ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳೂ ತಾಲ್ಲೂಕುಗಳಲ್ಲಿ ಶೇ 45 ಮತದಾನ

ಎಪಿಎಂಸಿ ಚುನಾವಣೆ: ಸಣ್ಣಪುಟ್ಟ ಗದ್ದಲ, ಮತದಾರರಲ್ಲಿ ಕುಂದಿದ ಉತ್ಸಾಹ, ಮತದಾನ ನೀರಸ
Last Updated 13 ಜನವರಿ 2017, 10:11 IST
ಅಕ್ಷರ ಗಾತ್ರ
ತುಮಕೂರು: ಜಿಲ್ಲೆಯ ಏಳು ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ (ಎಪಿಎಂಸಿ) ಗುರುವಾರ ನೀರಸ ಮತದಾನ ನಡೆಯಿತು. ಸಣ್ಣ ಪುಟ್ಟ ಗದ್ದಲ ಹೊರತುಪಡಿಸಿ ಮತದಾನ ಶಾಂತಿಯುತವಾಗಿತ್ತು.
 
ರಾಜಕೀಯ ಪಕ್ಷಗಳ ಮುಖಂಡರು ಮತ ಸೆಳೆಯಲು ವಿವಿಧ ಕಸರತ್ತು ನಡೆಸಿದರು. ದೂರದ ಊರುಗಳಿಂದ ಮತದಾರರನ್ನು ಆಟೊ, ಕಾರು, ದ್ವಿಚಕ್ರ ವಾಹನಗಳಲ್ಲಿ ಕರೆತಂದು ಮತ ಚಲಾವಣೆ ಮಾಡಿಸಿದರು. 
 
ಚಿಕ್ಕನಾಯಕನಹಳ್ಳಿ, ಕೊರಟಗೆರೆ ಹಾಗೂ ತುಮಕೂರು ತಾಲ್ಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳಲ್ಲಿ ಮತದಾನ ನಡೆಯಿತು. ಜಿಲ್ಲೆಯಾದ್ಯಂತ 651 ಮತಗಟ್ಟೆ ಸ್ಥಾಪಿಸಲಾಗಿತ್ತು. ಚುನಾವಣೆ ವೇಳೆ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.
 
ಶಿರಾ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಕ್ಷೇತ್ರದಲ್ಲಿ ಕೇವಲ 13 ಮತದಾರರಿದ್ದ ಕಾರಣ ಮತದಾನ ಆರಂಭವಾದ ಎರಡೂವರೆ ಗಂಟೆಯಲ್ಲೇ ಪೂರ್ಣಗೊಂಡಿತು. ವರ್ತಕರ ಕ್ಷೇತ್ರದ 241 ಮಂದಿ ಮತದಾರರಲ್ಲಿ 213 ಮತ ಚಲಾಯಿಸಿದರು. ಭೂವನಹಳ್ಳಿ ಕೃಷಿಕರ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ಶೇ 23, ಹಾಲ್ ದೊಡ್ಡೇರಿ ಮತಗಟ್ಟೆಯಲ್ಲಿ ಅತಿ ಹೆಚ್ಚು ಶೇ 75.89 ರಷ್ಟು ಮತದಾನ ಆಗಿದೆ. 
 
ಪಾವಗಡ ತಾಲ್ಲೂಕಿನ ಬೆಳ್ಳಿ ಬಟ್ಟಲು ಕ್ಷೇತ್ರದಲ್ಲಿ ಶೇ 71 ಮತದಾನವಾದರೆ, ಬಿ.ಕೆ.ಹಳ್ಳಿ ಕ್ಷೇತ್ರದಲ್ಲಿ ಕನಿಷ್ಠ ಶೇ 14 ಮತದಾನ ದಾಖಲಾಯಿತು.
 
ಎರಡು ಕಡೆ ತಡವಾಗಿ ಆರಂಭವಾದ ಮತದಾನ
ಪಾವಗಡ: ಏಜೆಂಟರು, ಪಕ್ಷಗಳ ಕಾರ್ಯಕರ್ತರ ನಡುವಿನ ಸಣ್ಣ ಪುಟ್ಟ ಮಾತಿನ ಚಕಮಕಿ ಹೊರತುಪಡಿಸಿ ತಾಲ್ಲೂಕಿನಾದ್ಯಂತ ಗುರುವಾರ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಶಾಂತಿಯುತವಾಗಿ ನಡೆದಿದೆ.
 
ಪಟ್ಟಣದ ಸರ್ಕಾರಿ ಮಾಧ್ಯಮಿಕ ಪಾಠ ಶಾಲೆಯ 11, 11 ಎ ಮತಗಟ್ಟೆಗಳಲ್ಲಿ ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು. ನಾಮಪತ್ರ ಸಲ್ಲಿಸುವಾಗ ನೀಡಲಾದ ಮತದಾರರ ಪಟ್ಟಿಗೂ, ಚುನಾವಣೆಯಂದು ಮತಗಟ್ಟೆ ಅಧಿಕಾರಿಗಳಿಗೆ ನೀಡಲಾದ ಮತಪಟ್ಟಿಗೂ ವ್ಯತ್ಯಾಸವಿದೆ. ಇದರಿಂದ ಮತದಾರರಲ್ಲಿ ಗೊಂದಲ ಉಂಟಾಗುತ್ತಿದೆ ಎಂದು ಬೂತ್‌ ಏಜೆಂಟರು ಆರೋಪಿಸಿದರು. 
 
ಕಂದಾಯ ಇಲಾಖೆ ಅಧಿಕಾರಿಗಳು ಮತಗಟ್ಟೆಗೆ ಬಂದು ಹಳೆಯ ಪಟ್ಟಿಯೇ ಅಧಿಕೃತ ಎಂದು ತಿಳಿಸಿ ಸಮಸ್ಯೆ ಬಗೆಹರಿಸಿದರು. ಹೀಗಾಗಿ ಪಟ್ಟಣದ ಎರಡೂ ಮತಗಟ್ಟೆಗಳಲ್ಲಿ 1 ಗಂಟೆ ತಡವಾಗಿ ಮತದಾನ ಆರಂಭವಾಯಿತು.
 
ಅಭ್ಯರ್ಥಿ ಕಡೆಯ ಬೆಂಬಲಿಗರು ಗುರುತು ತೋರಿಸಿ ಮತ ಹಾಕುವಂತೆ ಮತದಾರರನ್ನು ಗೋಗರೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
 
ಅಭ್ಯರ್ಥಿಗಳ ಬೆಂಬಲಿಗರು ₹2 ಸಾವಿರ ನೋಟುಗಳಿಗೆ ಚಿಲ್ಲರೆ ಪಡೆಯಲು ಪರದಾಡಿದರು. ಪಟ್ಟಣ, ತಾಲ್ಲೂಕಿನ ಚಿತ್ತಗಾನಹಳ್ಳಿ, ಕಿಲಾರ್ಲಹಳ್ಳಿ, ಸಿ.ಕೆ. ಪುರ, ಅರಸೀಕೆರೆ, ಮಂಗಳವಾಡ, ತಿರುಮಣಿ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಬುಧವಾರ ರಾತ್ರಿ ಹಣದ ಹಂಚಿಕೆ ಭರದಿಂದ ಸಾಗಿತ್ತು. 
 
ಒಂದು ಮತಕ್ಕೆ ₹200 ರಿಂದ 500 ಹಂಚಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದವು. ಮತದಾರರನ್ನು ಮತಗಟ್ಟೆಗೆ ಕರೆತರಲು ದ್ವಿಚಕ್ರ ವಾಹನ, ಕಾರು, ಆಟೊ ವ್ಯವಸ್ಥೆಯನ್ನು ಪಕ್ಷಗಳ ಮುಖಂಡರು ಮಾಡಿದ್ದರು. ವಾಹನಗಳಲ್ಲಿ ಕರೆ ತರುವಾಗಲೇ ಗುರುತು ತೋರಿಸಿ ಇದೇ ಚಿಹ್ನೆಗೆ ಮತ ಚಲಾಯಿಸಬೇಕು ಎಂದು ಮತದಾರರಲ್ಲಿ ಮನದಟ್ಟು ಮಾಡಲಾಗುತ್ತಿತ್ತು. 
 
**
ಕನಿಷ್ಠ ಶೇ 34 ಮತದಾನ
ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ತುರುವೇಕೆರೆ ಎಪಿಎಂಸಿ ಚುನಾವಣೆಯಲ್ಲಿ ಕನಿಷ್ಠ ಶೇ 34 ಮತದಾನವಾಗಿದೆ. ಮೂರು ಪಕ್ಷಗಳ ನಾಯಕರ ಆರೋಪ–ಪ್ರತ್ಯಾರೋಪಗಳಿಂದ ಸುದ್ದಿಯಲ್ಲಿತ್ತು. ಇನ್ನೊಂದೆಡೆ ಬರದಿಂದ ತತ್ತರಿಸಿರುವ ಪಾವಗಡ ತಾಲ್ಲೂಕಿನಲ್ಲಿ ಗರಿಷ್ಠ ಪ್ರಮಾಣದ ಶೇ 53 ಮತದಾನವಾಗಿದೆ. ಮಧುಗಿರಿಯಲ್ಲಿ ಶೇ 50ರಷ್ಟು ಮತದಾನ ಹೊರತುಪಡಿಸಿ ಬೇರೆಲ್ಲೂ ನಿರೀಕ್ಷಿತ ಪ್ರಮಾಣದ ಮತ ಚಲಾವಣೆ ಆಗಿಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT