ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಬಿಲ್ ನೀಡದ ಕಾರ್ಖಾನೆ

ಕಬ್ಬು ಕಡಿಮೆ ಅರೆದ ರಾಣಿ ಶುಗರ್‍ಸ್: ನೌಕರರಿಗೆ ಸಂಬಳ ನೀಡಿಲ್ಲ– ಆರೋಪ
Last Updated 12 ಜನವರಿ 2017, 8:32 IST
ಅಕ್ಷರ ಗಾತ್ರ
ಚನ್ನಮ್ಮನ ಕಿತ್ತೂರು: ‘ದಕ್ಷಿಣ ಭಾರತದಲ್ಲಿಯೇ ಉತ್ತಮ ಕಾರ್ಖಾನೆ ಎಂದು ಒಂದು ಕಾಲದಲ್ಲಿ ಕೀರ್ತಿ ಗಳಿಸಿದ್ದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಅಧ್ಯಕ್ಷ ಹಾಗೂ ಶಾಸಕ ಡಿ.ಬಿ. ಇನಾಂದಾರ್ ಅವರ ಸರ್ವಾಧಿಕಾರಿ ಧೋರಣೆಯಿಂದ ಅವನತಿಯ ಹಾದಿ ಹಿಡಿದಿದೆ’ ಎಂದು ಅಖಂಡ ಕರ್ನಾಟಕ ರೈತ ಸಂಘಟನೆ ಕಿತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಬೈಲಪ್ಪ ದಳವಾಯಿ ಆರೋಪಿಸಿದರು.
 
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಪಿಡಿಐಎಲ್ ಕಂಪೆನಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಮೊದಲೇ ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ರೈತರೊಂದಿಗೆ ಅವರು ಚಲ್ಲಾಟವಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
‘ಟೆಂಡರ್ ಕರೆಯದೇ ಕಂಪೆನಿಗೆ ಸಕ್ಕರೆ ಮಾರಾಟ ಮಾಡುವುದು. ಮಾರಾಟವಾದ ಸಕ್ಕರೆ ದುಡ್ಡನ್ನು ಸಕಾಲಕ್ಕೆ ಪಡೆಯದೇ ಇರುವುದು. ಕಾರ್ಖಾನೆ ವೆಚ್ಚದಲ್ಲಿಯೇ ಅವರಿಗೆ ಸಕಲ ಸವಲತ್ತು ಒದಗಿಸುತ್ತಿರುವ ಇನಾಂದಾರ್ ಅವರು ಒಂದು ಕಡೆಗೆ ಪಿಡಿಐಎಲ್ ಕಂಪನಿಗೆ ಲಾಭ ಮಾಡುತ್ತ ನಡೆದಿದ್ದಾರೆ. ಇತ್ತ ರೈತರು ಸಕಾಲಕ್ಕೆ ಬಿಲ್ ಸಿಗದೇ ಮತ್ತು ನೌಕರರಿಗೂ ಸರಿಯಾದ ಸಮಯಕ್ಕೆ ವೇತನ ದೊರೆಯದೇ ಒದ್ದಾಡುತ್ತಿದ್ದಾರೆ’ ಎಂದು ಅವರು ದೂರಿದರು.
 
‘ಪ್ರಸಕ್ತ 2016–17ನೇ ಸಾಲಿನ ಕಬ್ಬು ಅರೆಯುವ ಹಂಗಾಮಿನಲ್ಲಿ 131289ಟನ್ ಮಾತ್ರ ಕಬ್ಬು ನುರಿಸಲಾಗಿದೆ. ಸಕ್ಕರೆ ಇಳುವರಿ ಪ್ರಮಾಣವು ಶೇ10.64ರಷ್ಟು ಮಾತ್ರವಿದೆ. ಹಿಂದಿನ ಸಾಲಿನ ಕಬ್ಬಿನ ಬಿಲ್ ಸಕಾಲಕ್ಕೆ ನೀಡದ್ದರಿಂದ ರೈತರು ಈ ಭಾಗದ ಕಬ್ಬನ್ನು ಜಿಲ್ಲೆ ಹಾಗೂ ಹೊರಜಿಲ್ಲೆಗಳ ಬೇರೆ ಕಾರ್ಖಾನೆಗಳಿಗೆ ಪೂರೈಕೆ ಮಾಡಿದರು. ತೋಡ್ನಿ ಗ್ಯಾಂಗ್‌ಗಳಿಗೆ ಹಿಂದಿನ ಬಾಕಿ ಹಣ ನೀಡದ್ದರಿಂದಲೂ ಅವರೂ ಸಹ ಈ ಕಾರ್ಖಾನೆಗೆ ಬರಲು ಹಿಂದೇಟು ಹಾಕಿದರು’ ಎಂದು ಮಾಹಿತಿ ನೀಡಿದರು.
 
ದುಡ್ಡು ಎಲ್ಲಿ? ‘2014–15 ಮತ್ತು 2015–16ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರ ಬಿಲ್‌ನಲ್ಲಿ ಕಾರ್ಖಾನೆ ವಿಸ್ತರಣೆ ಯೋಜನೆಗಾಗಿ ಪ್ರತಿಟನ್‌ಗೆ ₹ 200 ಕಡಿತ ಮಾಡಿಕೊಂಡಿದ್ದಾರೆ. ಈ ಸಂಗ್ರಹವಾದ ದುಡ್ಡು ಯಾವ ಬ್ಯಾಂಕಿನಲ್ಲಿದೆ ಎಂಬ ಮಾಹಿತಿಯನ್ನು ರೈತರಿಗೆ ನೀಡಬೇಕು’ ಎಂದು ದಳವಾಯಿ ಅವರು ಇನಾಂದಾರ್ ಅವರನ್ನು ಆಗ್ರಹಿಸಿದರು.
 
‘ಸಕಾಲದಲ್ಲಿ ದುಡ್ಡು ಪಾವತಿ ಮಾಡದೇ ಕಬ್ಬು ಪೂರೈಕೆ ಮಾಡಿದ ರೈತರ ಕಣ್ಣಲ್ಲಿ ಇನಾಂದಾರ್ ರಕ್ತ ತರಿಸುತ್ತಿದ್ದಾರೆ. ಕಬ್ಬು ಪೂರೈಕೆ ಮಾಡಿದ 15 ದಿನಗಳಲ್ಲಿ ಬಿಲ್ ಪಾವತಿ ಮಾಡಬೇಕೆಂಬ ಕಾಯ್ದೆ ಇದ್ದರೂ ಇದನ್ನು ಲೆಕ್ಕಿಸದೇ 2015–16ನೇ ಸಾಲಿನ ದುಡ್ಡನ್ನು ಮೊನ್ನೆಯವರೆಗೆ ನೀಡಿದ್ದಾರೆ. ಅದನ್ನು ಸಹ ಕೇಂದ್ರ ಸರ್ಕಾರ ಪ್ರಕಟಿಸಿರುವ ಎಫ್‌ಆರ್‌ಪಿ ಪ್ರಕಾರ ನೀಡಿಲ್ಲ’ ಎಂದು ಅವರು ಆರೋಪಿಸಿದರು.
 
‘ಇಂಥವರು ಈಗ ಬಂದಿರುವ ಕೃಷಿ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ರೈತರ ಬಗ್ಗೆ ಇನ್ನಿಲ್ಲದ ಕಾಳಜಿ ತೋರಿಸುತ್ತಿದ್ದಾರೆ. ಇವರಿಗೆ ಈ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸುತ್ತಾರೆ’ ಎಂದೂ ಅವರ ಹೇಳಿದರು.
 
**
ಸಕ್ಕರೆ ರಫ್ತು ಮಾಡುವ ನೆಪದಲ್ಲಿ ಪಿಡಿಐಎಲ್ ಕಂಪೆನಿ ಕಾರ್ಖಾನೆಗೆ ಅಧಿಕ ನಷ್ಟವಾಗಿದೆ. ನಷ್ಟವನ್ನು ಆಡಳಿತ ಮಂಡಳಿ ಭರಿಸಿ ಕಂಪನಿ ಹೊರದಬ್ಬಿ
–ಬೈಲಪ್ಪ ದಳವಾಯಿ ,
ರೈತ ಮುಖಂಡ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT