ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ಗಿ ಸಂಭ್ರಮಕ್ಕೆ ‘ಬರದ ಬರೆ’!

ಹೊಸದುರ್ಗ: ಹಿಂಗಾರು ಹಂಗಾಮಿನ ಉತ್ಪಾದನೆಯಲ್ಲಿ ಶೇ 67.14ರಷ್ಟು ಕುಸಿತ
Last Updated 14 ಜನವರಿ 2017, 6:11 IST
ಅಕ್ಷರ ಗಾತ್ರ
ಹೊಸದುರ್ಗ: ಈ ಬಾರಿಯ ಭೀಕರ ಬರಗಾಲ ತಾಲ್ಲೂಕಿನ ಅನ್ನದಾತರ ‘ಸುಗ್ಗಿ’ ಸಂಭ್ರಮಕ್ಕೆ ‘ಬರೆ’ ಎಳೆದಿದೆ.
 
 ಆರು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಆದ ದಾಳಿಂಬೆ ಬೆಳೆಯ ಕ್ರಾಂತಿಯಿಂದಾಗಿ ಒಂದೆಡೆ ಮುಂಗಾರು ಹಾಗೂ ಹಿಂಗಾರಿನಲ್ಲಿ ಬಿತ್ತನೆ ಪ್ರದೇಶ ಸುಮಾರು ಶೇ 30ರಷ್ಟು ಕಡಿಮೆಯಾಗಿದೆ. ಮತ್ತೊಂ ದೆಡೆ ಈ ಬಾರಿ ಸಂಪೂರ್ಣ ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಪ್ರದೇಶ ಕ್ಷೀಣಿಸಿದೆ. 
 
ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದ ರಾಗಿ, ಸಾವೆ, ಹುರುಳಿ, ಶೇಂಗಾ ಸೇರಿದಂತೆ ಇನ್ನಿತರ ಬೆಳೆಗಳಿಗೆ ಸಕಾಲಕ್ಕೆ ಮಳೆಯಾಗದೇ ಇರುವು ದರಿಂದ ಕೆಲವೆಡೆ ಬೆಳೆಗಳು ಒಣಗಿದವು. ಮೇವಿನ ಸಮಸ್ಯೆ ಇರುವ ಕಡೆ ಕುರಿ, ಮೇಕೆ, ಹಸು, ಎತ್ತುಗಳನ್ನು ಕೂಡಿ ಒಣಗುವ ಸ್ಥಿತಿಯಲ್ಲಿದ್ದ ಬೆಳೆ ಮೇಯಿಸಿದರು. ಇನ್ನೂ ಕೆಲವೆಡೆ ಅಲ್ಪಸ್ವಲ್ಪ ಮಳೆಗೆ ಇಳುವರಿಯೂ ಕಡಿಮೆಯಾಗಿದೆ. 
 
ದಾಳಿಂಬೆ ಬೆಳೆ ತಾಲ್ಲೂಕಿಗೆ ಪ್ರವೇಶ ಮಾಡುವ ಮೊದಲು ಹಾಗೂ ಸಮೃದ್ಧವಾಗಿ ಮಳೆಯಾಗುತ್ತಿದ್ದ ಕಾಲದಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ಸಹ ಸುಗ್ಗಿ ಕಣದಲ್ಲಿ ಸುಮಾರು ಐದು ಮಾರಿನ ರಾಗಿ ಹಲ್ಲಿನ ಬಣವೆ ಒಟ್ಟುತ್ತಿದ್ದರು. ಮೂರ್‌್ನಾಲ್ಕು ಎತ್ತಿನ ಗಾಡಿ ಸಾವೆ ಹುಲ್ಲು, ಮೂರು ಹುರುಳಿ ಸೊಪ್ಪು ಬೆಳೆದು ಸುಮಾರು 15 ದಿನಗಳ ಕಾಲ ಸುಗ್ಗಿಕಣದಲ್ಲಿ ರೈತರೆಲ್ಲರೂ ಸೇರಿ ರೋಣಗಲ್ಲು, ಎತ್ತು ಹಾಗೂ ಹಸು ಬಳಸಿ ಸಂಭ್ರಮದಿಂದ ಸುಗ್ಗಿ ಮಾಡುತ್ತಿದ್ದರು. ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿ ಯನ್ನು ಸಡಗರದಿಂದ ಆಚರಿಸುತ್ತಿದ್ದರು. 
 
ಬಣವೆಗಳು ಕಣ್ಮರೆ: ಈ ಬಾರಿ ಮುಂಗಾರು ಹಾಗೂ ಹಿಂಗಾರು ಸಂಪೂರ್ಣ ಕೈಕೊಟ್ಟಿದ್ದರಿಂದ ಬಿತ್ತನೆಯ ಪ್ರದೇಶವೂ ಕ್ಷೀಣಿಸಿದೆ. ಐದಾರು ಟ್ರ್ಯಾಕ್ಟರ್‌ ಲೋಡ್‌ ರಾಗಿ ಹುಲ್ಲು ಬೆಳೆಯುತ್ತಿದ್ದ ರೈತರಿಗೆ ಕೇವಲ ಎರಡು ಟ್ರ್ಯಾಕ್ಟರ್‌ ಬೆಳೆದಿದ್ದಾರೆ. ಸಾವೆ ಹುಲ್ಲು ಹಾಗೂ ಹುರುಳಿ ಸೊಪ್ಪು ಕಡಿಮೆ ಯಾಗಿದೆ. ಹೊಲದಿಂದ ಟ್ರ್ಯಾಕ್ಟರ್‌ನಲ್ಲಿ ತಂದ ರಾಗಿ ಹುಲ್ಲನ್ನು ಟ್ರ್ಯಾಕ್ಟರ್‌ ನಿಂದಲೇ ಒಕ್ಕಲು ಮಾಡುತ್ತಿದ್ದಾರೆ. ಇದರಿಂದಾಗಿ ಈ ಹಿಂದೆ ರೈತರು ಸುಗ್ಗಿ ಕಣದಲ್ಲಿ ಒಟ್ಟುತ್ತಿದ್ದ ರಾಗಿ ಬಣವೆಗಳು ಕಣ್ಮರೆಯಾಗುತ್ತಿವೆ. ಜಾನುವಾರು ಮೇವಿನ ಸಮಸ್ಯೆ ತೀವ್ರವಾಗುವ ಸಾಧ್ಯತೆಗಳಿವೆ.
 
ಕೈಬಿಟ್ಟ ರಾಶಿ ಪೂಜೆ: ಈ ಹಿಂದೆ ರೈತರು ಬೆಳೆದ ಬೆಳೆಯನ್ನು ಒಕ್ಕಲು ಮಾಡಿದ ನಂತರ ದವಸವನ್ನು ರಾಶಿ ಮಾಡಿ ಒಕ್ಕಲಿಗೆ ಬಳಸಿದ ರೋಣಗಲ್ಲು, ಮೆರೆ, ಹಲುವೆ, ಗ್ವಾರೆ, ಉತ್ತ್ರಾಣೆಬರ್ಲು, ಮುಳ್ಬರ್ಲು ಸೇರಿದಂತೆ ಇನ್ನಿತರ ಸುಗ್ಗಿ ಪರಿಕರಗಳನ್ನು ಶುದ್ಧೀಕರಿಸಿ ಶ್ರದ್ಧಾ ಭಕ್ತಿಯಿಂದ ಸುಗ್ಗಿ ಕಣದಲ್ಲಿ ರಾಶಿಪೂಜೆ ಮಾಡುತ್ತಿದ್ದರು. ಪೂಜಾ ಕಾರ್ಯದಲ್ಲಿ ಮುತ್ತೈದೆಯರು ವಿಶೇಷ ಪಾತ್ರ ವಹಿಸು ತ್ತಿದ್ದರು. ಆದರೆ ಮಳೆ ಅಭಾವದಿಂದ ಬೆಳೆ ಕಡಿಮೆ ಆಗುತ್ತಿರುವುದರಿಂದ ಕೆಲವು ರೈತರು ರಾಶಿ ಪೂಜೆ ಕೈಬಿಡುತ್ತಿದ್ದಾರೆ.
 
ಸುಗ್ಗಿ ಸಂಸ್ಕೃತಿ ಕಣ್ಮರೆ: ರಾಶಿಪೂಜೆ ಆದ ನಂತರ ಮೊದಲು ಗುರುವಿಗೆ ಒಂದಷ್ಟು ದವಸವನ್ನು ದಾನ ಮಾಡುತ್ತಿದ್ದರು. ನಂತರ ಶ್ರಮಿಕರಿಗೆ ದಾನ ನೀಡಿ, ಉಳಿದ ದವಸವನ್ನು ಮನೆಯಲ್ಲಿ ಸಂಗ್ರಹಿಸಿ ಡುತ್ತಿದ್ದರು. ಆದರೆ, ಆಧುನಿಕತೆಯ ಭರಾಟೆಯಲ್ಲಿ ಸುಗ್ಗಿಕಣಗಳ ಬದಲಿಗೆ ರಸ್ತೆ, ರೋಣಗಲ್ಲಿನ ಬದಲಿಗೆ ಟ್ರ್ಯಾಕ್ಟರ್‌ ಹಾಗೂ ಒಕ್ಕಲು ಮಾಡಿದ ದವಸವನ್ನು ಮಹಿಳೆಯರು ತೂರುತ್ತಿದ್ದ ಮರದ (ದವಸ ಶುಚಿಗೊಳಿಸುವ ಸಾಧನ) ಬದಲಿಗೆ ದವಸ ಶುಚಿಗೊಳಿಸುವ ಯಂತ್ರ ಬಳಸಿ ಒಕ್ಕಲು ಮಾಡುತ್ತಿದ್ದಾರೆ. ಇದರಿದಾಗಿ ನಮ್ಮ ಪೂರ್ವಜರ ಕಾಲದ ಸುಗ್ಗಿ ರಾಶಿಪೂಜೆ  ಸಂಸ್ಕೃತಿ ಕಣ್ಮರೆ ಆಗುತ್ತಿದೆ.
 
ಒಕ್ಕಲು ದವಸಕ್ಕೆ ಯಂತ್ರ:  ಹಿಂದಿನ ಕಾಲದಲ್ಲಿ ಸುಗ್ಗಿ ಕಣದಲ್ಲಿ ಎಷ್ಟೇ ಗಾಳಿಯ ಸಮಸ್ಯೆ ಇದ್ದರೂ ಮಹಿಳೆಯರು ಮರದ ಸಹಾಯದಿಂದಲೇ ಒಕ್ಕಲು ಮಾಡಿದ ರಾಗಿ, ಸಾವೆ, ಹುರುಳಿ ದವಸವನ್ನು ತೂರಿ ಶುಚಿಗೊಳಿಸುತ್ತಿದ್ದರು. ಆದರೆ ಈಗ ಗ್ರಾಮಗಳಲ್ಲಿ ದವಸ ತೂರುವ ಮಹಿಳೆಯರು ಇಲ್ಲದಂತಾಗಿದೆ. ಇದ್ದರೂ ಒಂದು ದಿನ ದವಸ ತೂರಲು ಬಂದರೆ ಮೂರು ಮರ ರಾಗಿಯನ್ನು ಕೂಲಿಯಾಗಿ ಕೊಡಬೇಕು.  ಐದು ಸೇರು ಕಟ್ಟಿದರೂ 15 ಸೇರು ರಾಗಿಯಾಗುತ್ತದೆ. 
 
ಮಾರುಕಟ್ಟೆಯಲ್ಲಿ ಗುಣಮಟ್ಟದ ಒಂದು ಸೇರು ರಾಗಿಗೆ ₹ 30ಕ್ಕೂ ಅಧಿಕ ದರವಿದೆ. 15 ಸೇರು ರಾಗಿಗೆ ₹ 450 ಆಗುತ್ತದೆ. ಬೆಳೆದಿರುವ ನಾಲ್ಕು ಚೀಲ ರಾಗಿಯಲ್ಲಿ ಕೂಲಿಯವರಿಗೆ ಕೊಟ್ಟರೆ ವರ್ಷವಿಡೀ ಮುದ್ದೆ ತಿನ್ನಲು ನಮಗೆ ರಾಗಿ ಇರುವುದಿಲ್ಲ. ಇದರಿಂದಾಗಿ ಒಕ್ಕಲು ಮಾಡಿದ ದವಸ ತೂರುವ ಯಂತ್ರದವರಿಗೆ ₹ 60 ಕೊಟ್ಟರೆ ಒಂದು ಚೀಲ ರಾಗಿ ಶುಚಿಯಾಗುತ್ತದೆ. ಯಂತ್ರ ಬಳಕೆಯಿಂದ ಹಣ, ಸಮಯ, ಶ್ರಮವೂ ಕಡಿಮೆಯಾಗುತ್ತದೆ. ಒಕ್ಕಲು ಮಾಡಿದ ದವಸ ಶುಚಿಗೊಳಿಸುವ ಕಾರ್ಮಿಕರನ್ನು ಹಿಡಿದು ಕರೆತರುವ ತಲೆನೋವು ಇಲ್ಲದಂತಾಗುತ್ತದೆ ಎನ್ನುತ್ತಾರೆ ರೈತ ಧನಂಜಯ.
 
**
ಯಂತ್ರೋಪಕರಣ ಬಳಕೆ ಹೆಚ್ಚಾದಂತೆ ಗ್ರಾಮೀಣ ಭಾಗದಲ್ಲಿದ್ದ ಕೃಷಿ ಚಟುವಟಿಕೆ ಹಾಗೂ ಸುಗ್ಗಿ ವೈಭವ ಕಣ್ಮರೆಯಾಗುತ್ತಿದೆ
-ತಿಪ್ಪೇಸ್ವಾಮಿ, ರೈತ
 
**
ಸುಗ್ಗಿ ಕಣದಲ್ಲಿ ಒಕ್ಕಲು ಮಾಡಿದ 10 ಚೀಲ ರಾಗಿ ಶುಚಿಗೊಳಿಸಲು ಮೂರು ಮಹಿಳೆಯರಿಗೆ ಮೂರು ದಿನ ಬೇಕು. ಆದರೆ, ಯಂತ್ರದಲ್ಲಿ ಅರ್ಧ ದಿನಕ್ಕೆ ಕೆಲಸ ಮುಗಿಯುತ್ತದೆ
– ಧನಂಜಯ, ರೈತ
 
**
-ಎಸ್‌.ಸುರೇಶ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT