ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬಳದ ಹೂವು ಹಾಗೂ ಜೇನ್ನೊಣ

ಸಂಗತ
Last Updated 26 ಜನವರಿ 2017, 19:30 IST
ಅಕ್ಷರ ಗಾತ್ರ
ಸಿಹಿಗುಂಬಳ ಯಾರಿಗೆ ಗೊತ್ತಿಲ್ಲ? ತಿಂದುಳಿದು ಕೂಡಿಟ್ಟಿದ್ದ ಈ ಹಣ್ಣುಗಳನ್ನು ಮೊದಲ ಮಳೆಯಾದಾಕ್ಷಣ ಒಡೆದು ಬೀಜಗಳನ್ನು ಬೇಲಿಸಾಲಿಗೆಲ್ಲ ಊರುತ್ತಿದ್ದ ನನ್ನಜ್ಜಿ ನೆನಪಾಗುತ್ತಾಳೆ. ಮೊನ್ನೆ ಊರ ಕಡೆ ಹೋದಾಗ ಅದೇ ಪರಿಸರ, ಮೌನದ ಉಸಿರಾಗಿ ನೀರಸವಾಗಿತ್ತು. ಮುಗಿಲಿನ ಝಳಕ್ಕೆ ಬೆಳೆ ತತ್ತರಿಸಿತ್ತು.  ತಿಪ್ಪೆ ಮೇಲಿನ ಈ ಕುಂಬಳ ಬಳ್ಳಿಯ ಹೂವುಗಳು ಹೀಚು ಕಟ್ಟದೆ ಕರಕಲಾಗಿದ್ದನ್ನು; ಗಂಡು ಹೂವು ಹುಡುಕಿ ಪರಾಗಸ್ಪರ್ಶ ಮಾಡಿದ ಮೇಲೆ ನಾಲ್ಕಾರು ಹೀಚುಗಳಾಗಿರುವುದನ್ನು ಅಲ್ಲಿ ಗೆಳೆಯರು ವರ್ಣಿಸಿದರು. ತಿಪ್ಪೆ ಮೇಲಿನ ಈ ಕುಂಬಳದ ಬಳ್ಳಿ ಜಗತ್ತಿನ ಭವಿಷ್ಯವನ್ನು ಸೂಚಿಸುತ್ತಿದೆ. 
 
‘ಈ ಭೂಮಿಯ ಮೇಲೆ ಎಲ್ಲ ಜಾತಿಯ ಜೇನುಹುಳುಗಳು ನಾಶವಾದ ನಾಲ್ಕನೆಯ ದಿನವೇ ಮಾನವ ಜೀವನವೂ ಅಂತ್ಯಗೊಳ್ಳುತ್ತದೆ’ ಎಂದು ಮಹಾ ವಿಜ್ಞಾನಿ ಐನ್‌ಸ್ಟೀನ್‌ ಹೇಳುತ್ತಾನೆ. ಹಾಗಾದರೆ ಕುಂಬಳದ ಹೂವುಗಳ ಮೇಲೆ ಕೂರುವ, ಮಕರಂದ ಹೀರಿ ಜೀವಧಾತು ದಾಟಿಸುವ ಎಲ್ಲ ಹುಳುಗಳು ನಾಶವಾದುವೇ? ಹೌದೆನ್ನುತ್ತದೆ ಜೀವಜಾಲದ ನೇಯ್ಗೆ. ಈಗ ಗೋಡೆ ಮೇಲೆ, ಹೆಂಚುಗಳ ಅಡಿಯಲ್ಲಿ ಕಂಬಳಿಹುಳುಗಳೇ ಇಲ್ಲವೆಂದರೆ ಅದು ಮನುಷ್ಯ ಬೀಗುವ ನಾಗರಿಕತೆ ಅಥವಾ ಸ್ವಚ್ಛತೆಯಲ್ಲ. ಅದು ಅವನತಿಯ ಕಡೆಗಿನ ಹೆಜ್ಜೆ.
 
‘ಶುಭ್ರವಾದ ಮಣ್ಣನ್ನು ತಿಂದರೆ ಮಲಬದ್ಧತೆ ಹೋಗುತ್ತದೆ’ ಎನ್ನುವ ಜಸ್‌್ಟ ಎಂಬ ದಾರ್ಶನಿಕನ ಹಾದಿಹಿಡಿದು, ಕರುಳು ತೊಳೆಯುವ ನಾಟಿ ಚಿಕಿತ್ಸೆಯನ್ನು ಗಾಂಧೀಜಿ ಮಾಡುತ್ತಿದ್ದರು. ಕೂನಿ ಎಂಬಾತನ ಹೆಜ್ಜೆಗಳಲ್ಲಿ ಜಲಚಿಕಿತ್ಸೆ ರೂಢಿಸಿಕೊಂಡಿದ್ದರು. ‘ನಮ್ಮ ಸುತ್ತಲೂ ಕವಿದಿರುವ ಶೂನ್ಯವೆಲ್ಲವೂ ಆಕಾಶವೇ’ ಎಂದು ಪಂಚಭೂತಗಳನ್ನು ಪ್ರಾಯೋಗಿಕವಾಗಿ ಇದೇ ಗಾಂಧೀಜಿ ಅಧ್ಯಾತ್ಮಕ್ಕೊಡ್ಡಿದ್ದರು. ಇವೆಲ್ಲವೂ ನನ್ನಜ್ಜಿ ಕೆಮ್ಮಣ್ಣು ಉಂಡೆಗಳನ್ನು ಬಾಗಿಲ ಮೇಲಿನ ಉತ್ರಾಸದಲ್ಲಿರಿಸುತ್ತಿದ್ದ,  ಮಣ್ಣಿನ ಮಡಕೆಯಲ್ಲಿ ಸ್ವಚ್ಛ ನೀರಿರಿಸುತ್ತಿದ್ದ, ಮಜ್ಜಿಗೆಯನ್ನು ಮಡಕೆಯಲ್ಲಿರಿಸುತ್ತಿದ್ದ, ಕಣದಲ್ಲಿ ಮಲಗಿಸಿಕೊಂಡು ಆಕಾಶದಲ್ಲಿ ಶೂನ್ಯದೊಳಗಿನ ನಕ್ಷತ್ರಗಳನ್ನು ಎಣಿಸಿ ಹೇಳುತ್ತಿದ್ದ ಆಕೆಯ ಜ್ಞಾನಗಳಾಗಿದ್ದವು.
 
ಇವು ಏನಾದವು? ಯಾರು ಕಾರಣ? ಮೊನ್ನೆ ಕೊಪ್ಪ ಅಡವಿ ಸೀಮೆ ಕಾಯುವ ಮನೆಮುರುಕ, ತೋಪುಮುರುಕ ಅರಣ್ಯ ಮೇಲಧಿಕಾರಿ ‘ಥಿನ್ನಿಂಗ್‌’ ಎನ್ನುವ ಸರ್ಕಾರಿ ಕಡತ ಹಿಡಿದು 50 ಸಾವಿರ ಮರಗಳಿಗೆ ಗರಗಸ ಹರಿತ ಮಾಡಿಕೊಂಡಿದ್ದನ್ನು ಆತಂಕದಿಂದ ಪರಿಸರಾಸಕ್ತರು ಎದುರಿಸಿ ನಿಲ್ಲಿಸಿದ್ದಾರೆ. ಈ ತಿನ್ನುವುದಕ್ಕೂ ಒಂದು ಮಿತಿ ಇರಬೇಕಲ್ಲವೇ! ಮನುಷ್ಯನ ಮನಸ್ಸನ್ನೇ ಗೆದ್ದಲು ತಿನ್ನುತ್ತಿದೆ. ಅದಕ್ಕೆ ಅಧಿಕಾರಿ, ರಾಜಕಾರಣಿ, ರೈತ, ಬಡವ ಬಲ್ಲಿದ ಯಾರೂ ಹೊರತಾಗಿಲ್ಲವೆಂದು ಹೇಳುತ್ತಿದೆ. ಆಧುನಿಕತೆ, ನಾಗರಿಕತೆ ಎಂದರೆ ಏನು? ಹರಣವೇ! ಅವಸಾನದ ಪ್ರಯೋಗವೇ!
 
ನಮ್ಮೂರಿನಲ್ಲಿ ಶಿವಮ್ಮ ಎನ್ನುವ ಮಹಿಳೆ ಇದ್ದಳು. ‘ಬಬ್ರುವಾಹನ’ ಗೊಂಬೆ ನಾಟಕದ ಚಿತ್ರಾಂಗದೆ ನೆನಪು ತರುವವಳು. ಅದಕ್ಕೂ ಮೀರಿದ ಜ್ಞಾನ ಪರಂಪರೆಯಾಗಿದ್ದಳು. ಉಪಕಸುಬಾಗಿ ಹಾಸನ ಸಂತೆಗೆ ಸೌದೆಗಾಡಿ ಹೊಡೆಯುತ್ತಿದ್ದಳು. ಮರದ ಬುಡ ಕಡಿದರೆ ಗಂಡಸರಿಗೂ ಉಗಿದು ಬುದ್ಧಿ ಹೇಳುತ್ತಿದ್ದಳು. ಕೊಂಬೆ ಸವರಿ ಒಣಗಿದ ಮರಗಳನ್ನು ಕಡಿದು ಸಾಗಿಸುತ್ತಿದ್ದಳು. ಇದು ‘ಥಿನ್ನಿಂಗ್‌’ ಎಂಬುದರ ಗ್ರಾಮೀಣ ತತ್ವ. ನಮ್ಮ ಕಣ್ಣೆದುರಿಗೇ ಮಲೆನಾಡು ಮಾಯವಾಗುತ್ತಾ ಹೋದ ಪರಿ ಸಾಮಾನ್ಯದ್ದಲ್ಲ. 7 ಕೋಟಿ ಟನ್‌ ಕೀಟನಾಶಕವನ್ನು ಭೂಮಿ ಮೇಲೆ ಹಸಿರು ಕ್ರಾಂತಿಯ ಹೆಸರಿನಲ್ಲಿ ಸುರಿದಿರುವ ದೇಶವಿದು. ಅದಕ್ಕೆ ನೂರುಪಟ್ಟು ರಾಸಾಯನಿಕ ಗೊಬ್ಬರ ಹರವಿಯಾಗಿದೆ. ಇಂಥಾ ಮಣ್ಣನ್ನು ಈಗ ಮಕ್ಕಳ ಮಲಬದ್ಧತೆ ತಡೆಗೆ ನೀಡಲಾಗುತ್ತದೆಯೇ? ಕುಂಬಳದ ಹೂವಿನ ಮೇಲೆ ಜೇನ್ನೊಣಗಳು ಕೂರಲು ಅವು ಉಳಿದಿವೆಯೇ? ಅದೇ ಈಗಿನ ಸವಾಲು. 
 
ಭೂಮಿ ಒಂದು ಬಣ್ಣದ ಬುಗುರಿ ಎಂದು ಎದೆಯೊಳಗಿನ ದನಿ ಗುನುಗುತ್ತದೆ, ನಿಜ. ಅದರೊಳಗೆ ಸಕಲ ಜೀವಕೋಟಿಗಳಿಗೂ ಸಮಾನ ಹಕ್ಕಿರುತ್ತದೆ. ಅವರೆ ಹೊಲದ ಹೂವು, ಹುಚ್ಚೆಳ್ಳು ಹೂವು, ಮಾವಿನಮರದ ಹೂವುಗಳೆಲ್ಲವೂ ಬಣ್ಣ ಬಣ್ಣದ ಪತಂಗಗಳನ್ನು ಲಾಲಿ ಆಡಿಸಿ ಕರೆಯಬೇಕು, ಕೂರಿಸಿಕೊಂಡು ಮಾತನಾಡಿಸಿ ತುತ್ತು ನೀಡಬೇಕು. ಇದು ಪ್ರಕೃತಿಯ ಬಣ್ಣದ ಬುಗುರಿಯಾಟ. ಅದಕ್ಕೆ ಚಾಟಿ ಬೇಕಿಲ್ಲ. ಮೆಲುಗಾಳಿಯ ದನಿಯ ಸವಿ ಸಾಕು. ಮನುಷ್ಯ ಮೂರ್ಖ. ಈ ಹೂವುಗಳೊಳಗಿನ ಗುಟುಕು ಜೀವಗಳನ್ನು ಕೀಟವೆನ್ನುತ್ತಾನೆ. ಹಂಚುಣ್ಣುವ ಹಕ್ಕನ್ನು ನಿರಾಕರಿಸಿ ಕೀಟನಾಶಕ ಸಿಂಪಡಿಸುತ್ತಾನೆ. ಇದನ್ನು  ಕೃಷಿ ವಿಜ್ಞಾನವೆನ್ನುತ್ತಾನೆ. ಇಲ್ಲಿದೆ ಅವನ ಅವನತಿ. ಇದೇ ಕುಂಬಳದ ಹೂವು ಹೀಚುಗಟ್ಟದ ಸ್ಥಿತಿ.
 
ಅಕ್ಷರ ಮತ್ತು ವಿದ್ಯೆ, ಅಭಿವೃದ್ಧಿಯ ಸಮೃದ್ಧಿ ಕಡೆ ಚಲಿಸಬೇಕಾಗಿತ್ತು. ಕೆಂಪು ಕೋಟೆಯ ಮೇಲೆ ಹಾರಾಡಿದ ದೇಶಿ ಬಾವುಟ ಪಂಚಭೂತಗಳನ್ನು ಅಜ್ಞಾನದ ವಿಜ್ಞಾನಕ್ಕೆ ಅಡ ಹಾಕಿತು. ಪರಂಪರೆಯ ಜ್ಞಾನ–ವಿಜ್ಞಾನವನ್ನು ಅನಕ್ಷರತೆಯ ಅವಮಾನವೆಂದು ಕೀಳರಿಮೆ ಸೃಷ್ಟಿಸಿತು. ನೇಗಿಲು ಉಳುವ ಬಸವಣ್ಣ, ಕರೆಯುವ ಹಸು ಎಮ್ಮೆಗಳೆಲ್ಲವೂ ಮೂಲೆ ಸೇರಿದವು. ಇಲ್ಲವಾದವು. ಖರ್ಚಿಲ್ಲದ ಗುದ್ದಲಿ, ನೇಗಿಲಿನ ಸ್ಥಾನವನ್ನು ಟ್ರ್ಯಾಕ್ಟರುಗಳು ಆಕ್ರಮಿಸಿದವು. ಕೊಳವೆಬಾವಿಗಳು ನೆಲದಾಳಕ್ಕೆ ಇಳಿದವು. ಈಗ ಪಾತಾಳದಲ್ಲೂ ನೀರಿಲ್ಲ. ನೆಲದ ಮೇಲೂ ನೀರಿಲ್ಲ. ಭಾರತಾಂಬೆಯ ಕಿರೀಟ ಪರಂಗಿ ಕಂಪೆನಿಗಳಿಗೆ, ಶಾಲಾ ಆಸ್ಪತ್ರೆಗಳಿಗೆ, ಅಕ್ಷರಗಳಿಗೆ ಅಡವಾಗಿದೆ. ಇಂದು ಭಾರತದ ಹಳ್ಳಿಗಳು, ನಗರಗಳು ಸಮಾನಾಂತರ ರೇಖೆಯಲ್ಲಿ ಚಲಿಸುವ ಪೈಪೋಟಿಗಿಳಿದಿವೆ.  ಸಂತೆಗಳು, ಜಾತ್ರೆಗಳು ಕರಗಿ ಮಾಲ್‌ಗಳ ಮೇಲಾಟದಲ್ಲಿ ಗೋಳೀಕರಣದ ಭ್ರಮೆಯಲ್ಲಿವೆ. ಈ ಗೋಳಿನ ದೂಳು ಹೊಂಜಾಗಿ ಮುಗಿಲಿನ ಬೀಳುವ ಮಂಜು ನಂಜಾಗಿ ವಾಯುದೇವನಿಗೆ ಉಬ್ಬಸದ ರೋಗ ತಗುಲಿದೆ. ಆಕಾಶರಾಯನಿಗೆ ಗೂರಲು ಕೆಮ್ಮು ಆವರಿಸಿದೆ. ಭೂಮ್ತಾಯಿ ತನ್ನ ಮಕ್ಕಳ ಹೆಡ್ಡತನಕ್ಕೆ ತಲೆಮೇಲೆ ಕೈಹೊತ್ತು ಕುಳಿತಿದ್ದಾಳೆ. 
 
ಈ ನಡುವೆ ಪ್ರಜೆಗಳ ಮತ ಪಡೆದು ಪ್ರಜಾರಾಜ್ಯ ಸೃಷ್ಟಿಸುವ ನಾಯಕರಿಗೆ ನೆಲದ ಬೇರುಗಳು ತುಂಡಾಗಿವೆ. ಮಹಲುಗಳು, ಮಹಡಿಗಳು ಮರಗಿಡಗಳಾಗಿ ಬೇರುಬಿಟ್ಟು ನಿಂತಿವೆ. ಮುಂದೇನು? ಒಬ್ಬ ಮನುಷ್ಯ ಸತ್ತಂತೆಲ್ಲ ಅವನು ಕರಗಿದ ಮಣ್ಣಿನಲ್ಲಿ ಒಂದೊಂದು ಗಿಡಮರ ಬೆಳೆಯಬೇಕು. ಅವೆಲ್ಲವೂ ಜೀವಂತವಿರುವ ಜೀವಜಾಲಕ್ಕೆ ನಗುವ ಹೂವುಗಳನ್ನು ಕರುಣಿಸಬೇಕು. ಆ ಜೀವಜಾಲದೊಳಗೆ ಜೇನ್ನೊಣಗಳು ಮುತ್ತಬೇಕು. ಅದಾಗದಿದ್ದರೆ? ಜಗದ ಅಂತ್ಯ. ‘ಅನ್ನವನ್ನಲ್ಲದೆ ಚಿನ್ನವನು ತಿನ್ನಲಾದೀತೆ’ ಎಂಬ ಮಾತುಂಟು. ಚಿನ್ನ ಬಗೆದಾಯ್ತು. ಪಂಚಭೂತಗಳು ಮನುಷ್ಯನ ಹಾದಿಯ ದೆವ್ವ ಭೂತಗಳಾದವು. ಅವೆಲ್ಲವನ್ನು ಸ್ವಚ್ಛ ಪಂಚಭೂತಗಳನ್ನಾಗಿಸುವುದು ಸಹ ಈ ಮನುಷ್ಯನ ತಿಳಿವಳಿಕೆಯಲ್ಲಿಯೇ ಇದೆ. ಅದಾಗುವುದೇ ಜಗದ ತಿಳಿವು. ಒಂದು ಮರ ಹಲವು ಜೀವ ಸಲಹುವ ಜೀವ. ಒಬ್ಬ ಮಾನವ ಹಲವು ಮರ ಸಲಹಿದರೆ ಅದುವೇ ಜೀವಸಾಗರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT