ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಸಾಮರಸ್ಯಕ್ಕೆ ಪೈ ಸ್ಮಾರಕ ‘ಗಿಳಿವಿಂಡು’

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ್ದ ಮನೆಯನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಕೇರಳ– ಕರ್ನಾಟಕ ಸರ್ಕಾರಗಳ ಯೋಜನೆ ಪೂರ್ಣಗೊಂಡಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳಾದ ಪಿಣರಾಯಿ ವಿಜಯನ್‌ ಮತ್ತು ಸಿದ್ದರಾಮಯ್ಯ ಇದೇ 19ರಂದು ಈ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಆ ಮೂಲಕ ಎಂಟು ವರ್ಷಗಳ ಹಿಂದೆ ‘ಗಿಳಿವಿಂಡು’ ಹೆಸರಿನಡಿ ಜಂಟಿಯಾಗಿ ಕೈಗೆತ್ತಿಕೊಂಡ ಈ ಯೋಜನೆ, ಬಹುಭಾಷಾ ಸಾಮರಸ್ಯಕ್ಕೆ ಸಾಕ್ಷಿಯಾಗಲಿದೆ.

ಮಂಜೇಶ್ವರದಲ್ಲಿರುವ ಅಜ್ಜನ ಮನೆಯಲ್ಲಿ (ತಾಯಿಯ ತಂದೆ) 1883ರಲ್ಲಿ ಹುಟ್ಟಿದ ಗೋವಿಂದ ಪೈ, ಅಲ್ಲಿ ಆರು ವಸಂತಗಳನ್ನು ಕಳೆದಿದ್ದಾರೆ. ಅಚ್ಚ ಕನ್ನಡ ನೆಲವಾದ ಮಂಜೇಶ್ವರ, ಗೋವಿಂದ ಪೈ ನಿಧನರಾಗುವ ವೇಳೆಗೆ (1963) ಕೇರಳದ ಪಾಲಾಗಿತ್ತು. ಪೈ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಕುಟುಂಬಸ್ಥರು ಅವರ ಮನೆ ಇದ್ದ 72 ಸೆಂಟ್ಸ್ ಜಾಗವನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು.

ಆ ಜಾಗದ ಸಮೀಪದಲ್ಲಿದ್ದ 1.10 ಎಕರೆಯನ್ನು ಗೋವಿಂದ ಪೈ ಸ್ಮಾರಕ ಕಾಲೇಜು ನಿರ್ಮಿಸಲು ನೀಡಿದ್ದರು. ಅಲ್ಲಿ ಸ್ಥಾಪನೆಯಾದ ಕಾಲೇಜು ಬಳಿಕ ಸ್ಥಳಾಂತರಗೊಂಡ ಕಾರಣ ಆ ಜಾಗವೂ ಸರ್ಕಾರದ ಪಾಲಾಯಿತು. ಈಗ ಒಟ್ಟು ಲಭ್ಯ ಇರುವ 1.82 ಎಕರೆ ಜಾಗದಲ್ಲಿ ಸ್ಮಾರಕ ಸಂಕೀರ್ಣ ತಲೆಎತ್ತಿದೆ. ಪೈಗಳ 122ನೇ ಜನ್ಮ ದಿನಾಚರಣೆಯಲ್ಲಿ (2004) ಭಾಗವಹಿಸಿದ್ದ ವೀರಪ್ಪ ಮೊಯಿಲಿ (ಆಗ ಕೇಂದ್ರ ಸಚಿವ), ಪೈ ನೆಲೆಸಿದ್ದ ಮನೆಯ ಶಿಥಿಲಾವಸ್ಥೆ ಕಂಡು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದರು. ಅದರ ಫಲವಾಗಿ 125ನೇ ಜನ್ಮದಿನಾಚರಣೆಯಂದು (2008 ಮಾರ್ಚ್ 23) ‘ಗಿಳಿವಿಂಡು’ ಯೋಜನೆಗೆ ಶಿಲಾನ್ಯಾಸ ನಡೆದಿತ್ತು. 1930ರಲ್ಲಿ ಪ್ರಕಟಗೊಂಡ, 46 ಪದ್ಯಗಳಿರುವ ‘ಗಿಳಿವಿಂಡು’ (ಗಿಳಿಗಳ ಹಿಂಡು) ಪೈಗಳ ಕೃತಿಗಳ ಪೈಕಿ ಒಂದು. ₹4 ಕೋಟಿ ವೆಚ್ಚದಲ್ಲಿ ಆರಂಭಿಸಲಾದ ಯೋಜನೆ ಪೂರ್ಣಗೊಳ್ಳಲು ಕನಿಷ್ಠ ₹ 10 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ.

ಕಾಸರಗೋಡು ಜಿಲ್ಲಾಧಿಕಾರಿ ಅಧ್ಯಕ್ಷತೆಯ ‘ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ’ ಯೋಜನೆ ಕಾರ್ಯಗತಗೊಳಿಸುವ ಹೊಣೆ ಹೊತ್ತಿದ್ದು, ಈ ಸಮಿತಿಗೆ ಪೂರಕವಾಗಿ ಮೊಯಿಲಿ ಅಧ್ಯಕ್ಷತೆಯಲ್ಲಿ ‘ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್’ ರಚಿಸಲಾಗಿದೆ. ಯೋಜನೆಯಡಿ ಪೈ ನೆಲೆಸಿದ್ದ ಮನೆಯನ್ನು ‘ರಾಷ್ಟ್ರೀಯ ಸ್ಮಾರಕ’ವಾಗಿಸುವ ಉದ್ದೇಶದಿಂದ ‘ನಲಂದ’ (ಸಂಶೋಧನೆ ಮತ್ತು ಅಧ್ಯಯನ ಕೇಂದ್ರ) ಹೆಸರಿನಲ್ಲಿ ಸಂರಕ್ಷಿಸುವ ಜೊತೆಗೆ ಭವನಿಕಾ (ಲಲಿತಾಕಲಾ ರಂಗಮಂದಿರ), ವೈಶಾಖಿ, ಸಾಕೇತ, ಆನಂದ (ಅತಿಥಿ ಗೃಹಗಳು), ಬೋಧಿರಂಗ (ಬಯಲು ರಂಗಮಂದಿರ) ಎಂಬ ವಿಭಾಗಗಳನ್ನು ನಿರ್ಮಿಸಲಾಗುತ್ತಿದೆ.

ನಲಂದದಲ್ಲಿ ಪೈ ಅವರ ಕೃತಿಗಳ ಗ್ರಂಥಾಲಯ ‘ಸಾರಸ್ವತ’, ಪ್ರಾಚೀನ ಹಸ್ತಪ್ರತಿ ಹಾಗೂ ತಾಳಪತ್ರಗಳನ್ನು ರಕ್ಷಿಸಿಡುವ ‘ಕಂಠಪತ್ರ’, ಕಲಾತ್ಮಕ ಚಿತ್ರಗಳನ್ನು ಹಾಗೂ ಕೆತ್ತನೆಗಳ ಪ್ರದರ್ಶನಕ್ಕಾಗಿ ‘ಮನೋಲ್ಲಾಸ’ ಹಾಗೂ ಯಕ್ಷಗಾನ ಕವಿ ಪಾರ್ತಿಸುಬ್ಬನ ಯಕ್ಷಗಾನ ದೇಗುಲ, ತೌಲನಿಕ ಅಧ್ಯಯನಕ್ಕಾಗಿ ‘ಸಮತೋಲನ’, ಪ್ರಾಚೀನ ಸಾಹಿತ್ಯಾಧ್ಯಯನ, ಸಂಶೋಧನೆಗಾಗಿ ‘ಧಮ್ಮಪದ’ ಹಾಗೂ ಪ್ರಾಚೀನ ಸಾಹಿತ್ಯದ ಮೂಲ ಆಕರಗಳ ವಸ್ತು ಸಂಗ್ರಹಾಲಯ ‘ಮಾಹಿತಿ ಕೋಶ’ ಹಾಗೂ ‘ಅಂತರ್ಜಾಲ’ ಎಂದು ಉಪವಿಭಾಗ ಮಾಡಲಾಗಿದೆ.

‘ಸಾಕೇತ’ ಮತ್ತು ‘ವೈಶಾಖ’ ನಿರ್ಮಾಣ ಪೂರ್ಣಗೊಂಡಿದೆ. ₹3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭವನಿಕಾಕ್ಕೆ ಈಗಾಗಲೇ ₹2 ಕೋಟಿ ವೆಚ್ಚ ಮಾಡಲಾಗಿದ್ದು ಶೇ 75ರಷ್ಟು ಪೂರ್ಣವಾಗಿದೆ. ನಲಂದಕ್ಕೆ ₹88 ಲಕ್ಷ ವೆಚ್ಚ ಮಾಡಲಾಗುತ್ತಿದ್ದು, ₹ 64 ಲಕ್ಷದ ಕೆಲಸ ಪೂರ್ಣವಾಗಿದೆ. ₹ 21 ಲಕ್ಷದಲ್ಲಿ ಯಕ್ಷಗಾನ ಮ್ಯೂಸಿಯಂ ನಿರ್ಮಾಣ ಕಾಮಗಾರಿ ಶೇ85ರಷ್ಟು ಪೂರ್ಣವಾಗಿದೆ. ಆವರಣ ಗೋಡೆ ನಿರ್ಮಾಣಕ್ಕೆ ₹13.50 ಲಕ್ಷ ವೆಚ್ಚ ಮಾಡಲು ಉದ್ದೇಶಿಸಲಾಗಿದ್ದು, ಅದರಲ್ಲಿ 9.84 ಲಕ್ಷದ ಕೆಲಸ (ಶೇ 90) ಆಗಿದೆ ಎಂದು ಯೋಜನೆ ನಿರ್ದೇಶಕ ಕೆ. ತೇಜೋಮಯ ತಿಳಿಸಿದರು.

ಪೈ ಅವರು ಬರೆದ, ಸಂಗ್ರಹಿಸಿದ ಸುಮಾರು 4,500 ಪುಸ್ತಕಗಳು ಸದ್ಯಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೋವಿಂದ ಪೈ ಅಧ್ಯಯನ ಕೇಂದ್ರದಲ್ಲಿವೆ. ಅವುಗಳ ಡಿಜಿಟಲೀಕರಣ ಪ್ರಗತಿಯಲ್ಲಿದ್ದು, 300 ಪುಸ್ತಕಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಎಲ್ಲ ಕೆಲಸಗಳು ಪೂರ್ಣಗೊಳ್ಳಲು ಇನ್ನೂ ₹3 ಕೋಟಿ ಅಗತ್ಯವಿದೆ ಎಂದರು.

ಭಾಷಾ ಪ್ರವೀಣ: ಪೈ ಅವರು ಕನ್ನಡ, ಕೊಂಕಣಿ ಮತ್ತು ಇಂಗ್ಲಿಷ್‌ ಹೊರತುಪಡಿಸಿ ತುಳು, ಸಂಸ್ಕೃತ, ಮಲಯಾಳಂ, ತಮಿಳು, ತೆಲುಗು, ಮರಾಠಿ, ಬಂಗಾಲಿ, ಪರ್ಷಿಯನ್‌, ಪಾಲಿ, ಉರ್ದು, ಗ್ರೀಕ್‌, ಜಪಾನಿ ಸೇರಿದಂತೆ 25 ಭಾಷೆಗಳಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯ ಹೊಂದಿದ್ದರು. 1949ನಲ್ಲಿ ಮದ್ರಾಸ್‌ ಸರ್ಕಾರ ಪೈ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿ ಗೌರವಿಸಿತ್ತು. 1951ರಲ್ಲಿ ಮುಂಬೈಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಪೈ ಅವರ ಪ್ರಮುಖ ಕೃತಿಗಳು: ‘ಗೊಮ್ಮಟ ಜಿನಸ್ತುತಿ’, ‘ಗಿಳಿವಿಂಡು’, ‘ನಂದಾದೀಪ’, ‘ಹೃದಯರಾಗ’ ಮುಂತಾದ ಕವನ ಸಂಕಲನಗಳು, ‘ಗೊಲ್ಗೊಥಾ’ ಮತ್ತು ‘ವೈಶಾಖಿ’ಯಂತಹ ಖಂಡಕಾವ್ಯ, ‘ಹೆಬ್ಬೆರಳು’, ‘ಚಿತ್ರಭಾನು’ (ನಾಟಕ), ‘ಬಾಹುಬಲಿ ಗೊಮ್ಮಟೇಶ್ವರ ಚರಿತ್ರೆ’ (ಜೈನ ಸಾಹಿತ್ಯ), ‘ಭಗವಾನ್ ಬುದ್ಧ’ (ಬೌದ್ಧ ಸಾಹಿತ್ಯ) ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ ಹಿರಿಮೆ ಪೈ ಅವರದ್ದು.

ಕೇರಳ– ಕರ್ನಾಟಕ ಸರ್ಕಾರಗಳ ಅನುದಾನ
ಈ ಯೋಜನೆಗೆ ಕೇರಳ ಸರ್ಕಾರ ₹ 50 ಲಕ್ಷ (2008–09ರಲ್ಲಿ ₹ 20 ಲಕ್ಷ, 2013–14ರಲ್ಲಿ ₹ 30 ಲಕ್ಷ) ನೀಡಿದೆ. ಅಲ್ಲದೆ, ಹೆಚ್ಚುವರಿಯಾಗಿ 2015–16ನೇ ಸಾಲಿನಲ್ಲಿ ₹ 1 ಕೋಟಿ ನೀಡುವುದಾಗಿ ಒಪ್ಪಿದ್ದು, ಈ ಕಡತ ಅಲ್ಲಿನ ಸಚಿವಾಲಯದ ಆರ್ಥಿಕ ವಿಭಾಗದಲ್ಲಿ ಬಾಕಿಯಿದೆ. ಕರ್ನಾಟಕ ಸರ್ಕಾರ ₹ 1.75 ಕೋಟಿ ನೀಡಿದೆ. ಸ್ಥಳೀಯ ಶಾಸಕ ಮತ್ತು ಸಂಸದ ನಿಧಿಯಿಂದ ತಲಾ ₹16 ಲಕ್ಷದಂತೆ ₹32 ಲಕ್ಷ ಮಂಜೂರಾಗಿದೆ. ಭಾರತ್‌ ಪೆಟ್ರೋಲಿಯಂ ಕಂಪೆನಿ ₹1.25 ಕೋಟಿ ಮಂಜೂರು ಮಾಡಿದ್ದು, ಅದರಲ್ಲಿ ₹1 ಕೋಟಿ ಬಂದಿದೆ. ಓಎನ್‌ಜಿಸಿ ₹35 ಲಕ್ಷ ಮಂಜೂರು ಮಾಡಿದ್ದು, ₹20 ಲಕ್ಷ ಬಂದಿದೆ. ಉದ್ಯಮಿ ದಯಾನಂದ ಪೈ ₹ 6 ಲಕ್ಷ, ಗೋವಿಂದ ಪೈ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಡಿ.ಕೆ. ಚೌಟ ₹ 2 ಲಕ್ಷ ದೇಣಿಗೆ ನೀಡಿದ್ದಾರೆ. ಪೈ ಅವರ 6 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಚೌಟ ಅವರು ಮಾಡಿಸುತ್ತಿದ್ದು, ಪೈ ಮನೆ ಎದುರು ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ.

ಚಿತ್ರಗಳು:ಪ್ರಭಾ ಮಂಜೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT