ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಸ್‌ ನೀಡಿ ತೆರೆ ಎಳೆಯುವ ಯತ್ನ?

ಎಪಿಎಂಸಿ ಚುನಾವಣೆ; ಮತ ಪತ್ರ ಮಾಯ ಪ್ರಕರಣ
Last Updated 16 ಜನವರಿ 2017, 8:36 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ(ಎಪಿಎಂಸಿ)ಯ ಬಸರಕೋಡು ಮತಗಟ್ಟೆಯಲ್ಲಿ ಮತ­ದಾನ ಸಮಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ ವಿರುದ್ಧ ನೋಟಿಸ್ ಜಾರಿ ಮಾಡಲಾಗುವುದು ಎಂದಷ್ಟೇ ಹೇಳುವ ಮೂಲಕ ತಹಶೀಲ್ದಾರ್ ಆನಂದಪ್ಪ ನಾಯಕ ಪ್ರಕರಣಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ ಎಂದು ಬಿಜೆಪಿ ಪಕ್ಷದ ಮುಖಂಡರು ದೂರಿದ್ದಾರೆ.

ಎಪಿಎಂಸಿ ಚುನಾವಣೆಯ ಮತ ಎಣಿಕೆ ಮಾಡುವಾಗ ತಂಬ್ರಹಳ್ಳಿ ಕ್ಷೇತ್ರದ ಬಸರಕೋಡು ಮತಗಟ್ಟೆಯಲ್ಲಿ ಮತದಾನದ ಸಂಖ್ಯೆಗಿಂತಲೂ
ಮತ ಎಣಿಕೆ ಕೇಂದ್ರದಲ್ಲಿ ಐದು ಮತ ಕಡಿಮೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗೆ ನೋಟಿಸ್ ಜಾರಿ ಮಾಡಿ, ಅಲ್ಲಿನ ಎಲ್ಲ ದಾಖಲೆಗಳನ್ನು ಖಜಾನೆಯಲ್ಲಿ ಇರಿಸಿ­ವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ.

ಎಪಿಎಂಸಿ ಚುನಾವಣೆಯ ತಂಬ್ರಹಳ್ಳಿ ಕ್ಷೇತ್ರದಲ್ಲಿ ಒಟ್ಟು 1833 ಮತದಾನವಾಗಿತ್ತು, ಮತಗಳ ಎಣಿಕೆ ಕೇಂದ್ರದಲ್ಲಿ 1828 ಮತಗಳು ಮಾತ್ರ ಪತ್ತೆಯಾಗಿದ್ದವು. ಇನ್ನೂ ಐದು ಮತ ಪತ್ರ ಕಾಣೆಯಾಗಿದ್ದವು.

ಈ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಜೇಶ್ವರಿ ಪೂಜಾರ್ ಪರಾಭವಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಎಣಿಕೆ ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಶನಿವಾರ ಪರಸ್ಪರ ಮಾರಾಮಾರಿ ನಡೆದಿತ್ತು.

ತಹಶೀಲ್ದಾರ್ ಕಚೇರಿ ಎದರು ಧರಣಿ ಕೂಡ ನಡೆದಿತ್ತು. ಆಗ ಜಿಲ್ಲಾಧಿಕಾರಿ ನಿರ್ದೇಶನದಂತೆ ಪರಿಶೀಲಿಸಿದಾಗ ಎರಡು ಮತಪತ್ರಗಳ ಕೌಂಟರ್ ಫೈಲ್‌ನಲ್ಲಿ ಪತ್ತೆಯಾಗಿದ್ದವು.

ಬಸರಕೋಡು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿ, ಹನಸಿ ಉರ್ದು ಪ್ರಾಥಮಿಕ ಶಾಲೆಯ ಟಿಜಿಟಿ ಶಿಕ್ಷಕ ಮಹ್ಮದ್ ಝಾಕೀರ್ ಹುಸೇನ್ ಅವರನ್ನು ಭಾನುವಾರ ಏಕಾಏಕಿ ಕರೆ ಮಾತುಕತೆ ನಡೆಸಿದ ತಹಶೀಲ್ದಾರ್ ನಡೆ ಅನುಮಾನ ಹುಟ್ಟಿಸಿದೆ. ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಸಹಾಯಕ ಚುನಾವಣೆ ಅಧಿಕಾರಿ ನಾಗೇಂದ್ರಪ್ಪ ಮತ್ತು ಜಗದೀಶ್‌ ಅವರ ವಿರುದ್ಧ ಇದುವರೆಗೂ ತಹಶೀಲ್ದಾರ್ ಯಾವುದೆ ಕ್ರಮ ಜರುಗಿಸದಿರುವುದು ಅನು­ಮಾನಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

‘ಸಹಾಯಕ ಚುನಾವಣೆ ಅಧಿಕಾರಿ ಮತ್ತು ಇತರೆ ಸಿಬ್ಬಂದಿ ಮೇಲಿನ ನಂಬಿಕೆ ಮೇಲೆ ಕೆಲಸ ನಿರ್ವಹಿಸಲಾಗಿತ್ತು. ಮತದಾರರಿಗೆ ಮತ ಪತ್ರ ನೀಡದಿರುವುದು ಅಕ್ಷಮ್ಯ ಅಪರಾಧ. ಜಿಲ್ಲಾಧಿಕಾರಿಗಳು ಬಸರಕೋಡು ಮತಗಟ್ಟೆ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಸಿಬ್ಬಂದಿ ಮೇಲೆ ಏನೇ ಕ್ರಮ ಕೈಗೊಂಡರೂ ಸ್ವೀಕರಿಸಲಾಗುವುದು. ಇದರ ಹೊಣೆ ಹೊರಲಾಗುವುದು.’ ಎಂದು ಮತಗಟ್ಟೆ ಅಧಿಕಾರಿ  ಮಹ್ಮದ್ ಝಾಕೀರ್ ಹುಸೇನ್‌ ಹೇಳಿದರು.

*
ಮತಗಟ್ಟೆಯಲ್ಲಿ ಕಾರ್ಯ­ನಿರ್ವಹಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಫಲಿಂತಾಶ ಪ್ರಕಟವಾಗಿರುವುದು ಅಂತಿಮ.  ದಾಖಲೆ ಖಜಾನೆಯಲ್ಲಿವೆ.
-ಆನಂದಪ್ಪ ನಾಯಕ,
ತಹಶೀಲ್ದಾರ್ ಮತ್ತು ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT