ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯಾಮರಣ ಕೋರಿದ ಸ್ವಾತಂತ್ರ್ಯ ಹೋರಾಟಗಾರನ ಪತ್ನಿ

Last Updated 11 ಜನವರಿ 2017, 11:43 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಅಬ್ಬೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಲಕ್ಷ್ಮಣೇಗೌಡರ ಪತ್ನಿ, 90 ವರ್ಷದ ಹೊಂಬಮ್ಮ ಅವರು ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಿಗೆ ಸೋಮವಾರ ಪತ್ರ ಬರೆದಿದ್ದಾರೆ.

‘ಜೀವನದಲ್ಲಿ ಬಹಳ ನೊಂದಿದ್ದೇನೆ. ನಮ್ಮ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಸಿಗುತ್ತಿಲ್ಲ. ಇದರಿಂದ ಬದುಕುವ ಇಚ್ಛೆ ದೂರವಾಗಿದೆ. ದಯಾ ಮರಣಕ್ಕೆ ಅವಕಾಶ ನೀಡಿ’ ಎಂದು ಅವರು ಮನವಿ ಮಾಡಿದ್ದಾರೆ. ‘ಗ್ರಾಮದಲ್ಲಿರುವ ನನ್ನ ಹಳೆಯ ಮನೆ ಕೆಡವಿ ಹೊಸ ಮನೆ ಕಟ್ಟಿಕೊಳ್ಳಲು ಸುಮಾರು 6 ವರ್ಷಗಳಿಂದಲೂ ಸಾಧ್ಯವಾಗುತ್ತಿಲ್ಲ.

ದಾಯಾದಿ ಕೆಂಪೇಗೌಡ ಎಂಬವರು  ಮನೆ ಕಟ್ಟಿಕೊಳ್ಳಲು ಬಿಡುತ್ತಿಲ್ಲ. ಆ ಜಾಗ ನನ್ನದು ಎಂದು ತಕರಾರು ತೆಗೆದು ಮನೆ ಕಾಮಗಾರಿ ನಿಲ್ಲಿಸುವಂತೆ ಮಾಡಿದ್ದಾರೆ. ಇದರಿಂದ ಮನ ನೊಂದಿರುವೆ’ ಎಂದು ಅವರು ತಿಳಿಸಿದ್ದಾರೆ. ‘ಕೆಂಪೇಗೌಡ ನನ್ನ ಮೇಲೆ ಮೊಕದ್ದಮೆ ದಾಖಲಿಸಿ ಮನೆ ಕಟ್ಟಿಕೊಳ್ಳದ ಹಾಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಇದರಿಂದ ಮನೆ ಕೆಲಸ ನಿಲ್ಲಿಸಿರುತ್ತೇನೆ. ನ್ಯಾಯಾಲಯದಲ್ಲಿ ಈ ಬಗ್ಗೆ ವಾದ ವಿವಾದ ನಡೆದು 2016ರ ಅಕ್ಟೋಬರ್ 22ರಂದು ನಮ್ಮ ಪರ ತೀರ್ಪು ಬಂದಿದೆ. ಮತ್ತೆ ಮನೆ ಕಾಮಗಾರಿ ಆರಂಭಿಸಲು ಹೋದಾಗ ಕೆಂಪೇಗೌಡ ಗಲಾಟೆ ಮಾಡಿದ್ದಾರೆ. ನನ್ನ ಹಾಗೂ  ಮಗನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ’ ಎಂದು  ವಿವರಿಸಿದ್ದಾರೆ.
‘ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರ ರಕ್ಷಣೆ ಕೇಳಿರುತ್ತೇನೆ. ಪೊಲೀಸರಿಂದಲೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. 6 ವರ್ಷಗಳಿಂದ ಅಲೆದು ಬೇಸತ್ತಿದ್ದೇನೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

‘ಮನವಿ ಪುರಸ್ಕರಿಸಿ ದಯಾಮರಣಕ್ಕೆ ಅವಕಾಶ ನೀಡಿ, ಇಲ್ಲವೆ ನನಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿ’ ಎಂದು ಕೋರಿದ್ದಾರೆ. ಈ ಮನವಿ ಪುರಸ್ಕರಿಸುವಂತೆ ಕೋರಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಸಿ.ಪಿ.ಯೋಗೇಶ್ವರ್, ಜಿಲ್ಲಾಧಿಕಾರಿ ಮಮತಾ, ತಹಶೀಲ್ದಾರ್ ರಮೇಶ್ ಪತ್ರ ಬರೆದಿರುವುದಾಗಿ ಹೊಂಬಮ್ಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT