ಬೈಟ್ ಲಾಜಿಕ್ ಕಮ್ಯೂನಿಕೇಷನ್ ಪ್ರೈವೇಟ್‌ ಲಿಮಿಟೆಡ್‌ ಮತ್ತು  ‘ಇ ಟೆಸ್ಟ್ ಝೋನ್.ಕಾಮ್‌’ ಶೇಖರ್‌ ರೌತ್‌ ಅವರ ಕನಸಿನ ಕೂಸು. ಐ.ಟಿ ಮತ್ತು ಟೆಲಿಕಾಂ ವಲಯದ ಪ್ರತಿಷ್ಠಿತ ಕಂಪೆನಿಗಳಲ್ಲಿ 18 ವರ್ಷ ಕೆಲಸ ಮಾಡಿದ ಅನುಭವ ಶೇಖರ್ ಬೆನ್ನಿಗಿದೆ. ಬಿ.ಇ., ಎಂಬಿಎ ಪದವೀಧರರಾದರೂ ಮೊದಲಿನಿಂದಲೂ ಶಿಕ್ಷಕ ವೃತ್ತಿಯತ್ತ ಭಾರಿ ಒಲವು.

ಮಹಾರಾಷ್ಟ್ರದವರಾದ ರೌತ್‌ ಸದ್ಯ ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ.  ಬಿಡುವಿನ ವೇಳೆ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಅವರಿಗೆ ಪ್ರಿಯವಾದ ಅಭ್ಯಾಸ. ಶಿಕ್ಷಣ, ಬೋಧನೆಡೆಗಿನ ಅವರ  ಪ್ರೀತಿಯೇ  ‘ಇ ಟೆಸ್ಟ್ ಝೋನ್.ಕಾಮ್‌’ ಅಭಿವೃದ್ಧಿಗೆ ಪ್ರೇರಣೆ ನೀಡಿತು.

ಸ್ವಸಾಮರ್ಥ್ಯದ ಮೇಲೆ 10ನೇ ತರಗತಿ, ಪಿಯುಸಿ, 12ನೇ ತರಗತಿಯಲ್ಲಿ  ಒಳ್ಳೆಯ ಅಂಕಗಳಿಸಿದ ವಿದ್ಯಾರ್ಥಿಗಳಿಗೆ  ಸಿಇಟಿ, ಕಾಮೆಡ್‌–ಕೆ, ನೀಟ್‌, ಐಐಟಿ ಜೆಇಇ (ಮೇನ್‌) ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ತಯಾರಿಗೆ  ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುವ ಅಗತ್ಯವಿಲ್ಲ ಎನ್ನುತ್ತಾರೆ ‘ಇ ಟೆಸ್ಟ್ ಝೋನ್.ಕಾಮ್‌’ ಸಂಸ್ಥಾಪಕ  ಸಿಇಒ  ಶೇಖರ್‌ ರೌತ್‌.

ಎಸ್‌. ಗುರುರಾಜ್‌: ಕಲಬುರ್ಗಿಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಪದವೀಧರಾದ ಎಸ್‌. ಗುರುರಾಜ್‌, ಐ.ಟಿ ಮತ್ತು ಟೆಲಿಕಾಂ ವಲಯದಲ್ಲಿ 25 ವರ್ಷಗಳ ಅನುಭವ ಹೊಂದಿದ್ದಾರೆ. ಕ್ರಾಂಪ್ಟನ್‌ ಗ್ರೀವ್ಸ್‌,  ಟೆಕ್‌ ಮಹೀಂದ್ರ , ಮೈಕ್ರೋಕಾನ್‌ ಮುಂತಾದ ಪ್ರತಿಷ್ಠಿತ ಐ.ಟಿ. ಮತ್ತು  ಜಾಹೀರಾತು ಕಂಪೆನಿಯಲ್ಲೂ ಕೆಲಸ ಮಾಡಿದ ಅನುಭವ ಕೂಡ ಇವರಿಗಿದೆ.

ಕೈತುಂಬಾ ಸಂಬಳ ಬರುವ ಉದ್ಯೋಗ ಬಿಟ್ಟು ಅಚ್ಚುಮೆಚ್ಚಿನ ಶಿಕ್ಷಣ ಕ್ಷೇತ್ರಕ್ಕೆ ಮರಳಿದ್ದಾರೆ. ಇ–ಟೆಸ್ಟ್‌ ಝೋನ್‌ ಮೂಲಕ ಬಡ ವಿದ್ಯಾರ್ಥಿಗಳ ಆಸೆಗೆ ನೀರೆರೆಯುವ ಬಯಕೆ ಅವರದ್ದು.  ಈ ಕೆಲಸ ಅವರಿಗೆ ಕೈತುಂಬಾ ಹಣ, ಐಷಾರಾಮಿ ಬದುಕು ನೀಡದಿದ್ದರೂ, ಮಾನಸಿಕ  ನೆಮ್ಮದಿ, ತೃಪ್ತಿ ನೀಡಿದೆಯಂತೆ. ಸದ್ಯ  ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಒಡನಾಟದಲ್ಲಿಯೇ ಧನ್ಯತೆ ಕಾಣುತ್ತಿದ್ದಾರೆ.

ಪೋಷಕರಿಗೂ ಕೂಡ ತಮ್ಮ ಮಕ್ಕಳ  ಮೇಲೆ ನಂಬುಗೆ ಅಗತ್ಯ. ಅವರ ಕಲಿಕಾ ಸಾಮರ್ಥ್ಯ, ಸಾಧನೆಯ ಬಗ್ಗೆ ವಿಶ್ವಾಸ  ಇಡಬೇಕು. ಲಕ್ಷಾಂತರ ದುಡ್ಡು ಸುರಿದು ಟ್ಯೂಷನ್‌ಗೆ ಸೇರಿಸುವ ಅಗತ್ಯವಿಲ್ಲ ಎನ್ನುತ್ತಾರೆ ಗುರುರಾಜ್‌.

ಸಂಪರ್ಕ ವಿಳಾಸ: ಬೈಟ್‌ಲಾಜಿಕ್‌ ಕಮ್ಯುನಿಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌, ಕೋರಮಂಗಲ, ಬೆಂಗಳೂರು–34
ದೂರವಾಣಿ ಸಂಖ್ಯೆ: ಗುರುರಾಜ್‌  994988820/9880278335.
ಇ–ಮೇಲ್‌: support@etestzone.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT