ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧತ್ವ ತಡೆ ; ಫೋರಸ್‌ ಹೆಲ್ತ್‌ನ ಯಶೋಗಾಥೆ

Last Updated 10 ಜನವರಿ 2017, 19:30 IST
ಅಕ್ಷರ ಗಾತ್ರ

ಅಮೆಜಾನ್ ದಟ್ಟಾರಣ್ಯದಲ್ಲಿ ನೆಲೆಸಿರುವ ಆದಿವಾಸಿಗಳಿಂದ ಹಿಡಿದು ನ್ಯೂಯಾರ್ಕ್‌ನ ಅತ್ಯಾಧುನಿಕ ಆಸ್ಪತ್ರೆಯಲ್ಲಿ ನೇತ್ರ ತಪಾಸಣೆಗೆ ಬಳಸಿದ ‘ತ್ರೀನೇತ್ರ’ ಉಪಕರಣವು ಬೆಂಗಳೂರಿನ ಬಸವನಗುಡಿಯಲ್ಲಿ ತಯಾರಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಟಾರ್ಟ್‌ಅಪ್‌ ಇಂಡಿಯಾ’  ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ನಾಲ್ಕೈದು ವಿಶೇಷ ಸಾಧನಗಳಲ್ಲಿ  ಈ ಪುಟ್ಟ ವೈದ್ಯಕೀಯ ಸಾಧನವೂ ಒಂದಾಗಿತ್ತು. ಅಮೆರಿಕದ ಸಿಲಿಕಾನ್‌ವ್ಯಾಲಿಗೆ ತೆರಳಿದ್ದ ಮೋದಿ ಅವರು ಅಲ್ಲಿನ ತಂತ್ರಜ್ಞರಿಗೆ ಪರಿಚಯಿಸಿದ ದೇಶಿ ವಿಶಿಷ್ಟ ಉತ್ಪನ್ನಗಳಲ್ಲಿ ಇದು ಕೂಡ ಒಂದಾಗಿತ್ತು.  ಇವೆಲ್ಲವೂ ವೈದ್ಯಕೀಯ ಉಪಕರಣ ತಯಾರಿಕೆಯ  ಫೋರಸ್‌ ಹೆಲ್ತ್‌  ಸ್ಟಾರ್ಟ್‌ಅಪ್‌ನ ಹೆಗ್ಗಳಿಕೆಗಳಾಗಿವೆ.

ತಪ್ಪಿಸಬಹುದಾದ ಅಂಧತ್ವ ನಿವಾರಣೆ ಮಾಡುವುದೇ ಫೋರಸ್‌ ಹೆಲ್ತ್‌ನ ಮುಖ್ಯ ಉದ್ದೇಶವಾಗಿದೆ. ದೃಷ್ಟಿ ಕಳೆದುಕೊಳ್ಳಲು ಹಲವಾರು ಕಾರಣಗಳಿವೆ. ವಯಸ್ಕರಲ್ಲಿ ಕಂಡು ಬರುವ ದೃಷ್ಟಿದೋಷಕ್ಕೆ ಮಧುಮೇಹವೂ  ಕಾರಣವಾಗಲಿದೆ. ಇದುವರೆಗೆ 30 ಲಕ್ಷ ಜನರು  ‘ತ್ರಿನೇತ್ರ’ದ ಪ್ರಯೋಜನ ಪಡೆದುಕೊಂಡಿದ್ದಾರೆ. 1,300 ಸಾಧನಗಳು 25 ದೇಶಗಳಲ್ಲಿ ನೇತ್ರ ತಪಾಸಣೆಗೆ ಬಳಕೆಯಾಗುತ್ತಿವೆ.

ವೈದ್ಯವಿಜ್ಞಾನದ ಪ್ರಗತಿಯಿಂದಾಗಿ ಅವಧಿಗೆ ಮುಂಚೆ ಜನಿಸುವ ಮಕ್ಕಳ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆದರೆ, ಇಂತಹ ಶಿಶುಗಳು ಅಂಧತ್ವ ಸಮಸ್ಯೆಗೆ ಗುರಿಯಾಗುತ್ತಿವೆ.

ಆರಂಭಿಕ ವಾರಗಳಲ್ಲಿಯೇ ಶಿಶುಗಳ ನೇತ್ರ ತಪಾಸಣೆಗೂ ನೆರವಾಗುವ ಪುಟ್ಟ ಸಾಧನ  ‘ತ್ರಿನೇತ್ರ ನಿಯೊ’ ತಯಾರಿಕೆಗೂ ಮುಂದಾಗಿರುವ ಸಂಸ್ಥೆಯು ಶಿಶುಗಳ ಸಂಭವನೀಯ ಅಂಧಕಾರದ ಭವಿಷ್ಯ ಬದಲಿಸಿ ಅವರ ಬದುಕಿನಲ್ಲಿಯೂ ಬೆಳಕು ಮೂಡಲು ಕಾರಣವಾಗುತ್ತಿದೆ. ನಾರಾಯಣ ನೇತ್ರಾಲಯದ ಡಾ. ಆನಂದ ವಿನೇಕರ್ ಅವರ ನೆರವು, ಉತ್ತೇಜನದಿಂದ ಈ ‘ತ್ರಿನೇತ್ರ ನಿಯೊ’ ಸಾಧನ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.

ನೇತ್ರ ತಪಾಸಣೆಗೆ ನೆರವಾಗುವ ವಿಶಿಷ್ಟ ಮತ್ತು ಕಡಿಮೆ ಬೆಲೆಯ ಸಾಧನಗಳ ತಯಾರಿಕೆಯಲ್ಲಿ  ವಿಶ್ವದ 2ನೆ ಸಂಸ್ಥೆ ಇದಾಗಿದೆ ಎನ್ನುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ. ಅಮೆರಿಕದಲ್ಲಿ ಅಂಗ ಸಂಸ್ಥೆ ಸ್ಥಾಪಿಸುವ ಮೂಲಕ ವಹಿವಾಟು ವಿಸ್ತರಣೆಗೂ  ಮುಂದಾಗಿದೆ. ‘ಅಮೆರಿಕದಲ್ಲಿನ ವಹಿವಾಟು ಯಶಸ್ವಿಯಾದರೆ, ಮುಂದಿನ ವರ್ಷ ಯುರೋಪ್‌  ಮಾರುಕಟ್ಟೆಗೂ ಲಗ್ಗೆ ಹಾಕಲಾಗುವುದು’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಕೆ. ಚಂದ್ರಶೇಖರ್‌ ಹೇಳುತ್ತಾರೆ.

‘ಈ ಮೊದಲು 9 ತಿಂಗಳು ಪೂರ್ಣಗೊಳ್ಳುವ ಮೊದಲೇ ಜನಿಸುವ ಮಕ್ಕಳಲ್ಲಿ ಸಾವಿನ ಸಂಖ್ಯೆ ಹೆಚ್ಚಿಗೆ ಇರುತ್ತಿತ್ತು. ನವಜಾತು ಶಿಶುಗಳಿಗಾಗಿಯೇ ಪ್ರತ್ಯೇಕ ತೀವ್ರ ನಿಗಾ ಘಟಕ ಮತ್ತಿತರ ಸೌಲಭ್ಯಗಳಿಂದಾಗಿ ಇಂತಹ ಶಿಶುಗಳ ಸಾವಿನ ಸಂಖ್ಯೆ ಗಣನೀಯವಾಗಿ ಇಳಿದಿದೆ. ಆದರೆ, ಇಂತಹ ಮಕ್ಕಳು ಜನಿಸಿದ 3 ರಿಂದ 5 ವಾರಗಳಲ್ಲಿ ದೃಷ್ಟಿದೋಷ ಕಂಡು ಬಂದು ಅವರ ಭವಿಷ್ಯದ ಬದುಕು ಸಂಪೂರ್ಣ ಅಂಧಕಾರಮಯ ವಾಗುತ್ತದೆ.ಇಂತಹ ಸಾಧ್ಯತೆ ತಪ್ಪಿಸಲು ನಾರಾಯಣ ನೇತ್ರಾಲಯದ ಡಾ. ವಿನೇಕರ್‌  ಶ್ರಮಿಸುತ್ತಿದ್ದಾರೆ.

ಅವರ ಸಹಕಾರ, ಮಾರ್ಗದರ್ಶನದಿಂದ ‘ತ್ರಿನೇತ್ರ ನಿಯೊ’ ಸಾಧನವನ್ನೂ ಸಂಸ್ಥೆ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಇರುವ  ಇಂತಹ ಸಾಧನಕ್ಕೆ ಹೋಲಿಸಿದರೆ ಬೆಲೆಯು ಒಂದು ನಾಲ್ಕಾಂಶದಷ್ಟು ಕಡಿಮೆ ಇದೆ.

ಅವಧಿಪೂರ್ಣ ಜನಿಸುವ ಶಿಶುಗಳಲ್ಲಿ ಕಂಡುಬರುವ (Retinopathy of prematurity –ROP)  ದೃಷ್ಟಿದೋಷವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಈ ಪುಟ್ಟ ಸಾಧನ ನೆರವಾಗುತ್ತಿದೆ.

ವಯಸ್ಕರಲ್ಲಿ ಕಂಡು ಬರುವ ಕಣ್ಣಿನ ಪೊರೆ ಸಮಸ್ಯೆ ಪತ್ತೆ ಹಚ್ಚಲೂ ‘ತ್ರಿನೇತ್ರ’ ಸಾಧನ ನೆರವಾಗುತ್ತಿದೆ. ನೇತ್ರ ಪರೀಕ್ಷೆ ಮೊದಲು ದ್ರವ ಹಾಕುವ ಅನಿವಾರ್ಯತೆಯೂ ಇಲ್ಲಿ ಉದ್ಭವಿಸಲಾರದು.

ಪುಟ್ಟ ಸೂಟ್‌ಕೇಸ್‌ನಲ್ಲಿ  ಎಲ್ಲೆಂದರಲ್ಲಿಗೆ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಕೈಗೆಟುಕುವ ಬೆಲೆ, ತರಬೇತಿ ಪಡೆದ ತಂತ್ರಜ್ಞರೂ  ಸುಲಭವಾಗಿ ನೇತ್ರ ತಪಾಸಣೆ ಮಾಡಬಹುದು – ಇವು ‘ತ್ರಿನೇತ್ರ’ದ ವೈಶಿಷ್ಟ್ಯಗಳಾಗಿವೆ.

ಸಂಶೋಧನೆಗಳ ಮೂಲಕ ಜನೋಪಯೋಗಿ ವೈದ್ಯಕೀಯ ಉತ್ಪನ್ನ ತಯಾರಿಸಿ ಅದನ್ನು ವ್ಯಾಪಕವಾಗಿ  ಬಳಕೆಗೆ ತರುವುದು.   ಅಗ್ಗದ ಸಾಧನಗಳು ಫಲಾನುಭವಿಗಳಿಗೆ ನೇರವಾಗಿ ತಲುಪುವಂತೆ ಮಾಡುವುದು ಸಂಸ್ಥೆಯ ಧ್ಯೇಯವಾಗಿದೆ. ಮೊಬೈಲ್‌  ಬ್ಲೂಟೂತ್‌ ನೆರವಿನಿಂದ ಸುಲಭವಾಗಿ ನೇತ್ರ ತಪಾಸಣೆ ಮಾಡುವ ‘ಸ್ಪೆಕ್ಟೊ’ ಹೆಸರಿನ ಹೊಸ ಸಾಧನವನ್ನೂ  ಇದೇ ಮೊದಲ ಬಾರಿಗೆ ವೈದ್ಯಲೋಕಕ್ಕೆ ಪರಿಚಯಿಸಲಾಗುತ್ತಿದೆ.

ಹಳ್ಳಿ, ಕೊಳೆಗೇರಿಗಳಿಗೆ ಭೇಟಿ ನೀಡಿ  ‘ತ್ರಿನೇತ್ರ’ದ ಮೂಲಕ ತಪಾಸಣೆ ನಡೆಸಿ ಇಂಟರ್‌ನೆಟ್‌ ಮೂಲಕ ಚಿತ್ರ ತೆಗೆದು ವೈದ್ಯರಿಗೆ ರವಾನೆ ಮಾಡುವ ಸೌಲಭ್ಯವೂ ಇದರಲ್ಲಿ ಇದೆ. ಲ್ಯಾಟಿನ್‌ ಅಮೆರಿಕ, ಮೆಕ್ಸಿಕೊ, ಫಿಲಿಪ್ಪೀನ್ಸ್‌ ಮನಿಲಾ ಮತ್ತಿತರ ಕಡೆಗಳಲ್ಲಿಯೂ ‘ತ್ರಿನೇತ್ರ’ ಬಳಕೆಯಾಗುತ್ತಿದೆ.

ಬಿಟ್ಸ್‌ಪಿಲಾನಿ ಎಂಜಿನಿಯರಿಂಗ್‌ ಮತ್ತು   ಐಐಎಂ ಕೋಲ್ಕತ್ತದ ಪದವೀಧರರಾದ ಕೆ. ಚಂದ್ರಶೇಖರ್‌ ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದರೂ, 1989ನಿಂದ ಬೆಂಗ ಳೂರಿನಲ್ಲಿಯೇ ನೆಲೆಸಿ ಅಪ್ಪಟ ಕನ್ನಡಿಗರಾಗಿದ್ದಾರೆ.   ಫಿಲಿಪ್ಸ್‌ ಸಂಸ್ಥೆಯಲ್ಲಿ  20 ವರ್ಷಗಳ ಕಾಲ ಸೆಮಿ ಕಂಡಕ್ಟರ್‌ ವಿಭಾಗದಲ್ಲಿ ಕೆಲಸ ಮಾಡಿರುವ ಚಂದ್ರಶೇಖರ್‌ ಉದ್ಯಮದ ಹಿನ್ನೆಲೆ ಏನೂ ಇಲ್ಲ.

ಮದುರೈನ ವಿಶ್ವವಿಖ್ಯಾತ ಅರವಿಂದ  ಕಣ್ಣಾಸ್ಪತ್ರೆಯ ಡಾ. ಅರವಿಂದ ಅವರು ಫಿಲಿಪ್ಸ್‌ ಸಂಸ್ಥೆಯಲ್ಲಿ ಸಂಶೋಧನೆ ಬಗ್ಗೆ ಮಾಡಿದ ಉಪನ್ಯಾಸ ಇವರ ಬದುಕಿನ ದಿಕ್ಕನ್ನೇ ಬದಲಿಸಿದೆ.

2005ರಲ್ಲಿ ಯಾರಾದರೂ ಇವರನ್ನು ಮುಂಬರುವ ದಿನಗಳಲ್ಲಿ ಉದ್ಯಮಿಯಾಗಲಿದ್ದಾರೆ  ಎಂದು ಯಾರಾದರೂ ಭವಿಷ್ಯ  ಹೇಳಿದ್ದರೆ   ಅವರ ಪಾಲಿಗೆ ಅದೊಂದು ತಮಾಷೆಯಾಗಿರುತ್ತಿತ್ತು. ಆದರೆ, 2009ರಲ್ಲಿ ಅಂತಹ ಕನಸಿಗೆ ಮೂರ್ತ ರೂಪ ಬಂದಿತ್ತು. ಚಾರ್‌ಧಾಮ್‌ ಯಾತ್ರೆ ಸಂದರ್ಭದಲ್ಲಿ ಕೇದಾರ್‌ನಾಥ್‌ನ ಸಮ್ಮುಖದಲ್ಲಿ ಉದ್ಯಮ ಆರಂಭಿಸುವ ಇವರ ನಿರ್ಧಾರ ದೃಢವಾಗುತ್ತದೆ. 

ಸಹೋದ್ಯೋಗಿ ಜತೆ ಸೇರಿ ಫೋರಸ್‌ ಸಂಸ್ಥೆ ಹುಟ್ಟು ಹಾಕುತ್ತಾರೆ. ಆರಂಭದಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ.  ಜನರು ಮತ್ತು ಸಮಾಜಕ್ಕೆ ಒಳ್ಳೆಯದು ಮಾಡುತ್ತಿರುವುದರಿಂದಲೇ  ಸಂಸ್ಥೆ  ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಚಂದ್ರಶೇಖರ್‌ ವಿನೀತ ಭಾವದಿಂದ ಹೇಳುತ್ತಾರೆ. ಸಂಸ್ಥೆಯ ಉತ್ಪನ್ನಗಳನ್ನು ಜಾಗತಿಕ ಬ್ರ್ಯಾಂಡ್‌ ಆಗಿ ಬೆಳೆಸುವುದು ಇವರ ಹೆಬ್ಬಯಕೆಯಾಗಿದ್ದು, ಆ ಕನಸು ನನಸಾಗಿಸುವ   ನಿಟ್ಟಿನಲ್ಲಿ ದೃಢ  ಹೆಜ್ಜೆಗಳನ್ನಿಡುತ್ತಿದ್ದಾರೆ.

ಮಾಹಿತಿಗೆ 080 4162 4041/ 4162 4042

***
* ₹80 ಕೋಟಿ ಇದುವರೆಗಿನ ಬಂಡವಾಳ ಹೂಡಿಕೆ
* 120 ಸಿಬ್ಬಂದಿ  ಸಂಖ್ಯೆ
* 60 ರಿಂದ70 ಸಂಶೋಧನೆಯಲ್ಲಿ ತೊಡಗಿರುವ ಸಿಬ್ಬಂದಿ
* 16 ಪೇಟೆಂಟ್‌ಗೆ ಅರ್ಜಿ
* 4ಅಂತರರಾಷ್ಟ್ರೀಯ ಪೇಟೆಂಟ್‌ ಮಂಜೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT