ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ಯಾನ್‌’ ಇಲ್ಲದೆ ಹಣ ವರ್ಗಾವಣೆ ಪ್ರಕರಣ ಪತ್ತೆ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಳೆ ನೋಟು ರದ್ದತಿಯ ಬಳಿಕ ರಾಜ್ಯದಲ್ಲಿ ₹1 ಕೋಟಿಗೂ ಅಧಿಕ ಮೊತ್ತದ ಸುಮಾರು 2,300 ವಹಿವಾಟುಗಳು ನಡೆದಿವೆ. ಇದರಲ್ಲಿ  900 ವಹಿವಾಟುಗಳಿಗೆ ಶಾಶ್ವತ ಖಾತೆ ಸಂಖ್ಯೆಯನ್ನೇ (ಪ್ಯಾನ್‌)  ನೀಡಿಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ (ತನಿಖೆ ಮತ್ತು ವಿಚಾರಣೆ) ಆರ್‌. ರವಿಚಂದ್ರನ್ ಹೇಳಿದರು.

ಶುಕ್ರವಾರ ಅರ್ಬನ್‌ ಬ್ಯಾಂಕುಗಳ ಪ್ರತಿನಿಧಿಗಳ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ‘ಪ್ಯಾನ್‌’ ನೀಡದೇ ವಹಿವಾಟು ನಡೆಸಿರುವವರನ್ನು ಪತ್ತೆಹಚ್ಚಿ ಅವರ ‘ಪ್ಯಾನ್‌’ ಬಹಿರಂಗಪಡಿಸುವಂತೆ  ಅವರು ಬ್ಯಾಂಕ್‌ಗಳಿಗೆ ಸೂಚಿಸಿದರು.

‘ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಗೂ ಮುನ್ನ ‘ಪ್ಯಾನ್‌’  ಬಹಿರಂಗಪಡಿಸದವರ ವಿರುದ್ಧ   ಬೇನಾಮಿ ವಹಿವಾಟು ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು’ ಎಂದೂ ಅವರು ಎಚ್ಚರಿಕೆ ನೀಡಿದರು.  ತಪ್ಪು ‘ಪ್ಯಾನ್‌’ ವಿವವರ ನೀಡಿ ನಡೆಸಿದ ವಹಿವಾಟುಗಳನ್ನೂ ಇಲಾಖೆ ಪತ್ತೆ ಹಚ್ಚಿದೆ.

‘ಕೆಲವು ಬ್ಯಾಂಕುಗಳು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸುವ ಮೂಲಕ ಇಂತಹ ವಹಿವಾಟಿಗೆ ನೆರವು ನೀಡಿವೆ. ಇಂತಹ ವಹಿವಾಟುಗಳ ಹಿಂದೆ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಸ್ಥಳೀಯ ಉದ್ಯಮಿಗಳು ಇರುವುದು ಇಲಾಖೆಯ ಗಮನಕ್ಕೆ ಬಂದಿದೆ. ಕೆಲವು ನಿಷ್ಕ್ರಿಯ ಖಾತೆಗಳಲ್ಲೂ ಹಣ ಜಮೆ ಆಗಿದೆ. ಇಂತಹ ವಂಚನೆಗಳನ್ನು ಇಲಾಖೆ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಪತ್ತೆ ಹಚ್ಚಿದೆ’ ಎಂದೂ  ವಿವರಿಸಿದರು.

‘ನೋಟು ರದ್ದತಿಯ ಬಳಿಕ ಕೆಲವು  ಉದ್ಯಮಿಗಳು ಮತ್ತು ಚಿನ್ನಾಭರಣ ವರ್ತಕರ ಬ್ಯಾಂಕು ಖಾತೆಗಳಲ್ಲಿ ನಿರೀಕ್ಷೆಗೂ ಮೀರಿ ವ್ಯವಹಾರ ನಡೆದಿದೆ. ಇಂತಹ ವ್ಯವಹಾರಗಳ ಮೇಲೂ ನಿಗಾ ಇಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT