ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತಿನ ಅಸಮಾನ ಹಂಚಿಕೆ ವಿಶ್ವಕ್ಕೆ ಎಚ್ಚರಿಕೆಯ ಗಂಟೆ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಇಡೀ ವಿಶ್ವದಲ್ಲಿನ ಮತ್ತು ನಮ್ಮ ದೇಶದಲ್ಲಿನ ಆರ್ಥಿಕ ಅಸಮಾನತೆಗೆ ಕನ್ನಡಿ ಹಿಡಿಯುವಂತಹ ವರದಿಗಳು ಇದೀಗ ಬಿಡುಗಡೆಯಾಗಿವೆ. ವಿವಿಧ ಮೂಲಗಳಿಂದ ಸಂಗ್ರಹಿಸಿದ ದಾಖಲೆಗಳನ್ನು ವಿಶ್ಲೇಷಿಸಿ ಆಕ್‌್ಸಫಾಂ ಎಂಬ ಸಂಸ್ಥೆ ಸಿದ್ಧಪಡಿಸಿದ ಈ ವರದಿಗಳ ಸಾರಾಂಶ ಇಷ್ಟೇ. ‘ವಿಶ್ವದ ಬಹುಪಾಲು ಸಂಪತ್ತು  ಕೆಲವೇ ಕೆಲವು ಜನರ, ಸಂಸ್ಥೆಗಳ ಕೈಯಲ್ಲಿದೆ.

ವಿಶ್ವದ ಅರ್ಧದಷ್ಟು ಜನರ ಬಳಿ ಒಟ್ಟು ಎಷ್ಟು ಸಂಪತ್ತಿದೆಯೋ ಅಷ್ಟೇ ಮೊತ್ತದ ಸಂಪತ್ತಿಗೆ ಕೇವಲ ಎಂಟು  ಜನ ಮಾಲೀಕರು. ಅಂದರೆ ಈ ಎಂಟು ಕುಬೇರರ ಆಸ್ತಿ ಮೌಲ್ಯ ₹ 29 ಲಕ್ಷ ಕೋಟಿ. ಇಂತಹ ಏರುಪೇರು  ಸಮಾಜವನ್ನೇ ಛಿದ್ರಗೊಳಿಸುವಷ್ಟು ಅಪಾಯಕಾರಿ ಆಗಬಹುದು’.

ಈ ವ್ಯಕ್ತಿಗಳಲ್ಲದೆ ಬಹುರಾಷ್ಟ್ರೀಯ ಸಂಸ್ಥೆಗಳ ಸಂಪತ್ತು ಸಹ ಕಡಿಮೆ ಏನಿಲ್ಲ. ವಾಲ್‌ಮಾರ್ಟ್‌, ಶೆಲ್‌, ಆ್ಯಪಲ್‌ ಒಳಗೊಂಡ 10 ಬೃಹತ್‌ ಕಂಪೆನಿಗಳ ಒಟ್ಟು ಆದಾಯ ವಿಶ್ವದ 180 ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ಆದಾಯಕ್ಕಿಂತಲೂ ಹೆಚ್ಚು. 2015ರಲ್ಲಿ ಇವು ಗಳಿಸಿದ ಲಾಭ ಸುಮಾರು ₹ 15.39 ಲಕ್ಷ ಕೋಟಿ. ಅಂದರೆ ವಿಶ್ವದಲ್ಲಿನ ಪ್ರತಿ ವ್ಯಕ್ತಿ
₹ 2043 ಗಳಿಸಿದ್ದಕ್ಕೆ ಸರಿಸಮ. 

ಭಾರತಕ್ಕೆ ಸಂಬಂಧಪಟ್ಟ ವರದಿಯಲ್ಲಿಯೂ ಹೆಚ್ಚೂ ಕಡಿಮೆ ಇದೇ ರೀತಿಯ ಅಂಕಿಅಂಶಗಳೇ ಇವೆ.  ಅದರ ಪ್ರಕಾರ ‘ಭಾರತದ ಶೇ 58ರಷ್ಟು ಸಂಪತ್ತು ಶೇ 1ರಷ್ಟು ಸಿರಿವಂತರ ಬಳಿ ಇದೆ’. ಅಂದರೆ ನಮ್ಮ ದೇಶದ 57 ಮಹಾ ಕುಬೇರರು ₹ 14.71 ಲಕ್ಷ ಕೋಟಿ ಸಂಪತ್ತು ಹೊಂದಿದ್ದಾರೆ.

ಇದು ಖಂಡಿತವಾಗಿ ಹೆಮ್ಮೆಪಡುವ ಸಂಗತಿಯಲ್ಲ, ತಲೆ ತಗ್ಗಿಸಬೇಕಾದ ವಿಷಯ. ‘ಭಾರತವೂ ಸೇರಿದಂತೆ ವಿಶ್ವದ ಎಲ್ಲೆಡೆ ಆರ್ಥಿಕ ಅಸಮಾನತೆ ಹಾಗೂ ಬಡವರು ಮತ್ತು ಸಿರಿವಂತರ ನಡುವಿನ ಅಂತರ ಹೆಚ್ಚುತ್ತಿದೆ, ಸಂಪತ್ತು ಮತ್ತು ವಿವಿಧ ಸಂಪನ್ಮೂಲಗಳ ಹಂಚಿಕೆ ಸರಿಯಾಗಿಲ್ಲ’ ಎಂದು ಆರ್ಥಿಕ ತಜ್ಞರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.

‘ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತಿದೆ; ಈ ಅಂತರ ಹೆಚ್ಚಿದಂತೆ ಅತೃಪ್ತಿಯೂ ಹೆಚ್ಚುತ್ತಲೇ ಹೋಗುತ್ತದೆ, ಅದು ಗಂಭೀರ ಸಮಸ್ಯೆಗಳಿಗೆ ಎಡೆ ಮಾಡುತ್ತದೆ’  ಎಂದು ಸಮಾಜಶಾಸ್ತ್ರಜ್ಞರೂ ತಮ್ಮದೇ  ದೃಷ್ಟಿಕೋನದಿಂದ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ದುರಂತ ಎಂದರೆ, ಈ ಅಸಮತೋಲನ ನಿವಾರಿಸುವ ಪ್ರಯತ್ನಗಳು ನಡೆಯುತ್ತಿಲ್ಲ ಅಥವಾ ನಡೆದರೂ ಫಲ ಕೊಡುತ್ತಿಲ್ಲ. ಅಭಿವೃದ್ಧಿಯ ಫಲದಿಂದ ಬಡವರನ್ನು ವಂಚಿಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ.

ಈ ರೀತಿಯ ಅಂತರ ಬಡ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಿರಿವಂತ ದೇಶಗಳಲ್ಲೂ ಇದೆ. ಅಲ್ಲಿ ವೇತನ ತಾರತಮ್ಯದಿಂದ ಅಂತರ ಹೆಚ್ಚುತ್ತಿದೆ. ಅಪಾರ ಸಂಪತ್ತಿನ ಒಡೆತನ ಹೊಂದಿದ ಬಹುತೇಕ ದೈತ್ಯ ಕಂಪೆನಿಗಳ ಬೆಳವಣಿಗೆ ಕೂಡ ನ್ಯಾಯಯುತ ವಿಧಾನದಿಂದ ಆಗಿಲ್ಲ. ಅವು ಕೆಳ ಹಂತದ ನೌಕರರಿಗೆ ಸಂಬಳ ಕೊಡಲು ಜಿಪುಣತನ ತೋರಿಸುತ್ತವೆ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ವಂಚಿಸುತ್ತವೆ, ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಮಾಡುತ್ತವೆ. ತಮ್ಮ ಷೇರುದಾರರಿಗೆ ಲಾಭ ಮಾಡಿಕೊಡುವುದೇ ಅವುಗಳ ಏಕೈಕ ಗುರಿ. ಸ್ವಾರ್ಥವನ್ನು ಬದಿಗಿಟ್ಟು ಸಮಷ್ಟಿ ಹಿತ ರಕ್ಷಣೆಯ ಕಾಳಜಿಯನ್ನು ಅವು ಪ್ರದರ್ಶಿಸಿದ್ದರೆ ಈ ಅಂತರ ಕಡಿಮೆ ಆಗುತ್ತಿತ್ತು.

ನೈಸರ್ಗಿಕ ಸಂಪನ್ಮೂಲ ಮತ್ತು ಅದರಿಂದ ಸೃಷ್ಟಿಯಾಗುವ ಆರ್ಥಿಕ ಸಂಪತ್ತು ಎಲ್ಲರಿಗೂ ಸೇರಿದ್ದು. ಹೀಗಾಗಿ ಈ ಎರಡರ ಸಮಾನ ಹಂಚಿಕೆ ಆಗಬೇಕು ಎನ್ನುವ ಬೇಡಿಕೆಯಲ್ಲಿ ನ್ಯಾಯ ಇದೆ.   ಕಮ್ಯುನಿಸ್ಟ್‌ ಮತ್ತು ಸಮಾಜವಾದಿ ಸಿದ್ಧಾಂತಗಳ ಮೂಲ ಪ್ರತಿಪಾದನೆಯೇ ಇದು. ಆದರೆ ಅವೂ ಕೂಡ ಹಳಿ ತಪ್ಪಿ ಅಪ್ರಸ್ತುತವಾಗತೊಡಗಿದಾಗ  ಬಂಡವಾಳಶಾಹಿ ವ್ಯವಸ್ಥೆ ಬಲಗೊಳ್ಳುತ್ತ ಬಂತು. ಪ್ರಗತಿಯ ಜತೆಜತೆಯಲ್ಲಿಯೇ ಸ್ವಜನ ಪಕ್ಷಪಾತ ಕೂಡ ವಿಜೃಂಭಿಸತೊಡಗಿತು. ನವ ಕುಬೇರರನ್ನು ಸೃಷ್ಟಿ ಮಾಡಿತು. 

ಇವರು ಸರ್ಕಾರಗಳ ತೋಳನ್ನೇ ತಿರುಚಿ ಪ್ರಭಾವ ಬೀರುವಷ್ಟು ಬಲಶಾಲಿಗಳಾಗಿದ್ದಾರೆ. ಹೀಗಾಗಿ ಬಡವರಿಗೆ ಅವರ ಪಾಲು ಕೊಡದೆ ವಂಚಿಸುತ್ತಿದ್ದರೂ ಸರ್ಕಾರಗಳು ನೆರವಿಗೆ ಬರುತ್ತಿಲ್ಲ. ಇದರಿಂದ ಬಡವರು– ಸಿರಿವಂತರ ನಡುವಿನ ಅಂತರ ಹೆಚ್ಚುತ್ತ ನಡೆದಿದೆ.

ಈ ಪ್ರವೃತ್ತಿ ತೀರಾ ಅಪಾಯಕಾರಿ. ಇದು ಸಾಮಾಜಿಕ ಅಥವಾ ಆರ್ಥಿಕ ಸಮಸ್ಯೆ ಮಾತ್ರವಲ್ಲದೆ ಕಾನೂನು ಸುವ್ಯವಸ್ಥೆಗೂ ಸಮಸ್ಯೆ ಒಡ್ಡಬಹುದು.  ಅಂತಹ ಆತಂಕಕಾರಿ ಸನ್ನಿವೇಶದ ಅಂಚಿನಲ್ಲಿ ನಾವೀಗ ನಿಂತಿದ್ದೇವೆ. ಅದರ ಬಗ್ಗೆ ಗಮನ ಕೊಡದೇ ಹೋದರೆ ಈ ವಿಶ್ವಕ್ಕೆ ಭವಿಷ್ಯವೇ ಇರುವುದಿಲ್ಲ. ಬಲಾಢ್ಯ ಧನಿಕರು, ಅವರ ಅಡಿಯಾಳುಗಳಂತೆ ವರ್ತಿಸುವ ಸರ್ಕಾರಗಳು ಇದನ್ನು ಬೇಗ ಅರ್ಥ ಮಾಡಿಕೊಂಡಷ್ಟೂ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT