ಸರಾವಕ್, ಮಲೇಷ್ಯಾ : ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.

ರಿಯೊ ಒಲಿಂಪಿಕ್ಸ್ ವೇಳೆ ಗಾಯ ಗೊಂಡು ಲೀಗ್ ಹಂತದಲ್ಲೇ ಮುಗ್ಗರಿಸಿದ್ದ ಸೈನಾ ಆ ನಂತರ ಮಂಡಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಚೇತರಿಸಿಕೊಂಡ ಬಳಿಕ ಹೈದರಾಬಾದ್‌ನ ಆಟಗಾರ್ತಿ ಗೆದ್ದ ಮೊದಲ ಟ್ರೋಫಿ ಇದಾಗಿದೆ.

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿ ಯಲ್ಲಿ ಸೈನಾ 22–20, 22–20 ರ ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ಪೊರ್ನ್‌ಪಾವೀ ಚೊಚುವಾಂಗ್ ಅವರನ್ನು ಪರಾಭವಗೊಳಿಸಿದರು.

ಈ ಮೂಲಕ ವೃತ್ತಿ ಬದುಕಿನ 23ನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಹೋದ ವರ್ಷ ನಡೆದಿದ್ದ ಆಸ್ಟ್ರೇಲಿಯಾ ಓಪನ್ ಬಳಿಕ ಸೈನಾ ಜಯಿಸಿದ ಮೊದಲ ಟ್ರೋಫಿ ಇದಾಗಿದೆ. ಪಂದ್ಯದ ಆರಂಭ ದಿಂದಲೇ ಚುರುಕಿನ ಆಟ ಆಡಿದ ಚೊಚುವಾಂಗ್ ನಾಲ್ಕು ಪಾಯಿಂಟ್ಸ್ ಕಲೆಹಾಕಿ ಮುನ್ನಡೆ ಗಳಿಸಿದ್ದರು. ಆ ನಂತರವೂ ಆಕ್ರಮಣಕಾರಿ ಆಟವಾಡಿ ಪಾಯಿಂಟ್ಸ್ ಹೆಕ್ಕಿದ ಥಾಯ್ಲೆಂಡ್‌ನ ಆಟಗಾರ್ತಿ 11–5ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಹೊಂದಿರುವ ಸೈನಾ ಇದರಿಂದ ಕಿಂಚಿತ್ತೂ ವಿಚಲಿತರಾಗಲಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಡ ಮೀರಿ ನಿಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಭಾರತದ ಆಟಗಾರ್ತಿ ಆಕರ್ಷಕ ಡ್ರಾಪ್ ಮತ್ತು ಮನಮೋಹಕ ಕ್ರಾಸ್‌ಕೋರ್ಟ್ ಹೊಡೆತಗಳ ಮೂಲಕ ಅಂಗಳದಲ್ಲಿ ಮಿಂಚು ಹರಿಸಿದರು. ಈ ಮೂಲಕ ನಿರಂತರವಾಗಿ ಪಾಯಿಂಟ್ಸ್ ಬೇಟೆ ಯಾಡಿದ ಅವರು ಹಿನ್ನಡೆಯನ್ನು 10–13 ಕ್ಕೆ ತಗ್ಗಿಸಿಕೊಂಡರು.

ಆ ನಂತರವೂ ಕೆಚ್ಚೆದೆಯಿಂದ ಹೋರಾಡಿದ ಸೈನಾ 19–19ರಲ್ಲಿ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿ ಯಾದರು. ಹೀಗಾಗಿ ಅಭಿಮಾನಿಗಳ ಎದೆಬಡಿತವೂ ಜೋರಾಗಿತ್ತು. ನಿರ್ಣಾಯಕ ಘಟ್ಟದಲ್ಲಿ ತುಂಬು ವಿಶ್ವಾಸದಿಂದ ಆಡಿ ಎರಡು ಪಾಯಿಂಟ್ಸ್ ಸಂಗ್ರಹಿಸಿದ ಭಾರತದ ಆಟಗಾರ್ತಿ 20 ನಿಮಿಷಗಳಲ್ಲಿ ಗೇಮ್ ಜಯಿಸಿ ಖುಷಿಯ ಕಡಲಲ್ಲಿ ತೇಲಿದರು.

ಆರಂಭಿಕ ನಿರಾಸೆಯಿಂದ ಎದೆಗುಂದದ ಚೊಚುವಾಂಗ್ ಎರಡನೇ ಗೇಮ್‌ನಲ್ಲೂ ಅಬ್ಬರಿಸಿದರು. ಅವರು 3–0ರ ಮುನ್ನಡೆ ಗಳಿಸಿ ಭಾರತದ ಆಟಗಾರ್ತಿಗೆ ತಿರುಗೇಟು ನೀಡುವ ಸೂಚನೆ ನೀಡಿದ್ದರು. ಆದರೆ ಸೈನಾ ಇದಕ್ಕೆ ಅವಕಾಶ ನೀಡಲಿಲ್ಲ. ಎದುರಾಳಿ ಆಟಗಾರ್ತಿ ನೆಟ್‌ನಿಂದ ತುಸು ದೂರ ನಿಂತು ಆಡುತ್ತಿದ್ದುದನ್ನು ಗಮನಿಸಿದ ಅವರು ನೆಟ್‌ನ ಸಮೀಪದಲ್ಲಿ ಷಟಲ್ ಡ್ರಾಪ್ ಮಾಡುವ ತಂತ್ರ ಅನುಸರಿಸಿ ಸಫಲರಾದರು. ಹೀಗಾಗಿ ಸೈನಾ 7–5ರ ಮುನ್ನಡೆ ಗಳಿಸಿದರು.

ಒಂದು ಹಂತದಲ್ಲಿ ಇಬ್ಬರೂ 20–20 ರಲ್ಲಿ ಸಮಬಲ ಹೊಂದಿದ್ದರು. ಹೀಗಾಗಿ ಉಭಯ ಆಟಗಾರ್ತಿಯರಿಗೂ ಗೆಲುವಿನ ಸಮಾನ ಅವಕಾಶ ಇತ್ತು. ಒತ್ತಡದ ಸಂದರ್ಭದಲ್ಲಿ ಮತ್ತೊಮ್ಮೆ ಮಿಂಚಿದ ಸೈನಾ, ಎದುರಾಳಿಯ ಸದ್ದಡಗಿಸಿ ಖುಷಿಯಿಂದ ನಲಿದಾಡಿದರು.

ಗೇಮ್ ವಿವರ

ಶಸ್ತ್ರಚಿಕಿತ್ಸೆಯ ನಂತರದ ನಾಲ್ಕು ತಿಂಗಳ ಹಾದಿ ತುಂಬಾ ಕಠಿಣವಾಗಿತ್ತು. ಹೀಗಾಗಿ ಇಲ್ಲಿ ಗೆದ್ದ ಪ್ರಶಸ್ತಿ ತುಂಬಾ ವಿಶೇಷವಾದುದು. ಈ ಗೆಲುವು ನನ್ನಲ್ಲಿ ಹೊಸ ಸ್ಫೂರ್ತಿ ತುಂಬಿದೆ.
ಸೈನಾ ನೆಹ್ವಾಲ್

ಗೆಲುವು ಅಗತ್ಯವಾಗಿತ್ತು: ವಿಮಲ್

ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಗಾಯದಿಂದ ಚೇತರಿಸಿಕೊಂಡ ಬಳಿಕ ಗೆದ್ದ ಮೊದಲ ಪ್ರಶಸ್ತಿ ಇದಾದ ಕಾರಣ ಸೈನಾ ಅವರಲ್ಲಿನ ವಿಶ್ವಾಸ ಹೆಚ್ಚಾಗಿದೆ. ಫಿಟ್‌ನೆಸ್ ಸಾಬೀತು ಮಾಡಲು ಈ ಗೆಲುವು ಅಗತ್ಯವಾಗಿತ್ತು’ ಎಂದು ಸೈನಾ ಅವರ ಕೋಚ್ ಯು. ವಿಮಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
‘ಗ್ರ್ಯಾನ್ ಪ್ರಿ ಟೂರ್ನಿಗಳಲ್ಲಿ ಕಠಿಣ ಸವಾಲು ಇರುತ್ತದೆ. ತಮಗಿಂತಲೂ ಕೆಳರ್‍ಯಾಂಕ್‌ನಲ್ಲಿರುವ ಆಟಗಾರ್ತಿಯರ ಸವಾಲು ಎದುರಿಸಿ ಗೆಲ್ಲಬೇಕಾಗುತ್ತದೆ. ಇದಕ್ಕೆ ಸಾಕಷ್ಟು ತಯಾರಿ ಅಗತ್ಯ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.