ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
-ಚಂದ್ರಮೋಹನ್‌, ಮಸಕರ್‌ ಓಮಾನ್‌
* ನಾನು ದಾವಣಗೆರೆ ಮೂಲದವನು. ನನ್ನ ಸಂಬಳ ₹ 80 ಸಾವಿರ. ನನ್ನ ಎನ್್ಆರ್‌ಐ ಖಾತೆಯಲ್ಲಿ ₹ 10 ಲಕ್ಷವಿದೆ. ಇಲ್ಲಿ ಬಡ್ಡಿ ಬಹಳ ಕಡಿಮೆ ಇದೆ. ಈ ಮೊತ್ತ ಭಾರತದಲ್ಲಿ ಅವಧಿ ಠೇವಣಿಯಲ್ಲಿ ಇರಿಸಿದರೆ, ಆದಾಯ ತೆರಿಗೆ ಬರುತ್ತದೆಯೇ? 
ಉತ್ತರ: ನೀವು ಅರಬ್‌ ರಾಜ್ಯವಾದ ಮಸ್ಕತ್‌–ಓಮಾನ್‌ನಲ್ಲಿ ಉದ್ಯೋಗ ಮಾಡುತ್ತಿದ್ದರೂ ಕಳೆದೆರಡು ವರ್ಷಗಳಿಂದ ನನ್ನ ಅಂಕಣ ತಪ್ಪದೇ ಪ್ರತೀ ವಾರ, ಓದುತ್ತಿರುವುದು ನನಗೆ ಖುಷಿ ತಂದಿದೆ. ನೀವು ಎನ್‌ಆರ್‌ಇ–ಎಸ್‌ಬಿ ನಿಂದ NRE-Re-invest Deposit ಗೆ ₹ 10 ಲಕ್ಷ ಆನ್‌ ಲೈನ್‌ನಲ್ಲಿ ವರ್ಗಾಯಿಸಿ. ಮುಂದೆ ಕೂಡಾ ಒಂದು ಮೊತ್ತ ನಿರ್ಧರಿಸಿ ಎನ್‌ಆರ್‌ಐ–ಆರ್‌ಐಡಿಯಲ್ಲಿ ಇರಿಸುತ್ತಾ ಬನ್ನಿ. ಈ ಠೇವಣಿಯಲ್ಲಿ ನಿಮ್ಮ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತಿರುತ್ತದೆ. ಎನ್‌ಆರ್‌ಇ–ಎಸ್‌ಬಿ ಅಥವಾ ಎನ್‌ಆರ್‌ಐ–ಆರ್‌ಐಡಿ ಇವುಗಳಿಂದ ಬರುವ ಬಡ್ಡಿಗೆ ಭಾರತದಲ್ಲಿ ಆದಾಯತೆರಿಗೆ ಇರುವುದಿಲ್ಲ. ಈ ಪ್ರಶ್ನೆ ಕೇಳಿದ್ದಕ್ಕೆ ಅಭಿನಂದನೆಗಳು. 
 
***
-ವಿಮೋದ್‌. ಡಿ., ಬೆಂಗಳೂರು
* ನಾನು ಮ್ಯೂಚುವಲ್‌ ಫಂಡ್‌ನ ಕ್ರಮಬದ್ದವಾದ ಉಳಿತಾಯ (ಎಸ್‌ಐಪಿ) ದಲ್ಲಿ ಹಣ ಹೂಡಬೇಕೆಂದಿದ್ದೇನೆ. ನಿಮ್ಮ ಸಲಹೆ ಬೇಕಾಗಿದೆ. ನಾನು ಎಲ್‌ಐಸಿ ವಾರ್ಷಿಕ ₹ 31ಸಾವಿರ, ಇನ್ನೊಂದು ಪಾಲಿಸಿ ₹ 14,500 ಎಕ್ಸ್‌ಐಡ್‌ ವಿಮಾ ₹ 20,000 ಲಿಟಲ್‌ ಪಿಂಚಣಿ ₹ 630 ತಿಂಗಳಿಗೆ, ಹೀಗೆ ಹೆಚ್ಚಿನ ಹಣ ವಿಮೆಗೇ ಕಟ್ಟುತ್ತಿದ್ದೇನೆ. ಈ ಎಲ್ಲಾ ಪಾಲಸಿ ನಿಲ್ಲಿಸಲು ನಿಮ್ಮ ಸಲಹೆ ಬೇಕಾಗಿದೆ.
ಉತ್ತರ: ಜೀವನದಲ್ಲಿ ಪ್ರತಿಯೊಬ್ಬರಿಗೆ ವಿಮೆಯ ಅವಶ್ಯವಿದೆ. ಆದರೆ ಎಲ್ಲಾ ಹೂಡಿಕೆ ಅಥವಾ ಉಳಿತಾಯ ವಿಮೆಯಲ್ಲಿಯೇ ಮಾಡಿರುವುದು ಜಾಣರ ಲಕ್ಷಣವಲ್ಲ. ವಾರ್ಷಿಕ ಆದಾಯದ ಶೇ 10 ರಷ್ಟು ಮಾತ್ರ ವಿಮೆಗೆ ಮುಡುವಾಗಿಡಬೇಕು. ಇಲ್ಲಿ ಉತ್ತಮ ವರಮಾನದ ನಿರೀಕ್ಷೆ ಇಲ್ಲ.
 
ಜೀವ ವಿಮೆಗೆ ಆದ್ಯತೆ ಇರಬೇಕು ಎನ್ನುವುದು ಗಮನಿಸಿಬೇಕಾದ ವಿಚಾರ. ವಿಮಾ ಪಾಲಿಸಿ ಮಧ್ಯದಲ್ಲಿ ನಿಲ್ಲಿಸುವುದರಿಂದ ಕಟ್ಟಿದ ಹಣದ 1/3 ಅಂಶ ಕೂಡಾ ಕೈಗೆ ಬಾರದು, ಅಟಲ್‌ ಪಿಂಚಣಿ ಯೋಜನೆ ಮಧ್ಯದಲ್ಲಿ ನಿಲ್ಲಿಸಬೇಡಿ. ಸಿಪ್‌ನಲ್ಲಿ ಕೂಡಾ ಕಂಟಕವಿಲ್ಲ ಎನ್ನಲಾಗದು. ಸಂವೇದಿ ಸೂಚ್ಯಂಕಕ್ಕೆ  (Sensex) ಅನುಗುಣವಾಗಿ ಲಾಭ ನಷ್ಟ ಬರುತ್ತದೆ. ಭದ್ರತೆ, ದ್ರವ್ಯತೆ ಹಾಗೂ ನಿಖರವಾದ ವರಮಾನಕ್ಕೆ ಬ್ಯಾಂಕ್‌ ಠೇವಣಿ ಆರಿಸಿಕೊಳ್ಳಿ.
 
***
-ಹಸೀನಾ ಪರ್ವೀನ್‌, ದಾವಣಗೆರೆ
* ಗೃಹಸಾಲ ಪಡೆಯುವಾಗ Floating ಅಥವಾ Fixed Rate of Interest ಇವುಗಳಲ್ಲಿ ಯಾವುದನ್ನು ಆರಿಸಿಕೊಳ್ಳಿ ಹಾಗೂ ಕಾರಣ ತಿಳಿಸಿ.
ಉತ್ತರ: ಸಾಮಾನ್ಯವಾಗಿ ಬ್ಯಾಂಕುಗಳು ಬಡ್ಡಿ ಬದಲಾಗುವ (Floating) ಯೋಜನೆಯನ್ನೇ ಅಳವಡಿಸಿಕೊಳ್ಳುತ್ತವೆ. ಇದರಿಂದ ಬ್ಯಾಂಕಿಗೂ– ಗ್ರಾಹಕರಿಗೂ ಒಳಿತಾಗುತ್ತದೆ.  ಗೃಹಸಾಲದ ಯೋಜನೆಗೆ ಕಡಿಮೆ ಬಡ್ಡಿ ವಿಧಿಸುತ್ತಿದ್ದು, ಮುಂದೆ ಇನ್ನೂ  ಕಡಿಮೆ ಆಗುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಬಡ್ಡಿ ಹೆಚ್ಚಳವಾಗುವ ಸಾಧ್ಯತೆ ಇರಲಾರದು. ಈ ಲಾಭವನ್ನು ಗ್ರಾಹಕರು ಪಡೆಯಬಹುದು. ಇದರಿಂದ ಇಎಂಐ ಕೂಡಾ ಮುಂದೆ ಕಡಿಮೆಯಾಗುತ್ತದೆ. ನಿಖರವಾದ (Fixed) ಬಡ್ಡಿ ವಿಧಿಸುವಾಗ ಪ್ರಾರಂಭದಿಂದಲೇ ಸ್ವಲ್ಪ ಹೆಚ್ಚಿಗೆ ವಿಧಿಸುತ್ತಾರೆ. ಬಡ್ಡಿ ಕಡಿಮೆ ಆದಾಗ ಮುಂದೆ ಲಾಭಸಿಗುವುದಿಲ್ಲ.
 
***
-ಪ್ರಶಾಂತ, ಸಿರ್ಸಿ
* ನನ್ನ ಮಗ ಪಿನ್ಲೆಂಡ್‌ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ 2016 ಆಗಸ್‌್ಟನಲ್ಲಿ ಹೋಗಿರುತ್ತಾನೆ. ಅವನ ಹತ್ತಿರ ₹ 1,000ದ 10 ನೋಟುಗಳು ₹ 500ರ 12 ನೋಟುಗಳು ಇವೆ. ಅವನು ಎರಡು ವರ್ಷಗಳ ನಂತರ ಭಾರತಕ್ಕೆ ವಾಪಸ್‌ ಆಗುತ್ತಾನೆ. ಈ ಹಣ ಹೊಸ ನೋಟುಗಳಿಗೆ ಪರಿವರ್ತಿಸುವುದು ಹೇಗೆ? ಅಂಚೆ ಮುಖಾಂತರ ನನಗೆ ಕಳಿಸಬಹುದೇ?
ಉತ್ತರ: ಫಿನ್ಲೆಂಡ್‌ನಲ್ಲಿ (ಕರೆನ್ಸಿ ವಿನಿಮಯ ಮಾಡುವವರನ್ನು (Money Exchangers) ಸಂಪರ್ಕಿಸಿ, ಅವರೊಡನಿರುವ ಹಣ ಆದೇಶದ ಹಣಕ್ಕೆ ಪರಿವರ್ತನೆ ಮಾಡಬಹುದಾ ಎನ್ನುವುದನ್ನು ವಿಚಾರಿಸಲು ಹೇಳಿ. ಆ ದೇಶದಲ್ಲಿ ಭಾರತದ ಯಾವುದಾದರೂ ಬ್ಯಾಂಕ್‌ ಇರುವಲ್ಲಿ (ಪ್ರಾಯಶ ಸ್ಟೇಟ್‌ ಬ್ಯಾಂಕ್‌ ಇರಬಹುದು) ಅಲ್ಲಿ ಕೂಡಾ ವಿಚಾರಿಸಿ. ಅಂಚೆ ಕಚೇರಿ ಮುಖಾಂತರ ರಿಜಿಸ್ಟರ್‌್ಡ ಪೋಸ್‌್ಟನಲ್ಲಿ ಕಳಿಸುವುದಾದರೆ, ಲಕೋಟಿ ಒಡೆದು ನೋಡುವ ಅಧಿಕಾರ ಆ ದೇಶಕ್ಕಿದೆ. ಅಂತಹ ಸಂದರ್ಭದಲ್ಲಿ ಸಂಪೂರ್ಣ ಹಣ ಕಳೆದುಕೊಳ್ಳಬೇಕಾಗುತ್ತದೆ. ಕೊನೆಯದಾಗಿ Indian Embassyಯಲ್ಲಿ ಸತ್ಯ ಹೇಳಿ ಏನು ಮಾಡಬಹುದು ಎಂದು ವಿಚಾರಿಸಿ. ಎಲ್ಲಕ್ಕೂ ಮಿಗಿಲಾಗಿ ಭಾರತದ ನೋಟುಗಳನ್ನು ಆ ದೇಶದಲ್ಲಿ ಚಲಾಯಿಸಲು ಸಾಧ್ಯವಾಗದಿರುವಾಗ, ನಿಮ್ಮ ಮಗ ಅದನ್ನು ತೆಗೆದುಕೊಂಡು ಹೋಗಿರುವ ಉದ್ದೇಶ ತಿಳಿಯಲಿಲ್ಲ. ಪ್ರಾಯಶ ಭಾರತಕ್ಕೆ ಬರುವಾಗ ವಿಮಾನ ನಿಲ್ದಾಣದಿಂದ ಬರಲು ಟ್ಯಾಕ್ಸಿಗೋಸ್ಕರ ಇರಬಹುದು ಎಂದು ಭಾವಿಸುತ್ತೇನೆ. ನಿಮ್ಮ ಪ್ರಶ್ನೆಯಿಂದ ಬಹಳಷ್ಟು ಜನರಿಗೆ ಉತ್ತರ ಸಿಕ್ಕಿದಂತಾಗಿದೆ.
 
 
***
-ಮಂಜುಳಾ, ಊರುಬೇಡ
* ನಾನು ಖಾಸಗಿ ಬ್ಯಾಂಕ್‌ ಒಂದರಲ್ಲಿ ಮನೆಕಟ್ಟಲು, ಹೈನುಗಾರಿಕೆ ಆದಾಯದ ಮೇಲೆ, ಜಾಗದ ಪತ್ರ ಅಡವಿಟ್ಟು ₹ 10 ಲಕ್ಷ ನಂತರ ₹ 3 ಲಕ್ಷ ಹೀಗೆ ₹ 13 ಲಕ್ಷ ಸಾಲ ಒಡೆದಿರುವೆ. ಕಂತು ಕಟ್ಟಲು ಒಂದು ವರ್ಷದ ತನಕ ವಿನಾಯತಿ ನೀಡಿದ್ದರು. ಅದರಂತೆ ಒಂದು ವರ್ಷ ಮುಗಿದ ನಂತರ ಕಂತು ಕಟ್ಟುತ್ತಾ ಬಂದೆ. ನಂತರ ಹೈನುಗಾರಿಕೆಯಲ್ಲಿ ನಷ್ಟವಾಗಿ ಕಂತು ಕಟ್ಟಲಾಗಲಿಲ್ಲ. ಇದರಿಂದ ಬ್ಯಾಂಕಿನವರು ಜಾಗ ಹರಾಜು ಮಾಡುವುದಾಗಿ ನೋಟಿಸ್‌ ಕಳಿಸಿರುತ್ತಾರೆ. ಆಗ ನಾನು ಬಾಕಿ ಇರುವ ಕಂತಿನ ಶೇ 75 ರಷ್ಟು ಮರು ಪಾವತಿ ಮಾಡಿದೆ. ನಂತರ ಸ್ವಲ್ಪ ಸ್ವಲ್ಪ ಕಟ್ಟುತ್ತಾ ಬಂದಿದ್ದೇನೆ. ಸಾಲದ ಅವಧಿ ಇನ್ನೂ ಇದೆ. ಹೀಗೆ ಅವಧಿಗೆ ಮುನ್ನ ಹರಾಜು ಮಾಡುವ ವ್ಯವಸ್ಥೆ ಬ್ಯಾಂಕುಗಳಲ್ಲಿವೆಯೇ ದಯಮಾಡಿ ತಿಳಿಸಿ.
ಉತ್ತರ: ನೀವು ನಿಷ್ಠಾವಂತ ಸಾಲಗಾರರಾಗಿದ್ದು, ಯಾವುದೋ ತೊಂದರೆಯಿಂದ, ಕಂತು ಸರಿಯಾಗಿ ತುಂಬಲಾಗಲಿಲ್ಲ ಎನ್ನುವುದು ತಿಳಿಯಿತು. ಬ್ಯಾಂಕಿನಲ್ಲಿ ಸಾಲ ಪಡೆದು, ಕಾಲ ಕಾಲಕ್ಕೆ ಕಂತು ಬಡ್ಡಿ ತುಂಬದಿರುವಲ್ಲಿ ಸಾಲ ತೀರಿಸಲು ಹೆಚ್ಚಿನ ಅವಧಿ ಇದ್ದರೂ, ಸಾಲಕ್ಕೆ ನೀಡಿದ ಭದ್ರತೆ ಮಾರಾಟ ಅಥವಾ ಹರಾಜು ಮಾಡುವ ಹಕ್ಕು ಎಲ್ಲಾ ಬ್ಯಾಂಕುಗಳಿಗೆ ಇರುತ್ತದೆ. ಆದರೆ ಯಾವುದೇ ಬ್ಯಾಂಕು ಸಾಲಗಾರರ ಪರಿಸ್ಥಿತಿ ನೋಡಿ, ಅವರಿಗೆ ಸಾಲ ಮರು ಪಾವತಿಸುವ ಮನಸ್ಸು ಇದ್ದು, ಎಷ್ಟಾದರಷ್ಟು ಹಣ ಮರುಪಾವತಿಸುತ್ತಿರುವಲ್ಲಿ, ಖಂಡಿತಾ ಭದ್ರತೆಗೆ ಪಡೆದ ಆಸ್ತಿ ಹರಾಜು ಹಾಕುವುದಿಲ್ಲ. ಆದಷ್ಟು ಬೇಗ ಬಾಕಿ ಇರುವ ಕಂತು ತುಂಬಲು ಪ್ರಯತ್ನಿಸಿರಿ. ನಿಮ್ಮ ಬ್ಯಾಂಕು ನಿಮ್ಮೊಡನೆ ಸಹಕರಿಸುತ್ತದೆ.
 
***
-ಟಿ.ಆರ್‌ ಸೂರ್ಯ ಪ್ರಕಾಶ, ತುಮಕೂರು
* ನನ್ನ ವಯಸ್ಸು 70. ನನ್ನ ಪಿಂಚಣಿ ಹಾಗೂ ಠೇವಣಿ ಮೇಲಿನ ಬಡ್ಡಿ ₹ 3 ಲಕ್ಷ ದಾಟಿದೆ. ನಾನು ಅಂಚೆ ಕಚೇರಿ ಠೇವಣಿಯಿಂದ ಬಂದ ಮೊತ್ತದಲ್ಲಿ ₹ 1.10 ಲಕ್ಷ ಹಿರಿಯ ನಾಗರಿಕರ ಠೇವಣಿಯಲ್ಲಿ ಇರಿಸಿದ್ದೇನೆ. ಇದು ತೆರಿಗೆ ವಿನಾಯತಿಗೆ ಒಳಪಡುತ್ತಿದೆಯೇ, ಇದರಲ್ಲಿ ಮೂಲ ಧನ ₹ 65 ಸಾವಿರ ಇದೆ. ಇದು ಆದಾಯವೆಂದು ಪರಿಗಣಿಸಬೇಕೇ? ವಿವಿಧ ದಿನಾಂಕಗಳಲ್ಲಿ ಬ್ಯಾಂಕ್‌ ಠೇವಣಿ ಇರಿಸಿದ್ದು, ಎರಡೂ ಆರ್ಥಿಕ ವರ್ಷಗಳ ವ್ಯಾಪ್ತಿ ಇರುವುದರಿಂದ ಈ ಠೇವಣಿ ಮೇಲಿನ ಬಡ್ಡಿ ದರ ನಿಖರವಾಗಿ ಆಯಾ ವರ್ಷ ಲೆಕ್ಕಾಚಾರ ಮಾಡುವುದು ಹೇಗೆ? ವಿವರವಾಗಿ ತಿಳಿಸಿ.
ಉತ್ತರ: ನೀವು ಅಂಚೆ ಕಚೇರಿಯಲ್ಲಿ ಇರಿಸಿದ ₹ 1.10 ಲಕ್ಷ ಹಿರಿಯ ನಾಗರಿಕರ ಠೇವಣಿಯಾಗಿರುವುದರಿಂದ ಸೆಕ್ಷನ್‌ 80ಸಿ ಆಧಾರದ ಮೇಲೆ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. 
 
ಯಾವುದೇ ಮೂಲ ಧನಕ್ಕೆ ತೆರಿಗೆ ಇರುವುದಿಲ್ಲ. ಬಡ್ಡಿಗೆ ಮಾತ್ರ ತೆರಿಗೆ ಬರುತ್ತದೆ. ನೀವು ಹಿರಿಯ ನಾಗರಿಕರಾಗಿದ್ದು, ಆರ್ಥಿಕ ವರ್ಷದಲ್ಲಿ ಪಡೆಯುವ ಪಿಂಚಣಿ ಹಾಗೂ ಬಡ್ಡಿ ಹಣ ₹ 3 ಲಕ್ಷ ದಾಟಿದಲ್ಲಿ, ಹಾಗೆ ದಾಟಿದ ಮೊತ್ತಕ್ಕೆ ಮಾತ್ರ ತೆರಿಗೆ ಬರುತ್ತದೆ. ಇದೇ ವೇಳೆ ಮೇಲೆ ತಿಳಿಸಿದಂತೆ 80ಸಿ ಆಧಾರದ ಮೇಲೆ ಹಣ ಹೂಡಿ ತೆರಿಗೆ ವಿನಾಯತಿ ಪಡೆಯಬಹುದು. ತೆರಿಗೆ ವಿನಾಯತಿ ಪಡೆಯಲು, ಪ್ರತೀ ಆರ್ಥಿಕ ವರ್ಷದಲ್ಲಿ ಅಂದರೆ 1ನೇ ಏಪ್ರಿಲ್‌ನಿಂದ 31 ಮಾರ್ಚ್‌ ತನಕ, 80ಸಿ ಯಲ್ಲಿ ನಮೂದಿಸಿದ ಹೂಡಿಕೆ ಮಾಡಬೇಕು. ಎರಡೂ ಆರ್ಥಿಕ ವರ್ಷಗಳ ವ್ಯಾಪ್ತಿಯಲ್ಲಿ ಬೇರೆ ಬೇರೆ ತಾರೀಕಿನಂದು ಠೇವಣಿ ಮಾಡಿದರೂ, ಆರ್ಥಿಕ ವರ್ಷದಲ್ಲಿ (1ನೇ ಏಪ್ರಿಲ್‌–31 ಮಾರ್ಚ್‌) ನಿಮ್ಮ ಠೇವಣಿ ಮೇಲಿನ ಬಡ್ಡಿಗೆ ಬ್ಯಾಂಕಿನಲ್ಲಿ ಕೇಳಿದರೆ ಫಾರಂ ನಂ. 16ಎ ಸರ್ಟಿಫಿಕೇಟು ಕೊಡುತ್ತಾರೆ. ನೀವು ಪ್ರತ್ಯೇಕವಾಗಿ ಲೆಕ್ಕ ಹಾಕುವ ಅವಶ್ಯವಿಲ್ಲ. ಈ ಸರ್ಟಿಫಿಕೇಟ್‌ ಆಧಾರದ ಮೇಲೆ ಆದಾಯ ತೆರಿಗೆ ರಿಟರ್ನ್‌ ತುಂಬಿಸಿ. ನೀವು ಅಂಚೆ ಕಚೇರಿಯಲ್ಲಿ ಇರಿಸಿದ ₹ 1.10 ಲಕ್ಷ ಆರ್ಥಿಕ ವರ್ಷದಲ್ಲಿ ಮಾಡಿದ ಠೇವಣಿಯಾದಲ್ಲಿ ಮಾತ್ರ ಈ ವರ್ಷ ತೆರಿಗೆ ವಿನಾಯತಿ ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಹಿಂದೆ ಮಾಡಿದಲ್ಲಿ ವಿನಾಯತಿ ಪಡೆಯುವಂತಿಲ್ಲ.
 
***
-ಕೆ.ಆರ್‌. ಜಗದೀಶ, ಅರಕಲಗೂಡು
* ನನಗೆ ಬಂಧು– ಮಿತ್ರರು ತುಂಬಾ ಮೋಸ ಮಾಡಿದರು. ಅವರು ನನ್ನಿಂದ ಪಡೆದ ಹಣ ವಾಪಸ್‌ ಕೊಡುತ್ತಿಲ್ಲ. ಕೆಟ್ಟ ಮೇಲೆ ಬುದ್ಧಿಬಂತು ಎನ್ನುವಂತೆ ನಿಮ್ಮ ಪ್ರಶ್ನೋತ್ತರದಲ್ಲಿ ತಿಳಿಸುವ ಮಾತು ನನಗೇ ಬರೆದಂತೆ ಕಾಣುತ್ತದೆ. ನನಗೆ ಇಬ್ಬರು ಗಂಡು ಮಕ್ಕಳು, ಹಿರಿಯ ಮಗ ಡಿಪ್ಲೊಮಾ ಅಂತಿಮಾ ವರ್ಷ (ಸಿ.ಎಸ್‌.) ಈ ಕೋರ್ಸು ಪ್ರಯೋಜನ ಇಲ್ಲ ಎನ್ನುತ್ತಾರೆ, ಇದು ನಿಜಾನಾ. ಎರಡನೇ ಮಗ 2ನೇ ಪಿಯುಸಿ (ಸೈನ್‌್ಸ) ತುಂಬಾ ಕಷ್ಟದಲ್ಲಿ ಓದಿಸುತ್ತಿದ್ದೇನೆ. ಎರಡನೇ ಮಗನನ್ನು ಡಾಕ್ಟರ್‌ ಓದಿಸಬೇಕೆಂದಿದ್ದೇನೆ. 2009 ರಲ್ಲಿ ಪಿಎಸಿಎಲ್‌ ನಲ್ಲಿ ₹ 1 ಲಕ್ಷ ತೊಡಗಿಸಿದ್ದು, ಈಗ ಆ ಕಂಪೆನಿ ದಿವಾಳಿಯಾಗಿದೆ ಎನ್ನುತ್ತಾರೆ. ಮುಂದೇನು ಮಾಡಬೇಕು ತಿಳಿಸಿರಿ. ನನ್ನೊಡನೆ ₹ 6 ಲಕ್ಷ ವಿದೆ. ಇದರಿಂದ ನಮ್ಮ ಎಲ್ಲಾ ವಹಿವಾಟು ನಡೆಯಬೇಕು. ಸಲಹೆ ನೀಡಿ.
ಉತ್ತರ: ಅಭದ್ರತೆಯಲ್ಲಿ ಹೂಡಿಕೆ ಹಾಗೂ ಬಂಧು ಮಿತ್ರರಿಗೆ ಸಾಲ ಕೊಡುವುದು ಈ ಎರಡೂ ವಿಚಾರಗಳಲ್ಲಿ ಸಕಲರು ದೂರ ಸರಿಯಬೇಕು. ಇಲ್ಲಿ ತೊಡಗಿಸಿದ ಹಣ ಶೇ 90 ರಷ್ಟು ವಾಪಸು ಬರುವ ಸಾಧ್ಯತೆ ಇಲ್ಲ. ಜೊತೆಗೆ ಹತ್ತಿರದ ವ್ಯಕ್ತಿಗಳನ್ನು ಕಳೆದುಕೊಕೊಳ್ಳಬೇಕಾಗುತ್ತದೆ.
 
ನಿಮ್ಮ ಮಗ ಕಂಪ್ಯೂಟರ್‌ ಸೈನ್‌್ಸ ಡಿಪ್ಲೊಮಾ ಮಾಡುತ್ತಿರುವುದು ತಿಳಿಯಿತು. ಈ ಕೋರ್ಸಿಗೆ ಉಜ್ವಲ ಭವಿಷ್ಯವಿದೆ. ಸಿಕ್ಕಿದ ಕೆಲಸಕ್ಕೆ ಸೇರಿಕೊಳ್ಳಲಿ, ಇಲ್ಲಿ ಪಡೆದ ಅನುಭವದಿಂದ ಮುಂದಿನ ಬೇರೆ ದೊಡ್ಡ ಕೆಲಸ ಸಿಗುತ್ತದೆ. ಸಾಧ್ಯವಾದರೆ ಸಂಜೆ ಕಾಲೇಜ್‌ನಲ್ಲಿ ಬಿ.ಇ. ಓದಲು ತಿಳಿಸಿರಿ. ಎರಡನೇ ಮಗ ಡಾಕ್ಟರ್‌ ಓದಲು ಪ್ರೋತ್ಸಾಹಿಸಿರಿ. ಇದು ಸುಲಭದ ದಾರಿಯಲ್ಲ, ಆದರೆ ಅಸಾಧ್ಯವಾದ ಕೆಲಸವಲ್ಲ. ನಿಮ್ಮ ವಾರ್ಷಿಕ ಆದಾಯ ₹ 4.50 ಲಕ್ಷ ದೊಳಗಿರುವಲ್ಲಿ, ಈತನಿಗೆ ಗರಿಷ್ಠ ₹ 10 ಲಕ್ಷಗಳ ತನಕ,  ಬಡ್ಡಿ ಅನುದಾನಿತ ಸಾಲ ದೊರೆಯುತ್ತದೆ.
 
ನೀವು ಹಿಂದೆ ಪಟ್ಟ ಕಷ್ಟ ನಷ್ಟ ದೂರವಾಗುವ ದಿವಸಗಳು ಬರುತ್ತವೆ.  ಪಿಎಸಿಎಲ್‌ ಕಂಪೆನಿ ವಿಚಾರದಲ್ಲಿ ಅವರ ಮುಖ್ಯ ಕಚೇರಿಗೆ ಬರೆದುಕೊಳ್ಳಿರಿ. ಒಂದು ವೇಳೆ ಈ ಕಂಪೆನಿ ದಿವಾಳಿಯಾದಲ್ಲಿ ನಿಮ್ಮ ಹಣ ಬರುವುದು ಕಷ್ಟ. ಹೆಚ್ಚಿನ ಬಡ್ಡಿಯ ಆಸೆಯಿಂದ ಮುಂದಾದರೂ ಅಭದ್ರತೆಯ ಜಾಗದಲ್ಲಿ ಎಂದಿಗೂ ಹಣ ಹೂಡದಿರಿ.
 
***
-ಪ್ರಭಾವತಿ, ಹೊಸದುರ್ಗ
* ನಾವು ಜನವರಿ 2008 ರಲ್ಲಿ ಬಜಾಜ್‌ ಅಲಯನ್‌್ಸ ಇನ್ಶುರೆನ್‌್ಸನಲ್ಲಿ ಪ್ರತೀ ಆರು ತಿಂಗಳಿಗೆ ₹ 5000 ದಂತೆ 3 ವರ್ಷ ಒಟ್ಟು 
₹ 30 ಸಾವಿರ ಕಟ್ಟಿದ್ದೇವೆ. 3 ವರ್ಷದಲ್ಲಿ ₹ 60,000 ಸಿಗುತ್ತದೆ ಎಂದು ಏಜಂಟರು ತಿಳಿಸಿದ್ದರು. ಆದರೆ ಈಗ ವಿಚಾರಿಸಿದಾಗ ₹ 20,825 ಮಾತ್ರ ಬರುತ್ತದೆ ಎನ್ನುತ್ತಾರೆ. ನಾವು ಈ ಹಣ ವಾಪಸ್ಸು ಪಡೆಯಬಹುದೇ ಅಥವಾ ಸ್ವಲ್ಪ ದಿವಸ ನೋಡಿ ಮುಂದೆ ವಾಪಸು ಪಡೆಯುವುದು ಒಳ್ಳೆಯದೇ, ತಿಳಿಸಿ.
ಉತ್ತರ: ನೀವು ಬಜಾಜ್‌ ಅಲಯನ್‌್ಸ ಇನ್ಶುರೆನ್‌್ಸ ಕಂಪೆನಿಯ ಮ್ಯೂಚುವಲ್‌ ಫಂಡ್‌ನಲ್ಲಿ   ಹೂಡಿದ ಹಣ ಷೇರು ಮಾರುಕಟ್ಟೆ ಏರಿಳಿತಕ್ಕನುಗುಣವಾಗಿ ನಿವ್ವಳ ಸಂಪತ್ತಿನ ಮೌಲ್ಯ  ಬದಲಾಗುತ್ತದೆ. ಈ ಕಾರಣದಿಂದ, ಎಲ್ಲಾ ಮ್ಯೂಚುವಲ್‌ ಫಂಡ್‌ ಕಂಪೆನಿಗಳು, ಹೂಡಿಕೆದಾರರಿಗೆ  ಹಣ ಹೂಡುವ ಮುನ್ನ ‘Mutual Fund Investment an Subject to Market Risk’ ಎನ್ನುವ ಎಚ್ಚರಿಕೆ, ಅವರ ಕೊಡುಗೆ ಪತ್ರದಲ್ಲಿ (Offer Documents) ಹಾಕಿರುತ್ತಾರೆ. 
 
ಸಂವೇದಿ ಸೂಚ್ಯಂಕ 28 ಸಾವಿರ ತಲಪಿದ್ದರೂ, ಎನ್‌ಎಸಿ ಏರದಿರುವುದು ಶೋಚನೀಯ. ಬೇಕಾದರೆ ಸ್ವಲ್ಪ ಸಮಯ ಅಂದರೆ ಇನ್ನೂ ಆರು ತಿಂಗಳು ಕಾಯಿರಿ. ಆಗಲೂ ಲಾಭ ಬಾರದಿರುವಲ್ಲಿ ಹಣ ವಾಪಸ್‌ ಪಡೆದು, ಬ್ಯಾಂಕಿನಲ್ಲಿ ಒಮ್ಮೆಲೇ ಬಡ್ಡಿ ಬರುವ ಅವಧಿ ಠೇವಣಿಯಲ್ಲಿ ಇರಿಸಿ ನಿಶ್ಚಿಂತೆಯಿಂದ ಬಾಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT