ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿಯ ಅರಿವಿನ ನಡಿಗೆ ಸ್ವಾಮಿ ವಿವೇಕಾನಂದ

Last Updated 10 ಜನವರಿ 2017, 19:30 IST
ಅಕ್ಷರ ಗಾತ್ರ

ಪುರುಷಮಾರ್ಗದ, ಪೌರುಷದ ಅಧ್ವರ್ಯು ಸ್ವಾಮಿ ವಿವೇಕಾನಂದ. ತಮ್ಮ ಗುರುಗಳಾದ ಶ್ರೀರಾಮಕೃಷ್ಣ ಪರಮಹಂಸರ ದಿವ್ಯಮಾರ್ಗದರ್ಶನದಲ್ಲಿ ಕತ್ತಿಯಲಗಿನ ಹಾದಿಯಲ್ಲಿ ನಡೆದು ಇತರರಿಗೆ ಆ ಮುಕ್ತಿಪಥವನ್ನು ತೋರಿಸಿಕೊಟ್ಟವರು ಅವರು. ಜೀವನದ ಇಹ-ಪರಗಳೆರಡರ ಉನ್ನತಿಗೂ ಸೂಕ್ತ ದಾರಿಯನ್ನು ತಮ್ಮ ಮಾತಿನ ಪಂಜಿನಲ್ಲಿ ಬೆಳಗಿದರು.

ತಮ್ಮ ಕಂಚಿನ ಕಂಠದಲ್ಲಿ ಮೊಳಗಿದ ವಾಣಿಯಿಂದ ಭಾರತೀಯ ಜನಮನವನ್ನು ಜಾಗೃತಗೊಳಿಸಿದರು; ವಿಶ್ವದ ಗಮನವನ್ನು ಭಾರತದತ್ತ ಸೆಳೆದರು. ಭಾರತೀಯ ಯುವಜನತೆಗೆ ವಿವೇಕಾನಂದರು ಈ ಶತಮಾನದ ಕೊಡುಗೆ. ಧರ್ಮವನ್ನು ಅಡುಗೆಮನೆಯಿಂದ ಆಚೆಗೆ ತಂದು ಬೀದಿಯ ಭಿಕಾರಿಯ ಹೊಟ್ಟೆಯ ಹಸಿವನ್ನು ತುಂಬಿಸುವುದು ಧರ್ಮದ ಮೊದಲ ಆದ್ಯತೆ ಎಂದು ತೋರಿದವರು ಅವರು. ಸ್ವಾಮಿ ವಿವೇಕಾನಂದರು ತಮ್ಮ ಸೋದರಸಂನ್ಯಾಸಿಗಳಿಗೆ ಸೇವೆಯ ದೀಕ್ಷೆ ತೊಡುವಂತೆ ಉತ್ತೇಜಿಸಿದರು.

ಕೇವಲ ವೈಯಕ್ತಿಕ ಮುಕ್ತಿ ಪಡೆಯುವುದಕ್ಕಿಂತ ಸಮಾಜದಲ್ಲಿರುವ ದೀನದಲಿತರ ಸೇವೆಯಿಂದ, ಅವರನ್ನು ಉತ್ತಮಪಡಿಸುವುದರ ಮೂಲಕ ತಮ್ಮ ಮೋಕ್ಷಾನಂದವನ್ನು ಪಡೆಯುವಂತೆ ಅವರು ಸೂಚಿಸಿದರು. 1894ರಲ್ಲಿ ಅವರು ಅಮೆರಿಕೆಯಿಂದ ಆಲಂಬಜಾರಿನಲ್ಲಿದ್ದ ತಮ್ಮ ಮಠದ ಸೋದರಸಂನ್ಯಾಸಿಗಳಿಗೆ ಬರೆದ ಪತ್ರವೊಂದರ ಒಕ್ಕಣೆ ಹೀಗಿದೆ: ‘ನಾನು ನಿಮಗೊಂದು ಹೊಸ ಆಲೋಚನೆಯನ್ನೂ ಆದರ್ಶವನ್ನೂ ನೀಡುತ್ತಿದ್ದೇನೆ.

ನೀವು ಇದನ್ನು ಕಾರ್ಯಾಚರಣೆಗೆ ತರಬಲ್ಲಿರಾದರೆ ನಾನು, ನೀವು ನಿಜವಾದ ಪುರುಷರು ಮತ್ತು ಕಾರ್ಯಶೀಲರು ಎಂದು ತಿಳಿಯುತ್ತೇನೆ. ಬಡವರೂ ನಿರ್ಗತಿಕರೂ ಆದ ಕೆಲವರನ್ನು ನಿಮ್ಮ ಸುತ್ತ ಕುಳ್ಳಿರಿಸಿಕೊಂಡು ಅವರಿಗೆ ನೀವು ಭೂಗೋಳ, ಖಗೋಳವಿಜ್ಞಾನ, ಮೊದಲಾದ ವಿಷಯಗಳನ್ನೂ ಜೊತೆಗೆ ಶ್ರೀರಾಮಕೃಷ್ಣರನ್ನೂ ಕುರಿತು ತಿಳಿಸಿಕೊಡಿ.’ ಶತಮಾನಗಳ ದಾಸ್ಯ ಮತ್ತು ಪರಾಡಳಿತ ಜನಸಾಮಾನ್ಯರನ್ನು ಅಧೋಗತಿಗೆ, ಅಸಹಾಯಕತೆಗೆ ತಳ್ಳಿಹಾಕಿತ್ತು. ಪ್ರಾಂತೀಯ ರಾಜರನ್ನು, ಪಾಳೆಯಗಾರರನ್ನು ಮತ್ತು ಬ್ರಿಟಿಷರನ್ನು ಅವಲಂಬಿಸಿ ಈ ಜನರ ಉನ್ನತಿಯನ್ನು ಸಾಧಿಸಲು ಸಾಧ್ಯವಿರಲಿಲ್ಲವೆಂಬ ಅಂಶ ವಿವೇಕಾನಂದರಿಗೆ ಮನದಟ್ಟಾಗಿತ್ತು.

ಜನಸಾಮಾನ್ಯರೇ ತಮ್ಮ ಸಹಮಾನವರನ್ನು ಮೇಲೆತ್ತಲು ಸಾಧ್ಯವೆಂದು ಅವರು ನಂಬಿದ್ದರು. ಮೊದಲಿಗೆ ತಾಂತ್ರಿಕ ಹಾಗೂ ಸಾಮಾನ್ಯ ಶಿಕ್ಷಣವನ್ನು ನೀಡುವುದರ ಮೂಲಕ ಬಡತನವನ್ನು ನಿವಾರಿಸುವುದು ಅವರ ಮೊದಲ ಗುರಿಯಾಗಿತ್ತು. ಇದರೊಂದಿಗೇ ಭಾರತದ ಬೆನ್ನೆಲುಬಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಆಶಯವಿತ್ತು.

ಅವರ ಸಂದೇಶಗಳನ್ನು ಪುಂಖಾನುಪುಂಖವಾಗಿ ಪುನರುಚ್ಚರಿಸುವ ಭಕ್ತರಿರುವಂತೆ, ಅವರ ಆದೇಶವನ್ನು ಹೃದಯದಲ್ಲಿರಿಸಿಕೊಂಡು ಕುಷ್ಠರೋಗಿಗಳನ್ನು ಉಪಚರಿಸುವ, ಅಂಧರಿಗೆ ಬೆಳಕು ತೋರುವ, ಸೇವೆಯಲ್ಲಿಯೇ ಆಧ್ಯಾತ್ಮಿಕ ಜಪದ ಆನಂದ ಕಾಣುವ ಸಾಧುಗಳೂ ಇದ್ದಾರೆ.

ನಗರದ ತಂಪುಕೋಣೆಯಲ್ಲಿ ಕುಳಿತು ವಿವೇಕಾನಂದರ ಕುರಿತ ಒಂದೆರಡು ಪುಸ್ತಕಗಳನ್ನೋದಿ ‘ವಿವೇಕಾನಂದರು ಹೀಗಿದ್ದರು’ ಎಂದು ಅಳೆದು ತೂಗುವ ಬುದ್ಧಿವಂತರಿರುವಂತೆ, ಹರಿಜನ ಗಿರಿಜನ ಹಾಡಿಗಳಲ್ಲಿ ಅವರ ಉದ್ಧಾರಕ್ಕೆ ಶ್ರಮಿಸುತ್ತಿರುವ ಅವರ ಲೌಕಿಕ ಅಜ್ಞಾನಕ್ಕೆ ಜ್ಞಾನದ ಸುದರ್ಶನವನ್ನು ಪ್ರಯೋಗಿಸುತ್ತಿರುವ, ವಿವೇಕಾನಂದರು ನೀಡಿದ ಜೀವರೂಪಿ ಶಿವನ ಆರಾಧನಾಸೂತ್ರವನ್ನು ಪಾಲಿಸುತ್ತಿರುವ ವಿವೇಕಾನಂದ ಅನುಯಾಯಿಗಳೂ ಇದ್ದಾರೆ.

ಒಟ್ಟಿನಲ್ಲಿ ವಿವೇಕಾನಂದರೆಂಬ ವ್ಯಕ್ತಿಯ, ಅವರ ವ್ಯಕ್ತಿತ್ವದ ಪ್ರಭಾವ ದಟ್ಟವಾಗಿದೆ. ಭಾರತದ ಹಲವರು ಸ್ವಾತಂತ್ರ ಹೋರಾಟಗಾರರು ಅವರ ಪ್ರಭಾವಕ್ಕೆ ಒಳಗಾದುದನ್ನು ಚರಿತ್ರೆ ದಾಖಲಿಸುತ್ತದೆ. ದೇಶ–ಧರ್ಮಗಳೆರಡನ್ನೂ ಪ್ರೀತಿಸಿ ಉಳಿಸಿದ ಧೀರಸಂನ್ಯಾಸಿ ಅವರು. 39 ವರ್ಷಗಳ ಅವಧಿಯಲ್ಲಿ ಅವರು ಸಾಧಿಸಿದ್ದನ್ನು ಅರಗಿಸಿಕೊಳ್ಳಲು ಒಂದು ಶತಮಾನವೂ ಸಾಲದು ಎಂದರೆ ತಪ್ಪಾಗಲಾರದು. ಭಾರತಕ್ಕೆ ಸಾಂಸ್ಕೃತಿಕ ಏಕಾತ್ಮಕತೆಯ ಸೂತ್ರವನ್ನು ತಂದವರು ಅವರು.

ಜನಸಾಮಾನ್ಯರನ್ನು ಅವರ ಮೂಲನಂಬಿಕೆಗಳಿಗೆ ಭಂಗಬರದಂತೆ ಅವರನ್ನು ಮೇಲೆತ್ತುವ ಮಾರ್ಗವನ್ನು ಸೂಚಿಸಿದವರು ಅವರು. ಕಳೆದುಹೋದ ಪ್ರತಿಷ್ಠೆ, ಆತ್ಮಗೌರವಗಳು ಭಾರತಕ್ಕೆ ಮರಳಿ ದೊರೆಯುವಂತೆ ಮಾಡಿದವರು ಅವರು. ಧಾರ್ಮಿಕ ದೃಷ್ಟಿಯಿಂದ ನೋಡುವಾಗ ಅವರು ಅಧ್ಯಾತ್ಮದ ಅತ್ಯುನ್ನತ ಸ್ಥಿತಿ ತಲುಪಿದ ಸಿದ್ಧ, ಅವತಾರಪುರುಷ. ಸುಧಾರಣೆಯ ದೃಷ್ಟಿಯಿಂದ ನೋಡುವಾಗ ಅವರೊಬ್ಬ ಶ್ರೇಷ್ಠ ಸಮಾಜಸುಧಾರಕ.

ಸಮಾಜಸಂಘಟನೆಯ ದೃಷ್ಟಿಯಿಂದ ಅವರನ್ನು ಗಮನಿಸಿದಾಗ ಅತಿ ಸಮರ್ಥ ಸಂಘಟನಕಾರ. ಧೀರತೆಯ ದೃಷ್ಟಿಯಿಂದ ನೋಡಿದಾಗ ಅವರೊಬ್ಬ ದಿಟ್ಟ ಹೋರಾಟಗಾರ.ಅವರ ಮಾತುಗಳಲ್ಲಿ ಅಡಗಿರುವ ಧ್ವನಿಯೆಂದರೆ ಅದು ಕ್ರಾಂತಿಯ ಕೇಂದ್ರಬಿಂದುವೇ ಹೌದು.  ಕವಿಯೊಬ್ಬರ ಮಾತೊಂದು ಅವರನ್ನು ಕಂಡರಿಸಿರುವ ಪರಿ: ‘ನುಡಿದ ನುಡಿಯೊಂದೊಂದು ಸಿಡಿಲ ಕಿಡಿ; ನಡೆ ಪೌರುಷದ ತೇರು ಹರಿದಂತೆ’.

ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳನ್ನು ಅಧ್ಯಯನ ಮಾಡುವವರ ವ್ಯಕ್ತಿತ್ವವೇ ಪುನರ್ಜನ್ಮ ಪಡೆಯುವುದು ಖಂಡಿತ. ‘ನೀವು ಭಾರತವನ್ನು ಅರಿಯಬೇಕಾದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ’ ಎಂದರು ಮಹರ್ಷಿ ಅರವಿಂದರು.

‘ವಿವೇಕಾನಂದರನ್ನು ಓದುವ ಮೊದಲೂ ಭಾರತವನ್ನು ಪ್ರೀತಿಸುತ್ತಿದ್ದೆ, ಆದರೆ ಆ ಬಳಿಕ (ಅಧ್ಯಯನ ಮಾಡಿದ ಬಳಿಕ) ನನ್ನ ರಾಷ್ಟ್ರಪ್ರೇಮ ಸಹಸ್ರಪಟ್ಟು ಬೆಳೆಯಿತು.’ - ಇದು ಮಹಾತ್ಮ ಗಾಂಧಿಯವರ ಮಾತು. ಇಂತಹ ಮಹಾಚೇತನದ ಪೂರ್ಣಪರಿಚಯ ನಮ್ಮ ಯುವಜನಾಂಗಕ್ಕೆ ದೊರೆಯಬೇಕು. ಇಂದು ಮಾಹಿತಿತಂತ್ರಜ್ಞಾನ ವಿಪುಲವಾಗಿ ಬೆಳೆದಿರುವ ದಿನಗಳಲ್ಲಿ ಅವನ್ನು ಬಳಸಿಕೊಂಡು ವಿವೇಕಾನಂದರ ಚಿಂತನೆಯನ್ನು ಬಿತ್ತರಿಸಬೇಕು.

ಅವರವರ ಭಾವಕ್ಕೆ ಅನುಗುಣವಾಗಿ ಜನರೇ ಅದನ್ನು ಜೀರ್ಣಿಸಿಕೊಂಡು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆ ಸ್ವಾತಂತ್ರ್ಯ ಅವರಿಗೆ ದೊರೆಯಬೇಕು. ವಿವೇಕಾನಂದರ ಭಾಷೆ ಸರಳ, ಸುಂದರ ಮತ್ತು ಶಕ್ತಿಶಾಲಿ. ಅದಕ್ಕೆ ಬಣ್ಣಕಟ್ಟುವುದರಿಂದ ಅಂದಗೆಡುತ್ತದೆಯೇ ಹೊರತು ಪ್ರಭಾವ ಹೆಚ್ಚುವುದಿಲ್ಲ. ಆದುದರಿಂದ ವಿವೇಕಾನಂದರ ಜೀವನ-ಸಂದೇಶಗಳನ್ನು ಜನರ, ಮುಖ್ಯವಾಗಿ ಯುವಜನರ ಮುಂದಿಡಬೇಕು.

ಸ್ವಾಮಿ ವಿವೇಕಾನಂದ ಎಂದ ಕೂಡಲೆ ಕಣ್ಣಿಗೆ ಕಟ್ಟುವುದು ವಿಶ್ವಮಾನ್ಯವಾದ, ಅವರು ಆತ್ಮವಿಶ್ವಾಸದ ಪ್ರತೀಕವೆಂಬಂತೆ ಕೈಕಟ್ಟಿ ನಿಂತಿರುವ ‘ಚಿಕಾಗೊ’ ಭಂಗಿ. ವಿವೇಕಾನಂದರೆಂದರೆ ಸ್ಫೂರ್ತಿಯ ಸೆಲೆ. ಆ ಸ್ಫೂರ್ತಿಯ ಸಾಕಾರಮೂರ್ತಿಯಾಗಿ ಅವರ ಆ ನಿಲುವು ನಮ್ಮ ಗಮನ ಸೆಳೆಯುತ್ತದೆ. ಆದರೆ ಅವರನ್ನು ಸರಿಯಾಗಿ ಅರಿಯುವ ಪ್ರಯತ್ನ ಮಾಡದ ಹೊರತು ಅವರು ಏನು ಎಂಬುದರ ನಿಜದ ನೆಲೆ ತಲುಪುವುದು ಅಸಾಧ್ಯ.

ಸ್ವಾಮಿ ವಿವೇಕಾನಂದರ ಬಗ್ಗೆ ವಿಭಿನ್ನ ನಿಲುವುಗಳಿವೆ. ಅವರನ್ನು ಅವತಾರಪುರುಷನೆಂದು, ಕಾಶಿ ವೀರೇಶ್ವರನ ಅವತಾರವೆಂದು ನಂಬಿ ಗುಡಿ ಕಟ್ಟಿ ಆರಾಧಿಸುವ ಪಂಥವೊಂದಾದರೆ, ಅವರು ಸಾಮಾನ್ಯ ಮನುಷ್ಯ,  ಸಾಧಾರಣ ವಿದ್ಯಾರ್ಥಿಯಂತೆ ಇದ್ದರು, ಅವರಲ್ಲೇ ಗೊಂದಲಗಳಿದ್ದವು, ಅವರಿಗೆ ಅನೇಕ ಕಾಯಿಲೆ ಗಳಿದ್ದವು, ಚಟಗಳಿದ್ದವು ಇತ್ಯಾದಿಯಾಗಿ ‘ಮಾನುಷ’ ನೆಲೆಯಲ್ಲಿ ಅವರನ್ನು ಅಳೆಯುವ ಪ್ರಯತ್ನ ಇನ್ನೊಂದು ಬಗೆಯದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ವಿವೇಕಾನಂದರೇನು ಪುರಾಣಕಾಲದ ಪಾತ್ರವಲ್ಲ.

ನೆನ್ನೆ ಮೊನ್ನೆ ಎಂಬಷ್ಟು ನಮಗೆ ಹತ್ತಿರವಾದ ಕಾಲಮಾನದವರು. 1863ರಿಂದ 1902ರವರೆಗಿನ ಅವರ ಜೀವಿತಾವಧಿಯ ಎಲ್ಲ ಆಕರಗಳು ಲಭ್ಯವಿರುವಂತಹವೇ. ಹೀಗಾಗಿ ಆ ದಾಖಲೆಗಳನ್ನು ಮತ್ತು ಅಂದಿನ ಸ್ಥಿತಿಗತಿಗನುಸಾರವಾಗಿ ಅವರ ಸ್ಥಾನವನ್ನು ನಿಷ್ಕರ್ಷಿಸುವ ಗಂಭೀರ ಪ್ರಯತ್ನ ಮಾಡಬೇಕು ಅಷ್ಟೆ. ಅಂತಹ ಪ್ರಯತ್ನಗಳು ಬಹಳ ವಸ್ತುನಿಷ್ಠವಾಗಿ ನಡೆಯಬೇಕು. ಅದು ತಕ್ಕಮಟ್ಟಿಗೆ ನಡೆದಿರುವುದು ವಿದೇಶೀಯರಿಂದಲೇ! ಮೇರಿ ಲೂಯಿ ಬರ್ಕ್ ಎಂಬಾಕೆ ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಕಾಲಿಟ್ಟ ಕ್ಷಣದಿಂದ, ಅವರು ಅಲ್ಲಿಂದ ಭಾರತಕ್ಕೆ ಹಿಂದಿರುಗಲು ತೆಗೆದ ಕೊನೆಯ ಹೆಜ್ಜೆಯವರೆಗಿನ ಪ್ರತಿಯೊಂದು ಘಟನಾವಳಿಯನ್ನೂ ಸಾಕ್ಷ್ಯಾಧಾರ ಸಮೇತವಾಗಿ ದಾಖಲಿಸಿದ್ದಾರೆ.

ಅದು ‘ವಿವೇಕಾನಂದ ಇನ್ ದಿ ವೆಸ್ಟ್; ನ್ಯೂ ಡಿಸ್ಕವರೀಸ್’ ಎಂಬ ಸಂಪುಟಗಳಲ್ಲಿ ಮುದ್ರಿತವಾಗಿವೆ; ಅವು ಸುಲಭ ಬೆಲೆಯಲ್ಲಿ ಲಭ್ಯವೂ ಇವೆ. ಆದರೆ ಭಾರತದ ಅವರ ಜೀವಿತಾವಧಿಯನ್ನು ಹೀಗೆ ಸಮಗ್ರವಾಗಿ ಚಿತ್ರಿಸುವ ಪ್ರಯತ್ನ ಅಷ್ಟೊಂದು ಫಲಕಾರಿಯಾಗಲಿಲ್ಲ ಎಂಬುದು ವಿಷಾದನೀಯ ಸಂಗತಿ. ಚರಿತ್ರಕಾರ ಎಸ್. ಎನ್. ಧಾರ್ ಅವರ ‘ಎ ಕಾಂಪ್ರಹೆನ್ಸಿವ್ ಬಯಾಗ್ರಫಿ ಆಫ್ ಸ್ವಾಮಿ ವಿವೇಕಾನಂದ’ ಈ ನಿಟ್ಟಿನಲ್ಲಿ ನಡೆದಿರುವ ಒಂದು ಉತ್ತಮ ಪ್ರಯತ್ನ.

ಇನ್ನು ರಾಮಕೃಷ್ಣ ಮಠದ ಯತಿಗಳು ಬರೆದ ವಿವೇಕಾನಂದರ ಜೀವನಚರಿತ್ರೆಗಳೇನೋ ಹೇರಳವಾಗಿವೆ; ಆದರೆ ಅವುಗಳಲ್ಲಿ ಭಾವುಕ ಅಂಶಗಳು ಸಾಕಷ್ಟು ತೂರಿಕೊಂಡಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇವುಗಳಲ್ಲಿ ಹೆಸರಿಸಬಹುದಾದ ಒಂದು ಮುಖ್ಯಗ್ರಂಥವೆಂದರೆ ‘ದ ಲೈಫ್ ಆಫ್ ಸ್ವಾಮಿ ವಿವೇಕಾನಂದ ಬೈ ಹಿಸ್ ಈಸ್ಟರ್ನ್ ಆಂಡ್ ವೆಸ್ಟರ್ನ್ ಡಿಸೈಪಲ್ಸ್’.

ಕನ್ನಡದಲ್ಲಿ ಕುವೆಂಪು ಅವರು ತಮ್ಮ ವಿಶಿಷ್ಟ ಕವಿಶೈಲಿಯಲ್ಲಿ ಬರೆದ ‘ಸ್ವಾಮಿ ವಿವೇಕಾನಂದ’ ಅನೇಕ ವರ್ಷಗಳ ಕಾಲ ಕಾಲೇಜಿನ ವಿದ್ಯಾರ್ಥಿಗಳಿಗೆ ಪಠ್ಯವೂ ಆಗಿತ್ತು. ಕನ್ನಡದಲ್ಲಿ ಬಂದ ಸ್ವಾಮಿ ವಿವೇಕಾನಂದರ ಮತ್ತೊಂದು ಮುಖ್ಯ ಜೀವನಚರಿತ್ರೆ ಎಂದರೆ ಬೆಂಗಳೂರು ರಾಮಕೃಷ್ಣ ಮಠ ಪ್ರಕಾಶಿಸಿದ ಸ್ವಾಮಿ ಪುರುಷೋತ್ತಮಾನಂದರು ರಚಿಸಿದ ‘ವೀರಸಂನ್ಯಾಸಿ’, ‘ವಿಶ್ವವಿಜೇತ’ ಮತ್ತು ‘ವಿಶ್ವಮಾನವ’ ಎಂಬ ಮೂರು ಸಂಪುಟಗಳ ವಿಸ್ತೃತ ಜೀವನಚರಿತ್ರೆ. ಅವರಿವರು ಬರೆದ ಸ್ವಾಮಿಗಳ ಜೀವನಚರಿತ್ರೆ ಓದುವುದು ಒಂದಾದರೆ ಇನ್ನು ಅವರದೇ ವಿಚಾರಧಾರೆಯನ್ನು ಸಂಗ್ರಹಿಸಿದ ‘ದ ಕಂಪ್ಲೀಟ್ ವರ್ಕ್ಸ್ ಆಫ್ ಸ್ವಾಮಿ ವಿವೇಕಾನಂದ’ ಎಂಬ ಸಂಪುಟಗಳಿವೆ.

ಆಸಕ್ತರು ಪಟ್ಟುಹಿಡಿದು ಕುಳಿತರೆ ಇವುಗಳನ್ನು ಓದಲು ಹೆಚ್ಚು ಸಮಯ ಬೇಕಿಲ್ಲ. ಆದರೆ ಅರಗಿಸಿಕೊಳ್ಳಲು ಸಮಯ ಬೇಕು. ಮೊದಲು ಉಣಬೇಕಲ್ಲವೆ? ಈ ಲೇಖನದ ಉದ್ದೇಶವಿಷ್ಟೆ. ಯುವಜನರು ವಿವೇಕಾನಂದರನ್ನು ಓದಬೇಕು; ಸರಿಯಾದ ದೃಷ್ಟಿಕೋನದಿಂದ ಅವರನ್ನು ಅರಿಯುವ ಪ್ರಯತ್ನ ಮಾಡಬೇಕು. ಮತ್ತು ಅವರು ಕಂಡ ಭಾರತವನ್ನು ತಾವೂ ಕಾಣುವ ಪ್ರಯತ್ನ ಮಾಡಬೇಕು.

ವಿವೇಕಾನಂದ ಎಂದರೆ, ಅದು ಕೇವಲ ಪೂಜಿಸುವ ಪಟವಲ್ಲ; ಅವರ ಬದುಕನ್ನು ಗೌರವಿಸಿ, ಚಿಂತನೆಗಳನ್ನು ಆಧರಿಸಿ, ಅವರ ಆಲೋಚನೆಗಳನ್ನು ಅನುಸರಿಸುವ ಸಂಪುಟ ಎಂಬುದನ್ನರಿಯಬೇಕು.

***
ನೀವು ನಿಮ್ಮ ಸುತ್ತಲಿರುವ ಮಾನವಕೋಟಿಗೆ ಅನುಕಂಪಶೀಲರಾಗಿರಬೇಕು; ಆದರೆ ಬಲಾಢ್ಯರೂ ಯಾವುದಕ್ಕೂ ಬಗ್ಗದವರೂ ಆಗಿರಬೇಕು; ಹೀಗಿದ್ದರೂ ವಿನಯಶೀಲರೂ ಆಗಿರಬೇಕು.
–ಸ್ವಾಮಿ ವಿವೇಕಾನಂದ


(ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT