ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಚಟುವಟಿಕೆಗೆ ಬೇಡ ನಿರ್ಬಂಧ

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಸದಸ್ಯರ ಆಗ್ರಹ
Last Updated 21 ಜನವರಿ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸದಂತೆ ವಿಧಿಸಲಾಗಿರುವ ನಿರ್ಬಂಧ ಸಡಿಲಿಸುವ ಸಂಬಂಧ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಲು ಶನಿವಾರ ನಡೆದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್‌ ಸಭೆ ತೀರ್ಮಾನಿಸಿದೆ.

ವಿರೋಧಪಕ್ಷದ ನಾಯಕ ಪದ್ಮನಾಭ ರೆಡ್ಡಿ ಎತ್ತಿದ ಪ್ರಶ್ನೆ ಕುರಿತಂತೆ ಸುದೀರ್ಘ ಚರ್ಚೆ ನಡೆದ ಬಳಿಕ ಮೇಯರ್‌ ಜಿ.ಪದ್ಮಾವತಿ ಅವರು ಈ ನಿರ್ಧಾರ ಪ್ರಕಟಿಸಿದರು.
‘ಹೈಕೋರ್ಟ್‌ ಆದೇಶ ಪಾಲನೆ ಮಾಡುವ ತುರ್ತು ಒಂದೆಡೆಯಾದರೆ, ವ್ಯಾಪಾರಿಗಳ ಹಿತರಕ್ಷಣೆ ಕಾಯುವ ಅಗತ್ಯ ಮತ್ತೊಂದೆಡೆ. ಬಿಡಿಎ ರೂಪಿಸಿದ ನಿಯಮದಂತೆ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಿರ್ಬಂಧಿಸಲು ಹೋದರೆ ನಗರದ ಶೇ 80ರಷ್ಟು ಘಟಕಗಳನ್ನು ಮುಚ್ಚಬೇಕಾಗುತ್ತದೆ’ ಎಂದು ಪದ್ಮನಾಭ ರೆಡ್ಡಿ ಪ್ರತಿಪಾದಿಸಿದರು.

‘ನಾನು ಪ್ರತಿನಿಧಿಸುವ ಕಾಚರಕನಹಳ್ಳಿ ವಾರ್ಡ್‌ನಲ್ಲಿಯೇ 2,097 ವಾಣಿಜ್ಯ ಘಟಕಗಳಿವೆ. ಆದರೆ, ಪಾಲಿಕೆ ಅಧಿಕಾರಿಗಳು 231 ವಾಣಿಜ್ಯ ಪರವಾನಗಿಗಳನ್ನಷ್ಟೇ ನೀಡಿದ್ದಾರೆ. ಉಳಿದ ಘಟಕಗಳಿಗೂ ವಾಣಿಜ್ಯ ಪರವಾನಗಿ ಕೊಟ್ಟಿದ್ದರೆ ₹ 1.70 ಕೋಟಿ ಆದಾಯ ಬರುತ್ತಿತ್ತು. ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಲ್ಲ ಘಟಕಗಳಿಗೆ ವಾಣಿಜ್ಯ ಪರವಾನಗಿ ನೀಡಿದರೆ ₹ 350 ಕೋಟಿಯಷ್ಟು ವರಮಾನ ಸಿಗಲಿದೆ’ ಎಂದು ಅವರು ವಿವರಿಸಿದರು.

‘ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ಗಳು ಜಾರಿಯಾಗುತ್ತಿವೆ. ಹೀಗಾಗಿ ಅವರೀಗ ಚಕ್ರವ್ಯೂಹದಲ್ಲಿ ಸಿಕ್ಕಿದ್ದಾರೆ. ಸರ್ಕಾರದ ನೆರವಿನಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಕಟ್ಟಡಗಳ ಮಾಲೀಕರ ಹಿತಕಾಯಬೇಕು’ ಎಂದು ಆಗ್ರಹಿಸಿದರು.

‘ವಾಣಿಜ್ಯ ಚಟುವಟಿಕೆ ನಡೆಸದಂತೆ ವಿಧಿಸಲಾಗಿರುವ ನಿರ್ಬಂಧ ಸಡಿಲಿಸುವ ಸಂಬಂಧ ಪರಿಶೀಲನೆಗೆ ಸಮಿತಿ ರಚಿಸಬೇಕು. ಆ ಸಮಿತಿ ವರದಿ ನೀಡಿ, ಅದು ಕೌನ್ಸಿಲ್‌ ಸಭೆಯಲ್ಲಿ ಚರ್ಚೆಯಾಗಿ ನಿರ್ಣಯ ಕೈಗೊಳ್ಳುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಭೂಬಳಕೆ ವಲಯಗಳ ಸಂಬಂಧ ಸೃಷ್ಟಿಯಾಗಿರುವ ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗದಿದ್ದರೆ ಅದು ಸಹ ತೆರಿಗೆಯಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು. ಉಮೇಶ್‌ ಶೆಟ್ಟಿ, ಎಸ್‌.ರಾಜು, ಸಿ.ಆರ್‌. ಲಕ್ಷ್ಮಿನಾರಾಯಣ ಸೇರಿದಂತೆ ಹಲವರು ಅವರ ಮಾತಿಗೆ ದನಿಗೂಡಿಸಿದರು.

ಉತ್ತರ ನೀಡಿದ ಆಯುಕ್ತ ಎನ್‌. ಮಂಜುನಾಥಪ್ರಸಾದ್‌, ‘ಬಿಡಿಎ ಮೊದಲು ರೂಪಿಸಿದ್ದ ಮಹಾಯೋಜನೆ–2015ರ ಪ್ರಕಾರ, ವಸತಿ ಪ್ರದೇಶದಲ್ಲೂ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶವಿತ್ತು. ಅದರ ವಿರುದ್ಧ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ಕೋರ್ಟ್‌ ಸೂಚನೆಯಂತೆ
ನಿಯಮದಲ್ಲಿ ಮಾರ್ಪಾಡು ಮಾಡಲಾಯಿತು’ ಎಂದು ವಿವರಿಸಿದರು.

‘ಯಾವುದೇ ವಸತಿ ಪ್ರದೇಶದಲ್ಲಿ 40 ಅಡಿಗಿಂತ ಅಗಲವಾದ ರಸ್ತೆಯಿದ್ದರೆ ಕಟ್ಟಡದ ಶೇ 20ರಷ್ಟು ಪ್ರದೇಶ ಅಥವಾ 500 ಚದರ ಅಡಿ ವಿಸ್ತೀರ್ಣ ಇವುಗಳಲ್ಲಿ ಯಾವುದು ಕನಿಷ್ಠವೋ ಅಷ್ಟು ಜಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಬಹುದು. ಒಂದುವೇಳೆ ರಸ್ತೆ ನೂರು ಅಡಿಯಷ್ಟು ಅಗಲವಾಗಿದ್ದರೆ ಕಟ್ಟಡದ ಶೇ ನೂರರಷ್ಟು ಪ್ರದೇಶದಲ್ಲೂ ವಾಣಿಜ್ಯ ಚಟುವಟಿಕೆ ನಡೆಸಬಹುದು’ ಎಂದು ಹೇಳಿದರು.

‘ವಸತಿ ಪ್ರದೇಶದಲ್ಲಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ನಡೆಸುವ ಘಟಕಗಳ ತೆರವಿಗಾಗಿ ನೋಟಿಸ್‌ ನೀಡಬಹುದೇ ಹೊರತು ಅವುಗಳಿಗೆ ಪರವಾನಗಿ ನೀಡಲು ಕಾಯ್ದೆಯಲ್ಲಿ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಅರ್ಹ ಪ್ರಕರಣಗಳಲ್ಲಿ ಆನ್‌ಲೈನ್‌ ಮೂಲಕವೇ ಹೊಸ ಪರವಾನಗಿ ನೀಡಲು ಅವಕಾಶ ಕಲ್ಪಿಸಿದ್ದೇವೆ. ಅದರಲ್ಲಿನ ದೋಷಗಳನ್ನು ವಾರದಲ್ಲೇ ಸರಿಪಡಿಸುತ್ತೇವೆ. 45 ದಿನಗಳಲ್ಲೇ ಪರವಾನಗಿ ಸಿಗುವಂತೆ ವ್ಯವಸ್ಥೆ ರೂಪಿಸುತ್ತೇವೆ’ ಎಂದು ಹೇಳಿದರು.

‘ನಗರದಲ್ಲಿರುವ ವಾಣಿಜ್ಯ ಘಟಕಗಳ ನಿಖರ ಸಂಖ್ಯೆ ಪತ್ತೆ ಮಾಡಲು ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಬೆಸ್ಕಾಂನಿಂದ ದಾಖಲೆ ಪಡೆದು, ಅವುಗಳೊಂದಿಗೆ ನಮ್ಮ ಬಳಿಯಿರುವ ವಿವರವನ್ನು ತುಲನೆ ಮಾಡಿ ನೋಡುತ್ತೇವೆ’ ಎಂದು ತಿಳಿಸಿದರು.

ಪಿ.ಜಿ ಹಾಸ್ಟೆಲ್‌ಗಳು ವಸತಿ ಕಟ್ಟಡಗಳು!

‘ಬಿಡಿಎ ರೂಪಿಸಿರುವ ಮಹಾಯೋಜನೆ–2015ರ ಪ್ರಕಾರ, ಪಿ.ಜಿ ಹಾಸ್ಟೆಲ್‌ಗಳನ್ನು ವಸತಿಕಟ್ಟಡಗಳ ವರ್ಗಕ್ಕೆ ಸೇರಿಸಲಾಗಿದೆ. ಹೀಗಾಗಿ ಅವುಗಳ ಚಟುವಟಿಕೆ ಮೇಲೆ ನಿರ್ಬಂಧ ಇಲ್ಲ’ ಎಂದು ಆಯುಕ್ತರು ತಿಳಿಸಿದರು.‘ಹಾಸ್ಟೆಲ್‌ಗಳು ವಾಣಿಜ್ಯ ಚಟುವಟಿಕೆ ನಡೆಸುವುದಿಲ್ಲವೆ’ ಎಂದು ಸದಸ್ಯರು ಪ್ರಶ್ನಿಸಿದಾಗ, ‘ಸದ್ಯದ ನಿಯಮಾವಳಿ ಪ್ರಕಾರ ಅವುಗಳು ವಸತಿ ಕಟ್ಟಡಗಳು’ ಎಂದು ಆಯುಕ್ತರು ಪುನರುಚ್ಚರಿಸಿದರು.ಪಿ.ಜಿ ಹಾಸ್ಟೆಲ್‌ಗಳನ್ನು ವಾಣಿಜ್ಯ ಕಟ್ಟಡಗಳ ವರ್ಗಕ್ಕೆ ಸೇರಿಸಲು ಎರಡು ವರ್ಷಗಳ ಹಿಂದೆ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT