ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತೆಗಾದ ಅನ್ಯಾಯ ತೋರಿಸುವುದು ನನ್ನ ಉದ್ದೇಶ

Last Updated 15 ಜನವರಿ 2017, 17:55 IST
ಅಕ್ಷರ ಗಾತ್ರ
ADVERTISEMENT

ಅಭಿಮಾನಿಗಳ ಪಾಲಿಗೆ ಎಸ್‌.ಎಲ್‌. ಭೈರಪ್ಪನವರ ಕಾದಂಬರಿ ಪ್ರಕಟವಾಗುತ್ತಿದೆ ಎಂದರೆ ಅದೊಂದು ಬಗೆಯಲ್ಲಿ ಸಾಹಿತ್ಯಸಂಭ್ರಮ. ನಾಳೆ (ಜ. 16) ಅವರ ನೂತನ ಕಾದಂಬರಿ ‘ಉತ್ತರಕಾಂಡ’ ಪ್ರಕಟವಾಗಲಿದೆ. ಎರಡು ವರ್ಷಗಳ ಹಿಂದೆಯಷ್ಟೆ ಅವರ ‘ಯಾನ’ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿ ಸಾಕಷ್ಟು ಸುದ್ದಿ ಮಾಡಿತ್ತು. ಈಗ ‘ಉತ್ತರಕಾಂಡ’ದ ಬಗ್ಗೆ ಸಾಹಿತ್ಯಾಭಿಮಾನಿಗಳಲ್ಲಿ ಕುತೂಹಲ–ನಿರೀಕ್ಷೆಗಳು ಅಪಾರವಾಗಿವೆ. ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಭಿತ್ತಿಯಲ್ಲಿ ರಚಿತವಾಗಿರುವ ಈ ಕಾದಂಬರಿಯು ರಾಮಾಯಣದ ಬಗ್ಗೆ ಬೇರೊಂದು ದೃಷ್ಟಿಯನ್ನು ಮೂಡಿಸಬಲ್ಲದೆ? ಈ ಹಿನ್ನೆಲೆಯಲ್ಲಿ ಭೈರಪ್ಪ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ...

* ಸುಮಾರು ನಲವತ್ತು ವರ್ಷಗಳ ಹಿಂದೆ ‘ಪರ್ವ’ವನ್ನು ಬರೆದು ಮಹಾಭಾರತವನ್ನು ನಮ್ಮ ಕಾಲಕ್ಕೆ ಬಗ್ಗಿಸುವಂಥ, ಒಗ್ಗಿಸುವಂಥ ಸೃಷ್ಟಿಶೀಲಕಾರ್ಯವನ್ನು ಮಾಡಿದಿರಿ. ಈಗ ರಾಮಾಯಣವನ್ನು ಆಧರಿಸಿ ‘ಉತ್ತರಕಾಂಡ’ವನ್ನು ಬರೆದಿರುವಿರಿ. ರಾಮಾಯಣವನ್ನು ಆಯ್ದುಕೊಳ್ಳಲು ಏನಾದರೂ ಕಾರಣಗಳಿವೆಯೆ?ಹಾಗೆ ಪ್ರತ್ಯೇಕ ಕಾರಣಗಳೇನಿಲ್ಲ. ಕೆಲವು ಆತ್ಮೀಯರು, ವಿದ್ವಾಂಸರು ‘ನೀವು ಮಹಾಭಾರತ ಕುರಿತು ಬರೆದಿದ್ದೀರಿ; ರಾಮಾಯಣ ಕುರಿತು ಬರೆಯಬಾರದೇಕೆ’ ಎಂದು ಸಲಹೆ ಕೊಟ್ಟಿದ್ದರು. ಮೂಲರಾಮಾಯಣವನ್ನು ಓದಲು ತೊಡಗಿದೆ; ನನಗೇಕೋ ಅದರ ಕಥೆಗೆ ಅಂಥ ಶಕ್ತಿ ಇದೆ ಅಂತ ಅನಿಸಲಿಲ್ಲ; ಅಯೋಧ್ಯಾಕಾಂಡದ ನಂತರ ಓದಲೂ ಆಗಲಿಲ್ಲ.

ಈಗ ರಾಮನ ಬಗ್ಗೆ ಇತ್ತೀಚೆಗೆ ಕನ್ನಡ ಚಿಂತನೆಯಲ್ಲಿ ಚರ್ಚೆ ನಡೆಯುತ್ತಿದೆ. ಇದರಿಂದ ನನಗೊಂದು ಪ್ರಚೋದನೆ ಸಿಕ್ತು. ಮತ್ತೆ ರಾಮಾಯಣವನ್ನು ಓದಲು ತೊಡಗಿದೆ. ನಾನು ಬರೆಯಬಹುದು ಎನಿಸಿತು. ಆದರೆ ಎಷ್ಟಾದರೂ ಅದರ ಕಥೆ ಅಷ್ಟೊಂದು ಶಕ್ತಿಶಾಲಿಯಲ್ಲ. ಆದರೂ ರಾಮಾಯಣದ ನಿಜ ಏನೆಂಬುದನ್ನು ಹುಡುಕಲು ತೊಡಗಿದೆ. ಪಾತ್ರಗಳು ಯಾಕೆ ಹೀಗೆ ನಡೆದುಕೊಳ್ಳುತ್ತವೆ ಎನ್ನುವುದು ನಾನು ಹುಡುಕುವ ನಿಜ. ಆಗ ನನ್ನದೇ ರೀತಿಯಲ್ಲಿ ವಸ್ತು ಹುಟ್ಟುತ್ತಾ ಹೋಯ್ತು. ಸೀತೆಯ ದೃಷ್ಟಿಯಿಂದ ಬರೆಯ ಬಾರದೇಕೆ ಅಂತ ಅನಿಸಿತು.

ವಾಲ್ಮೀಕಿ ರಾಮಾಯಣದಲ್ಲಿ ಸೀತೆ ಒಂದು ಪ್ಯಾಸಿವ್‌ ಪಾತ್ರ; ಅವಳು ಅಷ್ಟೊಂದು ಪ್ಯಾಸಿವ್‌ ಆಗಿರಬೇಕೆ ಎನಿಸಿತು. ಹೀಗೆ ಲಕ್ಷ್ಮಣ ಕೂಡ ಪ್ಯಾಸಿವ್‌ ಪಾತ್ರವೇ; ಅಣ್ಣನ ಆಜ್ಞಾಧಾರಕನಾಗಿರುವುದು ಬಿಟ್ಟು ಅವನ ಪಾತ್ರದಲ್ಲಿ ಅಲ್ಲಿ ಬೇರೇನೂ ಇಲ್ಲ. ರಾಮ ಒಬ್ಬ ದೇವರು; ಲಕ್ಷ್ಮಣ ಒಬ್ಬ ಭಕ್ತ ಎಂಬಂಥ ಮನೋಧರ್ಮವೇ ಇದಕ್ಕೆ ಕಾರಣ. ಆದರೆ ನನ್ನದು ಇಂಥ ನಿಲುವಲ್ಲ. ಅವತಾರದ ಕಲ್ಪನೆಯಲ್ಲಿ ದೇವರು ಏನೂ ತಪ್ಪು ಮಾಡುವುದಿಲ್ಲ ಎಂಬ ನಿಲುವೇ ಮುಖ್ಯವಾಗಿರುತ್ತದೆ. ನಾನು ಇದನ್ನು ಒಪ್ಪುವುದಿಲ್ಲ. ರಾಮನೂ ನಮ್ಮಂತೆಯೇ ಒಬ್ಬ ಮನುಷ್ಯ, ಲಕ್ಷ್ಮಣನೂ ಒಬ್ಬ ಮನುಷ್ಯ, ಸೀತೆಯೂ ಒಬ್ಬಳು ಮನುಷ್ಯಳು, ರಾವಣನೂ ಒಬ್ಬ  ಮನುಷ್ಯ– ಈ ದೃಷ್ಟಿಯಲ್ಲಿ ನಾನು ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದೇನೆ.

ರಾಮ ಅವನ ಜೀವನದ ಮೊದಲಿನ ವರ್ಷಗಳಲ್ಲಿ ತುಂಬ ಪ್ರಬುದ್ಧವಾಗಿದ್ದ; ಅಹಲ್ಯೆಯ ಪ್ರಸಂಗದಲ್ಲಿಯಾಗಲೀ, ಸೀತೆಯ ಹುಟ್ಟಿನ ಬಗ್ಗೆ ಪ್ರಶ್ನೆಗಳು ಬಂದಾಗಲಾಗಲೀ ಇದನ್ನು ಕಾಣಬಹುದು. ಸೀತೆಯನ್ನು ಅವನು ಕಾಡಿನಲ್ಲೂ ತುಂಬ ಚೆನ್ನಾಗಿಯೇ ನೋಡಿಕೊಂಡಿದ್ದಾನೆ; ಅವನೇ ಅವಳಿಗೆ ಹೆರಳನ್ನು ಕಟ್ಟುವಷ್ಟು ಪ್ರೀತಿ ಅವನದ್ದು. ಆದರೆ ಲಂಕಾಯುದ್ಧದ ನಂತರ ಅವನಲ್ಲಿ ಬದಲಾವಣೆಯನ್ನು ಕಾಣ್ತೇವೆ. ಇದಕ್ಕೆ ಕಾರಣವೇನು? ಅವನಿಗೆ ಆಗಲೇ ಗೊತ್ತಾಗಿತ್ತು– ‘ಇನ್ನು ಆರು ತಿಂಗಳ ನಂತರ ನಾನು ಅಯೋಧ್ಯೆಗೆ ಹೋಗ್ತೀನಿ; ಸಿಂಹಾಸನದ ಮೇಲೆ ಕುಳಿತುಕೊಳ್ಳೀನಿ. ಆಗ ಸೀತೆ ಮೇಲೆ ಎಂಥ ಆರೋಪ ಬರಬಹುದು’ ಎಂದು ಅವನು ಯೋಚಿಸಲು ತೊಡಗಿದ; ಅವಳ ಮೇಲೆ ಸಂಶಯವನ್ನೂ ಪಟ್ಟ. ಯಾಕೆ ರಾಮನಲ್ಲಿ ಇಂಥ ಬದಲಾವಣೆಯಾಯ್ತು? ಏಕೆಂದರೆ ಅವನು ರಾಜನಾದದ್ದು.

ಸೀತೆಯ ವಿಷಯದಲ್ಲೂ ಶೂದ್ರತಪಸ್ವಿಯ ವಿಷಯದಲ್ಲೂ ಅವನು ನಡೆದುಕೊಂಡದ್ದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಈ ಪ್ರಸಂಗಗಳನ್ನು ಬೇರೆಯವರು ಇನ್ನೊಂದು ರೀತಿಯಲ್ಲಿ ವಿಶ್ಲೇಷಿಸಿರಬಹುದು. ಆದರೆ ಅಧಿಕಾರವೇ ರಾಮನ ವ್ಯಕ್ತಿತ್ವದ ಬದಲಾವಣೆಗೆ ಕಾರಣ ಎನ್ನುವುದು ನಾನು ಈ ಕಾದಂಬರಿಯಲ್ಲಿ ಮಾಡಿರುವ ಟ್ರೀಟ್‌ಮೆಂಟ್‌. ರಾಮ ಎಸ್ಟಾಬ್ಲಿಷ್‌ಮೆಂಟ್‌ಗೆ ಪಕ್ಕಾದ; ಸ್ವತಂತ್ರ ಚಿಂತನೆಯನ್ನು ಕಳೆದುಕೊಂಡಿದ್ದ.  ಸೀತೆಯನ್ನು ನಾನಿಲ್ಲಿ ಪ್ರೌಢಪಾತ್ರವಾಗಿ ಚಿತ್ರಿಸಿದ್ದೇನೆ. ಪರಿತ್ಯಾಗವಾದ ಬಳಿಕ ವಾಲ್ಮೀಕಿಯ ಆಶ್ರಮದಲ್ಲಿದ್ದ ಸೀತೆಯ ಬಗ್ಗೆ ಅವನು ಯೋಚಿಸುವುದೇ ಇಲ್ಲ. ಅವಳು ಆಶ್ರಮದಲ್ಲೇ ಇರಬಹುದು. ಅಲ್ಲಿ ಇರುವವರು ಅವಳ ಬಗ್ಗೆ ಗುಸುಗುಸು ಮಾತನಾಡದೇ ಇರ್ತಾರಾ? ಇಂಥ ಸಂಗತಿಗಳನ್ನು ನಾನಿಲ್ಲಿ ತಂದಿದೀನಿ.

* ‘ಕವಲು’ ಕಾದಂಬರಿ ಬಂದಾಗ ಭೈರಪ್ಪನವರು ಸ್ತ್ರೀವಿರೋಧಿ ಮನಸ್ಥಿತಿಯವರು ಎನ್ನುವಂಥ ಟೀಕೆಗಳು ಬಂದವು. ‘ಉತ್ತರಕಾಂಡ’ದಲ್ಲಿ ಸೀತೆಯ ಪರವಾದ ದನಿಯೇ ಇದೆ. ಸೀತೆಯೇ ನಿಮ್ಮ ಕಾದಂಬರಿಯ ‘ಹೀರೊ’! ರಾಮನ ಅಂತ್ಯವನ್ನು ಕಾಣಿಸಿರುವುದನ್ನು ನೋಡಿದಾಗ ಅದು ಒಬ್ಬ ಸ್ತ್ರೀಗೆ ಮಾತ್ರವೇ ಒದಗಬಹುದಾದ ಸಂವೇದನೆ ಎನಿಸುವಷ್ಟು ಪರಕಾಯಪ್ರವೇಶ ನಿಮ್ಮಿಂದ ನಡೆದಿದೆ ಎನ್ನಬಹುದಲ್ಲವೆ?
‘ಕವಲು’ ಕಾದಂಬರಿಯಲ್ಲಿ ಆದ ತಪ್ಪನ್ನು ಸರಿ ಮಾಡಲು ಉತ್ತರಕಾಂಡದಲ್ಲಿ ಸ್ತ್ರೀಪರ ನಿಲುವು ತೆಗೆದುಕೊಂಡಿದ್ದೇನೆ ಎಂದು ಯಾರಾದರೂ ಯೋಚಿಸಿದರೆ ಅದು ಶುದ್ಧ ನಾನ್‌ಸೆನ್ಸ್‌. ನನಗೆ ಸ್ತ್ರೀವಾದ ಮುಂತಾದ ಯಾವುದೇ ಇಸಂಗಳಲ್ಲಿ ನಂಬಿಕೆಯಿಲ್ಲ. ಮನುಷ್ಯ ಸ್ವಭಾವದ ಅಂತರಂಗದಲ್ಲಿ ಬರುವ ನೋವು–ನಲಿವುಗಳನ್ನು ವರ್ಣನೆ ಮಾಡುವುದು, ಅವುಗಳನ್ನು ಓದುಗನ ಅನುಭವಕ್ಕೆ ಬರುವಂತೆ ಬರೆಯುವುದು, ಓದುಗನ ಸಂವೇದನೆಯನ್ನು ಸೂಕ್ಷ್ಮಗೊಳಿಸುವುದು– ಇಷ್ಟೇ ಸಾಹಿತ್ಯದ ಉದ್ದೇಶ. ಈ ಕಾದಂಬರಿಯಲ್ಲಿ ಸಹಜವಾದ ರೀತಿಯಲ್ಲಿ ಸೀತೆಯ ಪಾತ್ರ ಸೃಷ್ಟಿಯಾಗಿದೆ. ವಾಲ್ಮೀಕಿ ರಾಮಾಯಣವನ್ನು ಓದಿದಾಗ ನನಗೆ ಸೀತೆ ಹೇಗೆ ಕಂಡಳೋ ಹಾಗೇ ಅವಳ ಪಾತ್ರವನ್ನು ಚಿತ್ರಿಸಿದ್ದೇನೆ. ಹದಿನಾರು ವರ್ಷಗಳ ಕಾಲ ರಾಮನಿಂದ ಪರಿತ್ಯಕ್ತಳಾದ ಸೀತೆ ಹೇಗೆ ನಡೆದುಕೊಳ್ಳಬಹುದಿತ್ತೋ ಹಾಗೆಯೇ ಅವಳನ್ನಿಲ್ಲಿ ತಂದಿದ್ದೇನೆ. ನಮ್ಮ ಸುತ್ತಮುತ್ತಲಿನ ಜನರಲ್ಲಿ ನೋಡುವಂಥ ಪ್ರತಿಕ್ರಿಯೆಯನ್ನೇ ನಾನಿಲ್ಲಿ ವಿಶ್ಲೇಷಿಸಿದ್ದೇನೆ.

* ವಾಲ್ಮೀಕಿ ರಾಮಾಯಣದ ಕಾಂಡಗಳಲ್ಲಿ ಒಂದರ ಹೆಸರು ‘ಉತ್ತರಕಾಂಡ’ ಎಂದೇ ಇದೆ. ನೀವು ನೇರವಾಗಿ ಆ ಹೆಸರನ್ನೇ ಕಾದಂಬರಿಗೆ ಇಟ್ಟಿದ್ದೀರಿ; ಇದಕ್ಕೆ ಏನಾದರೂ ಕಾರಣ ಇದೆಯೆ?
ಇದು ಸೀತಾಪರಿತ್ಯಾಗದ ಕಥೆಯೇ. ಮೂಲರಾಮಾಯಣದಲ್ಲಿ ಈ ಕಥೆ ಉತ್ತರಕಾಂಡದಲ್ಲಿಯೇ ಬರುವುದು. ಅದಕ್ಕೆ ಈ ಹೆಸರೇ ಇಟ್ಟೆ. ಓದುಗರಲ್ಲಿ ಇದು ಸುಲಭವಾಗಿ ಕಥೆಗೆ ರಿಲೇಟ್‌ ಆಗುತ್ತೆ. ‘ಪರ್ವ’ ಅಂತ ಹೆಸರಿಡುವಾಗಲೂ ಹೀಗೆಯೇ ಮಾಡಿದ್ದು. ಉತ್ತರಕಾಂಡಕ್ಕೆ ನಾನು ವಾಲ್ಮೀಕಿಗಳಿಗೆ ಕೃತಜ್ಞನಾಗಿದ್ದೇನೆ. ಈ ಕಥೆ ಅವರದ್ದೇ. ನನಗೆ ತೋಚಿದಂತೆ ನಾನು ಅದನ್ನು ಬರೆದಿದ್ದೇನೆ ಅಷ್ಟೆ. ಒಬ್ಬ ಲೇಖಕನಾಗಿ ನನಗೆ ಸ್ವಾತಂತ್ರ್ಯ ಇದೆ; ಅದನ್ನು ಬಳಸಿಕೊಂಡು ಹೀಗೆ ಬರೆದಿದ್ದೇನೆ. ನಾನು ವಾಲ್ಮೀಕಿಗಳ ಪರಂಪರೆಗೇ ಸೇರಿದವನು. ಕಾದಂಬರಿಯನ್ನು ವಾಲ್ಮೀಕಿಗಳ ಮಾತಿನಿಂದಲೇ ಮುಗಿಸಿದ್ದೇನೆ ಕೂಡ.

* ಮಹಾಭಾರತದ ಸಂಕೀರ್ಣತೆ ರಾಮಾಯಣಕ್ಕೆ ಇಲ್ಲ ಅಂತ ಹೇಳಿದಿರಿ. ಆದರೆ ನಮ್ಮ ಪ್ರಾಚೀನ ಸಂಸ್ಕೃತ ಪರಂಪರೆಯನ್ನು ನೋಡಿದರೆ ರಾಮಾಯಣವನ್ನು ಆಧರಿಸಿ ಬರೆದ ಕಾವ್ಯ–ನಾಟಕಗಳೇ ಹೆಚ್ಚು ಅನಿಸುತ್ತದೆ ಅಲ್ಲವೆ? ಉದಾಹರಣೆಗೆ, ಭಾಸ, ಭವಭೂತಿ ಮತ್ತು ಕಾಳಿದಾಸ ಕೂಡ ರಾಮಾಯಣವನ್ನು ಆಶ್ರಯಿಸಿ ಬರೆದಿದ್ದೇ ಹೆಚ್ಚು. ಕುಮಾರವ್ಯಾಸ ಕೂಡ ‘ತಿಣಿಕಿದನು ಫಣಿರಾಯ ರಾಮಾಯಣದ ಕಥೆಗಳ ಭಾರದಲಿ’ ಎಂದಿದ್ದಾನೆ ಅಲ್ಲವೆ?

ಇಡೀ ಮಹಾಭಾರತವನ್ನು ಒಂದು ನಾಟಕದಲ್ಲಿ ತರುವುದು ಕಷ್ಟ. ರಾಮಾಯಣ ಸುಲಭಕ್ಕೆ ದಕ್ಕುತ್ತೆ. ಆದರೆ ಎಲ್ಲ ಕಡೆಯೂ ಆವರಿಸಿರುವುದು ಕೃಷ್ಣನ ಪಾತ್ರವೇ. ರಾಮಾಯಣದ ನೈತಿಕ ಸಂದೇಶಗಳ ಪಾತ್ರವನ್ನು ಇಲ್ಲಿ ಗಮನಿಸಬಹುದು. ಆನಂತರ ಬಂದ ಧರ್ಮಶಾಸ್ತ್ರಗಳು ಕೂಡ ರಾಮಾಯಣದ ಈ ಅಂಶಗಳನ್ನು ಎತ್ತಿಹಿಡಿದವು. ಪಿತೃವಾಕ್ಯ ಪರಿಪಾಲನೆ, ಕುಟುಂಬದಲ್ಲಿ ಹಿರಿಯಣ್ಣ ತಂದೆಯ ಸಮಾನ, ಅತ್ತಿಗೆಯನ್ನು ತಾಯಿಯಂತೆ ಕಾಣಬೇಕು– ಇಂಥವಕ್ಕೆ ರಾಮಾಯಣ ಪ್ರೇರಣೆ ಕೊಡುತ್ತೆ. ಬಹುಶಃ ಇದೂ ಕಾರಣ ಇರಬಹುದು. ಆದರೆ ಕವಿಗಳಿಗೆ ನಿಜವಾದ ಚಾಲೆಂಜ್‌ ಒಡ್ಡುವುದು ಮಹಾಭಾರತವೇ. ಮಹಾಭಾರತದಲ್ಲೇ ಕರ್ಷಣೆ ಹೆಚ್ಚು. ನನಗೆ ಕೃಷ್ಣನಷ್ಟು ರಾಮ ಸಂಕೀರ್ಣ ಪಾತ್ರ ಅಲ್ಲ.

ಈ ಕಾದಂಬರಿಯಲ್ಲಿ ಸೀತೆಯ ಪಾತ್ರಕ್ಕೆ ಶಕ್ತಿ ತುಂಬಲು ಹೋಗಿ ರಾಮನ ವ್ಯಕ್ತಿತ್ವವನ್ನು ಕುಬ್ಜ ಮಾಡಿದ್ದೀರಿ ಎಂದು ನಿಮಗೆ ಅನಿಸಲಿಲ್ಲವೆ?
ಇಲ್ಲ, ನಾನು ಯಾರನ್ನೂ ಕುಬ್ಜ ಮಾಡಲು ಹೋಗಿಲ್ಲ, ಯಾರನ್ನೂ ಮೇಲಕ್ಕೂ ಎತ್ತಿಲ್ಲ. ಆ ಸನ್ನಿವೇಶದಲ್ಲಿ ಒಬ್ಬ ಹೆಣ್ಣು ಹೇಗೆ ನಡೆದುಕೊಳ್ಳುತ್ತಾಳೆಯೋ ಹಾಗೆಯೇ ಸೀತೆಯೂ ನಡೆದುಕೊಂಡಿರುವಂತೆ ಮಾಡಿದ್ದೇನೆ, ಅಷ್ಟೆ. ಹಾಗೆ ಮಾಡುವಾಗ ಸಹಜವಾಗಿಯೇ ರಾಮ ಮಾಡಿರುವಂಥದ್ದು ಅನ್ಯಾಯ ಎಂದು ಬಂದೇ ಬರುತ್ತದೆ. ರಾಮ ಮಾಡಿದ ಅನ್ಯಾಯವನ್ನು ತೋರಿಸಲು ನಾನು ಹೊರಟಿಲ್ಲ; ಸೀತೆಗೆ ಆದ ಅನ್ಯಾಯವನ್ನು ತೋರಿಸುವುದು ನನ್ನ ಉದ್ದೇಶ. ‘ನಾನು ಕೀರ್ತಿಗೋಸ್ಕರ ಯುದ್ಧ ಮಾಡಿದ್ದು; ನಿನಗಾಗಿ ಅಲ್ಲ’ ಎಂದ ರಾಮನ ಮಾತು ಕೇಳಿದ ಮೇಲೆ ಸೀತೆ ಮೊದಲಿನ ಸೀತೆಯಾಗಿ ಉಳಿಯಲು ಸಾಧ್ಯವಾ?

* ನಿಮಗೆ ಭಾರತೀಯ ಪರಂಪರೆಯ ಬಗ್ಗೆ ಗೌರವ–ಶ್ರದ್ಧೆಗಳು ಇವೆ. ಈ ಪರಂಪರೆಯನ್ನು ಟೀಕೆ ಮಾಡುವವರೂ ರಾಮನನ್ನು ಟೀಕಿಸುತ್ತಾರೆ. ಹಾಗಾದರೆ ನಿಮ್ಮ ಟೀಕೆಗೂ ಅವರ ಟೀಕೆಗೂ ಏನು ವ್ಯತ್ಯಾಸ?
ನಾನೊಬ್ಬ ಕ್ರಿಯೇಟಿವ್‌ ರೈಟರ್‌; ಅವರು ಆರ್ಗ್ಯುಮೆಂಟೆಟಿವ್‌. ನಾನು ವಾದ ಮಾಡುತ್ತಿಲ್ಲ; ಸೀತೆಯ ಭಾವನೆಗಳನ್ನು ಹೇಳಿದ್ದೇನೆ. ರಾಮನ ಆದರ್ಶಗಳು ಸರಿಯೇ; ಆದರೆ ಅದರಿಂದ ಬೇರೆಯವರಿಗೆ ಆದ ನೋವು ಎಷ್ಟು! ಸಾಹಿತ್ಯಸಂದರ್ಭದಲ್ಲಿ ತೀರ್ಮಾನಗಳನ್ನು ಕೊಡಲು ಹೋಗಬಾರದು. ರಾಮ ಅವನ ದೃಷ್ಟಿಯಿಂದ ಸರಿ; ಸೀತೆ ಅವಳ ದೃಷ್ಟಿಯಿಂದ ಸರಿ. ಇದಕ್ಕೆ ಏನು ಪರಿಹಾರ ಅಂದರೆ, ಏನು ಎಂದರೆ ಏನೂ ಪರಿಹಾರ ಇಲ್ಲ, ಅಷ್ಟೆ. ಈ ಟೀಕಾಕಾರರಿಗೆ ಸಾಹಿತ್ಯ ಗೊತ್ತಿಲ್ಲ. ಸಾಹಿತ್ಯ ಗೊತ್ತಿದ್ದರೆ ‘ನನಗೆ ಇದು ಗೊತ್ತಾಗುತ್ತಿಲ್ಲ’ ಎಂಬ ತಿಳಿವಳಿಕೆ ಬರುತ್ತೆ. ಹೀಗಾಗಿ ನನ್ನದು ವಾದ ಅಲ್ಲ; ಕ್ರಿಯೇಟಿವ್‌ ರೆಸ್ಪಾನ್ಸ್‌. ನನ್ನ ಕಾವ್ಯಮೀಮಾಂಸೆಯನ್ನು ವಾಲ್ಮೀಕಿಗಳ ಮಾತಿನಲ್ಲೇ ಕಾದಂಬರಿಯ ಕೊನೆಯಲ್ಲಿ ಹೇಳಿದ್ದೇನೆ.

* ಪೌರಾಣಿಕ ಆವರಣಗಳ ಸಂದರ್ಭದಲ್ಲಿ, ಉದಾಹರಣೆಗೆ ಅಹಲ್ಯಾ ಪ್ರಸಂಗ, ಧನುರ್ಭಂಗದ ಪ್ರಸಂಗ, ಇಲ್ಲಿ ನೀವು ಹೆಚ್ಚು ತರ್ಕವನ್ನು ಆಶ್ರಯಿಸುತ್ತೀರಿ. ಆಗ ಕಾವ್ಯಸತ್ಯ ಹಿಂದೆ ಸರಿಯುತ್ತದೆ ಅಲ್ಲವೆ?
ನಾನೂ ಒಬ್ಬ ಕವಿ; ನಾನು ಕೂಡ ಅಲ್ಲೆಲ್ಲ ಕಾವ್ಯಸತ್ಯವನ್ನೇ ಸೃಷ್ಟಿ ಮಾಡುತ್ತಿರುವುದು. ಆ ಕಾವ್ಯಸತ್ಯವನ್ನು ನಾನು ಹಾಳು ಮಾಡಿರುವೆ ಎಂದು ನೀವು ಹೇಳಿದರೆ; ನಾನು ಹೇಳುತ್ತೇನೆ, ‘ನಾನು ಅಲ್ಲಿ ನನ್ನ ಕಾವ್ಯಸತ್ಯವನ್ನು ಸೃಷ್ಟಿಸಿದ್ದೇನೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT