ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವನವೀನ ನಾಮಪುರಾಣ!

ಮಂದಹಾಸ
Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
-ಮಾಸ ಬೆಳಲಗೆರೆ
 
**
ಮಕ್ಕಳಿಗೆ ಒಳ್ಳೆ ಹೆಸರು ಇಡೋದು ಯಾವ ತಂದೆ–ತಾಯಿಗೆ ಇಷ್ಟವಿಲ್ಲ! ಇಂದಿನ ದಿನಗಳಲ್ಲಿ ಮದುವೆ ಆಗುವವರು ತಮಗೆ ಹುಟ್ಟುವ ಮಕ್ಕಳಿಗೆ ಮಜಬೂತು ಹೆಸರು ಇಡ್ಬೇಕು ಅಂತ ಮದುವೆಗೆ ಮುಂಚೆಯೇ ಮನಸಲ್ಲಿ ಹೆಸರಿನ ಪಟ್ಟಿ ತಯಾರು ಮಾಡುವುದಿದೆ. ಗಂಡಾದ್ರೆ ರಾಹುಲ್ – ರಂಜನ್ ಅಂತನೋ, ಹೆಣ್ಣಾದ್ರೆ ತಾನ್ವಿ, ಸಾನ್ವಿ, ಮಾನ್ವಿ, ಅಂತಲೋ... ಅಂತೂ ಒಳ್ಳೆ ಹೆಸರಿಡ್ಬೇಕು ಅಂತ ಕನಸು ಕಾಣುವ ಭಾವಿ ಅಪ್ಪ–ಅಮ್ಮಂದಿರು ನಮ್ಮ ನಡುವೆ ಸಾಕಷ್ಟಿದ್ದಾರೆ. ಈ ಹೆಸರಿಡುವ ಗೋಜಲದಲ್ಲಿ ‘ಕೂಸು ಹುಟ್ಟೋದಕ್ಕೂ ಮುಂಚೆ ಕುಲಾವಿ ಹೊಲಿಸಿದ ಹಾಗೆ!’ ಎಂಬ ಮಾತನ್ನ ಕೊಂಚ ಬದಲಿಸಿ – ‘ಮಗು ಹುಟ್ಟೋದಕ್ಕೆ ಮುಂಚೆ ಹೆಸರು ಹುಡುಕಿದ ಹಾಗೆ’ ಎಂದು ಬದಲಿಸಬಹುದು. 
 
‘ಏನ್ರೀ ಇದೆ ಹೆಸರಲ್ಲಿ ಅಂಥಾದ್ದು?’ ಎಂದು ನೀವು ಮಾತ್ರ ಕೇಳಬೇಡಿ. ಅದೆಷ್ಟೋ ಜನ ತಮ್ಮ ಮೂಲ ಹೆಸರಿಗೆ ಪಂಗನಾಮ ಹಾಕಿ,  ಬದಲಿ ನಾಮ ಇಟ್ಟುಕೊಳ್ಳಲು ಕೋರ್ಟು ಕಚೇರಿ ಅಲೆದಾಡಿಲ್ಲ ಹೇಳಿ? ಹಳೆಯ ತಲೆಮಾರಿನ ಅಮ್ಮಂದಿರು ತಮ್ಮ ಮಗುವಿಗೆ ಹೆಸರಿಡೋಕೆ ಸಹೋದರರನ್ನೋ ಸಹೋದರಿಯರನ್ನೋ ಶಾಸ್ತ್ರಿಗಳನ್ನೋ  ವಿಚಾರವಂತರನ್ನೋ ವಿದ್ಯಾವಂತರನ್ನೋ ಎಡತಾಕಿರುವ ಉದಾಹರಣೆಗಳು ನೂರಾರು! ನಾಗವೇಣಿ,  ಸತ್ಯಭಾಮಾ, ಅನ್ನಪೂರ್ಣ, ಸರಸ್ವತಿ, ಗುರುಬಸಮ್ಮ, ಚನ್ನಬಸಮ್ಮ, ರಾಜಶೇಖರ, ರುದ್ರಮುನಿಯಪ್ಪ, ರೇವಣಸಿದ್ದಪ್ಪ, ಶಿವರುದ್ರಪ್ಪ, ಹನುಮಂತಪ್ಪ, ರಾಮಪ್ಪ, ನಾಗಭೂಷಣಸ್ವಾಮಿ – ಇವೆಲ್ಲ ಬಾಯ್ತುಂಬಾ ಕರೆಯಬಹುದಾಗಿದ್ದ ಅಂದಿನ ಹೆಸರುಗಳು. ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಇಂಬುಕೊಡುತ್ತಿದ್ದ ಹೆಸರುಗಳಿವು. ಆದರೆ, ಇಂದಿನ ದಿನಗಳಲ್ಲಿ ಪ್ರಯಾಸವಿಲ್ಲದೇ ಕರೆಯುವಂತಹ ಹೆಸರನ್ನೇ ಇಟ್ಟು ಖುಷಿಪಡುವವರೇ ಹೆಚ್ಚು! ಖುಷಿ, ನೇಹಾ, ವಿಹಾ, ರಿಹಾ, ಸುಹಾ – ಇಂತಹ ಹೆಸರುಗಳು ನಾಲಿಗೆಗೆ ಹೆಚ್ಚು ಕೆಲಸ ಕೊಡದ, ಕಂಠಶೋಷಣೆ ಮಾಡಿಕೊಳ್ಳದೆ ಉದಯವಾಗುತ್ತಿರುವುದು ನಮ್ಮ ಹಿರಿಯರಿಗೆ ಇರಿಸುಮುರಿಸು!  
 
ಹೆಸರಿನಂತೆ ನಡೆದುಕೊಳ್ಳುವ ಜನ ಇರಬಹುದೇ ಜಗತ್ತಿನಲ್ಲಿ? ಉತ್ತರಿಸಲು ಕಷ್ಟವಾದ ಪ್ರಶ್ನೆಯಿದು. ‘ಅಮರ್‌ನಾಥ್’ ಹೆಸರಿನವ ಅರ್ಧ ವಯಸ್ಸಿಗೇ ಮರಣಿಸಿದರೆ, ಹೆಸರಿನಂತೆ ಅವನು ಅಮರನಾದ ಎನ್ನಬಹುದೇ? ಸಂತೆಯ ತರಕಾರಿ ಚೀಲ ಹೊರಲಾರದವನನ್ನು ‘ಗಿರಧರ’ ಎನ್ನುವುದಾದರೂ ಹೇಗೆ? ಮನೆಯೊಳಗಿರುವ ಜಿರಲೆಯನ್ನು ಕೊಲ್ಲದ ಅಂಜುಬುರುಕಿ ಹೆಂಗಸಿಗೆ ಓಬವ್ವ ಎಂದು ಕರೆದರೆ ಹೇಗೆ? ಹೆಸರು ಕೇವಲ ನಮ್ಮಗಳ ಅಂಕಿತ ಆಗಿರಬಹದು. ಕೆಲವೇ ಕೆಲವು ಅಂಕಿತಗಳು ಅನ್ವರ್ಥಗಳಾಗಿರಲೂಬಹುದು! ಆದರೆ, ಅಂಕಿತಗಳೆಲ್ಲಾ ಅನ್ವರ್ಥಗಳಾಗಲು ಸಾಧ್ಯವೇ? ಇಂದಿನ ಬಹುತೇಕ ಮಕ್ಕಳ ಹೆಸರುಗಳು ಕೇವಲ ವಸ್ತುಗಳ ಹೆಸರಂತೆ ಅಂಕಿತವಾಗಿವೆ.  ಆ ಹೆಸರುಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇನ್ನೇನು ಇಂಬುಕೊಟ್ಟಾವು?
 
ನಮ್ಮ ಹಿರಿಯರು ಹೆಸರಿಡುವ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಅನ್ನುವ ಮಾತಿದೆ. ಅಷ್ಟಕ್ಕೂ, ಅಂದಿನ ಕುಟುಂಬಗಳಲ್ಲಿ, ಸಾಮಾನ್ಯವಾಗಿ ಮಕ್ಕಳ ಸಂತತಿ ಏನಿಲ್ಲವೆಂದರೂ ಕಾಲ್ ಡಜನ್‌ನಿಂದ ಶುರುವಾಗಿ, ಅರ್ಧ ಡಜನ್‌ಗೆ ಏರಿ, ಡಜನ್ ಮುಟ್ಟಿರುವ ಉದಾಹರಣೆಗಳೂ ಇರುತ್ತಿದ್ದವು. ಕೇರಿಯಲ್ಲಿ ಕುಟುಂಬಕ್ಕೆ ಒಂದೋ ಎರಡೋ ಮಕ್ಕಳಿರುವ ಮನೆಗಳು ಒಂದೋ ಎರಡೋ ಎಂದರೆ ಈಗಿನ ಮಕ್ಕಳಿಗೆ ಹುಸಿನಗೆ ಹುಟ್ಟದಿರದು! ಇಂಥ ಕುಟುಂಬಗಳಲ್ಲಿ ಎಷ್ಟು ಮಕ್ಕಳಿಗೆ ಇಷ್ಟವಾಗುವಂತೆ ಹೆಸರಿಡಲು ಸಾಧ್ಯ!  ನಮ್ಮ  ಪೂರ್ವಜರ  ತಲೆಮಾರಿನ ತುಣುಕುಗಳು ನಾವೆಲ್ಲ – ಕಲ್ಲೇಶ, ಮಲ್ಲೇಶ, ಹರೀಶ, ಗಿರೀಶ, ಸರ್ವೇಶ... ಎಲ್ಲಾ ಈಶರು! ಗಂಡಾದರೆ ಅಜ್ಜನ ಹೆಸರನ್ನೋ, ದೇವರ ಹೆಸರನ್ನೋ ಅಪ್ಪನ ಹೆಸರನ್ನೋ, ಅಥವಾ ಹೆಸರು ಪುನರಾವರ್ತಿಸುವ ಸಂದರ್ಭ ಬಂದರೆ ಹೆಸರಿನ ಮುಂದೆ ಸಣ್ಣ ಅಂತಲೋ, ದೊಡ್ಡ ಅಂತಲೋ ಪ್ರತ್ಯಯಗಳು! ಇನ್ನು ಹೆಣ್ಣುಮಕ್ಕಳಿಗೆ ಅಜ್ಜಿ ಹೆಸರೋ, ದೇವಾನುದೇವತೆಗಳ ಹೆಸರೋ, ಪುರಾಣ ಪುಣ್ಯ ಕಥೆಗಳಲ್ಲಿ ಬರುವ ಸ್ತ್ರೀ ಹೆಸರೋ ನದಿ–ನಕ್ಷತ್ರಗಳ ಹೆಸರೋ, ಪುಷ್ಟಗಳ ಹೆಸರೋ... ಇನ್ನೂ ಏನೇನೋ... 
 
ನನ್ನ ಪ್ರಾಥಮಿಕ ಶಾಲೆಯ ಮೇಷ್ಟ್ರು ಜ್ಞಾನಮೂರ್ತಿ ಅವರು ಬೈಗುಳವಾಗಿ ಬಳಸುತ್ತಿದ್ದ ಮಾತೊಂದು ನೆನಪಾಗುತ್ತಿದೆ: ‘ಹೆಸರು ನೋಡಿದ್ರೆ ಬಸವಾಪಟ್ಟಣ, ಕೀರ್ತಿ ನೋಡಿದ್ರೆ ದುಗ್ಗಾಣಿ!’. ಹೀಗೆ ವಿದ್ಯಾರ್ಥಿಯ ಮಂಕುಬುದ್ಧಿಯನ್ನು ಮೇಷ್ಟ್ರು ಹೀಗಳೆಯುತ್ತಿದ್ದರು. ಪಾಪ, ಅವನೇನು ಮಾಡಿಯಾನು? ತಂದೆ–ತಾಯಿ ಇಟ್ಟ ಹೆಸರು ಜ್ಞಾನಮೂರ್ತಿ ಎಂದಾದರೆ ಅವನು ಸರ್ವಜ್ಞನಾಗಿರಬೇಕು ಎಂದೇನು ಇಲ್ಲವಲ್ಲ! 
 
ಎಲ್ಲವೂ ಚುಟುಕಾಗಿರುವ ಈ ಕಾಲದಲ್ಲಿ ಉದ್ದನೆ ಹೆಸರುಗಳಿಗೂ ಉಳಿಗಾಲವಿಲ್ಲ. ಸಿಂಚನಾಳಿಗೆ ಸಿಂಚೂ ಎಂತಲೋ, ದೀಕ್ಷಾಗೆ ದೀಕ್ ಎಂತಲೋ, ರಚನಾಗೆ ರಚ್ಚೂ ಅಂತಲೋ, ಮಮತಾಗೆ ಮಮ್ಮೂ ಅಂತಲೋ ಕರೆಯುವ ಅಪ್ಪ ಅಮ್ಮಂದಿರು ನಮ್ಮ ಸುತ್ತ ಮುತ್ತ ಸಾಕಷ್ಟಿದ್ದಾರೆ.
 
ಈಗಿನ ಮಕ್ಕಳಿಗೆ ಶಾಲೆಯಲ್ಲಿ ಕೊಡುವ ಯೋಜನಾಕಾರ್ಯದಂತೆ, ‘ಎಲ್ಲಾ ಹೆಸರುಗಳನ್ನು ಮೂಲವನ್ನಾಧರಿಸಿ ಪಟ್ಟಿ ಮಾಡಿ’ ಎಂದರೆ, ಅದು ಒಂದು ವಾರಕ್ಕಾಗುವ ಹೋಮ್ ಅಸೈನ್ಮೆಂಟ್ ಆಗಬಹುದೇನೋ? ಉದಾಹರಿಸುವುದಾದರೆ: ಬಿಂದು, ಸರಳ, ರೇಖಾ, ವಜ್ರ, ಸೀಮ... ಇತ್ಯಾದಿ ಹೆಸರುಗಳು ಗಣಿತ ವಿಷಯಕ್ಕೆ! ಮುಂಬರುವ ಮಕ್ಕಳಿಗೆ – ತ್ರಿಭುಜ, ವೃತ್ತ, ತ್ರಿಜ್ಯಾ, ಜ್ಯಾ, ಖಂಡ, ಚೌಕ, ಆಯತ, ಮುಂತಾದ ಹೆಸರು ಇಟ್ಟರೂ ಆಶ್ಚರ್ಯವಿಲ್ಲ? ಭಾರತಿ, ಪೃಥ್ವಿ, ಭೂಮಿಕ, ಮುಂತಾದ ಹೆಸರುಗಳು ಸಮಾಜ ವಿಷಯಕ್ಕೆ ಎಂದು ಪಟ್ಟಿ ಮಾಡಿಯಾರು. ಇನ್ನು ಸಸ್ಯಜನ್ಯ ನಾಮಗಳು – ಪುಷ್ಪ, ರಾಗಿಣಿ, ಮಲ್ಲಿಕಾ, ಮಂದಾರ, ಚಂದನ, ಇತ್ಯಾದಿ, ಇತ್ಯಾದಿ! ಆಕಾಶಕಾಯಗಳ ಹೆಸರೂ ಕೂಡ ನಮ್ಮ ಮನುಕುಲಕ್ಕೆ ಅಂಟಿಕೊಂಡಿವೆ! ಸೂರ್ಯ, ಚಂದ್ರ, ಸೋಮ, ಮಂಗಳ, ಗುರು, ನಿಹಾರಿಕ,  ಆಕಾಶ್, ಇತ್ಯಾದಿ! ಸ್ಫೂರ್ತಿ, ನವ್ಯಾ, ಪ್ರೇರಣಾ, ದೀಕ್ಷಾ, ಪ್ರಾಂಜಲಿ, ಯಶಸ್ವಿನಿ, ರಚನಾ, ಶರಾವತಿ, ಕಾವೇರಿ, ತುಂಗಾ, ಗಂಗಾ, ವೇದಾ, ಶಾಲ್ಮಲಾ – ಇವುಗಳೆಲ್ಲ ಮನಸಿಗೆ ಉಲ್ಲಾಸ ತುಂಬುವ ಹೆಸರುಗಳು. 
 
ಒಂದಂತೂ ನಿಜ. ತಲೆಮಾರು ಯಾವುದಾದರೂ ಇರಲಿ, ಮಕ್ಕಳಿಗೆ ಹೆಸರಿಡುವ ವಿಚಾರದಲ್ಲಿ ನಾವೆಲ್ಲ ಅದೃಷ್ಟವಂತರೇ! ನಮ್ಮ ಪೂರ್ವಿಕರಿಂದ ಮೊದಲಾಗಿ ಹೊಸದಾಗಿ ಹಸೆಮಣೆ ಏರುವ ನವದಂಪತಿಗಳವರೆಗೂ ಮಕ್ಕಳಿಗೆ ಹೆಸರಿಡುವ ವಿಚಾರದಲ್ಲಿ ನಾವೆಲ್ಲ ಸ್ವೋಪಜ್ಞತೆ ಹೊಂದಿರುವವರೇ. ಆದರೆ, ಈ ಸ್ವೋಪಜ್ಞತೆಯತ್ತ ಮಾತ್ರ ನಮ್ಮ ನೆಚ್ಚಿನ ಮೋದೀಜಿ ಅವರು ಕಣ್ಣುಹಾಕಬಾರದೆಂಬ ಕಳಕಳಿ ನನ್ನದು! ಡೆನ್ಮಾರ್ಕ್ ಸರ್ಕಾರ ತನ್ನ ನಾಗರಿಕರಿಗೆ ಹೆಸರಿಡುವ ಸ್ವಾತಂತ್ರ್ಯ ಕಸಿದುಕೊಂಡು – ತಾನು ಕೊಡುವ ಒಂದಿಷ್ಟು ಹೆಸರುಗಳಲ್ಲಿ ಒಂದನ್ನು ಮಾತ್ರ ಆಯ್ದುಕೊಂಡು ತಮ್ಮ ಮಗುವಿಗೆ (ಮಕ್ಕಳಿಗಲ್ಲ!) ಹೆಸರಿಡಬಹುದು ಎಂಬ ಕಾನೂನು ತಂದಿದೆ!   ಇದು, ನಮ್ಮ ದೇಶದಲ್ಲಿ ಆರ್‌ಟಿಒ ಕಚೇರಿಯವರು ವಾಹನಗಳಿಗೆ ಕೊಡುವ ಅಧಿಕೃತ ಸಂಖ್ಯೆಯನ್ನು ನೆನಪಿಸುತ್ತದೆ. ಡೆನ್ಮಾರ್ಕ್‌ನ ಈ ಮಾದರಿ ‘ನೋಟು ನಿಷೇಧ’ ಖ್ಯಾತಿಯ ಮೋದಿ ಅವರಿಗೆ ಮಾದರಿಯಾಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT