ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ ಪ್ರತಿವಾದಕ್ಕೆ ತಿರುಗಿದ ಭಕ್ತಿ ಸಂವಾದ

ಧಾರವಾಡ ಸಾಹಿತ್ಯ ಸಂಭ್ರಮ
Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಧಾರವಾಡ: ಭಕ್ತಿ ಪರಂಪರೆ ಮತ್ತು ಕನ್ನಡ ಕಾವ್ಯ ಗೋಷ್ಠಿಯು ಹಲವು ವ್ಯಾಖ್ಯಾನ, ವಾದ, ಪ್ರತಿ ವಾದ, ಗಂಭೀರ ಚರ್ಚೆ ಮತ್ತು ಕೊನೆಗೆ ಹಾಸ್ಯಕ್ಕೂ ತಿರುಗಿ ಸಭಿಕರನ್ನು ರಂಜಿಸಿತು.

ಗೋಷ್ಠಿ ಅರ್ಧದಲ್ಲಿಯೇ ಸಭಿಕರಿಂದ ಪ್ರಶ್ನೆಗಳು ಆರಂಭವಾದವು. ಇದರ ಮಧ್ಯೆ ಆನ್‌ಲೈನ್‌ ಮೂಲಕ ಬಂದ ಚರ್ಚಾಸ್ಪದ ವಿಷಯಗಳು ಕುತೂಹಲ ಮೂಡಿಸಿದವು. ಮಾತು ವಿಷಯಾಂತರವಾಗುತ್ತಿದ್ದಾಗ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಹಿರಿಯ ಸಾಹಿತಿ ಚಂಪಾ, ಸಂಶೋಧಕ ಷ.ಶೆಟ್ಟರ್‌, ಹಂ.ಪಂ.ನಾಗರಾಜಯ್ಯ ಮತ್ತು ಸಭಿಕರು ತಮ್ಮ ಅಭಿಪ್ರಾಯವನ್ನು ಗೋಷ್ಠಿಯಲ್ಲಿ ಮಂಡಿಸಿ ಚರ್ಚೆಯ ಕಾವು ಹೆಚ್ಚಿಸಿದರು. ಕೆಲ ಸಂದೇಹಗಳಿಗೆ ಉತ್ತರ ಸಿಕ್ಕರೆ, ಹಲವು ಪ್ರಶ್ನೆಗಳು ಕೊನೆತನಕ ಹಾಗೇ ಉಳಿದು, ಮರೆಯಾದವು.

ಮೊದಲಿಗೆ ಮಾತನಾಡಿದ ನಿರ್ದೇಶಕ ಶ್ರೀರಾಮ್ ಭಟ್‌, ‘ಗೀತ ಗೋವಿಂದದಲ್ಲಿ ‘ಭಕ್ತಿ’ ಪರಿಕಲ್ಪನೆ ತುತ್ತ ತುದಿ ತಲುಪಿತು. ದೇಸಿ ಭಾಷೆಗಳಲ್ಲಿ ಅದು ಇನ್ನೊಂದು ಭಾಗದಲ್ಲಿಯೇ ಬಂತು’ ಎಂದರು. ಇದಕ್ಕೆ  ಪ್ರತಿಕ್ರಿಯೆ ನೀಡಿದ ಸಾಹಿತಿ ಕಮಲಾ ಹಂಪನಾ, ‘ಭಟ್‌ ಅವರು ಹೇಳಿದ ವ್ಯಾಖ್ಯಾನ ವೈಷ್ಣವ ಪದ್ಧತಿಗೆ ಹತ್ತಿರವಾದಂತೆ ಭಾಸವಾಗುತ್ತದೆ. ಭಕ್ತಿ ಎನ್ನುವುದು ವೈದಿಕ ಅಥವಾ ವೈಷ್ಣವ ಪದ್ಧತಿಯಲ್ಲಿ ಮಾತ್ರವಲ್ಲ ಅದಕ್ಕೂ ಮಿಗಿಲಾಗಿ ದೊಡ್ಡ ಪ್ರಾಚೀನ ಪರಂಪರೆ ಇದೆ’ ಎಂದು ಹೇಳಿದರು.

ಈ ಎರಡು ವಾದಗಳಿಗಿಂತ ಭಿನ್ನ ವಾದ ಮುಂದಿಟ್ಟ ಲೇಖಕಿ ಎಚ್‌.ಶಶಿಕಲಾ, ‘ಯಾವ ವಿಷಯದಲ್ಲಿ ತನ್ಮಯರಾಗೋತ್ತೇವೆಯೋ ಅದರಲ್ಲಿ ತೊಡಗುವುದು. ಇದಕ್ಕೆ ನಿದರ್ಶನ ಧಾರವಾಡ ಸಾಹಿತ್ಯ ಸಂಭ್ರಮ’ ಎಂದು ಪ್ರತಿಪಾದಿಸಿದರು.

ಇದಕ್ಕೆ ತದ್ವಿರುದ್ಧವಾಗಿ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ, ‘ಭಕ್ತ ಮತ್ತು ಭಗವಂತ ನಡುವಿನ ಸಂಬಂಧವೇ ಭಕ್ತಿ’ ಎಂದರು. ಗೋಷ್ಠಿಯು ಜೈನ, ಬೌದ್ಧ ಧರ್ಮದ ಭಕ್ತಿಯತ್ತ ಹೊರಳಿತು. ಇದಕ್ಕೆ ಉತ್ತರಿಸಿದ ಕಮಲಾ ಹಂಪನಾ, ‘ಜೈನ ಹಾಗೂ ಬೌದ್ಧರಲ್ಲಿ ಭಗವಂತನ ಕಲ್ಪನೆ ಇಲ್ಲ. ಆದರೆ ಮಹಾವೀರ ಹಾಗೂ ಬುದ್ಧನ ಅನುಯಾಯಿಗಳು ಅವರನ್ನು ದೇವರಂತೆ ಭಾವಿಸಿದರು. ಅವರಿಗಾಗಿ ನಡೆದ ಆಚರಣೆ ಭಕ್ತಿಯಾಯಿತು’ ಎಂದರು.

ಆಗ ಸಭಿಕರು, ಗೋಷ್ಠಿಯು ಬರೀ ಜೈನ, ಪ್ರಾಚೀನ, ಶರಣ ಭಕ್ತಿ ಪರಂಪರೆ ಸುತ್ತಲೇ ಸುತ್ತುತ್ತಿದೆ ಎಂದು ಆಕ್ಷೇಪಿಸಿದರು. ನಿರ್ದೇಶಕರು ಸಭಿಕರನ್ನು ಸಮಾಧಾನ ಪಡಿಸಿದರು. ಕೊನೆಗೆ ಕೊಡ್ಲೆಕೆರೆ ಮಾತನಾಡಿ ಎಲ್ಲ ಸಂತರ ಹೆಸರುಗಳನ್ನು ಹೇಳಲು ಇಲ್ಲಿರುವ  ಚೌಕಟ್ಟಿನಲ್ಲಿ ಆಗುವುದಿಲ್ಲ. ಭಕ್ತಿ ಕಾವ್ಯದ ಬಗ್ಗೆ ಚಂಪಾ ಅವರಿಗೆ ಇರುವ ಹುನ್ನಾರದ ಅನುಮಾನ ಬೇಡ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಚಂಪಾ ‘ಭಕ್ತಿ’ ಎನ್ನುವುದು ಗುಲಾಮಗಿರಿಯ ಮತ್ತೊಂದು ಸಂಕೇತ’ ಎಂದು ಕುಟುಕಿದರು. ಅದಕ್ಕೆ ಭಟ್‌ ‘ಅದು ಚಂಪಾ ಅವರ ಜಡ್ಜಮಂಟ್‌’ ಎಂದು ಗೋಷ್ಠಿ ಮುಗಿಸಿದರು.
*
ಗೋಷ್ಠಿಯಲ್ಲಿ ಹಾಸ್ಯದ ಹೊನಲು, ಕೇಳದ ಪ್ರಶ್ನೆ
ಗೋಷ್ಠಿಯಲ್ಲಿ ಇಬ್ಬರು ಮಹಿಳೆಯರಿಗೆ ಅವಕಾಶ ನೀಡಿರುವುದು ನಮ್ಮ ಮೇಲಿರುವ ಭಕ್ತಿಯೇ ? ಎಂದು ಕಮಲಾ ಹಂಪನಾ ಪ್ರಶ್ನಿಸಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. 

ನನ್ನದು ಆನ್‌ಲೈನ್ ಪ್ರಶ್ನೆಯಲ್ಲ ಅಂಡರ್‌ ಲೈನ್ ಪ್ರಶ್ನೆ ಎಂದ ಸಾಹಿತಿ ಚಂದ್ರಶೇಖರ ಪಾಟೀಲ, ಭಕ್ತಿಯಿಂದ ಪೂಜಾರಿ ಹಾಗೂ ಕಮಿಷನ್ ಏಜೆಂಟರ ಹಾವಳಿ ಹೆಚ್ಚಾಗಿದೆ. ಆಗ ಕಮಲಾ ಹಂಪನಾ ‘ನಾವು ಆಧುನಿಕ ಕಾವ್ಯಕ್ಕೆ ಬಂದಿಲ್ಲ’ ಎಂದರು. ಅದಕ್ಕೆ ಚಂಪಾ, ‘ನೀವು ಬಂದಿಲ್ಲ, ಬರೋದೂ ಇಲ್ಲ’ ಎಂದು ಹೇಳಿದರು. ಇದರ ನಡುವೆ ಕೆಲವರು ತತ್ವಪದಕಾರರ ಭಕ್ತಿ ಬಗ್ಗೆ ಪ್ರಶ್ನೆ ಕೇಳಿಬಂತು. ಇದಕ್ಕೆ ಪ್ರತಿಕ್ರಿಯೆ ನೀಡುವ ಮೊದಲೇ ಮತ್ತೊಂದು ಪ್ರಶ್ನೆ ತೂರಿಬಂತು. ಇದರಿಂದ ಪ್ರಶ್ನೆಗಳು ವೇದಿಕೆಗೆ ತಲುಪಲಿಲ್ಲ.
*
ಬೇಡಿಕೆಯಿಲ್ಲದೇ ಭಕ್ತಿಯಿಲ್ಲ
ಗೋಷ್ಠಿ ನಡುವೆ ಚರ್ಚೆಗೆ ಸಾಣೆ ಹಿಡಿದ ಸಂಶೋಧಕ ಷ.ಶೆಟ್ಟರ, ಅಪೇಕ್ಷೆ ಹಾಗೂ ಬೇಡಿಕೆ ಇದ್ದಲ್ಲಿ ಭಕ್ತಿ ಹುಟ್ಟಿಕೊಳ್ಳುತ್ತದೆ. ಜನಪದದಲ್ಲಿ ಹುಟ್ಟಿದ ಭಕ್ತಿ ಅದ್ಭುತವಾಗಿದೆ. ಈ ಕುರಿತು ಚರ್ಚೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
*
ಭಕ್ತಿಗೆ ಎರಡು ಅರ್ಥವಿದೆ. ಒಂದು ಒಡೆಯುವುದು, ಇನ್ನೊಂದು ಕೂಡಿಸುವುದು. ಭತ್ತ ಪದವು ಅಲ್ಲಿಂದಲೇ ಬಂದಿರುವುದು. ಅದನ್ನು ಒಡೆಯದೆ ಅನ್ನ ಮಾಡಲು ಬರುವುದಿಲ್ಲ. ಅದೇ ರೀತಿ ಭಕ್ತಿ.
ಶ್ರೀರಾಮ ಭಟ್‌
*
ಅಭಕ್ತಿ ಎನ್ನುವುದು ಮನೋಸ್ಥಿತಿಯಾಗಿದೆ. ಆದರೆ ಇಂದು ದೇವರು, ಧರ್ಮ, ಪೂಜೆ ಎಲ್ಲವೂ ಅದರ ಅವತರಣಿಕೆಯಾಗಿ ಕಾಣಿಸುತ್ತದೆ.
ಕಮಲಾ ಹಂಪನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT