ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ

Last Updated 16 ಜನವರಿ 2017, 4:08 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸತತ ಪರಿಶ್ರಮದಿಂದ ಮಾತ್ರ ಗುರಿಮುಟ್ಟಲು ಸಾಧ್ಯವೇ ಹೊರತು ಕಲ್ಪನೆಯಿಂದಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಒಗ್ಗಟ್ಟಾಗಿ ಸಮುದಾಯ ಸಂಘಟನೆಯಲ್ಲಿ ಮುಂದುವರಿಯಬೇಕು’ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ನಗರದ ತುರುವನೂರು ರಸ್ತೆಯಲ್ಲಿರುವ ರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವೀರಶೈವ ಲಿಂಗಾಯತ ನೌಕರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮುದಾಯ, ಸಮಾಜ ಸಂಘಟನೆಗೆ ಧ್ಯೇಯನಿಷ್ಠವಾಗಿ ಒಗ್ಗಟ್ಟಿ ನಿಂದ ಹೆಜ್ಜೆ ಹಾಕಿದರೆ ಗೆಲುವು ನಮ್ಮದಾಗುತ್ತದೆ. ಈ ನಿಟ್ಟನಿಲ್ಲಿ ನಿಮ್ಮ ಸಂಘಟನೆ ಸಾಗಲಿ’ ಎಂದು ಆಶಿಸಿದರು. ‘ನಮ್ಮಲ್ಲಿರುವ ಸಂಕೀರ್ಣ, ಸಂಕುಚಿತ ಮನೋಭಾವ ತೊಡೆಯಬೇಕು. ಆಧ್ಯಾತ್ಮಿಕ, ರಾಜಕೀಯ, ಸಾಮಾಜಿಕ ವಾಗಿ ಒಂದಾಗಿ ಪರಿಸ್ಪರ ಸಹಕಾರ ಸಹಯೋಗದೊಂದಿಗೆ ಹೆಜ್ಜೆ ಹಾಕಿದರೆ ಯಶಸ್ಸು ಸಾಧಿಸಬಹುದು’ ಎಂದರು.

‘ಸಮಾಜದಲ್ಲಿ ಸಮಾನತೆ, ಭ್ರಾತೃತ್ವ, ನೈತಿಕತೆ ಸ್ಥಾಪಿಸುವ ಧ್ಯೇಯದೊಂದಿಗೆ ಆತ್ಮೋನ್ಮತಿ ದಾರಿಯಲ್ಲಿ ನಮ್ಮನ್ನು ಕೈಹಿಡಿಸುವ ಧರ್ಮವೇ ವೀರಶೈವ ಧರ್ಮ. ಸರ್ವರಿಗೂ ಸಮಪಾಲು, ಸಮಬಾಳು ಸಾಮಾಜಿಕ ನ್ಯಾಯದಂತಹ ಬಸವಣ್ಣನವರ ತತ್ವ ಸಿದ್ಧಾಂತದ ಮೇಲೆ ಈ ಧರ್ಮ ಸುಭದ್ರವಾಗಿದೆ. ಇಂಥ ಧರ್ಮದ ಮೂಲಕ ಸಮುದಾಯದ ಏಳಿಗೆ, ಉತ್ತಮ ಸಮಾಜ, ರಾಷ್ಟ್ರ ನಿರ್ಮಾಣಕ್ಕೆ ಬದ್ಧರಾಗಬೇಕು’ ಎಂದರು. 

ವೀರಶೈವ ಸಮುದಾಯದ ಮುಖಂಡರು, ‘ತಮ್ಮ ಸಮುದಾಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ. ಅದನ್ನು ಬೇಡಿಕೇಳುವ ಪರಿಸ್ಥಿತಿ ಇದೆ’ ಎಂದು ಹೇಳಿಕೊಂಡಿದ್ದಾರೆ. ನಮ್ಮ ಆಡಳಿತಾ ವಧಿಯಲ್ಲಿ ಹೀಗಾಗಿರಲಿಲ್ಲ. ಎಲ್ಲ ಮಠ ಮಾನ್ಯಗಳಿಗೂ ಸಮಪಾಲು ನೀಡಿದ್ದೆವು. ಇತ್ತೀಚಿನ ದಿನಗಳಲ್ಲಿ ಅಂಥ ತೊಂದರೆ ಗಳಾಗುತ್ತಿವೆ ಎಂದು ತಿಳಿದು ನನಗೂ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಸಮಾಜದಲ್ಲಿ ಭೌತಿಕ ಅಭಿವೃದ್ಧಿಯ ಜತೆಗೆ ಬೌದ್ಧಿಕ ಅಭಿವೃದ್ಧಿಗೂ ಒತ್ತು ನೀಡಬೇಕಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಗ್ರಂಥಾಧ್ಯಯನ ಮಾಡಬೇಕು’ ಎಂದರು.

‘ಇತಿಹಾಸ ಓದದವನು ಇತಿಹಾಸ ಸೃಷ್ಟಿಸಲಾರ. ಹಾಗೆಯೇ ಧರ್ಮ ಗ್ರಂಥಗಳನ್ನು ಓದದವನು ಸಮಾಜವನ್ನು ಕಟ್ಟಲಾರ. ನಮ್ಮ ಕಾಯಕದ ಜತೆ ಧರ್ಮವನ್ನು ಧಾರ್ಮಿಕ ಗ್ರಂಥಗಳನ್ನು ಓದಬೇಕು. ವಿಶೇಷವಾಗಿ ವಚನಗಳನ್ನು ಓದಬೇಕು. ಸಂವಿಧಾನ ಓದಿದವನು ರಾಜ್ಯ, ರಾಷ್ಟ್ರವನ್ನು ಮುನ್ನಡೆಸುತ್ತಾನೆ. ವಚನಗಳನ್ನು ಓದಿದವನು ಮನೆತನ, ಸಮಾಜವನ್ನು ಮುನ್ನಡೆಸುತ್ತಾನೆ’ ಎಂದು ಅವರು ವಿಶ್ಲೇಷಿಸಿದರು.

‘ಜಾಗತೀಕರಣ, ಆಧುನಿಕತೆ ಒತ್ತಡದಲ್ಲಿ ವೀರಶೈವ ಸಂಸ್ಕೃತಿ ಸಂಕಷ್ಟದಲ್ಲಿದೆ. ಹಣೆ ಮೇಲೆ ವಿಭೂತಿ, ಕೊರಳಲ್ಲಿ ಲಿಂಗಧಾರಣೆ, ಪ್ರತಿ ದಿನ ಲಿಂಗದೊಂದಿಗೆ ಧ್ಯಾನ ಮಾಡಿ, ಶಿವಯೋಗ ಮಾಡಿ. ಒತ್ತಡ ನಿವಾರಣೆಯಾಗುತ್ತದೆ’ ಎಂದು ಅವರು ಸಲಹೆ ನೀಡಿದರು.

ಮಾಜಿ ಸಚಿವ ರೇಣುಕಾಚಾರ್ಯ, ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಮುಖಂಡ ಅಲ್ಲಂ ವೀರಭದ್ರಪ್ಪ, ಶಾಸಕಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್, ಮಾಜಿ ಶಾಸಕ ಎಂ.ಚಂದ್ರಪ್ಪ, ರಮೇಶ್, ಶ್ಯಾಮಲಾ, ನಾಗರಾಜ್ ಸಂಗಂ ಇದ್ದರು.

‘ಸಂಘಟನೆಗಳು ಬಲಗೊಳ್ಳಲಿ’
‘ಸಮುದಾಯ ಸಂಘಟನೆ ನೈತಿಕ, ಧಾರ್ಮಿಕ, ಸಾಂಸ್ಕೃತಿಕ ಸಂಘ ಟನೆಯೂ ಆಗಬೇಕು. ಅದು ಸಾಧ್ಯವಾ ಗದಿದ್ದರೆ ನಾವೆಲ್ಲರೂ ಶಕ್ತಿ ಹೀನರಾ ಗುತ್ತೇವೆ’ ಎಂದು ಸಾಣೇಹಳ್ಳಿಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

‘ವರ್ಷಕ್ಕೊಂದು ಸಾರಿ ಸಮಾವೇಶ, ಶಕ್ತಿ ಪ್ರದರ್ಶನ ಮಾಡಿದರೆ ಸಾಲದು. ಬದಲಿಗೆ, ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ವಚನ ಸಾಹಿತ್ಯ, ಶರಣ ಸಾಹಿತ್ಯ ಸಮ್ಮೇಳನ ಮಾಡಬೇಕು. ಮಕ್ಕಳಿಗೆ ವಚನಗಳನ್ನು  ಕಲಿಸ ಬೇಕು. ಸಮಾರಂಭಗಳಲ್ಲಿ ಮಕ್ಕ ಳಿಂದ 12ನೇ ಶತಮಾನದ ಶರಣರ ವಚನಗಳನ್ನು ಹಾಡಿಸಬೇಕು’ ಎಂದು ಹೇಳಿದರು.

ಕ್ರಿಶ್ಚಿಯನ್, ಸಿಖ್, ಇಸ್ಲಾಂ ಸೇರಿ ದಂತೆ ಯಾವ ಧರ್ಮದವರೂ ತಮ್ಮ ಧಾರ್ಮಿಕ ಲಾಂಚನ, ಆಚರಣೆ ಗಳನ್ನು ಬಿಟ್ಟಿಲ್ಲ. ಹಾಗೆಯೇ ಲಿಂಗಾ ಯತರು ಅಂಗದ ಮೇಲೆ ಲಿಂಗ ಧರಿಸುವುದು, ಹಣೆಯಲ್ಲಿ ವಿಭೂತಿ, ಶಿವಧ್ಯಾನ, ಮಕ್ಕಳಿಗೆ ವಚನ ಸಾಹಿತ್ಯ ಹೇಳಿ ಕೊಡುವುದನ್ನು ಅಭ್ಯಾಸ ಮಾಡಬೇಕು’ ಎಂದು ಅವರು ಹೇಳಿದರು.

‘ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ. ನಮ್ಮಂತೆ ಇನ್ನೊಬ್ಬರಿಗೆ ಬದುಕಲು ನೆರವಾಗಿ. ನಮ್ಮ ಧರ್ಮ ದಾಸೋಹ ಪ್ರಜ್ಞೆ ಹೇಳಿಕೊಡುತ್ತದೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಒಂಡರೆ, ಸಂಘಟನೆ ಬಲಗೊಳ್ಳುತ್ತದೆ’ ಎಂದರು.

ವೀರಶೈವ ಲಿಂಗಾಯತ ನೌಕರರ ಮೆರವಣಿಗೆ
ಚಿತ್ರದುರ್ಗ:ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವೀರಶೈವ – ಲಿಂಗಾಯತ ನೌಕರರು ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಅದ್ಧೂರಿ ಮೆರವಣಿಗೆ ನಡೆಸಿದರು.

ರಾಜ್ಯ ವೀರಶೈವ – ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕದಿಂದ ವೀರಶೈವ – ಲಿಂಗಾಯತ ನೌಕರರ ರಾಜ್ಯಮಟ್ಟದ ಎಂಟನೇ ಸಮಾವೇಶದ ಅಂಗವಾಗಿ ಮೆರವಣಿಗೆ ಆಯೋಜಿಸಲಾಗಿತ್ತು.

ನೀಲಕಂಠೇಶ್ವರ ಸ್ವಾಮಿ ದೇಗುಲದ ಬಳಿ ಮೆರವಣಿಗೆ ಪ್ರಾರಂಭವಾಯಿತು. ಸಂತೇಪೇಟೆ, ಗಾಂಧಿವೃತ್ತ, ಬಿ.ಡಿ.ರಸ್ತೆ, ಒನಕೆ ಓಬವ್ವ ವೃತ್ತ, ಕೆ.ಇ.ಬಿ.ಕಚೇರಿ, ಬಸವೇಶ್ವರ ವೃತ್ತ, ತುರುವನೂರು ರಸ್ತೆ ಮಾರ್ಗವಾಗಿ ಸಂಚರಿಸಿ ಸಭಾ ಕಾರ್ಯ ಕ್ರಮ ನಡೆಯುವ ಸ್ಥಳವಾದ ರೆಡ್ಡಿ ಸಮು ದಾಯ ಭವನ ತಲುಪಿತು. ವೀರಶೈವ ಲಿಂಗಾಯತ ಸಮುದಾಯದ ನೂರಾರು ನೌಕರರು, ಮುಖಂಡರು, ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT