ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧ್ಯ ಆರೆ ನಿಮ್ಮ ಈ ಮಗುನ ಒಂದ ಸಾರಿ ಕ್ಷಮ್ಸಿ ಬಿಡಿ

Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ

‘ಮುಸಾಫಿರ್‌’ನ ಕೊನೆಯ ಕಂತು.
ಬರೆಯಲು ಕೂತಾಗ ಕಣ್ಣಿನ ಮುಂದೆ ಬಂದು ನಿಂತ ಏಕೈಕ ಚಿತ್ರ ಬೇರ್‌ಯಾರು  ಅಲ್ಲ, ಲಲೀತಾ ಟೀಚರ್.

ನಾಗೂರಿನ ಕಳೀನಬಾಗಿಲು. ಅಲ್ಲಿನ ರಾಮಯ್ಯ ಶೆಟ್ಟರ ಕಟ್ಟಡದಿಂದ ಆರಂಭವಾದ ಈ ಪಯಣ ಅಲ್ಲಿಗೆ ವಾಪಸು ಬಂದು ನಿಲ್ಲಬೇಕು, ಎನ್ನುವ ನಿಲುವು ಪ್ರಜ್ಞಾಪೂರ್ವಕವಾಗಿರಲಿಲ್ಲ. ‘ಮುಸಾಫಿರ್‌’ಗೆ ಪೂರ್ಣ ವಿರಾಮ ಹಾಕುವ ನಿರ್ಧಾರವಾದ ಮೇಲೆ ಸಹಜವಾಗಿಯೇ ಉಮ್ಮಳಿಸಿದ ಭಾವನೆಗಳ ನಡುವೆ ಮನದಲ್ಲಿ ಚಿಮ್ಮಿದ ಏಕೈಕ ಹೆಸರು ಅದಾಗಿತ್ತು.

ಬಾಲ್ಯದ ಆ ನೆನಪುಗಳು ಮತ್ತು ಆ ಹೆಸರು 43 ವರ್ಷಗಳ ನಂತರವೂ ಇನ್ನೂ ಹಸಿಹಸಿಯಾಗಿಯೇ ಎದೆಯಾಳದಲ್ಲಿ ಉಳಿದುಬಿಟ್ಟಿದೆ ಎನ್ನುವುದೇ, ಆ ಪ್ರೀತಿ–ಬಾಂಧವ್ಯ ಎಂತಹುದು? ಎಷ್ಟು ಗಟ್ಟಿಯಾದುದು? ಎನ್ನುವುದರ ಸಂಕೇತ ಎಂದರೆ ತಪ್ಪಾಗಲಾರದು.

ನಮ್ಮ ಹೋಟೆಲ್–ಮನೆಗೆ ಹತ್ತಿರದ ಶಾಲೆಯೆಂದರೆ ಕಂಭದಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ನನಗಾಗ ಐದು–ಆರರ ನಡುವಿನ ವಯಸ್ಸು. ಮಳೆಗಾಲ ಆರಂಭವಾಗುವುದಕ್ಕಿಂತ ಮೊದಲು. ಮೊದಲ ದಿನ ಅಪ್ಪ–ಅಮ್ಮ ನನ್ನನ್ನು ಶಾಲೆಗೆ ಕೈಹಿಡಿದುಕೊಂಡು ಹೋಗಿ ಸೇರಿಸಿದ ನೆನಪಂತೂ ಇಲ್ಲ. ಈಗಿನಂತೆ ಆಗೇನೂ ಅಪ್ಪ–ಅಮ್ಮಂದಿರು ಪ್ರತಿದಿನ ಮಕ್ಕಳನ್ನು ಶಾಲೆಗೆ ‘ಡ್ರಾಪ್’ ಅಥವಾ ಶಾಲೆಯಿಂದ ‘ಪಿಕ್’ ಮಾಡುವುದು ಅಥವಾ ಹಳದಿ ಬಣ್ಣದ ಶಾಲಾ ವಾಹನಗಳ ಸಂಸ್ಕೃತಿಯಂತೂ ಇರಲಿಲ್ಲ.

‘‘ಹೆಡ್ಮಾಷ್ಟ್ರಿಗೆ ಹೇಳಿದೆ. ನಾಳೆಯಿಂದ ಎಲ್ಲ ಮಕ್ಕಳ ಒಟ್ಟಿಗೆ ನೀನೂ ಶಾಲಿಗೆ ಹೋಯ್ಕ’’ ಎಂದು ಅಪ್ಪ ಹೇಳಿದ್ದು ಮಾತ್ರ ನೆನಪು. ಅಮ್ಮ ಮೊದಲ ಬಾರಿಗೆ ಶಾಲೆಗೆ ಹೊರಟ ಪುಟ್ಟ ಮಗನಿಗೆ ಹೊಸ ಬಟ್ಟೆ ತೊಡಿಸಿದ ನೆನಪೂ ಇಲ್ಲ. ‘‘ಇದ್ದದ್ರಾಗೆ ಯಾವುದೋ ಒಂದ ಅಂಗಿ–ಚಡ್ಡಿ ಹಾಯ್ಕಂಡ ಹೋತ’’ ಎಂದು ಅಪ್ಪ ಹೇಳಿದ್ದರು. ಒಂದನೇ ತರಗತಿಗೆ ಹೊರಟ ಮೊದಲ ದಿನ. ಆ ಬೆಳಿಗ್ಗೆ ಯಾವುದೋ ಒಂದು ಅಂಗಿ–ಚಡ್ಡಿ ಹಾಕಿ ನನ್ನನ್ನು ಶಾಲೆಗೆ ಕಳುಹಿಸಿಕೊಡುವ ‘ಭಯಂಕರ’ ಯತ್ನ ಆರಂಭವಾಯಿತು.

ಸುಮಾರು ಆರು ವರ್ಷದವರೆಗೆ ಈಗಿನಂತೆ, ಯಾವುದೇ ನರ್ಸರಿ, ಎಲ್‌ಕೆಜಿ, ಯುಕೆಜಿಯ ತಾಪತ್ರಯ ಇಲ್ಲದೇ ಸ್ವಚ್ಛಂದವಾಗಿ ನಾಗೂರಿನ ಗೋಯ್ ಹಕ್ಲ, ಕಳೀನಬಾಗಿಲಿನ ಎಡಮಾವಿನ ಹೊಳೆ, ಅದರ ಮೇಲಿನ ಸೇತುವೆಗಳು, ಪಕ್ಕದಲ್ಲಿಯೇ ಇದ್ದ ಹನುಮಂತನ ದೇವಸ್ಥಾನ, ಚಪ್ಪರಿಕೆ – ಬೋಳಂಬಳ್ಳಿಯ ಅಜ್ಜನ ಮನೆ, ಕೊಡೇರಿಯ ಕಡಲ ತೀರ, ವರ್ಷಕ್ಕೆ ಒಂದೆರಡು ಬಾರಿ ಶ್ರವಣಬೆಳಗೊಳದಲ್ಲಿದ್ದ ಅಮ್ಮನ ಮನೆ, ಗೆಳೆಯರೊಂದಿಗೆ ಆಟ, ಆಗಾಗ ಬರುತ್ತಿದ್ದ ಮಾರಣಕಟ್ಟೆ–ಸಾಲಿಗ್ರಾಮ ಮೇಳಗಳ ಆಟ, ಕಿರಿಮಂಜೇಶ್ವರದ ಹಬ್ಬ... ಸ್ವಚ್ಛಂದ ಬದುಕಿಗೆ ಯಾವುದೇ ಅಡೆತಡೆಗಳು ಇರಲಿಲ್ಲ.

ಆದರೀಗ ಪ್ರತಿ ದಿನ ಬೆಳಿಗ್ಗೆ ಎರಡು ಕಿಲೋಮೀಟರ್ ಬರಿಗಾಲಲ್ಲಿ ನಡೆದುಕೊಂಡು ಹೋಗಿ ಕಂಭದಕೋಣೆ ಶಾಲೆಗೆ ಹೋಗಬೇಕು. ಬೆಳಿಗ್ಗೆಯಿಂದ ಸಂಜೆಯವರೆಗೆ ಆ ಬಂದೀಖಾನೆಯಲ್ಲಿ ಇದ್ದು ಸಂಜೆ ಮತ್ತೆ ಎರಡು ಕಿಲೋಮೀಟರ್ ನಡೆದುಕೊಂಡು ವಾಪಸು ಬರಬೇಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಅಪ್ಪ–ಅಮ್ಮ ಮತ್ತು ನಮ್ಮ ಹೊಟೇಲ್‌ನಿಂದ ದೂರವಿರುವ ಹಿಂಸೆ. ದಿನವಿಡಿ ಆಟವಾಡಲು ಆಗುವುದಿಲ್ಲ!

ಮೊದಲ ದಿನ ಶಾಲೆಗೆ ಹೋಗಲು ಎಲ್ಲ ತಯಾರಿಯಾದ ಮೇಲೆ, ‘‘ನಾನ ಶಾಲೀಗೆ ಹೋತಿಲ್ಲ’’ ಎಂದು ದೊಡ್ಡದಾಗಿ ಬೊಬ್ಬೆ ಹಾಕಿ ನಮ್ಮ ಹೊಟೇಲ್–ಮನೆಯ ಒಳಗೆ ಹೋಗಿ ಅಡಗಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದೆ. ಅಪ್ಪ–ಅಮ್ಮ ಮತ್ತು ಆ ಸಂದರ್ಭದಲ್ಲಿ ಅಲ್ಲಿದ್ದ ಯಾರು ಏನೇ ಹೇಳಿದರೂ, ನಾನಂತೂ ಶಾಲೆಗೆ ಹೋಗಲು ಸುತಾರಾಂ ಒಪ್ಪಲಿಲ್ಲ. ಕ್ಷಣದಿಂದ, ಕ್ಷಣಕ್ಕೆ ನನ್ನ ಹಾರಾಟ–ಚೀರಾಟ ಹೆಚ್ಚಾಗುತ್ತಲೇ ಹೋಯಿತು.

ಆಗ ಎದುರಿಗೆ ಬಂದು ನಿಂತದ್ದು ಲಲೀತಾ ಟೀಚರ್!
ಕಂಬಂಧಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಲಲೀತಾ ಟೀಚರ್ ಮನೆ ಇದ್ದದ್ದು ಕಿರಿಮಂಜೇಶ್ವರದಲ್ಲಿ. ಪ್ರತಿ ದಿನ ಬೆಳಿಗ್ಗೆ ಐದು ಮತ್ತು ಸಂಜೆ ಐದು ಕಿಲೋಮೀಟರ್ ನಡೆದೇ ಶಾಲೆಗೆ ಬಂದು ಹೋಗುತ್ತಿದ್ದ ಅವರನ್ನು ಆಗಾಗ ನಾನು ಕಂಡ ನೆನಪಿತ್ತು.

ಪ್ರತಿದಿನ ಎರಡು ಬಾರಿ ನಮ್ಮ ಹೋಟೆಲ್–ಮನೆಯ ಮುಂದೆ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಹಾದು ಹೋಗುತ್ತಿದ್ದ ಎತ್ತರದ ವ್ಯಕ್ತಿತ್ವದ, ಉದ್ದ ಜಡೆಯ, ಕೃಷ್ಣ ವರ್ಣದ, ಸದಾ ನಗುಮುಖದ ಲಲೀತಾ ಟೀಚರ್ ಆಗಾಗ, ‘‘ಎಂತ ಮಾಣ್ಯಾ?’’ ಎಂದು ಪ್ರೀತಿ ಸೂಸಿ ಮುಂದಡಿಯಿಡುತ್ತಿದ್ದರು. ಆವತ್ತು ಅದೇ ಲಲೀತಾ ಟೀಚರ್ ನನ್ನೆದುರು ಬಂದು ನಿಂತಿದ್ದರು.

‘‘ಮಾಣ್ಯಾ ನೀ ಮರ್ಕೂದೂ ಎಂತಕೆ? ಹೆಣ್ಮಕ್ಕಳ ಕಂಡಗೆ ಆಡ್ಬೇಡ. ನಾನೇ ನಿನ್ನ ದೀನಾ ಶಾಲಿಗೆ ಕರ್ಕಂಡ ಹೋತೆ. ದಿನಾ ನನ್ನೊಟ್ಟಿಗೆ ಶಾಲೀಗೆ ಬಾ’’ ಎಂದು ಸುಮಾರು ಅರ್ಧ ಗಂಟೆ ರಮಿಸಿದರು. ಕೊನೆಗೂ ಒಲ್ಲದ ಮನಸ್ಸಿನಿಂದ ಮನೆಯ ಹೊಸ್ತಿಲು ದಾಟಿದ ಸಪೂರ ಕಡ್ಡಿಯಂತಿದ್ದ ನನ್ನನ್ನು ಸೊಂಟಕ್ಕೆ ಹಾಕಿಕೊಂಡ ಲಲೀತಾ ಟೀಚರ್ ಶಾಲೆಯತ್ತ ಹೆಜ್ಜೆ ಹಾಕಿದರು.

ಅವರ ಸೊಂಟಕ್ಕೆ ಅಂಟಿಕೊಂಡು ಕೂತಿದ್ದ ನನ್ನ ಹೆಗಲಲ್ಲಿ ಶಾಲೆಯ ಚೀಲ ಜೋತಾಡುತ್ತಿತ್ತು. ಅದರೊಳಗೊಂದು ಕಪ್ಪು ಸ್ಲೇಟು. ಹಿಂದೆ ಸುಮಕ್ಕ, ಜಯಂತಿಯಕ್ಕ, ವಸಂತಿಯಕ್ಕ, ಸುಧಾಕರ ಮತ್ತು ಉಳಿದವರ ಪಡೆ.

ನಮ್ಮ ಕಳೀನಬಾಗಿಲಿನ ಹೋಟೆಲ್–ಮನೆ ಮತ್ತು ಕಂಭದಕೋಣೆ ಪೇಟೆಗಿಂತ ಮೊದಲಿದ್ದ ಶಾಲೆಯ ನಡುವೆ ಹರಿಯುತ್ತಿದ್ದ ಎಡಮಾವಿನ ಹೊಳೆಗೆ ಎರಡು ಸೇತುವೆಗಳಿದ್ದವು. ಒಂದು ಸ್ವತಃ ಮಹಾತ್ಮ ಗಾಂಧಿಯೇ ನಡೆದು ಹೋಗಿದ್ದರು ಎಂಬ ದಂತಕಥೆಯ ಹಣೆಪಟ್ಟಿ ಕಟ್ಟಿಕೊಂಡಿದ್ದ ಹಳೆ ಸೇತುವೆ. ಇನ್ನೊಂದು ಅದರ ಎಡಕ್ಕೆ ಕಟ್ಟಿದ್ದ ಹೊಸ ಸೇತುವೆ. ಸಾಮಾನ್ಯವಾಗಿ ನಡೆದುಹೋಗುವವರು, ಸೈಕಲ್ ಸವಾರರು ಹಳೆಯ ಸೇತುವೆಯನ್ನೇ ಬಳಸುತ್ತಿದ್ದರು. ಏಕೆಂದರೆ ರಾಷ್ಟ್ರೀಯ ಹೆದ್ದಾರಿಯಾಗಿದ್ದ ಹೊಸ ಸೇತುವೆಯ ಮೇಲೆ ಲಾರಿ–ಬಸ್‌ಗಳ ಅಬ್ಬರವಿರುತ್ತಿತ್ತು.

ಕೃಷ್ಣಯ್ಯರ ಹೋಟೆಲ್–ಮನೆ, ಅರೆಕಲ್ಲು ಗೋವಿಂದನ ಮನೆ, ಹನುಮಂತ ದೇವಸ್ಥಾನ, ಹಳೆಯ ಸೇತುವೆ ದಾಟಿ, ಪುಟ್ಟಯ್ಯ ಕಾರಂತರ ಮನೆಯನ್ನು ಹಾದು ನಮ್ಮ ಪಡೆ ಕಂಭದಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಲುಪುವವರೆಗೆ ನನ್ನನ್ನು ಎತ್ತಿಕೊಂಡೇ ಸಾಗಿದ ಲಲೀತಾ ಟೀಚರ್ ಒಂದನೇ ತರಗತಿಯೊಳಗೆ ಕರೆದುಕೊಂಡು ಹೋಗಿ ಕೂರಿಸಿದರು.

ನಾನು–ಸುಧಾಕರ ಒಟ್ಟಿಗೆ ನೆಲದ ಮೇಲೆ ಕೂತು ಎದುರಿದ್ದ ಪುಟಾಣಿ ಮರದ ಡೆಸ್ಕ್ ಮೇಲೆ ನಮ್ಮ ಸ್ಲೇಟುಗಳನ್ನು ಇಟ್ಟು ಅ,ಆ,ಇ,ಈ... ಕಲಿಯುವ ಮೊದಲ ಯತ್ನಕ್ಕೆ ಕೈಹಾಕಿದೆವು. ಸುತ್ತಲೂ ನಮ್ಮಂತೆಯೇ ಮೊದಲ ದಿನ ಶಾಲೆಗೆ ಬಂದ, ಕಣ್ಣೀರು ಹರಿಸುತ್ತ ಕೂತ ಸ್ನೇಹಿತರ ದೊಡ್ಡ ಗುಂಪೇ ಇತ್ತು. ಪುಣ್ಯಕ್ಕೆ ಲಲೀತಾ ಟೀಚರ್ ಅವರೇ ನಮ್ಮ ಕ್ಲಾಸ್ ಟೀಚರ್ ಆಗಿದ್ದರಿಂದ ನಮ್ಮಿಬ್ಬರ ಬದುಕು ಸುಲಭವಾಯಿತು.

ನಂತರ ಬಿಸಿಲಿರಲಿ, ಮಳೆಯಿರಲಿ, ಪ್ರತಿದಿನ ಲಲೀತಾ ಟೀಚರ್ ಅವರೇ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಒಂದಿಷ್ಟು ದಿನ ನನ್ನನ್ನು ಎತ್ತಿಕೊಂಡು ಹೋದ ಅವರು, ಯಾವುದೇ ಕಾರಣಕ್ಕೆ ನಾನು ಶಾಲೆಗೆ ಚಕ್ಕರ್ ಹೊಡೆಯದಂತೆ ನೋಡಿಕೊಂಡರು. ಕ್ರಮೇಣ ಅವರ ಕೈಹಿಡಿದು ಶಾಲೆಗೆ ಹೋಗಲಾರಂಭಿಸಿದೆ. ಶಾಲೆಯಲ್ಲಿ ಕೂಡ ಅವರೇ ಕೈಹಿಡಿದು ಅಕ್ಷರಗಳನ್ನು ಕಲಿಸಿದರು. ಬದುಕಿಗೆ ಮುನ್ನುಡಿ ಬರೆದರು.

ಆಗಿನ್ನೂ ಒಂದನೇ ತರಗತಿಯಲ್ಲಿಯೇ ಇದ್ದೆವು. ಜೀವದ ಗೆಳೆಯ ಸುಧಾಕರ ಮೂರ್ನಾಲ್ಕು ದಿನ ಶಾಲೆಗೆ ಬಂದಿರಲಿಲ್ಲ. ಒಂದು ದಿನ ಮಧ್ಯಾಹ್ನ ಇದ್ದಕ್ಕಿದ್ದಂತೆ ಜಯಂತಿಯಕ್ಕ, ವಸಂತಿಯಕ್ಕ, ಸುಮಕ್ಕ ಮತ್ತು ನನ್ನನ್ನು ಶಾಲೆಯಿಂದ ಬಲವಂತವಾಗಿ ಮನೆಗೆ ಕರೆದುಕೊಂಡು ಹೋದರು. ಕಾರಂತರ ಮನೆಯ ಮೆಟ್ಟಿಲು ಹತ್ತಿದ ಮೇಲೆ ಗೊತ್ತಾಯ್ತು ‘ಸುಧಾಕರ ಇನ್ನಿಲ್ಲ’ ಎಂದು.

ಜ್ವರ ಬಂದ ಕಾರಣ ಕುಂದಾಪುರದ ದೊಡ್ಡ ಆಸ್ಪತ್ರೆ ಸೇರಿದ್ದ ಸುಧಾಕರ ಜೀವಂತವಾಗಿ ಮನೆಗೆ ಮರಳಿ ಬಂದಿರಲಿಲ್ಲ. ಆ ಸಾವು ನನ್ನ ಬದುಕಲ್ಲಿ ಆದ ಮೊತ್ತಮೊದಲ ಆಘಾತ! ಅಂತಹ ಸಂದರ್ಭದಲ್ಲಿ ಎಳೆಯ ಜೀವಕ್ಕೆ ಆಸರೆಯಾಗಿದ್ದು ಲಲೀತಾ ಟೀಚರ್ ಪ್ರೀತಿ, ಒಲವು. ಅವರು ನನ್ನೊಬ್ಬನ ಬದುಕಿಗೆ ಮಾತ್ರವಲ್ಲ, ನನ್ನಂತಹ ಹಲವರ ಬದುಕಿಗೆ ಬೆಳಕಾಗಿದ್ದರು.

ಅದೂ, ವೈಯಕ್ತಿಕ ಜೀವನದಲ್ಲಿ ಹಗಲು–ರಾತ್ರಿ ಹೋರಾಟ ನಡೆಸುತ್ತಾ...
ಕಿರಿಮಂಜೇಶ್ವರದ ಯಜ್ಞನಾರಾಯಣ ಮಧ್ಯಸ್ಥ ದಂಪತಿಗೆ ಒಟ್ಟು 5 ಮಕ್ಕಳು. ನಾಲ್ಕು ಹೆಣ್ಣು. ಆ ಪೈಕಿ ಲಲಿತಾ ಟೀಚರ್ ಎರಡನೆಯವರು. ಒಂದು ಗಂಡು. ಗೇಣಿ ಒಕ್ಕಲಾಗಿದ್ದ ಆ ಕುಟುಂಬ ಬಡತನದ ಬೇಗುದಿಯ ನಡುವೆಯೇ ತಲೆಯೆತ್ತಿ ನಿಲ್ಲುವ ಯತ್ನದಲ್ಲಿತ್ತು. ಅಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಯ ಅಧ್ಯಾಪಕಿಯಾಗಿದ್ದ ಲಲೀತಾ ಟೀಚರ್ ಅವರೇ ಇಡೀ ಮನೆಯ ಜವಾಬ್ದಾರಿ ಹೊತ್ತಿದ್ದರು.

ಬೆಳಿಗ್ಗೆ ಸೂರ್ಯ ಮೂಡುವ ಮೊದಲೇ ಗದ್ದೆಗಿಳಿದು, ಎತ್ತುಗಳಿಗೆ ನೊಗ ಕಟ್ಟಿ, ಸ್ವತಃ ತಾವೇ ಹೂಡಿ, ಕರಗುಂಜಿ ಬೀಜ ಹಾಕಿ, ಮನೆ ಕೆಲಸ ಮುಗಿಸಿ ಶಾಲೆಗೆ ಹೊರಡುತ್ತಿದ್ದ ಲಲೀತಾ ಟೀಚರ್ ಜೀವನ ಪ್ರೀತಿಯ ಸಂಕೇತವಾಗಿದ್ದವರು.

ಆಗಿನ್ನೂ ಮೂವತ್ತೂ ದಾಟದ ಲಲೀತಾ ಟೀಚರ್ ಮನೆಯೊಳಗಿನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ, ಎದುರಿರುವ ಪ್ರತಿಯೊಂದು ಮಗು ಕೂಡ ಶಾಲೆ ಸೇರಿ ವಿದ್ಯಾವಂತನಾಗಬೇಕು ಎನ್ನುವ ಹಂಬಲವಿದ್ದ ದೊಡ್ಡ ಮನಸ್ಸು–ಹೃದಯದ ಜೀವಿ. ಆಗೆಲ್ಲ ‘ನಲಿ–ಕಲಿ’, ‘ಸರ್ವ ಶಿಕ್ಷಣ ಅಭಿಯಾನ’ದಂತಹ ಯಾವುದೇ ಸರ್ಕಾರಿ ಯೋಜನೆಗಳು ಇರಲಿಲ್ಲ. ಏನಿದ್ದರೂ ಆಯಾ ಶಾಲೆಗಳ ಅಧ್ಯಾಪಕರ ವೈಯಕ್ತಿಕ ಆಸಕ್ತಿ.

ನಮ್ಮ ಅದೃಷ್ಟವೋ ಏನೋ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಅತ್ಯುತ್ತಮ ಶೈಕ್ಷಣಿಕ ವಾತಾವರಣವಿತ್ತು. ಅದಕ್ಕೆ ಕಾರಣ ಲಲಿತಾ ಟೀಚರ್ ಅವರಂತಹ ಸಾವಿರಾರು ಶಿಕ್ಷಕರು. ಅವರ್‍್ಯಾರಿಗೂ ಯಾವುದೇ ಪೋಷಕರಿಂದ ವಿಶೇಷ ಭತ್ಯೆ ಆಥವಾ ಹಣ ಸಹಾಯ ದೊರಕುತ್ತಿರಲಿಲ್ಲ. ಆದರೂ, ಬಡವ–ಬಲ್ಲಿದರೆನ್ನದೇ ಎಲ್ಲ ಮಕ್ಕಳು ಶಾಲೆಗೆ ಸೇರಬೇಕು, ವಿದ್ಯಾವಂತರಾಗಿ ಬೆಳೆದು ನಿಲ್ಲಬೇಕು ಎಂಬ ಮಹದಾಸೆಯಿಟ್ಟುಕೊಂಡಿದ್ದರು.

ಅದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದರು ಮತ್ತು ಜೀವನವನ್ನೇ ಮುಡಿಪಾಗಿಟ್ಟಿದ್ದರು. ನಮ್ಮ ಆಗಿನ ಕಂಭದಕೋಣೆ ಶಾಲೆಯನ್ನೇ ತೆಗೆದುಕೊಂಡರೆ ಲಲೀತಾ ಟೀಚರ್ ಅವರಂತೆಯೇ ಗಿರಿಜಾ ಟೀಚರ್, ದಾಕ್ಷಾಯಣಿ ಟೀಚರ್, ಸದಾಶಿವ ಮಾಸ್ಟ್ರು, ಶಂಕರ ಮಾಸ್ಟ್ರು, ಅನಂತ ಮಾಸ್ಟ್ರು ಮುಂತಾದ ಘಟಾನುಘಟಿಗಳಿದ್ದರು. ಅಪ್ಪಟ ಸರ್ಕಾರಿ ಶಾಲೆಯ ಮೇಷ್ಟರುಗಳಾಗಿದ್ದ ಇವರೆಲ್ಲರ ಬದುಕಿನ ಒಂದೇ ಗುರಿ, ವಿದ್ಯಾರ್ಥಿಗಳ ಏಳಿಗೆಯಾಗಿತ್ತು.

ಲಲೀತಾ ಟೀಚರ್ ಮತ್ತು ಅವರ ಪ್ರೀತಿಯ ನಡುವೆ ಅರಳಿದ ನಾನು ಎರಡು ಸಂದರ್ಭಗಳಲ್ಲಿ ಕಂಭದಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬಿಟ್ಟು ಮತ್ತೆ ಅಲ್ಲಿಗೇ ಮರಳಿದ್ದೆ. ಕಾರಣಾಂತರಗಳಿಂದ ಅಜ್ಜ–ಅಜ್ಜಿಯ ಜೊತೆ ಶ್ರವಣಬೆಳಗೊಳದಲ್ಲಿ ಮೂರನೇ ತರಗತಿ ಓದಿದೆ. ಐದನೇ ತರಗತಿ ಕೋಲಾರದದಲ್ಲಿ ಓದಬೇಕಾಯಿತು. ಆ ಎರಡು ವರ್ಷಗಳನ್ನು ಬಿಟ್ಟರೆ ಉಳಿದಂತೆ ಐದು ವರ್ಷಗಳ ಕಾಲ ನನ್ನ ಬದುಕಿಗೆ ಆಸರೆಯಾಗಿದ್ದು ಲಲೀತಾ ಟೀಚರ್ ಮತ್ತು ಉಳಿದ ಅಧ್ಯಾಪಕರು.

ಕಂಭದಕೋಣೆ ಹಿರಿಯ ಪ್ರಾಥಮಿಕ ಶಾಲೆಯಿಂದ, ಕಂಭದಕೋಣೆ ಸರ್ಕಾರಿ ಪ್ರೌಢಶಾಲೆ, ನಾವುಂದದ ಸರ್ಕಾರಿ ಪದವಿ ಪೂರ್ವ ಕಾಲೇಜು, ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಕಾಲೇಜು, ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯ, ಲಂಡನ್‌ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯ... ಹೀಗೆ ಬದುಕು ಕರೆದುಕೊಂಡ ಹೋದೆಡೆಯಲ್ಲಾ ಹೆಜ್ಜೆ ಹಾಕುತ್ತಾ ಸಾಗಿದೆ. ನಾವುಂದ ಬಿಡುವವರೆಗೆ ಲಲಿತಾ ಟೀಚರ್ ಜೊತೆ ಸಂಪರ್ಕ ಇತ್ತು. ಪ್ರತಿ ದಿನ ಅವರ ಮನೆಯ ಮುಂದೆಯೇ ಹಾದು ಪಿಯುಸಿ ಓದಲು ಹೋಗುತ್ತಿದ್ದೆವು. ಆಗಾಗ ಸಿಗುತ್ತಿದ್ದರು. ಅಷ್ಟೇ ಅಕ್ಕರೆ, ಪ್ರೀತಿ–ವಿಶ್ವಾಸದಿಂದ ವಿಚಾರಿಸುತ್ತಿದ್ದರು.

ಆದರೆ, ಮೂವತ್ತೊಂದು ವರ್ಷಗಳ ಹಿಂದೆ ನಾಗೂರು ಬಿಟ್ಟು ಬೆಂಗಳೂರು ತಲುಪಿದ ಮೇಲೆ ಅವರೊಂದಿಗಿನ ಸಂಪರ್ಕ ಅಕ್ಷರಶಃ ಕಡಿದುಹೋಯಿತು. ಆದರೆ, ಎದೆಯಾಳದಲ್ಲಿ ಭದ್ರವಾಗಿ ಬೇರೂರಿ ನಿಂತಿರುವ ಲಲಿತಾ ಟೀಚರ್ ಸದಾ ನನ್ನೊಂದಿಗೆ ಉಳಿದುಬಿಟ್ಟರು. ಅವರನ್ನು ಒಮ್ಮೆ ಹೋಗಿ ನೋಡಿ ಬರಬೇಕು ಎಂದು ಹಲವು ಬಾರಿ ಅನಿಸಿದರೂ, ನಾನು ಗಟ್ಟಿ ನಿರ್ಧಾರ ಮಾಡಿ, ಹೋಗಿ ಅವರನ್ನು ಭೇಟಿಯಾಗಲಿಲ್ಲ.

ಸುಮಾರು ಹನ್ನೆರಡು ವರ್ಷಗಳ ಹಿಂದೆ ಒಂದು ದಿನ ಅಪ್ಪಯ್ಯ ‘‘ಲಲಿತಾ ಟೀಚರ್ ತೀರ್ಕಂಡ್ರಂಬ್ರ ಮಾರಾಯ’’ ಎಂದು ಸುದ್ದಿ ತಿಳಿಸಿದಾಗ ಹುಟ್ಟಿಕೊಂಡ ಆ ಭಯಂಕರ ಪಾಪಪ್ರಜ್ಞೆ ಇದುವರೆಗೆ ನನ್ನನ್ನು ಕಾಡಿದ್ದು ಮತ್ತು ಬದುಕಿರುವವರೆಗೂ ನನ್ನನ್ನು ಕಾಡುವುದಂತೂ ನಿತ್ಯಸತ್ಯ.

ತನ್ನಕ್ಕ, ಇಬ್ಬರು ತಂಗಿಯರು, ಒಬ್ಬ ತಮ್ಮ, ನನ್ನಂತಹ ಸಾವಿರಾರು ಮಕ್ಕಳು... ಎಲ್ಲರಿಗೂ ಬದುಕಲ್ಲಿ ನೆಲೆ ಕಲ್ಪಿಸಿದ ಲಲೀತಾ ಟೀಚರ್ ಅವರಿಗೆ ಕ್ಯಾನ್ಸರ್ ಅಂಟಿಕೊಂಡಿತು. ಜವಾಬ್ದಾರಿಗಳ ಕಾರಣಗಳಿಂದಾಗಿ ತಡವಾಗಿ ಮದುವೆಯಾಗಿದ್ದ ಅವರು ಬಹುಬೇಗ ಪತಿಯನ್ನೂ ಕೂಡ ಕಳೆದುಕೊಂಡಿದ್ದರು. ಕೊನೆಗೆ 49ನೇ ವಯಸ್ಸಿನಲ್ಲಿ ಕ್ಯಾನ್ಸರ್ ಅವರನ್ನು ನುಂಗಿ ಹಾಕಿದಾಗ ಉಳಿದಿದ್ದು 18 ವರ್ಷ ವಯಸ್ಸಿನ ಎಳೆಯ ಮಗಳು ಶುಭಾ ಮತ್ತು ನನ್ನಂತಹ ಸಾವಿರಾರು ಅನಾಥ ಮಕ್ಕಳು.

‘‘ಅಮ್ಮನ ಕೊನೆಯ ದಿನ. ಇನ್ನ ಏನೂ ಪ್ರಯೋಜನ ಇಲ್ಲ. ‘ಮನೀಗೆ ತಗಂಡ ಹೋಗಿ’ ಅಂದೇಳಿ ಡಾಕ್ಟ್ರ ಹೇಳ್ರ. ಕುಂದಾಪುರದ ಯಡ್ತರೆ ನರ್ಸಿಂಗ್ ಹೋಮ್‌ನಿಂದ ಅವ್ಳನ್ನ ಕಿರಿಮಂಜೇಶ್ವರ ಮನೀಗೆ ತಗಂಡ ಹೋದ್ವಿ. ಅವ್ಳನ್ನ ಈ ಬದುಕಿಂದ ಕಳ್ಸಿ ಕೊಡೂಕೆ ಊರಿಗೆ ಊರೇ ಬಂದಿತ್ತ. ನೂರಾರ ಜನ. ಅಮ್ಮನ ಎದ್ರು ಕೂತ ಸದಾಶಿವ ಮಾಸ್ಟ್ರ ಗೊಳೋ ಅಂದ ಮರ್ಕತಿದ್ರ. ಸದಾಶಿವ ಮಾಸ್ಟ್ರ ಕೈ ಹಿಡಿದ ಅವ್ಳ, ‘ನೀವೆಂತಕೆ ಮರಕ್ತ್ರಿ. ನಂಗೆಂತೂ ಆಯಿಲ್ಲ’ ಎಂದ ಸಮಾಧಾನ ಮಾಡ್ತಿದ್ಲ’’.

ಇತ್ತೀಚೆಗೆ ಫೋನ್‌ನಲ್ಲಿ ಮಾತನಾಡಿದ ಶುಭಾ, ಲಲೀತಾ ಟೀಚರ್ ಬದುಕಿನ ಕೊನೆಯ ಕ್ಷಣಗಳನ್ನು ವಿವರಿಸಿದಾಗ ಕಣ್ಣೀರು ಉಕ್ಕಿಬಂದಿತ್ತು. ಎಲ್ಲೋ ನನ್ನದಲ್ಲದ ಊರೊಂದರ ಹೊಟೇಲ್ ಕೋಣೆಯಲ್ಲಿ ಒಬ್ಬಂಟಿಯಾಗಿ ಕೂತಿದ್ದವ ಮನಸಾರೆ ಅತ್ತಿದ್ದೆ. ಆಗ ಅನ್ನಿಸಿದ್ದು,
‘‘ಲಲೀತಾ ಟೀಚರ್ ಈವತ್ತ ನಂಗೆ ಒಂದ ನಾಲ್ಕ ಅಕ್ಷರ ಬರೂಕೆ ಬತ್ತತ್ತ ಅಂದ್ರೆ, ಅದಕ್ಕೆ ನೀವೇ ಕಾರಣ. ಆವತ್ತ ನೀವ ನನ್ನನ್ನ ಸೊಂಟದ ಮೇಲೆ ಹಾಕ್ಕಂಡ ಶಾಲೀಗೆ ಕರ್ಕಂಡ ಹೋಯ್ದಿದ್ರೆ, ಆ ಪ್ರೀತಿ ತೋರ್ಸಿ ಅ,ಆ,ಇ,ಈ... ಕಲಿಸ್ದೆ ಹೋಯ್ರೆ, ಈವತ್ತ ನಾನ ಹೀಂಗ ಇರ್ತಿರ್ಲಿಲ್ಲ. ಈವತ್ತ ನಾನೇನಾದ್ರೂ ಆಯಿದ್ರೆ ಅದಕ್ಕೆ ನೀವೇ ಕಾರಣ.

ಎಷ್ಟೋ ಬಾರಿ ಊರಿಗೆ ಬಂದಳಿಕೆ ನಿಮ್ಮನ್ನ ಬಂದ ಕಾಣ್ಕ ಅಂದ ಅನ್ನಿಸ್ತಿತ್ತ. ಆರೆ, ಬಂದ ಕಾಣ್ಲಿಲ್ಲ. ನಂಗೊತ್ತ, ನಿಮ್ಗೆ ನನ್ನ ಮ್ಯಾಲೇ ಭಾರಿ ಸಿಟ್ಟಿತ್ತ ಅಂದ. ಆರೆ, ಆ ಸಿಟ್ಟ ಇಟ್ಕಂಡೇ ನೀವ ನನ್ನನ್ನ ಭಾರಿ ಪ್ರೀತಿ ಕೂಡ ಮಾಡ್ತ್ರಿ ಅಂದ ಕೂಡ ಗೊತ್ತಿತ್ತ. ನೀವ ಈ ಪ್ರಪಂಚ ಬಿಟ್ಟ ಹೋಯಿ 12 ವರ್ಷ ಆಯ್ತ. ನೀವು ಎಲ್ಲೆ ಇದ್ರೂ, ಹ್ಯಾಂಗೆ ಇದ್ರೂ ನನ್ನ ಮ್ಯಾಲೆ ಇಪ್ಪ ನಿಮ್ಮ ಋಣ ಬಹಳ ದೊಡ್ಡದಿತ್ತ. ನಿಮ್ಮ ಹತ್ರ ನಾನ ಕೆಂಡ್ಕಂಬ್ದ ಇಷ್ಟೇ. ಸಾಧ್ಯ ಆರೆ, ನಿಮ್ಮ ಈ ಮಗುನ ಒಂದ ಸಾರಿ ಕ್ಷಮ್ಸಿ ಬಿಡಿ’’.

ಈ ಬರಹದೊಂದಿಗೆ ‘ಮುಸಾಫಿರ್‌’ ಅಂಕಣ ಕೊನೆಗೊಳ್ಳುತ್ತಿದೆ.
–ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT