ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳ ಹಕ್ಕು ಪ್ರತಿಪಾದನೆ

ಸಂಗತ
Last Updated 25 ಜನವರಿ 2017, 11:21 IST
ಅಕ್ಷರ ಗಾತ್ರ
-ಎನ್.ವಿ.ವಾಸುದೇವ ಶರ್ಮಾ 
ಇತ್ತೀಚೆಗೆ ಬಿಡುಗಡೆಯಾದ ‘ದಂಗಲ್‌’ ಚಲನಚಿತ್ರ ಹೆಣ್ಣು ಮಕ್ಕಳ ಸಾಮರ್ಥ್ಯ  ಕುರಿತು ದೇಶದಲ್ಲಿ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ. ಹೆಣ್ಣು ಮಕ್ಕಳಿಂದೇನು ಸಾಧ್ಯ ಎನ್ನುವ ಮನಸ್ಸುಗಳನ್ನು ಚಿಂತನೆಗೆ ಹಚ್ಚಿ, ಅವರಿಗೆ ಸ್ವಾಭಾವಿಕವಾಗಿ ಅವಕಾಶಗಳು ದೊರೆಯಬೇಕೆಂಬುದಕ್ಕೆ ಮತ್ತೊಮ್ಮೆ ಬಲಬಂದಿದೆ. ಹೆಣ್ಣು ಮಕ್ಕಳನ್ನು ವಿಕೃತವಾಗಿ ಹಿಂಸಿಸುವುದು, ಅವರ ಮೇಲಾಗುವ ಅತ್ಯಾಚಾರಗಳ ಬಗ್ಗೆ ಕೂಡ ಚರ್ಚೆ ನಡೆದಿದೆ.
 
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಎರಡನೇ ಪರಿಚ್ಛೇದ, ಎಲ್ಲ ಸಮುದಾಯಗಳೂ ಎಲ್ಲ ಮಕ್ಕಳನ್ನು ಸರಿಸಮಾನವಾಗಿ, ತಾರತಮ್ಯರಹಿತವಾಗಿ ಬೆಳೆಸಬೇಕು ಎಂದು ಹೇಳಿದೆ. ಅದರಂತೆಯೇ, ಎಲ್ಲರ ಮಾನವ ಹಕ್ಕುಗಳನ್ನು ಸರಿಸಮಾನವಾಗಿ ಪರಿಗಣಿಸಬೇಕು ಎಂದು ಹೇಳುತ್ತದೆ ಮಾನವ ಹಕ್ಕುಗಳ ಘೋಷಣೆ. 
 
ಹೆಣ್ಣುಮಕ್ಕಳಿಗೆ ತಾರತಮ್ಯರಹಿತ ಬಾಳು, ಅಸಮಾನತೆ ಇಲ್ಲದ ಅವಕಾಶಗಳು ಸಿಗುವಂತೆ ಮಾಡಲು ಹಾಗೂ ಅವರ ಬಗೆಗಿನ ತಿರಸ್ಕಾರದ ದೃಷ್ಟಿಕೋನ ಬದಲಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳು ಮತ್ತು ಕಾನೂನುಗಳನ್ನು ಕಾಲಕಾಲಕ್ಕೆ ಜಾರಿಗೊಳಿಸುತ್ತಾ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮೂಲಕ, 2008ರಿಂದ ಪ್ರತಿ ಜನವರಿ 24ರಂದು ನಡೆಸುತ್ತಾ ಬಂದಿರುವ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ ಅಂತಹವುಗಳಲ್ಲಿ ಒಂದು.
 
ಪುರುಷ ಪ್ರಧಾನ ಸಮಾಜವಿರುವ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳನ್ನು ಉಳಿಸುವುದು, ಅವರ ಗೌರವ ಕಾಪಾಡುವುದು, ಶೈಕ್ಷಣಿಕ ಮತ್ತು ಇತರ ಅವಕಾಶಗಳು ಅವರಿಗೆ ನ್ಯಾಯಯುತವಾಗಿ ಒದಗುವಂತೆ ಮಾಡುವುದು ಅತ್ಯವಶ್ಯಕ. ಹೆಣ್ಣು– ಗಂಡಿನ ನಡುವಿರುವ ಲಿಂಗಾನುಪಾತ, ಅದರಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಪ್ರತಿ ಕುಟುಂಬಕ್ಕೂ ಅರಿವು ಮೂಡಿಸುವ ದಿಸೆಯಲ್ಲಿ ಪ್ರಚಾರ ಮಾಡಬೇಕಾದುದೂ  ಗಮನಾರ್ಹ.
 
ಹೆಣ್ಣು ಮಕ್ಕಳನ್ನು ಅವಕಾಶ ವಂಚಿತರನ್ನಾಗಿಸುವ ವ್ಯವಸ್ಥೆ ನಮ್ಮ ಸುತ್ತಮುತ್ತ ಇದ್ದರೂ ನಾವು ಅವುಗಳನ್ನು ಗಮನಿಸದಂತೆ ಇರುವುದು ವಿಚಿತ್ರವೇ ಸರಿ. ಉದಾಹರಣೆಗೆ, ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಮಕ್ಕಳು 8ನೇ ತರಗತಿಯ ತನಕ ಶಿಕ್ಷಣವನ್ನು ಉಚಿತ ಹಾಗೂ ಕಡ್ಡಾಯವಾಗಿ ಪಡೆದರೂ, ಪ್ರೌಢ ಶಿಕ್ಷಣದ ಅವಕಾಶಗಳನ್ನು ಕೊಡುವ ಶಾಲೆ, ಕಾಲೇಜುಗಳು ನಗರಗಳಲ್ಲಿವೆ. ಹೀಗಾಗಿ, ಅನೇಕ ಬಾಲಕಿಯರು ಶಿಕ್ಷಣ ಮುಂದುವರಿಸಲಾಗುತ್ತಿಲ್ಲ. ಸರ್ಕಾರ ನೀಡುವ ಹಾಸ್ಟೆಲ್‌ನಂತಹ ಸೌಲಭ್ಯಗಳು ಎಲ್ಲ ಮಕ್ಕಳಿಗೆ ಸಿಗುತ್ತಿಲ್ಲ. 
 
ಇಂತಹುದೇ ಪರಿಸ್ಥಿತಿ ಹೆಣ್ಣು ಮಕ್ಕಳ ಅಪೌಷ್ಟಿಕತೆ, ಆರೋಗ್ಯ ರಕ್ಷಣೆಯ ವಿಷಯದಲ್ಲಿಯೂ ಇದೆ. ಈಗಲೂ ಅನಾರೋಗ್ಯಕ್ಕೊಳಗಾದ ಹೆಣ್ಣು ಮಕ್ಕಳನ್ನು ವೈದ್ಯರಲ್ಲಿಗೆ ಕರೆದೊಯ್ಯದ ಕುಟುಂಬಗಳಿವೆ. ಇದಕ್ಕಾಗಿ ಸರ್ಕಾರ ಧನಲಕ್ಷ್ಮಿ, ಭಾಗ್ಯಲಕ್ಷ್ಮಿ ಯೋಜನೆಗಳನ್ನು ಮುಂದಿಟ್ಟು ಜನರನ್ನು ಪುಸಲಾಯಿಸಿ ಹೆಣ್ಣು ಮಕ್ಕಳಿಗೆ ಸೌಲಭ್ಯಗಳನ್ನು ಕೊಡಿಸುವಂತಹ ಪರಿಸ್ಥಿತಿ ಇದೆ. ಹೀಗಾಗಿ ಹೆಣ್ಣು ಮಕ್ಕಳನ್ನು ಉಳಿಸಿ, ರಕ್ಷಿಸಿ ಮತ್ತು ಉತ್ತೇಜಿಸಿ ಎಂಬ ಆಂದೋಲನವೇ ನಡೆಯಬೇಕಾಗಿದೆ.
 
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ, ಮಾನವ ಹಕ್ಕುಗಳ ಘೋಷಣೆ ಹಾಗೂ ಮಹಿಳೆಯರ ಹಕ್ಕುಗಳ ಕುರಿತು ನಡೆದಿರುವ ಸಮ್ಮೇಳನಗಳೆಲ್ಲವೂ ಜಾಗತಿಕವಾಗಿ ಹೆಣ್ಣು ಮಕ್ಕಳನ್ನು ಕೇಂದ್ರೀಕರಿಸಿ ಕೈಗೊಳ್ಳಬೇಕಾದ ಕ್ರಮಗಳನ್ನು ಹೇಳಿವೆ. ಭ್ರೂಣಲಿಂಗ ಪತ್ತೆ,  ಹೆಣ್ಣು ಭ್ರೂಣ ಹತ್ಯೆ ಹಾಗೂ ಹೆಣ್ಣು ಮಕ್ಕಳ ಹತ್ಯೆ ನಡೆಯದಂತೆ ಸರ್ಕಾರಗಳು ಎಚ್ಚರಿಕೆ ವಹಿಸಬೇಕು.
 
ಲಿಂಗ, ಧರ್ಮ, ಕುಲ, ಬಣ್ಣ, ಭಾಷೆ, ದೈಹಿಕ, ಮಾನಸಿಕ ಅಂಗವೈಕಲ್ಯ ಅಥವಾ ಇನ್ನಾವುದೇ ಕಾರಣದಿಂದ ಹೆಣ್ಣು ಮಕ್ಕಳ ವಿರುದ್ಧ ತಾರತಮ್ಯ ಮಾಡಬಾರದು;  ಅವರಿಗೆ ಎಂತಹ ಸಂದರ್ಭದಲ್ಲೂ ಪೌಷ್ಟಿಕ ಆಹಾರ ಲಭ್ಯವಾಗಬೇಕು ಮತ್ತು ಆರೋಗ್ಯ ಸೇವೆಗಳು ದೊರೆಯಬೇಕು, ಅವರ ರಕ್ಷಣೆಗೆ ಆದ್ಯತೆ ನೀಡಬೇಕು; ಹೆಣ್ಣು ಮಕ್ಕಳನ್ನು ದಾಸ್ಯಕ್ಕೆ ಗುರಿಪಡಿಸುವಂತಹ ಅಪರಾಧಗಳು, ಅವರ ಅಪಹರಣ, ಮಾರಾಟ, ಲೈಂಗಿಕ ಶೋಷಣೆಗೆ ದೂಡುವಂತಹ ಪರಿಸ್ಥಿತಿ ತಡೆಗಟ್ಟಿ, ಅಂತಹ ಅಪರಾಧಗಳನ್ನು ಮಾಡಿದವರಿಗೆ ಶಿಕ್ಷೆ ನೀಡಬೇಕು ಮತ್ತು ಇಂತಹ ಪರಿಸ್ಥಿತಿಗಳಿಂದ ರಕ್ಷಿಸಿದವರಿಗೆ ಪುನರ್ವಸತಿ ಕಲ್ಪಿಸಬೇಕು; 18 ವರ್ಷದೊಳಗಿನ ಯಾವುದೇ ಹೆಣ್ಣು ಮಗುವನ್ನು ಬಲವಂತವಾಗಿ, ಮೋಸದಿಂದ ಅಥವಾ ಪುಸಲಾಯಿಸಿ ಮದುವೆ ಮಾಡುವುದನ್ನು ನಿಷೇಧಿಸಲೇಬೇಕು. ಅಕಸ್ಮಾತ್ ಇಂತಹ ಮದುವೆಗೆ ಗುರಿಯಾಗುವ ಮಕ್ಕಳು  ಆ ವಿವಾಹದಿಂದ ಹೊರಬಂದು ಸ್ವತಂತ್ರವಾಗಿ ಜೀವಿಸಲು ಅವಕಾಶಗಳನ್ನು ಮಾಡಿಕೊಡಬೇಕು. 
 
ಈ ಎಲ್ಲ ಆಶಯಗಳು ಈಡೇರಬೇಕೆಂದರೆ, ವ್ಯಕ್ತಿಗತವಾಗಿ ನಾವು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅವುಗಳೆಂದರೆ, ಹೆಣ್ಣು ಮಕ್ಕಳೇ ಮಾಡಬೇಕೆಂದು ಪರಂಪರಾನುಗತವಾಗಿ ಅಂದುಕೊಂಡಿರುವ ಕೆಲವು ಕೆಲಸಗಳನ್ನು ಪುರುಷರು ಮತ್ತು ಗಂಡು ಮಕ್ಕಳು ಹಂಚಿಕೊಂಡು ಮಾಡಲು ಮುಂದಾಗಬೇಕಿದೆ.
 
ಉದಾಹರಣೆಗೆ ಮನೆಯ ಕಸ ಗುಡಿಸುವುದು, ಪಾತ್ರೆ, ಬಟ್ಟೆ ತೊಳೆಯುವುದು, ಅಡುಗೆ ಮಾಡುವುದು ಇತ್ಯಾದಿ. ಗ್ರಾಮೀಣ ಕುಟುಂಬಗಳಲ್ಲಿ ಉರುವಲು ತರುವುದು, ಮೇವು ತರುವುದು, ಕೊಟ್ಟಿಗೆ ಶುದ್ಧ ಮಾಡುವುದು, ಕುಡಿಯುವ ನೀರು ತರುವುದು ಕೂಡ ಇದರಲ್ಲಿ ಸೇರುತ್ತವೆ; ಆಟೋಟಗಳಿಗೋ ಸಾಂಸ್ಕೃತಿಕ ಚಟುವಟಿಕೆಗಳಿಗೋ ಹೆಣ್ಣು ಮಕ್ಕಳು ಸೇರಬೇಕೆಂದು ಬಯಸಿದಾಗ ಹಣವಿಲ್ಲವೆಂದೋ, ದೂರವೆಂದೋ, ಕರೆದುಕೊಂಡು ಹೋಗಿಬರುವುದು ಕಷ್ಟವೆಂದೋ ನೆಪ ಹೇಳಿ ತಡೆಯಬಾರದು.
 
ಹೆಣ್ಣು ಮಕ್ಕಳೆಂದರೆ ಖರ್ಚಿನ ಬಾಬತ್ತು ಎಂದು ಸದಾಕಾಲ ಅವರೆದುರೋ, ಹಿಂದೆಯೋ ಮಾತನಾಡುವ ನಮ್ಮ ಸಾಂಪ್ರದಾಯಿಕ ಮನಸ್ಸುಗಳನ್ನು ಎಚ್ಚರಿಸಿ, ಅವರನ್ನು ಗಂಡು ಮಕ್ಕಳ ಸರಿಸಮಾನವಾಗಿ ಕಾಣಬೇಕು; ಹೆಣ್ಣು ಮಕ್ಕಳು ಯಾವುದಾದರೂ ಅಪಾಯಕ್ಕೆ ಸಿಲುಕಿದರೆ, ಅವರದೇ ತಪ್ಪು ಎಂದು ಭಾವಿಸಿ ಹೀಗಳೆಯಬಾರದು. ಮೊದಲು ರಕ್ಷಣೆ ಕೊಟ್ಟು ನಂತರ ಪ್ರಕರಣವನ್ನು ಪರಾಮರ್ಶಿಸುವುದು ಉಚಿತ. ಆಟವಾಡಲು ಹೋದಾಗಲೋ, ಶಾಲೆಗೋ ಮತ್ತೊಂದಕ್ಕೋ ಹೋಗಿದ್ದಾಗ ಇಂತಹ ತೊಂದರೆ ಆಗಿದ್ದಲ್ಲಿ, ಆ ಅವಕಾಶವನ್ನೇ ಕಿತ್ತು ಹಾಕುವುದಕ್ಕಿಂತ ಮತ್ತೆ ಅಂತಹ ಅಪಾಯ ಎದುರಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜೊತೆಯಾಗಿ ಯೋಚಿಸಬೇಕು. ಬಹಳಷ್ಟು ಬಾರಿ ಮಕ್ಕಳಿಗೆ ಸಂಬಂಧಿಸಿದ ಸೇವೆ, ಸೌಲಭ್ಯ ದೊರಕದಿರುವುದು ನಮ್ಮದೇ ನಿರ್ಲಕ್ಷ್ಯದಿಂದ ಅಥವಾ ಇಂತಹ ಸೇವೆಗಳನ್ನು ಒದಗಿಸಬೇಕಾದವರ ನಿಷ್ಕ್ರಿಯತೆ, ನಿರ್ಲಕ್ಷ್ಯ ಅಥವಾ ಅವರಿಗೇ ಮಾಹಿತಿ ಇಲ್ಲದಿರುವ ಕಾರಣದಿಂದ. ಯಾರಿಗೆ ಈ ಕಾರ್ಯಕ್ರಮ, ಯೋಜನೆಯನ್ನು ನಿರ್ವಹಿಸುವ ಜವಾಬ್ದಾರಿ ವಹಿಸಲಾಗಿರುತ್ತದೋ ಅವರು ಆ ಕಾರ್ಯದಲ್ಲಿ ವಿಫಲರಾದರೆ ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ; ಹೆಣ್ಣು ಮಕ್ಕಳನ್ನು ಹೀಗಳೆಯುವ ಹಾಸ್ಯ ಚಟಾಕಿಗಳಿಗೆ ಪ್ರೋತ್ಸಾಹ ಕೊಡಬಾರದು. 
 
ಬಹುತೇಕರು ಹೇಳುವಂತೆ ಈ ಎಲ್ಲವೂ ಭಾಷಣಗಳಲ್ಲಿ, ಘೋಷಣೆಗಳಲ್ಲಿ ಹೇಳಲು ಸೊಗಸಾಗಿರುತ್ತವೆ.  ವಾಸ್ತವವಾಗಿ ಇವು ಜಾರಿಯಾಗಬೇಕಿರುವುದು ಜನಸಮುದಾಯಗಳ ತಳಮಟ್ಟದಲ್ಲಿ. ಈ ವರ್ಷದ ಹೆಣ್ಣು ಮಕ್ಕಳ ದಿನಾಚರಣೆಯಂದು ಗ್ರಾಮ ಪಂಚಾಯಿತಿ ಮಟ್ಟದ, ವಾರ್ಡ್‌ ಮಟ್ಟದ ಪ್ರತೀ ಕುಟುಂಬದಲ್ಲಿ ಹೆಣ್ಣು ಮಕ್ಕಳ ಕುರಿತು ವಿಶಿಷ್ಟವಾಗಿ ಮತ್ತು ಕಾಳಜಿಯಿಂದ ಯೋಚಿಸಬೇಕಿದೆ. ಎಲ್ಲರೂ ಗಮನಿಸಬೇಕಿರುವ ಮುಖ್ಯವಾದ ಅಂಶವೆಂದರೆ, ಸರ್ಕಾರಗಳು ಕಾನೂನು, ಕಾರ್ಯಕ್ರಮಗಳನ್ನು ಜಾರಿಗೆ ತರಬಹುದು. ಆದರೆ, ವ್ಯಕ್ತಿಗತವಾಗಿ ಕುಟುಂಬದ ಎಲ್ಲ ಸದಸ್ಯರು ಹೆಣ್ಣು ಮಕ್ಕಳ ದೃಷ್ಟಿಕೋನದಿಂದ ಆಲೋಚಿಸಲು ಆರಂಭಿಸಿದರೆ, ಹೆಣ್ಣು ಮಕ್ಕಳ ದಿನಾಚರಣೆಗೆ ಅರ್ಥಬರುತ್ತದೆ.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT