ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಚಳವಳಿಗೂ ನಾನು ಬದ್ಧನಲ್ಲ: ಭೈರಪ್ಪ

ನಮ್ಮ ದೇಶ–ಸಂಸ್ಕೃತಿಯನ್ನು ಇತಿಹಾಸ ಒಂದು ಮಾಡಿದರೆ ರಾಜಕಾರಣಿಗಳು ಒಡೆದು ಹಾಕಿದ್ದಾರೆ
Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ

ಬಾಗಲಕೋಟೆ:  ‘ಮಾರ್ಕ್ಸಿಸ್ಟರು ಹಾಗೂ ಕೆಲವು ವಿಮರ್ಶಕರು ನನ್ನದು ಜೀವವಿರೋಧಿ ಸಾಹಿತ್ಯ ಎನ್ನುತ್ತಾರೆ. ಹಾಗಾದರೆ ಒಂದು ರೂಪಾಯಿಗೆ ಕೆ.ಜಿ ಅಕ್ಕಿ ಕೊಡುವುದು ಜೀವಪರವಾದರೆ, ಜನರಿಗೆ ಕೆಲಸ ಕೊಟ್ಟು ಕಷ್ಟಪಟ್ಟು ದುಡಿಯುವಂತೆ ಹೇಳುವುದು ಜೀವವಿರೋಧಿಯೇ’ ಎಂದು ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಪ್ರಶ್ನಿಸಿದರು.

ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಸಂವಾದದ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ರೀತಿ ಬಿಂಬಿಸುವುದು ನನಗೆ ಸಂತಸದ ವಿಚಾರ. ನನ್ನ ಸಾಹಿತ್ಯ ಜೀವ ವಿರೋಧಿಯಾಗಿದ್ದರೆ ಇಷ್ಟೊಂದು ಲಕ್ಷ ಮಂದಿ ಪುಸ್ತಕವನ್ನು ಕೊಂಡು ಓದುತ್ತಿರಲಿಲ್ಲ. ಹಾಗೆ ಮಾಡಲು ಓದುಗರು ಮೂರ್ಖರೂ ಅಲ್ಲ’ ಎಂದರು.

‘ಯಾವ ಚಳವಳಿಗೂ ನಾನು ಬದ್ಧನಲ್ಲ. ಜೀವನದಲ್ಲಿ ಬರುವುದನ್ನು ನಿರ್ಲಿಪ್ತವಾಗಿ ನೋಡುತ್ತೇನೆ. ಬರವಣಿಗೆ ದೃಷ್ಟಿಯಿಂದ ಅದು ಹಿತಕಾರಿ. ಉಪನಿಷತ್ತಿನಲ್ಲಿ ಹೇಳುವಂತೆ, ಬ್ರಹ್ಮಾಂಡವನ್ನು ದೂರದಿಂದ ನೋಡುವ ಪಕ್ಷಿಯಂತೆ ಸುತ್ತಲಿನ ವಿದ್ಯಮಾನ ಗಮನಿಸುತ್ತೇನೆ’ ಎಂದು ಹೇಳಿದರು.

‘ಸಾಹಿತ್ಯ ರಚನೆ ಸಾಮೂಹಿಕ ಕೃಷಿಯಲ್ಲ. ಲೇಖಕನಿಗೆ ಸ್ವಂತ ಆಲೋಚನೆ, ಪ್ರಾಮಾಣಿಕತೆ ಇರಬೇಕು; ಚಳವಳಿಗೆ ತಕ್ಕಂತೆ ಕಾದಂಬರಿ ಬರೆದಾಗ ಎಲ್ಲೆಲ್ಲೂ ಜೈಕಾರ ಕೇಳುತ್ತದೆ. ಚಳವಳಿಯ ವಿಚಾರ ಬಿಟ್ಟು ಬೇರೆ ಬರೆದರೆ ಧಿಕ್ಕಾರ ಮೊಳಗಿ ಸಾಮಾಜಿಕವಾಗಿ ಒತ್ತಡ ಎದುರಿಸಬೇಕಾಗುತ್ತದೆ ಎಂಬ ಎಚ್ಚರ ಲೇಖಕನಿಗೆ ಇರಬೇಕು’ ಎಂದು ಅಭಿಪ್ರಾಯಪಟ್ಟರು.

70 ವರ್ಷಗಳಲ್ಲಿ ಆಗಿದ್ದು ನೈತಿಕತೆಯ ನಾಶ: ರಷ್ಯಾ ಕ್ರಾಂತಿಯ ನಂತರ ಜಗತ್ತಿನ ಇತರೆಡೆ ಮಾರ್ಕ್ಸಿಸ್ಟರು ತಮ್ಮ ಸಿದ್ಧಾಂತ ಹೇರ ತೊಡಗಿದ್ದರು. ನಮ್ಮ ದೇಶದಲ್ಲಿ ಇದಕ್ಕೆ ಪ್ರಧಾನಿ ಜವಾಹರಲಾಲ್‌ ನೆಹರೂ ಕೈ ಜೋಡಿಸಿದರು. ಮುಂದೆ ಇಂದಿರಾಗಾಂಧಿ ಸಂಸ್ಥಾ ಕಾಂಗ್ರೆಸ್‌ ನಾಯಕರ ವಿರೋಧ ಎದುರಿಸಲು ಕಮ್ಯುನಿಸ್ಟರ ನೆರವು ಪಡೆದರು.

ಈ ಅವಕಾಶ ಬಳಸಿಕೊಂಡು ಸರ್ಕಾರದ ಆಯಕಟ್ಟಿನ ಜಾಗ ಆಕ್ರಮಿಸಿಕೊಂಡ ಕಮ್ಯುನಿಸ್ಟರು ಎಲ್ಲೆಡೆ ಮಾರ್ಕ್ಸ್‌ ಸಿದ್ಧಾಂತ ಹರಡತೊಡಗಿದರು. ಬಂಡವಾಳಶಾಹಿಗಳು, ಖಾಸಗಿ ಉದ್ಯಮಿಗಳೆಂದರೆ ಪಾಪಿಗಳು, ಬಡವರ ರಕ್ತ ಹೀರುವವರು ಎಂಬ ಮನೋಭಾವ ಬೆಳೆದು ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂಬ ಧೋರಣೆ ಬಲಿಯಿತು. ಇದು ದೇಶದಲ್ಲಿ ವೈಯಕ್ತಿಕ ಉದ್ಯಮ ಶೀಲತೆಯನ್ನು ತುಳಿದುಹಾಕಿತು’ ಎಂದರು.

‘ವ್ಯಾಪಾರಸ್ಥರು ತೆರಿಗೆ ಭಾರ ತಪ್ಪಿಸಿಕೊಳ್ಳಲು ರಾಮನ ಲೆಕ್ಕ–ಕೃಷ್ಣನ ಲೆಕ್ಕ ಆರಂಭಿಸಿ ಸಂಪತ್ತಿನ ಗುಡ್ಡೆ ಹಾಕಿದರು. ಈ ವಿಚಾರ ಗೊತ್ತಿದ್ದ ಆಕೆ ಆದಾಯ ತೆರಿಗೆ ಇಲಾಖೆ ಮೂಲಕ ಶ್ರೀಮಂತರನ್ನು ಬೆದರಿಸಿ ಅಕ್ರಮ ಸಂಪತ್ತಿನ ಅರ್ಧದಷ್ಟನ್ನು ಪಕ್ಷಕ್ಕೆ ದೇಣಿಗೆ ರೂಪದಲ್ಲಿ ಪಡೆಯ ತೊಡಗಿದರು. ಇದು ಅಪಾಯ ಎಂದು ಗ್ರಹಿಸಿದ ಧನಿಕರು ಹಣವನ್ನು ಸ್ವಿಸ್‌ ಬ್ಯಾಂಕ್‌ನಲ್ಲಿ ಶೇಖರಿಸತೊಡಗಿದರು’ ಎಂದರು.

‘ನೈತಿಕತೆಯ ರೂಪದಲ್ಲಿ ನಮ್ಮೊಳಗೆ ಸಮಾಜವಾದ ಅಂತರ್ಗತವಾಗಿತ್ತು. ಆದರೆ ಕಳೆದ 70 ವರ್ಷಗಳಲ್ಲಿ ಅದನ್ನು ನಾಶ ಮಾಡಲಾಗಿದೆ. ಬಡತನ ಶಾಪವಲ್ಲ. ಆಡಳಿತಗಾರರ ತಪ್ಪು ನಿರ್ವಹಣೆಯಿಂದ ಈ ಪರಿಸ್ಥಿತಿ ಎದುರಾಗಿದೆ. ಹೊಸ ಸರ್ಕಾರ ಆ ನೈತಿಕತೆಯನ್ನು ಬರೀ ಭಯದಿಂದ ಮೂಡಿಸಲಾಗುವುದಿಲ್ಲ. ಬಿಗಿ ಆಡಳಿತದಿಂದ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಮಾತಿನಿಂದ ಸೃಜನಶೀಲತೆಗೆ ಪೆಟ್ಟು
ಬರಹಗಾರ ತನ್ನ ಪಾಡಿಗೆ ತಾನು ಒಳಗೆ ಬೆಳೆಯಬೇಕು. ಹೆಚ್ಚು ಮಾತನಾಡಿದರೆ ತಾಜಾ ಚಿಂತನೆಗಳು ಒಡಮೂಡುವುದಿಲ್ಲ. ಸೃಜನಶೀಲತೆ ನಾಶವಾಗುತ್ತದೆ. ಬರವಣಿಗೆ ಹೊಸ ದಾರಿಯಲ್ಲಿ ಸಾಗುವುದಿಲ್ಲ. ಹಾಗಾಗಿ ಭಾಷಣ ಎಂದರೆ ತಮಗೆ ಅಲರ್ಜಿ ಎಂದು ಪ್ರಶ್ನೆಯೊಂದಕ್ಕೆ ಭೈರಪ್ಪ ಪ್ರತಿಕ್ರಿಯಿಸಿದರು.

‘ನಾನು ಸಾರ್ವಜನಿಕ ವ್ಯಕ್ತಿಯಲ್ಲ. ನನ್ನ ಮನೆಗೆ ಭಾಷಣಕ್ಕೆ ಕರೆಯಲು, ಮಾಧ್ಯಮಗಳಿಗೆ ಹೇಳಿಕೆ ನೀಡುವಂತೆ ಯಾರೇ ಬಂದರೂ ಒಪ್ಪಿಕೊಳ್ಳುವುದಿಲ್ಲ. ಮಾತಿನ ಚಟ ಹತ್ತಿದರೆ ಬಿಡಲು ಆಗುವುದಿಲ್ಲ. ಮನಸ್ಸಿನಲ್ಲಿ ಅಹಂ (ಇಗೊ) ತುಂಬಿಕೊಳ್ಳುತ್ತದೆ ಎಂದರು.

ರಾಜಕಾರಣಿ ತೋರಿಸಿದ ದಾರಿಯಲ್ಲಿ ಬರಹಗಾರ ನಡೆಯಬಾರದು. ಯಾರ ಹಂಗಿಗೂ ಬೀಳಬಾರದು. ಈ ಎಚ್ಚರಿಕೆ ಇಟ್ಟುಕೊಂಡರೆ ಗಟ್ಟಿ ಸಾಹಿತ್ಯ ರಚನೆ ಸಾಧ್ಯ. ನಮ್ಮ ದೇಶ–ಸಂಸ್ಕೃತಿಯನ್ನು ಇತಿಹಾಸ ಒಂದು ಮಾಡಿದರೆ ರಾಜಕಾರಣಿಗಳು ಒಡೆದು ಹಾಕಿದ್ದಾರೆ’ ಎಂದಾಗ ಜೋರಾಗಿ ಚಪ್ಪಾಳೆ ಮೊಳಗಿತು.
‘ನಾನು ಇವರ ಬಗ್ಗೆ ಹೇಳುತ್ತಿಲ್ಲ’ ಎಂದು ಪಕ್ಕದಲ್ಲಿ ಕುಳಿತಿದ್ದ ಶಾಸಕ ಗೋವಿಂದ ಕಾರಜೋಳ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಕಡೆ ಭೈರಪ್ಪ ಕೈ ತೋರಿದಾಗ ಸಭೆ ನಗೆಗಡಲಲ್ಲಿ ತೇಲಿತು.

****

ಬರಹಗಾರ ಸೈದ್ಧಾಂತಿಕತೆಗೆ ಗಂಟು ಬಿದ್ದರೆ ಮೋದಿ ಏನು ಮಾಡಿದರೂ ತಪ್ಪು ಕಾಣಿಸುತ್ತದೆ. ಯಾರೋ ಹೇಳಿದರು ಎಂದು ಪ್ರಶಸ್ತಿಯನ್ನೂ ವಾಪಸ್ ಕೊಡಬೇಕಾಗುತ್ತದೆ!
- ಎಸ್.ಎಲ್.ಭೈರಪ್ಪ, ಕಾದಂಬರಿಕಾರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT