ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಗೊಂದು ವಿದಾಯ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ವಾಂತಿ ಮಾಡಿ ವಾಪಸ್ಸು ನೀಡಲೇ?
500 ಮತ್ತು 1000 ರೂಪಾಯಿ ನೋಟುಗಳನ್ನು ರದ್ದುಪಡಿಸಿ ಏಳು ದಿನಗಳು ಕಳೆದಿದ್ದವು. ನೋಟು ಬದಲಾವಣೆಗೆ ಬ್ಯಾಂಕ್‌ಗಳ ಮುಂದೆ ಜನವೋ ಜನ. ಕ್ಯೂನಲ್ಲಿ ನಿಲ್ಲಲು ಸಮಯವಿಲ್ಲದ್ದರಿಂದ ನನ್ನ ಬಳಿ ಕೆಲವು ಐದು ನೂರರ ನೋಟುಗಳು ಹಾಗೆಯೇ ಉಳಿದಿದ್ದವು.

ನಾನು ತುರ್ತಾಗಿ ಶಿವಮೊಗ್ಗಕ್ಕೆ ಹೋಗಬೇಕಾಗಿ ಬಂತು. ಬಸ್‌ ಚಾರ್ಜ್‌ ಅದೂ ಇದೂ ಅಂತ ಚಿಲ್ಲರೆ ಹಣವೆಲ್ಲವೂ ಖಾಲಿಯಾಗಿ ಐನೂರರ ಹಳೆ ನೋಟುಗಳು ಮಾತ್ರ ಉಳಿದಿದ್ದವು. ತುಂಬಾ ಹಸಿವೆಯಾಗಿತ್ತು. ಹೋಟೆಲೊಂದಕ್ಕೆ ನುಗ್ಗಿದೆ. ಟೇಬಲ್‌ ಮುಂದೆ ಕುಳಿತು ತಿಂಡಿ ಕಾಫಿ ಎಲ್ಲಾ ಆರ್ಡರ್‌ ಮಾಡಿ ಚೆನ್ನಾಗಿ ತಿಂದು ಮುಗಿಸಿದೆ. ಸಪ್ಲೈಯರ್‌ ಬಿಲ್‌ ನೀಡಿದ. ಕ್ಯಾಷಿಯರ್‌ ಹತ್ತಿರ ನಿಂತು ಬಿಲ್‌ನೊಂದಿಗೆ ₹500 ಹಳೆ ನೋಟನ್ನು ನೀಡಿದೆ.

ಕ್ಯಾಷಿಯರ್‌ ನನ್ನನ್ನು ದುರುಗುಟ್ಟಿ ನೋಡಿ ‘ಬೇರೆ ಚಿಲ್ಲರೆ ಇಲ್ಲವಾ?’ ಎಂದು ಗದರಿದ. ‘ಇಲ್ಲ ನನ್ನ ಹತ್ತಿರ ಈ ನೋಟು ಮಾತ್ರ ಇರುವುದು’ ಎಂದೆ. ಈ ನೋಟನ್ನು ಬ್ಯಾನ್‌ ಮಾಡಿರುವುದು ನಿಮಗೆ ಗೊತ್ತಿಲ್ಲವೇ? ಬೇರೆ ಕೊಡಿ’ ಎಂದು ಕಿರುಚಿದ. ‘ನೀವು ಏನು ಹೇಳಿದರೂ ನನ್ನ ಹತ್ತಿರ ಬೇರೆ ಹಣ ಇಲ್ಲ. ನಾನೀಗ ತಿಂದಾಗಿದೆ. ಬೇಕಾದರೆ ವಾಂತಿ ಮಾಡಿ ಅದನ್ನು ವಾಪಸ್ಸು ನೀಡುತ್ತೇನೆ. ನನಗೆ ಇನ್ನೇನೂ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾ ಆ ಕಡೆ ಹೋದೆ. ಕ್ಯಾಷಿಯರ್‌ ಆಗ ಕಕ್ಕಾಬಿಕ್ಕಿಯಾಗಿ, ‘ಹೋಗಲಿ ಬನ್ನಿ, ಇಲ್ಲಿ ಆ ನೋಟನ್ನೇ ಕೊಡಿ’ ಎಂದು ಅದನ್ನು ತೆಗೆದುಕೊಂಡು ಚಿಲ್ಲರೆ ನೀಡಿದ. ಸದ್ಯ ಒಂದು ಸಂಕಟದಿಂದ ಪಾರಾದೆ ಎಂದು ಹೋಟೆಲಿನಿಂದ ಹೊರಬಿದ್ದೆ!
–ಚಾವಲ್ಮನೆ ಸುರೇಶ್‌ ನಾಯಕ್‌ ಕೊಪ್ಪ


‘ಬ್ಲ್ಯಾಕ್‌ ಅಂಡ್‌ ವೈಟ್‌’ ಕಥೆ
ಹಳೆ ನೋಟುಗಳೆಲ್ಲ ಮೂಲೆ ಸೇರಿದವು. ಹೊಸ ನೋಟು ಪಡೆಯುವ ಉಲ್ಲಾಸ ಇನ್ನೊಂದೆಡೆ. ಹಳೆ ನೋಟುಗಳನ್ನು ಜಮಾ ಮಾಡಲು ಸಾಲಿನಲ್ಲಿ ನಿಂತಿದ್ದ ನನಗೆ, ನನ್ನ ಮುಂದೆ ನಿಂತಿದ್ದ ಮಧ್ಯ ವಯಸ್ಕರೊಬ್ಬರು, ‘ಏನ್‌ ಸಾರ್‌, ಬ್ಲ್ಯಾಕ್‌ ಎಲ್ಲಾ ವೈಟ್‌ ಮಾಡ್ಕೊಂಡಾಯ್ತ ಸಾರ್‌?’ ಎಂದು ಕೇಳಿದರು. ನಾನು ‘ಆಯ್ತು ಸಾರ್‌, ನಮ್ಮಲ್ಲಿ ಬ್ಲ್ಯಾಕ್‌ ಎಲ್ಲಿ ಬಂತು ಸಾರ್‌, ಎಲ್ಲಾ ವೈಟೇ?’ ಎಂದೆ. ‘ಸೂಪರ್‌ ಸಾರ್‌ ನೀವು, ಪರಿಶುದ್ಧ ವ್ಯಕ್ತಿ ಅಂತ ಅನ್ಸುತ್ತೆ ನಿಮ್ಮನ್ನ ನೋಡಿದ್ರೆ. ಅಂದ್ಹಾಗೆ ಹಳೇ ನೋಟ್‌ಗಳು ಒಂದೂ ಇರ್‍ಲಿಲ್ವ ನಿಮ್ಮ ಹತ್ರ?’ ಎಂದು ಮರುಪ್ರಶ್ನೆ ಎಸೆದ. ‘ಇತ್ತು ಸಾರ್‌, ಎಲ್ಲಾ ಜಮಾ ಆಗೋಯ್ತು. ಉಳಿದಿದ್ದ ಅಲ್ಪ ಸ್ವಲ್ಪನ ಇವತ್ತು ಜಮಾ ಮಾಡಿದ್ರೆ ಆರಾಮ್‌ ಸಾರ್‌’ ಎಂದು ನಾನೂ ನಿರಾಳವಾಗೇ ಉತ್ತರಿಸಿದೆ. ಅಷ್ಟಕ್ಕೇ ಅವ ಸುಮ್ಮನೆ ಬಿಡಲಿಲ್ಲ ‘ನಿಜ ಹೇಳಿ ಸಾರ್‌. ನಿಮ್ಮನ್ನ ನೋಡಿದ್ರೆ ಸರಕಾರಿ ಉದ್ಯೋಗಿ ಥರ ಇದೀರಾ! ಬ್ಲ್ಯಾಕೇ ಇಲ್ಲ ಅಂತೀರಾ?’ ಎಂದ.

‘ನಿಮ್ಮ ಹತ್ರ ಏನ್‌ ಸಾರ್‌ ಮುಚ್ಚುಮರೆ, ಎಲ್ಲಾ ಬ್ಲ್ಯಾಕೂ ವೈಟ್‌ ಆಗೋಯ್ತು ಸಾರ್‌?’ ಎಂದೆ. ‘ಹೆಂಗ್‌ ಸಾರ್‌, ಅದೆಲ್ಲ? ಇಷ್ಟ್‌ ಬೇಗ ಇರೋ ಬರೋ ಬ್ಲ್ಯಾಕ್‌ನೆಲ್ಲ ವೈಟ್‌ ಮಾಡೋದು ಅಂದ್ರೆ ನೀವ್‌ ಯಾರೋ ಭಾರಿ ಉದ್ಯೋಗದಲ್ಲೇ ಇದೀರಾ ಅಂತ ಕಾಣ್ಸುತ್ತೆ. ನಿಜ ಹೇಳಿ ಸಾರ್‌. ನಿಮ್ದೇನ್‌ ಪರ್ಸೆಂಟೇಜ್‌ ಅಂತ ಸಂಕೋಚ ಇಲ್ದೆ ಕೇಳಿ ಸಾರ್‌, ಬ್ಲ್ಯಾಕ್‌ ಎಲ್ಲಾ ಅಷ್ಟ್‌ ಸಲೀಸಾಗಿ ವೈಟ್‌ ಹೆಂಗಾಯ್ತು ಸಾರ್‌’ ಎಂದ. ಈ ವ್ಯಕ್ತಿ ಯಾಕೋ ನನ್ನ ಬಿಡುವಂತೆ ಕಾಣಿಸುವುದಿಲ್ಲ ಅಂತ ತೀರ್ಮಾನಿಸಿ, ಒಳಗೊಳಗೆ ನಗುತ್ತ ನನ್ನ ಸಂಭಾಷಣೆ ಮುಂದುವರೆಸಿದೆ. ‘ವಂಶಪಾರಂಪರ್‍ಯ ಸಾರ್‌’ ಎಂದೆ. ‘ವಂಶಪಾರಂಪರ್‍ಯನಾ? ಅದ್ಹೆಂಗ್‌ ಸಾರ್‌.

ಈ ನೋಟು ರದ್ದತಿ ನೆನ್ನೆ ಮೊನ್ನೆಯದು. ನೀವ್‌ ನೋಡಿದ್ರೆ ವಂಶಪಾರಂಪರ್‍ಯ ಅಂತ ಇದೀರಾ?’ ಎಂದ ಆಶ್ಚರ್ಯವಾಗಿ. ‘ಹೂ ಸಾರ್‌, ವಂಶಪಾರಂಪರ್‍ಯ. ನಮ್ಮ ಕುಟುಂಬದ ಗಂಡುಮಕ್ಕಳಿಗೆ ಯಾರಿಗೂ ಬ್ಲ್ಯಾಕ್‌ ಇಲ್ಲವೇ ಇಲ್ಲ, ವೈಟೇ ಜಾಸ್ತಿ’ ಎಂದೆ. ಆತ ಗಲಿಬಿಲಿಯಾಗಿ ‘ಏನ್‌ ಸಾರ್‌ ಹೇಳ್ತಾ ಇದೀರಾ.’ ಎಂದು ತೊದಲಿದ. ‘ಅದೇ ಸಾರ್‌, ಬ್ಲ್ಯಾಕ್‌ ಅಂಡ್‌ ವೈಟ್‌ ಕಥೆ. ನೋಡಿ ಒಂದಾದ್ರೂ ಬ್ಲ್ಯಾಕ್‌ ಇದೆಯಾ, ಪೂರಾ ವೈಟ್‌’ ಅಂತ ತಲೆಗೂದಲ ತೋರಿಸಿದಾಗ ಸಾಲಿನಲ್ಲಿ ನಿಂತಿದ್ದವರೆಲ್ಲಾ ನಕ್ಕಿದ್ದೇ ನಕ್ಕಿದ್ದು.
–ಕುಮಾರ್‌.ಎಂ. ಬೆಂಗಳೂರು

ಎಲ್ಲರ ಸುಳ್ಳೂ  ಬಯಲಾಗಿತ್ತು
ಆ ದಿನ ಸಂಜೆ ಮಕ್ಕಳ ಜೊತೆ ಓದುತ್ತಾ ಕುಳಿತಿದ್ದೆ. ಸ್ನೇಹಿತರು ಫೋನ್ ಮಾಡಿ ‘ನ್ಯೂಸ್ ನೋಡಿದಿರಾ?’ ಎಂದರು. ‘ಏಕೆ ಏನಾಯಿತು’ ಎಂದು ಆಶ್ಚರ್ಯದಿಂದ ಕೇಳಿದೆ. ‘ಮೊದಲು ನ್ಯೂಸ್ ನೋಡಿ. 500, 1000 ರೂಪಾಯಿಯ ನೋಟು ರದ್ದಾಗಿವೆ. 50 ದಿನದಲ್ಲಿ ಬದಲಾಯಿಸಿಕೊಳ್ಳಬೇಕು’ ಅಂದರು. ನಾನು ಜೋರಾಗಿ ನಕ್ಕು, ‘ಹಣವಂತರ ತಾಪತ್ರಯ ನಮಗ್ಯಾಕೆ’ ಅಂದೆ. ನೋಟು ರದ್ದಾದ ಮಾರನೇ ದಿನ ನಗರಕ್ಕೆ ಹೋದೆ. ಫೋನ್ ಮಾಡಲು ಕರೆನ್ಸಿ ಖಾಲಿಯಾಗಿತ್ತು. ಯಾವುದೇ ಅಂಗಡಿಗೆ ಹೋದರೂ 500ರ ನೋಟು ತೆಗೆದುಕೊಳ್ಳಲಿಲ್ಲ. ಆದ್ದರಿಂದ ಬಿಎಸ್‌ಎನ್‌ಎಲ್ ಆಫೀಸಿಗೆ ಹೋಗಿ ‘₹100 ಕರೆನ್ಸಿ ಹಾಕಿ’ ಎಂದೆ. ‘ಚಿಲ್ಲರೆ ಇದೆಯಾ’ ಎಂದರು.

ನನ್ನ ಹತ್ತಿರ ಇದ್ದ 500ರ ನೋಟನ್ನು ತೆಗೆದೆ. ತಕ್ಷಣ ‘ಇಲ್ಲ, ಬೇಡ ಅದು ಬೇಡ’ ಎಂದು ಆ ಮಹಾತಾಯಿ ಹೌಹಾರಿಬಿಟ್ಟರು. ನಾನು ನನ್ನ ಕೈಯಲ್ಲಿ ಇರುವುದು ನೋಟೋ, ಹಾವೋ ಎಂದು ಗಾಬರಿಯಾದೆ. ಅಲ್ಲಿಯೇ ಇನ್ನೊಬ್ಬ ಪರಿಚಯದವರನ್ನು ಚಿಲ್ಲರೆ ಕೇಳಿದೆ. ಅವರು 100 ರೂಪಾಯಿ ಕೊಟ್ಟು ‘ಯಾವಾಗಲಾದರು ಕೊಡಿ’ ಎಂದರು.
ಪೆಟ್ರೋಲ್ ಬಂಕಲ್ಲಿ ಚಿಲ್ಲರೆ ಸಿಗಬಹುದೆಂದು ಹೋದೆ.

500ರ ನೋಟು ತೋರಿಸಿದರೆ ಇಲ್ಲ ಎನ್ನುತ್ತಾರೆಂದು ಮೊದಲೇ ಪೆಟ್ರೋಲ್ ಹಾಕಿಸಿ ನೋಟು ಕೊಟ್ಟೆ. ಅವನು ರೇಗಿ ‘ಚಿಲ್ಲರೆ ಇಲ್ಲ ಎಂದರೆ ಪೆಟ್ರೋಲ್ ಹಾಕುತ್ತಿರಲಿಲ್ಲ’ ಎಂದು ಜೋರು ಮಾಡಿದ. ನಾನು ಸಮಾಧಾನವಾಗಿ ‘ನಿಮ್ಮಲ್ಲಿ ನಂಬಿಕೆಯಿದೆ, ಚಿಲ್ಲರೆ ಬರೆದು ಕೊಡಿ’ ಎಂದೆ. ಅದಕ್ಕವನು ಫುಲ್ ಟ್ಯಾಂಕ್ ಮಾಡಿಸಿ ಉಳಿದ ಚಿಲ್ಲರೆ ಕೊಡ್ತೀನಂದ. ಮನಸ್ಸಿನಲ್ಲಿಯೇ ಹಾಳಾಗೋಗ್ಲಿ ಹಾಕಂದೆ. 500ರ ನೋಟು ನೋಡಿ ನನಗೆ ಅಯ್ಯೋ ಎನಿಸಿತು. 

ಬ್ಯಾಂಕ್ ಸಾಮಾನ್ಯವಾಗಿ ತುಂಬಿರುತ್ತದೆಂದು ನಾಲ್ಕು ದಿನ ಆ ಕಡೆ ಸುಳಿಯಲಿಲ್ಲ. ಐದನೇ ದಿನ ಹಣ ಹಾಕಲು ಹೋದೆ. ಅಲ್ಲಿ ಎಲ್ಲರೂ ತಮ್ಮಲ್ಲಿರುವ ಹಳೇ ನೋಟನ್ನು ಬ್ಯಾಂಕಿನಲ್ಲಿ ಹಾಕುವ ಹಾಗೂ ಬದಲಿಸಿಕೊಳ್ಳುವ ಧಾವಂತದಲ್ಲಿದ್ದರು. ತಮಾಷೆಯೆಂದರೆ, ಸಾಲಲ್ಲಿ ನಿಂತವರೆಲ್ಲ ಶಿಬಿರಕ್ಕೆ, ನಾಟಕಕ್ಕೆ, ಕೊನೆಗೆ ಸಾಲ ಕೇಳಿದರೂ ‘ತಾಯಾಣೆ, ನಿನ್ನಾಣೆ ಒಂದು ರೂಪಾಯಿ ಇಲ್ಲ’ ಎನ್ನುತ್ತಿದ್ದವರು ಎಲ್ಲರೂ 30 ರಿಂದ 50 ಸಾವಿರ ಕೈಲಿ ಹಿಡಿದು ನಿಂತಿದ್ದರು. ರದ್ದಾದ ನೋಟು ಎಲ್ಲರ ಸುಳ್ಳುಗಳನ್ನು ಬಯಲಿಗೆಳೆದಿತ್ತು.
-ಮೆಳೇಹಳ್ಳಿ ದೇವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT