ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ನಿಲ್ಲಿಸಿದ ಜನಪದ ಜೋಗಿ ಮಹಾಂತೇಶ್

Last Updated 18 ಜನವರಿ 2017, 5:20 IST
ಅಕ್ಷರ ಗಾತ್ರ

ದಾವಣಗೆರೆ: ಒಂದು ಕಾಲದಲ್ಲಿ ಇಡೀ ಕರ್ನಾಟಕವನ್ನೇ ತಮ್ಮ ಜನಪದ ಹಾಡುಗಳ ಮೋಡಿಯಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಜನಪದ ಜೋಗಿ ಜಿ.ಮಹಾಂತೇಶ್ ಹಾಡು ನಿಲ್ಲಿಸಿ ಚಿರನಿದ್ದೆಗೆ ಜಾರಿದ್ದಾರೆ.

84 ಇಳಿವಯಸ್ಸಿನಲ್ಲೂ ಇಪ್ಪತ್ತರ ಹುರುಪಿನಲ್ಲಿ ಹಾಡುತ್ತಿದ್ದ ಜಿ.ಮಹಾಂತೇಶ್, ಈ ನಾಡು ಕಂಡ ಅಪರೂಪದ ಹಾಡುಗಾರ. ‘ಎಲ್ಲೋ ಜೋಗಪ್ಪ ನಿನ್ನಾರಮಾನೆ....’ ಎಂದು ಹಾಡುತ್ತಲೇ ಕರ್ನಾಟಕದ ಮೂಲೆ ಮೂಲೆಯನ್ನು ಸುತ್ತಿದ ನಿಜ ಅರ್ಥದ ಜನಪದ ಜಂಗಮ.

ಹುಟ್ಟಿದ್ದು ವಿಜಯಪುರ ಜಿಲ್ಲೆಯ ನಾಲತ್ತವಾಡವಾದರೂ ಈ ಜನಪದ ಜೋಗಿ ನೆಲೆಗೊಂಡದ್ದು ದಾವಣಗೆರೆಯಲ್ಲಿ. ನಲವತ್ತು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಹರಿಹರದ ಕಿರ್ಲೋಸ್ಕರ್ ಕಾರ್ಖಾನೆಗೆ ಬಂದ ಮಹಾಂತೇಶ್, ಗರಡಿಮನೆಯಲ್ಲಿ ಸಾಮು ತೆಗೆದ ಪೈಲ್ವಾನರೂ ಹೌದು.

ಅದೃಷ್ಟ ಎನ್ನುವುದು ಹಲವರಿಗೆ ಹಲವು ರೀತಿಯಲ್ಲಿ ಬಂದರೆ ಮಹಾಂತೇಶ್ ಅವರಿಗೆ ಅದು ಅವರ ಕಾಲಿನ ಮೂಲಕ ಬಂತು ಎಂದರೆ ತಮಾಷೆ ಏನಲ್ಲ. ಅಪಘಾತವೊಂದರಲ್ಲಿ ಕಾಲು ಮುರಿದುಕೊಂಡ ನಂತರವೇ ಅವರು ಜನಪದ ಹಾಡುಗಾರರಾದದ್ದು. ಕಾರ್ಖಾನೆಯ ಕೆಲಸ ಹೋದ ನಂತರ ಮಹಾಂತೇಶ್ ಹೊಟ್ಟೆಪಾಡಿಗೆ ಆರಿಸಿ ಕೊಂಡಿದ್ದು ಜನಪದ ಹಾಡುಗಾರಿಕೆಯನ್ನೇ.

ಆರಂಭದಲ್ಲಿ ಗಡಿಗೆ ಬಾರಿಸುತ್ತ ಹಾಡುಗಳನ್ನು ಹಾಡುತ್ತಿದ್ದುದರಿಂದ ‘ಗಡಿಗೆ ಮಹಾಂತೇಶ’ ಎಂದೇ ಜನಪ್ರಿಯ ರಾದರು. ‘ಎಲ್ಲೋ ಜೋಗಪ್ಪ ನಿನ್ನಾರಮಾನೆ....’ ಅವರ ಅಚ್ಚುಮೆಚ್ಚಿನ ಹಾಡು. ದೂರದರ್ಶನದ ‘ಸಿರಿಗಂಧ’ ಜನಪದ ಕಾರ್ಯಕ್ರಮದಲ್ಲಿ ಮಹಾಂತೇಶ್ ಹಾಡಿದ ಈ ಹಾಡಿಗೆ ಇಪ್ಪತ್ತು ಸಾವಿರ ಮೆಚ್ಚುಗೆ ಪತ್ರಗಳು ಬಂದಿದ್ದನ್ನು ‘ಸಿರಿಗಂಧ’ ನಿರ್ದೇಶಕ ಶ್ರೀನಿವಾಸಮೂರ್ತಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಮಹಾಂತೇಶ್ ಹಾಡಿದ್ದು ಒಂದೆ  ರಡಲ್ಲ, ಸುತ್ತಿದ್ದು ಒಂದೆರಡು ಊರು ಗಳಲ್ಲ. ‘ಜಯ ಕರ್ನಾಟಕ ಜಯ ಕರ್ನಾಟಕ ಮಾತೆ’ ಎಂಬ ಗೀತೆಯನ್ನು ಗೋಕಾಕ್ ಚಳವಳಿ ಮತ್ತು ಕನ್ನಡ ಚಳವಳಿಯ ಅನೇಕ ಹೋರಾಟಗಳಲ್ಲಿ ಹಾಡಿ ಅವರು ಜನರನ್ನು ಹುರಿದುಂಬಿಸು ತ್ತಿದ್ದರು. ‘ಸುಗ್ಗಿ ಕಾಲ ಬಂತು, ಅಗ್ಗದ ದಿನ ಬಂತು’ ಮುಂತಾದ ನೂರಾರು ಜನಪದ ಗೀತೆಗಳು ಅವರ ಬತ್ತಳಿಕೆ ಯಲ್ಲಿದ್ದವು.

ಆಕಸ್ಮಿಕದಲ್ಲಿ ಹಲ್ಲು ಮುರಿದು ಕೊಂಡರೂ ಕಂಠಸಿರಿಯಲ್ಲಿ ಜನಪದ ಲೋಕವನ್ನೇ ಬೆರಗುಗೊಳ್ಳುವಂತೆ ಮಾಡಿದರು. ಹಲವು ದುರಂತಗಳನ್ನು ಎದುರಿಸಿದರೂ ಅವೆಲ್ಲದರ ಎದೆಗೆ ಒದ್ದಂತೆ ಬದುಕಿ ತೋರಿಸಿದರು.

ಅವರು ಹಾಡಲು ನಿಂತರೆ ಹುರುಪು, ಹಾವಭಾವ, ಗತ್ತು, ಜವಾರಿ ಮಾತುಗಾರಿಕೆ, ತುಂಟತನ ಜನರನ್ನು ಇನ್ನಿಲ್ಲದಂತೆ ಸೆಳೆಯುತ್ತಿದ್ದವು. ಒಂದು ಸಾಮಾನ್ಯ ಹಾಡನ್ನು ಅಸಾಮಾನ್ಯ ರೀತಿಯಲ್ಲಿ ಕೇಳುಗರಿಗೆ ತಲುಪಿಸುವ ಅದ್ಭುತ ಕಲೆ ಅವರಿಗೆ ಸಿದ್ಧಿಸಿತ್ತು. ಗಡಿಗೆ, ಕಂಜರ, ದಮ್ಮಡಿ... ಯಾವುದೂ ಸಿಗದಿದ್ದರೆ ಒಂದು ಬಾಚಣಿಕೆಯಲ್ಲಿಯೇ ವಿಚಿತ್ರ ಲಯವೊಂದನ್ನು ಹೊಮ್ಮಿಸಿ, ಜನರನ್ನು ಆಕರ್ಷಿಸುತ್ತಿದ್ದರು. ಪಕ್ಕವಾದ್ಯ ಗಳಿಲ್ಲದಿದ್ದರೂ ಕೈ ಬೆರಳುಗಳಲ್ಲೇ ಟೇಬಲ್ ಬಡಿದು ಕಿವಿಗಳನ್ನು ಕುಣಿಸುವಂಥ ಶಕ್ತಿ ಅವರಿಗಿತ್ತು.

ಮುಖ್ಯಮಂತ್ರಿ ಬಂಗಾರಪ್ಪ ಅವರ ಸಾರ್ವಜನಿಕ ಸಭೆಯೊಂದರಲ್ಲಿ ಹಾಡೊಂದನ್ನು ಹಾಡಿ ಆ ಕಾರಣ ಕ್ಕಾಗಿಯೇ ರಾಜ್ಯೋತ್ಸವ ಪ್ರಶಸ್ತಿ ಗಿಟ್ಟಿಸಿ ಕೊಂಡ ಗಟ್ಟಿಗರೂ ಅವರಾಗಿದ್ದರು.

ಹಾಡುಗಾರಿಕೆ ಮಾತ್ರವಲ್ಲ, ನಾಲಿಗೆಗೆ ‘ಫಿಲ್ಟರ್’ ಜೋಡಿಸಿಕೊಳ್ಳದ ಜವಾರಿ ಮಾತುಗಾರಿಕೆಗೂ ಮಹಾಂತೇಶ್ ಹೆಸರುವಾಸಿಯಾಗಿದ್ದರು. ಜನಪದ ಹಾಡುಗಳ ಜನಪ್ರಿಯತೆ ಮಹಾಂತೇಶ್ ಅವರಿಗೆ ಹಲವು ಸನ್ಮಾನ, ಸ್ಥಾನಮಾನ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಜಾನಪದ ಅಕಾಡೆಮಿಯ ಸದಸ್ಯತ್ವ, ಜಾನಪದ ಅಕಾಡೆಮಿ ಪ್ರಶಸ್ತಿ, ಗೌರವ ಪುರಸ್ಕಾರ, ಪ್ರಶಸ್ತಿ ಇತ್ಯಾದಿ ಅವರನ್ನು ಹುಡುಕಿಕೊಂಡು ಬಂದವು.  

ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಆರ್ಕೆಸ್ಟ್ರಾ ಕಟ್ಟಿದ, ಆಕಾಶವಾಣಿ, ದೂರದರ್ಶನ ಮಾತ್ರವಲ್ಲದೆ 1978ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿ ಸಮ್ಮುಖ ದಲ್ಲಿ ಹಾಡಿದ ಹೆಗ್ಗಳಿಕೆ ಮಹಾಂತೇಶ್ ಅವರದಾಗಿತ್ತು. ಕೊನೆಯವರೆಗೂ ಬಾಡಿಗೆಮನೆಯಲ್ಲೇ ಇದ್ದು ನಡೆ, ನುಡಿ ಎಲ್ಲದರಲ್ಲೂ ಅಪ್ಪಟ ಜನಪದರಂತೆಯೆ ಬದುಕಿದ ಮಹಾಂತೇಶ್ ‘ಸದ್ದು ಗದ್ದಲ’ ಗಳನ್ನೆಲ್ಲ ಮುಗಿಸಿ ತಣ್ಣಗೆ ಎದ್ದು ನಡೆ ದಿದ್ದಾರೆ. ಅವರು ಹಾಡಿ ಬಿಟ್ಟು ಹೋದ ಹಾಡುಗಳು ಮಾತ್ರ ಇಂದಿಗೂ ನಮ್ಮ ಕಿವಿಗಳಲ್ಲಿ ಸದ್ದು ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT