ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದುರಹಿತ ವಹಿವಾಟು: ರಾಜಕೀಯ ಪಕ್ಷಗಳು ಮಾದರಿಯಾಗಲಿ

ಸಂಪಾದಕೀಯ
Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ
ನಗದುರಹಿತ ವಹಿವಾಟು ಉತ್ತೇಜಿಸಲು ನೇಮಿಸಲಾಗಿದ್ದ ಮುಖ್ಯಮಂತ್ರಿಗಳ ಸಮಿತಿಯ ಮಧ್ಯಂತರ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಅವಸರ ತೋರಿಸದಿರುವುದು ಸಮಯೋಚಿತ ನಿರ್ಧಾರ. ಬ್ಯಾಂಕ್‌ಗಳಿಂದ ₹ 50 ಸಾವಿರ ಮತ್ತು ಅದಕ್ಕಿಂತ ಹೆಚ್ಚು ನಗದು  ತೆಗೆಯುವುದರ ಮೇಲೆ ಬ್ಯಾಂಕಿಂಗ್‌ ನಗದು ವಹಿವಾಟು ತೆರಿಗೆ (ಬಿಸಿಟಿಟಿ) ವಿಧಿಸಲು ಚಂದ್ರಬಾಬು ನಾಯ್ಡು ನೇತೃತ್ವದ  ಸಮಿತಿ ಮಾಡಿರುವ ಕೆಲ ಶಿಫಾರಸುಗಳು ವಿವಾದಕ್ಕೆ ಎಡೆಮಾಡಿಕೊಟ್ಟಿವೆ. ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಸೂಕ್ತ ಸಮಯದಲ್ಲಿ ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿರುವುದು ಸದ್ಯಕ್ಕಂತೂ ಜನಸಾಮಾನ್ಯರಲ್ಲಿ ಮೂಡಿದ ಆತಂಕ ದೂರ ಮಾಡಿದೆ.
 
ನಗದು ಬಳಕೆಗೆ ಕಡಿವಾಣ ಹಾಕಲು ದೊಡ್ಡ ಮೊತ್ತದ ನಗದು ವಹಿವಾಟಿಗೆ ಮಿತಿ ನಿಗದಿ, ₹ 50 ಸಾವಿರಕ್ಕಿಂತ ಹೆಚ್ಚು ನಗದು ಮೊತ್ತವನ್ನು ಬ್ಯಾಂಕಿನಿಂದ ಪಡೆಯುವುದಕ್ಕೆ ತೆರಿಗೆ ವಿಧಿಸುವುದು, ಡೆಬಿಟ್‌-ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿ ಮಾಡುವವರಿಗೆ ಪ್ರೋತ್ಸಾಹಧನ, ತೆರಿಗೆ ಪಾವತಿಸದವರು ಸ್ಮಾರ್ಟ್‌ಫೋನ್‌ ಖರೀದಿಸಲು  ₹ 1,000ವರೆಗೆ ಸಬ್ಸಿಡಿ ನೀಡಲು ಸಮಿತಿ ಶಿಫಾರಸು ಮಾಡಿದೆ. ಡೆಬಿಟ್‌- ಕ್ರೆಡಿಟ್‌ ಕಾರ್ಡ್‌ ಸೇವೆ ಒದಗಿಸಿದ್ದಕ್ಕೆ ವರ್ತಕರಿಗೆ ವಿಧಿಸುವ ಸೇವಾ ಶುಲ್ಕ (ಎಂಡಿಆರ್‌) ಕಡಿಮೆ ಮಾಡುವ ಅಥವಾ ರದ್ದುಪಡಿಸುವ ಸಲಹೆಯನ್ನೂ ನೀಡಲಾಗಿದೆ. ನಗದುರಹಿತ ವಹಿವಾಟಿನ ಪ್ರಯೋಜನಗಳು ಸಾಕಷ್ಟಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನಗದುರಹಿತ ವಹಿವಾಟು ಸುಗಮವಾಗಿ ಜಾರಿಗೆ ಬರಲು ಇನ್ನೂ ಕಾಲ ಪಕ್ವಗೊಂಡಿಲ್ಲ. ಸುಶಿಕ್ಷಿತರಲ್ಲಿಯೇ  ಹಲವಾರು ಅನುಮಾನಗಳು ಮನೆಮಾಡಿರುವಾಗ ಅನಕ್ಷರಸ್ಥರು ತಕ್ಷಣಕ್ಕೆ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ. ಜನಸಾಮಾನ್ಯರನ್ನೇ ಗುರಿಯಾಗಿರಿಸಿಕೊಂಡು ಇಂತಹ ನಿರ್ಬಂಧಗಳನ್ನು ವಿಧಿಸುವ ಚಿಂತನೆಯೇ ನ್ಯಾಯಸಮ್ಮತವಲ್ಲ.
 
ನಗದುರಹಿತ ವಹಿವಾಟು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲು ಅಗತ್ಯ  ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ. ಈ ಸಂಬಂಧದ  ಸಿದ್ಧತೆಗಳು ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಇನ್ನೂ ಪ್ರಾಯೋಗಿಕ  ಹಂತದಲ್ಲಿ ಇವೆ. ಹೊಸ ವ್ಯವಸ್ಥೆಗೆ ಜನರೂ  ಒಗ್ಗಿಕೊಳ್ಳಬೇಕಾಗಿದೆ. ವಸ್ತುಸ್ಥಿತಿ ಹೀಗಿರುವಾಗ ಜನರಿಗೆ ಇನ್ನಷ್ಟು ಹೊರೆಯಾಗುವ ನಿಬಂಧನೆಗಳನ್ನು ವಿಧಿಸುವುದು ಸಮರ್ಥನೀಯವಲ್ಲ. ನಗದುರಹಿತ ವಹಿವಾಟಿನ ಪ್ರಯೋಜನಗಳ ಬಗ್ಗೆ ಮತ್ತಷ್ಟು ಜನಜಾಗೃತಿ ಆಗಬೇಕಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯು ತಮ್ಮನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರಲಿದೆ ಎನ್ನುವ ಭಯ ಜನಸಾಮಾನ್ಯರಲ್ಲಿ ಮೂಡಿರುವಾಗ ಅವರನ್ನು ಇನ್ನಷ್ಟು ಹೆದರಿಸುವ ಪ್ರಯತ್ನಗಳು ನಡೆಯಕೂಡದು. ಯುಪಿಎ ಸರ್ಕಾರವು   2005ರಲ್ಲಿ  ಬ್ಯಾಂಕಿಂಗ್‌ ವಹಿವಾಟು ತೆರಿಗೆ ಜಾರಿಗೆ ತಂದಿತ್ತು. ಅದಕ್ಕೆ ವ್ಯಾಪಕ ಟೀಕೆ ಕೇಳಿ ಬಂದಿದ್ದರಿಂದ 2009ರಲ್ಲಿ ಅದನ್ನು ಕೈಬಿಡಲಾಗಿತ್ತು.
 
ನೋಟು ರದ್ದತಿ ಬಗ್ಗೆ ಆರಂಭದಲ್ಲಿ ಅಸಹನೆ ವ್ಯಕ್ತಪಡಿಸಿದ್ದ ಚಂದ್ರಬಾಬು ನಾಯ್ಡು ಅವರು ಸಮಿತಿಯ ಅಧ್ಯಕ್ಷರಾಗಿ ಈಗ ಜನರಿಗೆ ಇನ್ನಷ್ಟು ಹೊರೆಯಾಗುವ, ಅಸಮಾಧಾನಕ್ಕೆ ಎಡೆಮಾಡಿಕೊಡುವ ಬ್ಯಾಂಕಿಂಗ್‌ ವಹಿವಾಟು ತೆರಿಗೆಯ ಮರುಜಾರಿಗೆ ಸಲಹೆ ಮಾಡಿರುವುದು ಅವರ ನಿಲುವಿನಲ್ಲಿನ ವಿರೋಧಾಭಾಸಕ್ಕೆ ನಿದರ್ಶನ. ಡಿಜಿಟಲ್‌ ಪಾವತಿಯನ್ನು ಜನಪ್ರಿಯಗೊಳಿಸಲು ಜನರಿಗೆ ಉತ್ತೇಜನ ನೀಡುವುದರ ಜತೆಯಲ್ಲೇ ಹೆಚ್ಚಿನ ಹೊರೆಯನ್ನೂ ಹೇರುವ ಕ್ರಮವು ವ್ಯಾವಹಾರಿಕವಲ್ಲ. ಅದು ಉದ್ದೇಶಿತ ಫಲಿತಾಂಶವನ್ನೂ ನೀಡಲಾರದು.  ಮೊದಲು ಮೂಲ ಸೌಕರ್ಯಗಳನ್ನು ಒದಗಿಸಬೇಕು. ನಂತರವೂ ಅದನ್ನು ಪಾಲಿಸದಿದ್ದರೆ ದಂಡನಾ ಕ್ರಮಗಳನ್ನು ಪ್ರಯೋಗಿಸಬಹುದು. ನಗದುರಹಿತ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವುದು ಅನಿವಾರ್ಯವಾಗಲಿದೆ. ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಪೇಮೆಂಟ್ಸ್  ಬ್ಯಾಂಕ್‌ ಮತ್ತು ಪುಟ್ಟ ಬ್ಯಾಂಕ್‌ಗಳು, ಬ್ಯಾಂಕಿಂಗ್‌ ಸೇವೆ ವಿಸ್ತರಿಸಲು ನೆರವಾಗಲಿವೆ. ನಗದು ಚಲಾವಣೆಯನ್ನು ಕಡಿಮೆ ಮಾಡಲು ರಾಜಕೀಯ ಪಕ್ಷಗಳ ದೇಣಿಗೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಶುಲ್ಕ ಪಾವತಿ ಮತ್ತಿತರ ವಹಿವಾಟುಗಳಲ್ಲೂ ಡಿಜಿಟಲ್‌ ವಿಧಾನ  ಜಾರಿಗೆ ತರುವ ಅನಿವಾರ್ಯ ಇದೆ ಎಂಬುದನ್ನೂ ಮನಗಾಣಬೇಕು. ವ್ಯವಸ್ಥೆ ಸ್ವಚ್ಛಗೊಳಿಸುವ ಪ್ರಯತ್ನವನ್ನು ರಾಜಕಾರಣಿಗಳು ಮೊದಲು ತಮ್ಮ ಮನೆಯಿಂದಲೇ ಆರಂಭಿಸಲಿ. ರಾಜಕೀಯ ಪಕ್ಷಗಳೆಲ್ಲ ತಮ್ಮ ಚಟುವಟಿಕೆಗಳಿಗೆ ನಗದು ರೂಪದಲ್ಲಿ ಹಣ ಪಡೆಯುವುದನ್ನು ನಿಲ್ಲಿಸಲಿ. ಶಿಕ್ಷಣ ಸಂಸ್ಥೆಗಳೂ ಕಡ್ಡಾಯವಾಗಿ ಚೆಕ್‌ ಇಲ್ಲವೆ ಬ್ಯಾಂಕಿಂಗ್ ವಹಿವಾಟಿನ ಮೂಲಕವೇ ಹಣ ಸ್ವೀಕರಿಸುವುದನ್ನು ಅನುಸರಿಸಬೇಕಾಗಿದೆ. ಕಪ್ಪುಹಣದ ಚಲಾವಣೆಯನ್ನು ನಿಯಂತ್ರಿಸಲು ಇದು ದೊಡ್ಡಮಟ್ಟದಲ್ಲಿ ಸಹಾಯಕವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT